ಸೋಮವಾರ, ಫೆಬ್ರವರಿ 24, 2020
19 °C

ಕೊರೊನಾ ಭೀತಿ: ‘ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ 2020‘ ರದ್ದು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಪೇನ್‌ನ ಬಾರ್ಸಿಲೋನಾದಲ್ಲಿ ಆಯೋಜನೆಯಾಗಿದ್ದ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ 2020

ಲಂಡನ್‌: ಕೊರೊನಾ ವೈರಸ್‌ ಭೀತಿಯಿಂದಾಗಿ ತಂತ್ರಜ್ಞಾನ ವಲಯದ ಅತಿ ದೊಡ್ಡ ಕಾರ್ಯಕ್ರಮ 'ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ 2020' ರದ್ದುಪಡಿಸಲಾಗಿದೆ. ಆರೋಗ್ಯ ಸುರಕ್ಷತೆ ಕಾಳಜಿಯಿಂದಾಗಿ ಈ ವರ್ಷದ ಸಮ್ಮೇಳನವನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಜಾಗತಿಕ ಟೆಲಿಕಾಂ ಉದ್ಯಮ ಸಂಸ್ಥೆ ಜಿಎಸ್‌ಎಂ ಅಸೋಸಿಯೇಷನ್ ಗುರುವಾರ ತಿಳಿಸಿದೆ. 

ಸ್ಪೇನ್‌ನ ಬಾರ್ಸಿಲೋನಾದಲ್ಲಿ 2006ರಿಂದ ಪ್ರತಿ ವರ್ಷ ಜಿಎಸ್‌ಎಂಎ, ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಕಾರ್ಯಕ್ರಮ ಆಯೋಜಿಸುತ್ತಿದೆ. ಟೆಲಿಕಾಂ ಮೂಲ ವಿಷಯದೊಂದಿಗೆ ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹಲವು ಚರ್ಚೆಗಳನ್ನು ನಡೆಸಲಾಗುತ್ತದೆ. ಸಮ್ಮೇಳನದಲ್ಲಿ ಸರ್ಕಾರಗಳ ಪ್ರತಿನಿಧಿಗಳು, ಸಚಿವರು, ನೀತಿ ನಿರೂಪಕರು, ಉದ್ಯಮಿಗಳು ಹಾಗೂ ತಂತ್ರಜ್ಞರು ಭಾಗಿಯಾಗುತ್ತಾರೆ. 

ಫೆಬ್ರುವರಿ 24ರಿಂದ 27ರವರೆಗೂ ಸಮ್ಮೇಳನ ನಿಗದಿಯಾಗಿತ್ತು.

ಸಿಸ್ಕೊ, ವೊಡಾಫೋನ್‌, ಎಲ್‌ಜಿ, ವಿವೊ, ಅಮೆಜಾನ್, ಸೋನಿ, ಫೇಸ್‌ಬುಕ್‌, ಮೀಡಿಯಾಟೆಕ್‌, ಇಂಟೆಲ್‌, ಎನ್‌ವಿಡಿಯಾ ಸೇರಿದಂತೆ ಹಲವು ಕಂಪನಿಗಳು ಕೊರೊನಾ ವೈರಸ್‌ ಕಾರಣದಿಂದಲೇ ಈ ವರ್ಷದ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದವು. 

ಪ್ರಮುಖ ಕಂಪನಿಗಳು ಭಾಗಿಯಾಗದಿರಲು ನಿರ್ಧರಿಸಿದ್ದರೂ ಸಮ್ಮೇಳನ ನಡೆಸಲು ಆಯೋಜಕರು ನಿರ್ಧರಿಸಿದ್ದರು. ಚೀನಾದಿಂದ 5,000–6,000 ಸದಸ್ಯರು ಸೇರಿದಂತೆ 200 ರಾಷ್ಟ್ರಗಳಿಂದ ಸುಮಾರು 1,00,000 ಅತಿಥಿಗಳನ್ನು ಬರ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ, ಪ್ರಮುಖ ಕಂಪನಿಗಳು ಭಾಗಿಯಾಗಲು ಹಿಂದೆ ಸರಿದಿರುವುದರಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ರದ್ದಾಗಿದೆ. 

ಸಮ್ಮೇಳನದಲ್ಲಿ 5ಜಿ ತಂತ್ರಜ್ಞಾನ, ಅದನ್ನು ಅಳವಡಿಸಿಕೊಂಡಿರುವ ಹೊಸ ಸ್ಮಾರ್ಟ್‌ಫೋನ್‌ಗಳು ಹಾಗೂ ಇತರೆ ಉಪಕರಣಗಳ ಅನಾವರಣಕ್ಕೆ ಹಲವು ಕಂಪನಿಗಳು ತಯಾರಿ ನಡೆಸಿದ್ದವು. ಕಾರ್ಯಕ್ರಮದಲ್ಲಿ ಭಾಗಿಯಾಗಲು ನೋಂದಣಿಗೆ ಜಿಎಸ್‌ಎಂಎ 872 ಡಾಲರ್‌ (₹62,307) ನಿಗದಿ ಪಡಿಸಿತ್ತು. 

ಕೊರೊನಾ ವೈರಸ್‌ ಹರಡುವಿಕೆಯಿಂದಾಗಿ ಪ್ರಯಾಣದಲ್ಲಿ ಆಗುತ್ತಿರುವ ವ್ಯತ್ಯಗಳು, ಆರೋಗ್ಯಕ್ಕೆ ಸಂಬಂಧಿತ ಸುರಕ್ಷತಾ ಕ್ರಮಗಳ ನಿಗಾ ವಹಿಸುವುದು ಹಾಗೂ ಜಗತ್ತಿನ ಹಲವು ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವವರ ಕ್ಷೇಮ ಗಮನಿಸುವುದು ಪ್ರಸ್ತುತ ಅಸಾಧ್ಯವಾಗಬಹುದು ಎಂದು ಜಿಎಸ್‌ಎಂಎ ಅಭಿಪ್ರಾಯ ಪಟ್ಟಿದೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು