ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ವಿಮೆಗೂ ಕೃತಕ ಬುದ್ಧಿ!

Last Updated 3 ಆಗಸ್ಟ್ 2022, 3:18 IST
ಅಕ್ಷರ ಗಾತ್ರ

ವಾಹನವನ್ನು ಓಡಿಸುವುದಕ್ಕೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌, ಸೆನ್ಸರ್ – ಇವೆಲ್ಲವೂ ಈಗಾಗಲೇ ಹಲವು ರೀತಿಯಲ್ಲಿ ಅನ್ವಯ ಆಗುತ್ತಿವೆ. ಚಾಲಕರೇ ಇಲ್ಲದ ವಾಹನಗಳ ಅಭಿವೃದ್ಧಿಯೂ ನಡೆಯುತ್ತಿದೆ. ಆದರೆ, ತೀರಾ ಇತ್ತೀಚಿನವರೆಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸದ ಒಂದು ಸೇವೆಯಾಗಿ ಇದ್ದದ್ದು ವಿಮೆ!

ಅದರಲ್ಲೂ, ವಾಹನವಿಮೆಯ ವಿಚಾರದಲ್ಲಿ ಈ ಹೊಸ ತಂತ್ರಜ್ಞಾನ ಬಳಕೆ ಸ್ವಲ್ಪ ಹಿಂದೆಯೇ ಉಳಿದಿತ್ತು. ವಿಮೆ ಆನ್‌ಲೈನ್‌ ಪ್ಲಾಟ್‌ಫಾರಂಗಳಿಗೆ ಬಂದಿದ್ದೇ ದೊಡ್ಡ ಸಂಗತಿ ಎಂಬಂತಿತ್ತು. ಅಲ್ಲಿಯವರೆಗೂ ಕಾಗದ–ಪತ್ರಗಳ ವ್ಯವಹಾರದಲ್ಲೇ ವಿಮೆಯನ್ನು ಮಾಡಿಸುವುದರಿಂದ, ‘ಕ್ಲೇಮ್‌’ ಮಾಡುವ ಪ್ರಕ್ರಿಯೆಯವರೆಗೂ ನಡೆಯುತ್ತಿತ್ತು. ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಸಾಮಾನ್ಯ ಬ್ಯಾಂಕ್‌ಗಳಿಗಿಂತಲೂ ವಿಮೆ ಕಂಪನಿಗಳು ಇಲ್ಲಿಯವರೆಗೂ ಒಂದು ಹೆಜ್ಜೆ ಹಿಂದೆಯೇ ಉಳಿದಿದ್ದವು.

ಆದರೆ, ಈಗ ಈ ವಲಯದಲ್ಲೂ ಮಹತ್ವದ ಬದಲಾವಣೆಗಳಾಗುತ್ತಿವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಬಳಸಿಕೊಂಡು ವಾಹನವಿಮೆಯನ್ನು ಮಾಡಿಸುವ ಹೊಸ ಸಾಧ್ಯತೆಗಳು ಗ್ರಾಹಕರಿಗೆ ಸಿಗುತ್ತಿವೆ. ಈಗಾಗಲೇ ಕೆಲವು ಬ್ಯಾಂಕ್‌ಗಳು ಈ ಸೌಲಭ್ಯವನ್ನು ಪರಿಚಯಿಸಿವೆ.

ವಿಮೆಯ ನವೀಕರಣ ಮಾಡಿಸಲು ಗ್ರಾಹಕರು ತಮ್ಮ ವಾಹನದ ಫೋಟೊ ಅಥವಾ ವಿಡಿಯೊ ಸೆರೆಹಿಡಿದು ಕಳುಹಿಸಿದರೆ ಸಾಕು. ಇದಕ್ಕೆ ಬ್ಯಾಂಕ್‌ಗಳು ಅಥವಾ ವಿಮೆ ಕಂಪನಿಗಳು ಕ್ಲೌಡ್ ಆಧರಿತ ಪ್ಲಾಟ್‌ಫಾರಂ ಸಿದ್ಧಪಡಿಸಿದ್ದು, ಕೆಲವೇ ಸೆಕೆಂಡುಗಳಲ್ಲಿ ಈ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ‘ವಾಹನ ಎಷ್ಟು ನುಜ್ಜುಗುಜ್ಜಾಗಿದೆ’ ಎಂಬುದನ್ನೆಲ್ಲ ತಪಾಸಣೆ ಮಾಡುತ್ತದೆ. ಇವೆಲ್ಲವೂ ಆನ್‌ಲೈನ್‌ನಲ್ಲೇ ನಡೆದುಹೋಗುತ್ತದೆ.

ಈ ಪ್ರಕ್ರಿಯೆಯಲ್ಲಿ ಯಾವ ವ್ಯಕ್ತಿಯೂ ‘ಕೈಯಾಡಿಸುವುದಿಲ್ಲ’. ಅಷ್ಟೇ ಅಲ್ಲ, ಅತ್ಯಂತ ನಿಖರವಾಗಿ ಈ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ತನ್ನ ಕೆಲಸವನ್ನು ಮಾಡುತ್ತದೆ. ಚಿತ್ರಗಳು ಮತ್ತು ವಿಡಿಯೊಗಳನ್ನು ಗ್ರಾಹಕರು ಅಪ್‌ಲೋಡ್‌ ಮಾಡಿದಾಗ ಅದರಲ್ಲಿ ಯಾವುದೇ ಮೋಸ ಇದೆಯೇ ಎಂದು ಕೂಡ ಪತ್ತೆ ಮಾಡುತ್ತದೆ.

ವಾಹನವಿಮೆಯಲ್ಲಿ ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಗೆ ಇದ್ದ ಮುಖ್ಯ ಅಡ್ಡಿಯೆಂದರೆ ಅದು ನೀತಿನಿರೂಪಣೆಗಳದ್ದು. ‘ಭಾರತೀಯ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ’ (ಐಆರ್‌ಡಿಎಐ) ಈ ನಿಟ್ಟಿನಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ನಿಗದಿಪಡಿಸಿದೆ. ಆದರೆ, ಎರಡು ವಾರಗಳ ಹಿಂದಷ್ಟೇ, ತಂತ್ರಜ್ಞಾನ ಆಧರಿತ ಸೌಲಭ್ಯಗಳನ್ನು ಬಳಸಿಕೊಂಡು ವಿಮೆಗಳನ್ನು ಗ್ರಾಹಕರಿಗೆ ಒದಗಿಸಲು ಅನುವು ಮಾಡಿಕೊಟ್ಟಿತ್ತು.
ಹೀಗಾಗಿ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಸಿಕೊಂಡು ಹೊಸ ಉತ್ಪನ್ನಗಳನ್ನು ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳು ಪರಿಚಯಿಸಲು ಆರಂಭಿಸಿವೆ. ಇದರ ಅನುಕೂಲ ಗ್ರಾಹಕರಿಗೆ ಅಪಾರ ಪ್ರಮಾಣದಲ್ಲಿ ಆಗುತ್ತದೆ. ವಾಹನ ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದರೆ ವಿಮೆಯ ಪ್ರೀಮಿಯಂ ಕಡಿಮೆಯಾಗುತ್ತದೆ. ವಾಹನ ಹೆಚ್ಚು ಹಾನಿಗೆ ಒಳಗಾಗಿದ್ದರೆ, ಅದಕ್ಕೆ ಸಹಜವಾಗಿಯೇ ಹೆಚ್ಚು ಪ್ರೀಮಿಯಂ ತುಂಬಬೇಕಾಗುತ್ತದೆ.
ಅಷ್ಟೇ ಅಲ್ಲ, ಕ್ಲೇಮ್‌ ವಿಚಾರದಲ್ಲೂ ತಂತ್ರಜ್ಞಾನ ಹಲವು ಅನುಕೂಲ ಮಾಡಿಕೊಡಲಿದೆ. ಗ್ರಾಹಕರೇ ವಾಹನ ಹಾನಿಗೀಡಾದಾಗ ಅದರ ಫೋಟೊ ಹಾಗೂ ವಿಡಿಯೊಗಳನ್ನು ಕಳಿಸಿದರೆ ಕೆಲವೇ ಕ್ಷಣಗಳಲ್ಲಿ ಕ್ಲೇಮ್‌ಗೆ ಅನುಮತಿ ನೀಡಲು ವಿಮಾ ಕಂಪನಿಗಳಿಗೆ ಸಾಧ್ಯವಾಗುತ್ತದೆ. ಇದು ಒಂದೆಡೆ ಕಂಪನಿಗಳಿಗೆ ಗ್ರಾಹಕ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಸಹಾಯ ಮಾಡಿದರೆ, ಗ್ರಾಹಕರಿಗೆ ತಕ್ಷಣ ತಮ್ಮ ವಾಹನವನ್ನು ಸರಿಪಡಿಸಿಕೊಳ್ಳಲು ಅನುವು ಮಾಡಲಿದೆ.

ಸದ್ಯದ ವಾಹನವಿಮೆಯ ಕ್ಲೇಮ್‌ ಪ್ರಕ್ರಿಯೆ ತುಂಬಾ ಸಂಕೀರ್ಣವಾಗಿದೆ. ಆದರೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಈ ಕ್ಲೇಮ್‌ ಪ್ರಕ್ರಿಯೆಯನ್ನು ಅತ್ಯಂತ ಸರಳವಾಗಿಸಲಿದೆ.

ಈಗಾಗಲೇ ಸೆಕೆಂಡ್ ಹ್ಯಾಂಡ್‌ ಕಾರು ಮಾರಾಟ ಮಾಡುವ ಕಂಪನಿಗಳು ಇಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ವಾಹನದ ಮೌಲ್ಯವನ್ನು ನಿಗದಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಕಾರು ಎಷ್ಟು ಸುಸ್ಥಿತಿಯಲ್ಲಿದೆ ಎಂಬುದನ್ನು ವಿಶ್ಲೇಷಣೆ ನಡೆಸುವುದಕ್ಕೆ ಹಲವು ಕಂಪನಿಗಳು ಹೊಸ ಹೊಸ ಸಂಶೋಧನೆ ನಡೆಸುತ್ತಿವೆ. ಈ ವಿಶ್ಲೇಷಣೆ ಹೆಚ್ಚು ನಿಖರವಾದಷ್ಟೂ ಅವರ ಲಾಭದ ಮಾರ್ಜಿನ್‌ ಹೆಚ್ಚುತ್ತದೆ. ಆದರೆ, ಈ ವಿಶ್ಲೇಷಣೆ ಅಷ್ಟು ಸುಲಭವಲ್ಲ. ಹೀಗಾಗಿ, ಕೆಲವು ಕಂಪನಿಗಳು ನ್ಯೂರಲ್‌ ನೆಟ್‌ವರ್ಕ್ ಆರ್ಕಿಟೆಕ್ಚರ್‌ ಬಳಸಿಕೊಂಡು ಕಾರಿನ ಹೊರಭಾಗದ ಹಾಗೂ ಕಾರಿನ ಇಂಜಿನ್‌ ಸ್ಥಿತಿಯನ್ನು ಪರೀಕ್ಷೆ ಮಾಡಲಾಗುತ್ತಿವೆ. ಇದರಿಂದ ಈ ಸಂಸ್ಥೆಗಳು ಕಾರುಗಳನ್ನು ತಪಾಸಣೆ ಮಾಡುವಾಗ ಮನುಷ್ಯ ಸಹಜ ದೋಷ ಉಂಟಾಗುವುದನ್ನು ತಪ್ಪಿಸುತ್ತಿವೆ. ಇನ್ನೂ ಕೆಲವು ಕಂಪನಿಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸನ್ನೇ ಬಳಕೆ ಮಾಡುತ್ತಿವೆ.

ಆದರೆ, ವಿಮೆ ನವೀಕರಣ ಮಾಡಿಸುವಾಗ ಅಥವಾ ಕ್ಲೇಮ್ ಮಾಡುವಾಗ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ನಂತಹ ತಂತ್ರಜ್ಞಾನವನ್ನು ಬಳಸುವುದರಲ್ಲಿ ತೊಂದರೆಯೂ ಇದೆ. ಏಕೆಂದರೆ, ಈ ಕ್ಷೇತ್ರಕ್ಕೆ ಈ ತಂತ್ರಜ್ಞಾನ ಹೊಸದು. ಸಾಮಾನ್ಯವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಬಳಕೆಯಾದಷ್ಟೂ ಹೆಚ್ಚು ಸುಧಾರಿಸುತ್ತದೆ. ಆರಂಭದಲ್ಲಿ ಇದರ ನಿಖರತೆ ಕಡಿಮೆ ಇರುತ್ತದೆ. ಹೀಗಾಗಿ, ಮೊದಮೊದಲು ಫೋಟೊಗಳು, ವಿಡಿಯೊಗಳನ್ನು ತಪ್ಪಾಗಿ ವಿಶ್ಲೇಷಣೆ ಮಾಡಿ ವಿಮೆ ನವೀಕರಿಸಲು, ಕ್ಲೇಮ್‌ ಒಪ್ಪಿಕೊಳ್ಳಲು ನಿರಾಕರಿಸಬಹುದು. ಆದರೆ, ದಿನಕಳೆದಂತೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಗಲೀ, ನ್ಯೂರಲ್‌ ನೆಟ್‌ವರ್ಕ್‌ ಆರ್ಕಿಟೆಕ್ಚರ್ ಆಗಲೀ ಸುಧಾರಿಸುತ್ತದೆ. ಆಗ, ಸಹಜವಾಗಿಯೇ ಗ್ರಾಹಕರ ಅನುಭವವೂ ಸುಧಾರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT