ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಯಂತ್ರವನೇರಿ ಐತಿಹಾಸಿಕ ಸ್ಥಳಕ್ಕೆ ಪಯಣ

Last Updated 20 ಏಪ್ರಿಲ್ 2019, 19:32 IST
ಅಕ್ಷರ ಗಾತ್ರ

ಇಂದು ಗೂಗಲ್-ಅರ್ಥ್ ಬಳಸಿ ನಮ್ಮ ಮನೆಯ ಚಾವಣಿ ಹೇಗೆ ಕಾಣುತ್ತದೆ? ಎಂಬುದರಿಂದ ಹಿಡಿದು ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ, ಕಬ್ಬನ್‍ಪಾರ್ಕ್, ಲಾಲ್‍ಬಾಗ್‌ನ ವೈಮಾನಿಕ ಚಿತ್ರಣ ಹೇಗಿರಬಹುದು ಎಂಬುದನ್ನು ಮೊಬೈಲ್ ಪರದೆ ಮೇಲೆ ವೀಕ್ಷಿಸುವುದು ಪವಾಡವಾಗೇನೂ ಉಳಿದಿಲ್ಲ. ಆದರೆ, ವಿಜಯನಗರ ಅರಸರ ಕಾಲದಲ್ಲಿನ ವೈಭವಯುತ ಹಂಪಿಯ ಚಿತ್ರಣ ಹೇಗಿತ್ತು? ಚಂದ್ರಗುಪ್ತ ಮೌರ್ಯನ ರಾಜಧಾನಿ ಪಾಟಲಿಪುತ್ರ ಹೇಗೆ ರಾರಾಜಿಸುತ್ತಿತ್ತು? ಸಾಮ್ರಾಟ ಅಶೋಕನ ಸುಭಿಕ್ಷವಾದ ಸಾಮ್ರಾಜ್ಯವಾಗಲೀ, ಮೊಘಲ್ ದೊರೆ ಅಕ್ಬರ್‌ನ ಕಾಲಘಟ್ಟವಾಗಲೀ ಹೇಗಿತ್ತು ಎಂಬುದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಕಾಲಚಕ್ರದಲ್ಲಿ ಹಿಮ್ಮುಖವಾಗಿ ನಾವು ಪಯಣಿಸುವುದು ಸಾಧ್ಯವಾದರೆ ಎಷ್ಟು ಚೆನ್ನ ಅಲ್ಲವೆ?

ಹೌದು, ಬಹಳಷ್ಟು ತಂತ್ರಜ್ಞರು, ಬಿಗ್-ಡೇಟಾ ಎಂಬ ಅಗಾಧ ಪ್ರಮಾಣದ ದತ್ತಾಂಶ ಹಿಡಿದುಕೊಂಡು ನಮ್ಮ ಭವಿಷ್ಯ ಕಟ್ಟಿಕೊಡಲು ಪ್ರಯತ್ನಿಸುತ್ತಿರುವಾಗಲೇ, ಕೆಲವೇ ಕೆಲವು ಇತಿಹಾಸಕಾರರು ಮತ್ತು ತಂತ್ರಜ್ಞರು ಗ್ರಂಥಾಲಯಗಳಲ್ಲಿ, ಮ್ಯೂಸಿಯಂಗಳಲ್ಲಿ, ಪತ್ರಿಕಾ ಕಚೇರಿಗಳ ಸಂಗ್ರಹಾಲಯಗಳಲ್ಲಿ ಸಿಗುವ ದಾಖಲೆಗಳು, ಪುಸ್ತಕಗಳು ಮತ್ತು ಚಿತ್ರಗಳನ್ನು ಹೆಕ್ಕಿ ತೆಗೆದು ಅವುಗಳಿಂದ ರೂಪಗೊಳ್ಳುವ ‘ಬಿಗ್-ಡೇಟಾ’ವನ್ನು ಬಳಸಿ 50, 100, 1000, 2000 ವರ್ಷಗಳ ಕೆಳಗೆ ನಮ್ಮ ನಗರ, ದೇಶ, ನಾಗರಿಕತೆ ಹೇಗಿದ್ದಿರಬಹುದು ಎಂಬ ಸದೃಶ್ಯ ಚಿತ್ರಣವನ್ನು ‘ಗೂಗಲ್-ಸರ್ಚ್’ನಷ್ಟೇ ಸಲೀಸಾಗಿ ಒದಗಿಸಿಕೊಡಲು ಸನ್ನದ್ಧರಾಗಿದ್ದಾರೆ. ಇಂತಹ ಮಹತ್ವಾಕಾಂಕ್ಷೆ ಯೋಜನೆಯ ರೂವಾರಿಗಳು ಅದರ ಉಗಮ, ಮುಂದೆ ಅದು ಚಲಿಸಬಹುದಾದ ದಿಕ್ಕುಗಳ ಕುರಿತು ಒಂದು ಅವಲೋಕನ ಇಲ್ಲಿದೆ.

ಕಾಲಯಂತ್ರ ಆಧರಿತ ಪ್ರವಾಸೋದ್ಯಮ

ವೆನಿಸ್ ಎಂಬುದು 118 ದ್ವೀಪಗಳ ಸಮೂಹದಿಂದ ಕೂಡಿದ ನಗರ. ಇಟಲಿ ದೇಶದ ಪ್ರವಾಸಿ ಆಕರ್ಷಣೆಗಳಲ್ಲಿ ಇದು ಬಹಳ ಪ್ರಮುಖವಾದುದು. ಈ ನಗರ ವ್ಯವಸ್ಥಿತ ನಾಗರಿಕ ಯೋಜನೆ(ಟೌನ್-ಪ್ಲಾನಿಂಗ್) ಯಿಂದ ಆಧುನಿಕ ನಗರಾಭಿವೃದ್ಧಿಕಾರರಿಗೂ ಶೈಕ್ಷಣಿಕ ಮಾದರಿ ಎಂದೇ ಪರಿಗಣಿಸಲ್ಪಟ್ಟಿದೆ. ಸುಮಾರು 2.5 ಮಿಲಿಯನ್ ಜನಸಂಖ್ಯೆಯುಳ್ಳ ಈ ನಗರದ ಪ್ರಮುಖ ಆಕರ್ಷಣೆ ನಗರದ ತುಂಬಾ ಇರುವ ಕಾಲುವೆಗಳು. ಆ ಕಾಲುವೆಗಳ ಮೇಲೆ ನಿರ್ಮಿಸಲ್ಪಟ್ಟಿರುವ ಸೃಜನಾತ್ಮಕ ಸೇತುವೆಗಳು. ಇವುಗಳ ಜೊತೆಗೆ ದ್ವೀಪದಿಂದ ದ್ವೀಪಕ್ಕೆ ನಾಗರಿಕರನ್ನು ಕರೆದೊಯ್ಯುವ ದೋಣಿಗಳು. ನಾಳೆ ದಿನ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಈ ದ್ವೀಪ ಸಮೂಹ ನೀರಿನಲ್ಲಿ ಮುಳುಗಿ ಹೋಗುವ ಸ್ಥಿತಿಯ ಬಗ್ಗೆಯೂ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿರುವಾಗ ಈ ‘ನಾಗರಿಕ ವಿಸ್ಮಯ’ವನ್ನು ಮುಂದಿನ ಪೀಳಿಗೆಗೆ ಮತ್ತು ಇತಿಹಾಸಕಾರರಿಗೆ ಡಿಜಿಟಲೀಕರಣದ ಮೂಲಕ ಮಿಥ್ಯಾ- ವಾಸ್ತವದ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವೇ ‘ವೆನಿಸ್-ಟೈಮ್-ಮೆಷಿನ್’ ಎಂಬ ತಂತ್ರಜ್ಞರ ಮತ್ತು ಇತಿಹಾಸಕಾರರ ಸಮಾಗಮದ ಮಹತ್ವಾಕಾಂಕ್ಷಿ ಯೋಜನೆ.

ಈ ಯೋಜನೆಯ ರೂವಾರಿ ಫೆರ್‍ಡ್ರಿಕ್ ಕಪಲನ್ ಎಂಬ ಗಣಕತಜ್ಞ ಮತ್ತು ಅವರ ತಂಡ. ಎಕೋಲೆ ಪಾಲಿಟೆಕ್ನಿಕ್ ಮೂಲಕ ಯುರೋಪಿನ ಅನೇಕ ಸರ್ಕಾರ ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ, ವೆನಿಸ್ ನಗರದ 1000 ವರ್ಷಗಳ ಇತಿಹಾಸವನ್ನು ಕಂಪ್ಯೂಟರ್ ಅಥವಾ ಮೊಬೈಲ್ ಪರದೆ ಮೇಲೆ ಮೂಡಿಸುವ ಪ್ರಯತ್ನಕ್ಕೆ ಇವರು ಚಾಲನೆ ನೀಡಿದ್ದಾರೆ.

ಸಾವಿರ ವರ್ಷಗಳ ಇತಿಹಾಸವನ್ನು ಮರುಸೃಷ್ಟಿಸಲು ಈ ತಂಡಕ್ಕೆ ಪ್ರಮುಖ ಆಸರೆಯಾಗಿರುವುದು–ವೆನಿಸ್ ನಗರದ ಚರ್ಚ್ ಒಂದರಲ್ಲೇ ಸುಮಾರು 80 ಕಿ.ಮೀ ಉದ್ದದ ಕಪಾಟುಗಳಲ್ಲಿ ಸಂಗ್ರಹಿಸಲ್ಪಟ್ಟಿರುವ ಲಕ್ಷಾಂತರ ಪುಸ್ತಕಗಳು, ದಾಖಲೆಗಳು, ಮೋನೊಗ್ರಾಂಗಳು! ನಮ್ಮ ಆಧುನಿಕ ದತ್ತಾಂಶ ಆಧರಿತ ದೈತ್ಯ ಕಂಪನಿಗಳು ಸಂಗ್ರಹಿಸಿರುವಷ್ಟು ಡೇಟಾವನ್ನು ವೆನಿಸ್ ನಗರದ ಅಧಿಕಾರಿಶಾಹಿ ಅನಾದಿ ಕಾಲದಲ್ಲೇ ಸುರಕ್ಷಿತವಾಗಿ ದಾಖಲಿಸಿರುವುದು ಕಪಲನ್ ಮತ್ತು ಅವರ ತಂಡದ ಕೆಲಸವನ್ನು ಸ್ವಲ್ಪಮಟ್ಟಿಗೆ ಸುಗಮವಾಗಿಸಿದೆ.

ಇದರ ಜೊತೆಗೆ ಆಧುನಿಕ ತಂತ್ರಜ್ಞಾನಗಳಾದ ಮೆಷಿನ್- ಲರ್ನಿಂಗ್ ಮತ್ತು ಎಕ್ಸ್‌ರೇ ಆಧರಿತ ಸ್ಕ್ಯಾನರ್‌ಗಳು ಪುಸ್ತಕವನ್ನು ತೆರೆಯದೇ ಓದಬಲ್ಲವಲ್ಲದೇ ಎಂತಹ ಬ್ರಹ್ಮಲಿಪಿಯನ್ನು ಸಹ ಸರಾಗವಾಗಿ ಆರ್ಥಮಾಡಿಕೊಳ್ಳಬಲ್ಲ ಛಾತಿಯೂ ಇವುಗಳಿಗಿದೆ. ಈ ರೀತಿ ನವನವೀನ ತಂತ್ರಜ್ಞಾನ ಸಹ ಈ ತಂಡದ ನೆರವಿಗೆ ಬಂದಿದೆ.

ಈ ಅಭಿಯಾನ ವಿಶ್ವಕ್ಕೇ ಪಸರಿಸಬೇಕಲ್ಲವೆ?

ಕಪಲನ್‍ರ ಮಾತಿನಲ್ಲೇ ಹೇಳುವುದಾದರೆ, ಇಂತಹ ಕಾಲಯಂತ್ರಗಳ ಪರಿಕಲ್ಪನೆ ಮತ್ತು ಅನುಷ್ಠಾನ ಒಂದು ಪುಟ್ಟ ಗುಂಪಿನಿಂದ ಕಾರ್ಯಸಾಧುವಾಗುವಂಥದಲ್ಲ. ಪ್ರಪಂಚದಾದ್ಯಂತ ಇತಿಹಾಸತಜ್ಞರು, ತಂತ್ರಜ್ಞರು, ಸಂಶೋಧಕರು ತಮ್ಮ ದೇಶದ ಇತಿಹಾಸ ಪ್ರಸಿದ್ಧ ಸ್ಥಳಗಳ ಕುರಿತ ಮಾಹಿತಿ ಕಲೆ ಹಾಕಿ, ದಾಖಲೆ ಸಂಗ್ರಹಿಸಿ ಡಿಜಿಟಲೀಕರಣವನ್ನು ಒಂದು ಅಭಿಯಾನದ ರೀತಿ ಮಾಡಬೇಕು. ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದ ಹಂಪಿಯಂತಹ ಐತಿಹಾಸಿಕ ಸ್ಥಳಗಳ ದಾಖಲೆಗಳನ್ನು ಸರ್ಕಾರ, ಸಂಶೋಧಕರು, ತಂತ್ರಜ್ಞರು ಒಂದೆಡೆ ಕಲೆತು ಸಂಗ್ರಹಿಸಿ, ಸಂಸ್ಕರಿಸಿ ವಿಜಯನಗರದ ಗತವೈಭವವನ್ನು ನಮ್ಮ ಮುಂದಿನ ಪೀಳಿಗೆಗೆ ಶಾಶ್ವತವಾದ ರೂಪದಲ್ಲಿ ಕೊಟ್ಟರೆ ನೂರು ಸ್ಮಾರ್ಟ್‌ಸಿಟಿ, ಸಾವಿರ ಸ್ಟೀಲ್ ಬ್ರಿಡ್ಜ್‌ಗಳ ನಿರ್ಮಾಣಕ್ಕಿಂತ ಮಿಗಿಲು. ಈ ‘ಡಿಜಿಟಲ್- ಹ್ಯುಮಾನಿಟೀಸ್’ ಎಂಬ ಹೊಸ ವ್ಯಾಸಂಗದ ಮಾರ್ಗವು ಕಲೆ ಮತ್ತು ವಿಜ್ಞಾನದ ವಿದ್ಯಾರ್ಥಿಗಳನ್ನು ಒಂದೆಡೆ ತರಬಲ್ಲ ಮಾಧ್ಯಮವಾಗಿದೆ ಎಂದರೆ ತಪ್ಪಲ್ಲ.

‘ಬಿಗ್- ಡೇಟಾ ಮತ್ತು ಮೆಷಿನ್-ಲರ್ನಿಂಗ್ ಸಹಾಯದಿಂದ ಇತಿಹಾಸವನ್ನು ಪುನರ್‌ ನಿರ್ಮಿಸಿದರೆ ಅದು ಪೂರ್ವಗ್ರಹದಿಂದ ಸಂಪೂರ್ಣ ಮುಕ್ತಿ ನೀಡುತ್ತದೆಯೆ?’ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಮಾನವ ಇತಿಹಾಸತಜ್ಞರು ಹೇಗೆ ಪೂರ್ವಗ್ರಹದಿಂದ ಹೊರತಲ್ಲವೋ ಅದೇ ರೀತಿ ಮಾನವ ಲಿಖಿತ ದಾಖಲೆಗಳ ಆಧಾರದ ಮೇಲೆ ಇತಿಹಾಸ ಬರೆಯುವ ಯಂತ್ರಗಳೂ ಕೆಲವೊಮ್ಮೆ ಪಕ್ಷಪಾತದಿಂದ ಹೊರತಾಗಿರೋಲ್ಲ. ತೀರಾ ಇತ್ತೀಚಿನ ಉದಾಹರಣೆ ಎಂದರೆ– ಅಮೆಜಾನ್ ಕಂಪನಿಯು ಉದ್ಯೋಗಾಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಲು ಒಂದು ತಂತ್ರಾಂಶವನ್ನು ಅವಲಂಬಿಸಿತ್ತಂತೆ. ಈ ತಂತ್ರಾಂಶ ಕೆಲವೊಂದು ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಮಹಿಳೆಯರನ್ನು ತಿರಸ್ಕರಿಸಲು ಶುರು ಮಾಡಿಕೊಂಡಿತಂತೆ.

ಆ ತಂತ್ರಾಂಶದ ನಡವಳಿಕೆಯನ್ನು ಅರ್ಥೈಸಿಕೊಳ್ಳಲು ತಂತ್ರಜ್ಞರು ಬಹಳ ಕಷ್ಟಪಟ್ಟ ನಂತರ ತಿಳಿದ ವಿಚಾರವೆಂದರೆ– ಆ ತಂತ್ರಾಂಶ ಸ್ವಯಂಕಲಿಕೆಯ ಪ್ರಕ್ರಿಯೆಯಲ್ಲಿ ಕೆಲವು ರೀತಿಯ ಉದ್ಯೋಗ ಮಹಿಳೆಯರಿಗೆ ಸಾಧ್ಯವಿಲ್ಲ ಎಂಬ ಒಂದು ಡೇಟಾ ತುಣುಕನ್ನು ಆಧರಿಸಿ ಈ ರೀತಿಯ ಪಕ್ಷಪಾತಿ ಧೋರಣೆಗೆ ಬಂದಿತ್ತು ಎಂಬುದು. ಆದರೆ, ನಮಗೆ ಯಂತ್ರಲಿಖಿತ ಇತಿಹಾಸದಲ್ಲಿ ಸಿಗುವ ಪ್ರಮುಖ ಲಾಭವೆಂದರೆ: ಅದು ನಮಗೆ ಇತಿಹಾಸದ ವಿವಿಧ ಆಯಾಮಗಳನ್ನು ಕ್ಷಣಾರ್ಧದಲ್ಲಿ ಒದಗಿಸಿಕೊಡುತ್ತದೆ ಮತ್ತು ಇತಿಹಾಸದ ಘಟನೆಗಳಲ್ಲಿ ಬೇರೆ ಬೇರೆ ಸತ್ಯಗಳು ಅಡಕವಾಗಿವೆ ಎಂಬುದನ್ನು ಎಡ-ಬಲ, ಜಾತಿ-ಮತ, ಲಿಂಗ-ವರ್ಣ ಭೇದವಿಲ್ಲದೇ ತಕ್ಕಮಟ್ಟಿಗೆ ಒದಗಿಸಬಲ್ಲದು ಎಂಬುದಂತೂ ತಂತ್ರಜ್ಞಾನದ ಆಣೆಗೂಸತ್ಯ.

ಡಿಜಟಲೀಕರಣದ ಪ್ರಮುಖ ಗುರಿಗಳು

1000, 500, 100 ವರ್ಷಗಳ ಹಿಂದೆ ಸಾಮಾನ್ಯ ಜನತೆಯ ದಿನಚರಿ ಹೇಗಿತ್ತು; ವ್ಯಾಪಾರ ವಹಿವಾಟು, ಸಾಮಾಜಿಕ ರೀತಿ- ರಿವಾಜು, ಕಟ್ಟಡಗಳ ವಿನ್ಯಾಸ ಹೇಗಿತ್ತು? ಅಂದಿನ ವಾರ್ತಾಪ್ರಸಾರ, ಆರ್ಥಿಕ ವಹಿವಾಟು, ವಲಸಿಗರ ಜೀವನ, ಕಲೆ- ಸಾಹಿತ್ಯದ ಮಜಲುಗಳು ಹೇಗಿದ್ದವು? ಎಂಬುದರ ಬಗ್ಗೆ ಬೆಳಕು ಚೆಲ್ಲುವುದೇ ಆಗಿದೆ.

ಇದರ ಜೊತೆಗೆ ದಾಖಲೆಗಳಲ್ಲಿ ವ್ಯಕ್ತಿಗಳ ನಡುವೆ ನಡೆದಿರಬಹುದಾದ ಪತ್ರ ವ್ಯವಹಾರಗಳು, ಸಂಭಾಷಣೆಗಳ ಮೂಲಕ ಆ ಕಾಲಘಟ್ಟದ ಸೋಷಿಯಲ್-ನೆಟ್‌ವರ್ಕ್ (ಸಾಮಾಜಿಕ ಜಾಲತಾಣ) ಹೇಗಿದ್ದಿರಬಹುದು ಎಂಬುದನ್ನು ಸಹ ವೈಜ್ಞಾನಿಕವಾಗಿ ಕಟ್ಟಿಕೊಡುವ ಯೋಜನೆಯಲ್ಲಿ ನಿರತವಾಗಿದೆ. ಒಟ್ಟಾಗಿ ಹೇಳಬೇಕೆಂದರೆ ಇತಿಹಾಸ ಕೇವಲ ಕೆಲವು ಪ್ರಸಿದ್ಧ ವ್ಯಕ್ತಿಗಳ ಜೀವನದ ಚಿತ್ರಣವಲ್ಲ. ಬದಲಾಗಿ ಸಾಮಾನ್ಯ ಜನತೆಯ ಜೀವನಗಾಥೆಯೂ ಎಂಬುದನ್ನು ನಿಜ ಮಾಡಲು ಈ ತಂಡ ಪ್ರಯತ್ನಿಸುತ್ತಿದೆ. ಈ ‘ವೆನಿಸ್-ಟೈಮ್-ಮೆಷಿನ್’ನ ಮೊದಲ ಪ್ರಾತ್ಯಕ್ಷಿಕೆಯನ್ನು ವೆನಿಸ್-ಬೆನಾಲೆ ಎಂಬ ಸ್ಥಳದಲ್ಲಿ 2018 ರಲ್ಲೇ ನೀಡಲಾಯಿತು. ಇದರ ಮುಂದುವರಿದ ಭಾಗವಾಗಿ 1750ನೇ ಇಸವಿಯಲ್ಲಿ ಈ ನಗರ ಹೇಗಿತ್ತು? ಎಂಬುದನ್ನು ಗ್ರ್ಯಾಂಡ್ ಪಾಲೈಸ್ ಎಂಬ ಪ್ಯಾರಿಸ್ ಮೇಳದಲ್ಲಿ ಸೆಪ್ಟೆಂಬರ್ 2018 ರಲ್ಲಿ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT