ಶುಕ್ರವಾರ, ಜನವರಿ 27, 2023
25 °C

ಸಿಟಿ ಸ್ಕ್ಯಾನ್ ಸಿಕ್ಕ ಕಥೆ ಗೊತ್ತೇ?

ಶರತ್‌ ಭಟ್‌ ಸೇರಾಜೆ Updated:

ಅಕ್ಷರ ಗಾತ್ರ : | |

‘ರಾಕ್ ಸಂಗೀತದಿಂದ ವಿಜ್ಞಾನಕ್ಕೆ, ತಂತ್ರಜ್ಞಾನಕ್ಕೆ ಏನಾದರೂ ಪ್ರಯೋಜನ ಆಗಿದೆಯೇ?’ – ಎಂದೇನಾದರೂ ನಾನು ನನ್ನ ಗೆಳೆಯರ ಹತ್ತಿರ ಕೇಳಿದೆನಾದರೆ, ‘ನಿನಗೆ ತಲೆಹರಟೆ ಮಾಡುವುದು ಪ್ರಿಯವಾದ ಹವ್ಯಾಸ ಎಂದು ನಮಗೂ ಗೊತ್ತಿದೆ, ಇದು ಯಾವ ಹೊಸ ವರಸೆ?’ ಎಂದು ಭುಜ ಕುಣಿಸಿಯಾರು. ಆದರೆ ದಿಟವಾಗಿಯೂ ಹಾಗೆ ಆದದ್ದುಂಟು ಎಂದು ಅವರಿಗೆ ಮನಗಾಣಿಸಬೇಕಾದರೆ, ಹೇಳಬೇಕಾದ್ದು ಕ್ಯಾಟ್ ಸ್ಕ್ಯಾನ್ ಅಥವಾ ಸಿಟಿ ಸ್ಕ್ಯಾನ್ ಎಂಬುದರ ಆವಿಷ್ಕಾರದ ಪೂರ್ವಚರಿತ್ರೆಯನ್ನು; ಅದನ್ನು ಆಗಮಾಡಿದ EMI ಎಂಬ ಸಂಸ್ಥೆಯ ಇತಿಹಾಸವನ್ನು.

‘Electric and Musical Industries’ – ಎಂಬ ಇಷ್ಟುದ್ದದ ಹೆಸರನ್ನೇ ಹ್ರಸ್ವ ಮಾಡಿ ‘EMI’ ಎಂದು ಕರೆಸಿಕೊಂಡ ಕಂಪನಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಯಂತ್ರ ಸಾಧನಗಳನ್ನು ಉತ್ಪಾದಿಸುತ್ತಿದ್ದ ಕಂಪನಿ. ಸಂಗೀತದ ಕ್ಷೇತ್ರದಲ್ಲಿಯೂ ವಹಿವಾಟು ನಡೆಸುತ್ತಿದ್ದ ಸಂಸ್ಥೆಯದು. ಪಾಪ್ ಸಂಗೀತದಲ್ಲಿ ಜಗದ್ವಿಖ್ಯಾತನಾಗಿದ್ದ ಎಲ್ವಿಸ್ ಪ್ರೆಸ್ಲಿಯ ಜೊತೆ ಇದರ ವ್ಯವಹಾರ ಒಂದು ಕಾಲದಲ್ಲಿ ಇತ್ತು. ಇಂಥ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದದ್ದು ಗಾಡ್'ಫ್ರೀ ಹೌನ್ಸ್'ಫೀಲ್ಡ್ ಎಂಬ ಚುರುಕುತಲೆಯ ಇಂಜಿನಿಯರು. ಈಜಿಪ್ಟಿನ ಪಿರಾಮಿಡ್ಡುಗಳು ಅಡಗಿಟ್ಟಿಸಿಟ್ಟುಕೊಂಡಿದ್ದ ರಹಸ್ಯಗಳು ಸಂಶೋಧಕರ ತಲೆ ಕೆಡಿಸಿದ್ದ ಕಾಲದಲ್ಲಿ, ಪಿರಾಮಿಡ್ಡುಗಳ ಮೂಲಕ ತೂರಿಬರುವ ನೈಸರ್ಗಿಕ ಕಿರಣಗಳನ್ನು ಹಿಡಿದಿಟ್ಟು ಅಧ್ಯಯನ ಮಾಡಿದರೆ ಅವುಗಳ ಒಳಗೆ ಇರುವ ಗುಪ್ತವಾದ ರಚನೆಗಳ ಆಕೃತಿ ಗೊತ್ತಾದೀತಲ್ಲವೇ ಎಂದು ಯೋಚಿಸಿದ್ದ. ಕಂಪನಿಯ ಸಂಶೋಧನೆಗಳಲ್ಲಿ ಮುಂದಾಳುವಾಗಿ ಕಾಣಿಸಿಕೊಂಡಿದ್ದ. ಆದರೆ, ಅರುವತ್ತರ ದಶಕದಲ್ಲಿ EMI ಸಂಸ್ಥೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ, 1962ರಲ್ಲಿ ತನ್ನ ಕಂಪ್ಯೂಟರ್ ವಿಭಾಗಕ್ಕೆ ಬೀಗ ಹಾಕಿಯೂ ಬಿಟ್ಟಿತ್ತು. ಇಂಥ ನಿರಾಶಾದಾಯಕ ಪರಿಸ್ಥಿತಿಯಲ್ಲಿ, ನಮ್ಮ ಹೌನ್ಸ್'ಫೀಲ್ಡ್ ಬಹುಶಃ, ಎಲ್ಲಿಗೆ ‘resume’ (ವೈಯಕ್ತಿಕ ವಿವರಗಳನ್ನು) ಕಳಿಸುವುದು ಎಂದು ಅಲ್ಲಿ ಇಲ್ಲಿ ಹುಡುಕುತ್ತಿದ್ದನೋ ಏನೋ?

ಅಂಥದ್ದೊಂದು ಕಾಲದಲ್ಲಿ EMIಯ ಉಪಸಂಸ್ಥೆಯೊಂದರ ಜೊತೆ ಬೀಟಲ್ಸ್ ಎಂಬ ರಾಕ್ ಬ್ಯಾಂಡು ಕೆಲಸ ಮಾಡಿತು. ಆಗ ಬಂತು ನೋಡಿ, ಹರಿ ಹರಿಯುತ್ತ ಹಣದ ಹೊನಲು! ಯಾವ ಯಾವ ವಿಭಾಗಗಳಿಗೆ ಜಡಿಯುವುದಕ್ಕೆ ಎಷ್ಟೆಷ್ಟು ಬೀಗಗಳು ಬೇಕು ಎಂದು ಏರ್ಪಾಡು ಮಾಡುತ್ತಿದ್ದವರಿಗೆ, ಚಿನ್ನದ ಬೀಗಗಳನ್ನು ತಂದು, ಅವುಗಳನ್ನು ಬಳಸದೇ ಇಟ್ಟು ದರ್ಬಾರು ಮಾಡಲಿಕ್ಕೆ ಸಾಕಾಗುವಷ್ಟು ದುಡ್ಡು ಬೀಟಲ್ಸಿನ ಕೃಪೆಯಿಂದ ಬಂತು. ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಂಶೋಧನೆ ಎಂದರೆ ಸುಮ್ಮನೆ ಮಾತಲ್ಲ; ಅದು ಸಾಕಷ್ಟು ಸಮಯವನ್ನು ಬೇಡುತ್ತದೆ. ಬೇಕಾದಷ್ಟು ಖರ್ಚು ಮಾಡಲು ಧೈರ್ಯ ತುಂಬಬಲ್ಲ ಇಡುಗಂಟು ಇದ್ದರೆ ಸಂಶೋಧಕರಿಗೆ ತಮ್ಮ ಕೆಲಸದ ಬಗ್ಗೆ ಗಮನ ಕೊಡುವುದು ಸುಲಭ. ‘ದುಡ್ಡಿಗೇನೂ ತೊಂದರೆ ಇಲ್ಲ, ಅದೇನು ಮಾಡ್ತೀಯೋ ಮಾಡು’ ಎಂಬ ಇಶಾರೆ ಸಿಕ್ಕಿದಾಗ ಹೌನ್ಸ್'ಫೀಲ್ಡ್ ಯೋಚನೆ ಮಾಡಿದ. ‘ಈ ಎಕ್ಸ್ ರೇ ಗಳ ಗುಣಮಟ್ಟ ಏನೂ ಸಾಕಾಗುವುದಿಲ್ಲ ಮಾರಾಯ; ಮೆದುಳಿನ ಎಕ್ಸ್–ರೇಗಳಲ್ಲಿ ಎಲ್ಲವೂ ಅಸ್ಪಷ್ಟವಾಗಿರುತ್ತವೆ’ ಎಂದು ವೈದ್ಯನಾಗಿದ್ದ ಗೆಳೆಯನೊಬ್ಬ ಗೊಣಗಿದ್ದು ಅವನ ತಲೆಯಲ್ಲಿತ್ತು. ಪಿರಾಮಿಡ್ಡುಗಳ ಒಳಗೆ ಇಣುಕಿ ನೋಡುವ ಯೋಜನೆ ಹೇಗೂ ಇತ್ತಲ್ಲ. ಈ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡು ಏನೋ ಹೊಳೆದಂತಾಯಿತು.

ಎಕ್ಸ್–ರೇ ಚಿತ್ರ ಎಂಬುದು ಒಂದರ್ಥದಲ್ಲಿ ನೆರಳು ಬೆಳಕುಗಳ ಆಟವಿದ್ದಂತೆ. ಒಂದು ವಸ್ತುವಿನ ಮೇಲೆ ಕಿರಣಗಳನ್ನು ಬಿಟ್ಟು, ಮೂಡುವ ನೆರಳನ್ನು ನೋಡಿ, ವಸ್ತುವಿನ ಆಕಾರದ ಪರಿಶೀಲನೆ ಮಾಡಲಿಕ್ಕೆ ಅದು ಸಹಕಾರಿ, ಮೂಳೆ ಮುರಿತ, ಹೊರಮೈಯ ಬಿರುಕು ಇಂಥದ್ದೆಲ್ಲ ನೆರಳಿನಲ್ಲಿ ಗೋಚರಿಸುವುದರಿಂದ, ಅಂಥವನ್ನು ಮೂಡಿದ ನೆರಳಿನ ಚಿತ್ರದಲ್ಲಿ ನಿರೂಪಿಸುವ ಶಕ್ತಿ ಎಕ್ಸ್–ರೇಗೆ ಇದೆ. ಆದರೆ ಮೆದುಳಿನಂಥ ಮುದ್ದೆಯ ಒಳಗೆ ಏನಿದೆ ಎಂಬುದು ನೆರಳಿನಲ್ಲಿ ಹೇಗೆ ಕಾಣಬೇಕು? ಇದು ಸಮಸ್ಯೆಯ ಮೂಲ.

ಹೌನ್ಸ್'ಫೀಲ್ಡ್ ಇದಕ್ಕೊಂದು ಉಪಾಯ ಮಾಡಿದ. ಒಂದೇ ಎಕ್ಸ್–ರೇ ಕಿರಣವನ್ನು ಬಿಟ್ಟು ಕೆಲಸ ಸಾಧಿಸಬೇಕೆಂದು ಯಾರೂ ಹೇಳಿಲ್ಲವಲ್ಲ! ಮೆದುಳನ್ನು ಒಂದಷ್ಟು ಪದರಗಳನ್ನಾಗಿ ವಿಭಾಗಿಸಿಕೊಂಡು, ಒಂದಷ್ಟು ಇಸ್ಪೀಟು ಎಲೆಗಳನ್ನೋ ಹಪ್ಪಳಗಳನ್ನೋ ಒಂದರ ಮೇಲೊಂದು ಇಟ್ಟಂತೆ, ಈ ಪದರಗಳನ್ನು ಒಂದಾದ ಮೇಲೆ ಒಂದರಂತೆ ಜೋಡಿಸಿದರೆ ಪೂರ್ತಿ ಮೆದುಳಾಗುತ್ತದೆ ಅಂದುಕೊಂಡರಾಯಿತು. ಈ ಒಂದೊಂದು ಪದರದ ಚಿತ್ರವನ್ನೂ ಹತ್ತಾರು ಕೋಣಗಳಿಂದ ಎಕ್ಸ್–ರೇ ಕಿರಣಗಳನ್ನು ಬಿಟ್ಟು ಚಿತ್ರಿಸಿದರಾಯಿತು. ಹೀಗೆ ತಯಾರಾದ ನೂರಾರು ಛಾಯಾಚಿತ್ರಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಡಲಿಕ್ಕೆ ಗಣಕಯಂತ್ರಗಳು ಹೇಗೂ ಇವೆ. ಕಪ್ಪೆಯೊಂದು ಆನೆಯೊಂದರ ಚಿತ್ರವನ್ನು ಬಿಡಿಸಿದರೆ, ಅದಕ್ಕೆ ಕಂಡಷ್ಟು ಮಾತ್ರ ಸೇರಿ, ಚಿತ್ರವು ಆಂಶಿಕ, ಅಪೂರ್ಣ ಎನ್ನಿಸೀತು. ಆದರೆ ನೂರು ಕಪ್ಪೆಗಳು ನೂರು ಕಡೆಗಳಿಂದ, ನೂರು ದಿಕ್ಕುಗಳಿಂದ, ಬೇರೆ ಬೇರೆ ಕೋಣಗಳಿಂದ ಚಿತ್ರ ಬಿಡಿಸಿದರೆ, ಆ ಚಿತ್ರಗಳನ್ನೆಲ್ಲ ಒಬ್ಬ ಬುದ್ಧಿಶಾಲಿಯು ಒಟ್ಟುಗೂಡಿಸಿ ಕ್ರಮಬದ್ಧವಾಗಿ ಜೋಡಿಸಿದರೆ ಆನೆಯ ಸಮಗ್ರ ಚಿತ್ರಣವಿರುವ ಪೂರ್ಣ ಭಾವಚಿತ್ರ ನಿರ್ಮಾಣವಾಗುತ್ತದೆ. ಹೌನ್ಸ್'ಫೀಲ್ಡನ ತಂತ್ರ ಕೆಲಸ ಮಾಡುವುದೂ ಹೆಚ್ಚು ಕಡಮೆ ಹೀಗೆಯೇ ಎನ್ನಬೇಕು.

ಬಾಟಲಿಗಳು, ಥರ್ಮೋಪ್ಲಾಸ್ಟಿಕ್ಕಿನ ಜಾಡಿಗಳು – ಇವುಗಳ ಒಳಗೆ ನೀರು, ಲೋಹಗಳನ್ನು ತುಂಬಿಸಿ, ಅವುಗಳಿಗೆ ಗಾಮಾ ಕಿರಣಗಳನ್ನು ಬಿಟ್ಟು ತನ್ನ ಮೊದಲ ಮಾದರಿಯ ಯಂತ್ರದ ಪರೀಕ್ಷೆಯನ್ನು ಹೌನ್ಸ್'ಫೀಲ್ಡ್ ಮಾಡಿದ. ಮೊದಲ ಸ್ಕ್ಯಾನಿಂಗ್ ಮುಗಿಯುವುದಕ್ಕೆ ಒಂಬತ್ತು ದಿನಗಳೇ ಬೇಕಾದವು. 28,000 ಅಳತೆಗಳನ್ನು ದಾಖಲು ಮಾಡಲಾಯಿತು. ಇವುಗಳನ್ನು ಸಂಯೋಜಿಸಲಿಕ್ಕೆ ಆ ಕಾಲದ ಗಣಕಯಂತ್ರ ಎರಡೂವರೆ ಗಂಟೆ ತೆಗೆದುಕೊಂಡಿತು. ಮುಂದಿನದು ನಮಗೆ ಗೊತ್ತೇ ಇದೆ.

ಹೀಗೆ, ರಾಕ್ ಬ್ಯಾಂಡೊಂದು ತಂದು ಕೊಟ್ಟ ಹಣದ ಥೈಲಿಗಳಿಂದ ಲಕ್ಷಗಟ್ಟಲೆ ಜನರ ಜೀವವನ್ನು ಉಳಿಸುವ ಯಂತ್ರವೊಂದರ ಶೋಧನೆಯಾಯಿತು. ಯಾರಿಗೆ ಯಾರುಂಟೋ ಬಲ್ಲವರಾರು? ವಿಜ್ಞಾನಕ್ಕೆ ಯಾರ್‍ಯಾರಿದ್ದರೋ ತಿಳಿದವರಾರು?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು