ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೈನರ್‌ ಬೇಬಿ!

Last Updated 17 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬಟ್ಟೆ ಕೊಟ್ಟು ಬೇಕಾದಂತಹ ಡ್ರೆಸ್‌ ಹೊಲಿಸಿಕೊಳ್ಳುತ್ತೇವಲ್ಲ; ಹಾಗೆಯೇ ಬಯಸಿದಂತಹ ಮಗು ಪಡೆಯುವ ತಂತ್ರಜ್ಞಾನವೂ ಬಂದಿದೆಯೇ?

ಅದು ಕಳೆದ ವರ್ಷದ ಅಕ್ಟೋಬರ್‌ ತಿಂಗಳ ಒಂದು ರಾತ್ರಿ. ಚೀನಾ ದೇಶದ ಆ ಆಸ್ಪತ್ರೆಯಲ್ಲಿ ಅವಧಿಪೂರ್ವವೇ ಎರಡು ಹೆಣ್ಣು ಕೂಸುಗಳು ಜನಿಸಿದವು. ಶಸ್ತ್ರ ಚಿಕಿತ್ಸೆ ಮೂಲಕ ಅಮ್ಮನ ಉದರದಿಂದ ಹೊರಬಂದ ಆ ಕೂಸುಗಳನ್ನು ಸೂಲಗಿತ್ತಿಯೊಬ್ಬರು ಬಿಳಿ ಬಟ್ಟೆಯಲ್ಲಿ ಸುತ್ತಿಕೊಂಡು ಹೊರಬಂದು, ಇನ್‌ಕ್ಯುಬೇಟರ್‌ನಲ್ಲಿ ಇಟ್ಟರು. ಆ ಅವಳಿಗಳು ಹೊತ್ತು ಬಂದಿದ್ದ ದಿಗಿಲು ಮೂಡಿಸುವಂತಹ ಜನ್ಮ ರಹಸ್ಯವೊಂದು ಆ ಆಸ್ಪತ್ರೆಯ ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ. ಆದರೆ, ಆ ರಹಸ್ಯದ ಪೂರ್ವಾಪರವನ್ನು ಬಲ್ಲ ವಿಜ್ಞಾನಿಯೊಬ್ಬರು ಅದೇ ಆಸ್ಪತ್ರೆಯ ಲಾಂಜ್‌ನಲ್ಲಿ ಆ ಕಂದಮ್ಮಗಳ ಜನನದ ಸುದ್ದಿಗಾಗಿ ಶಥಪಥ ಹಾಕುತ್ತಾ ತವಕಿಸುತ್ತಿದ್ದರು.

ಏಕೆಂದರೆ, ಆ ಎರಡೂ ಕಂದಮ್ಮಗಳು ಹೀ ಜಿಯಾಂಕಿ ಎಂಬ ಆ ವಿಜ್ಞಾನಿಯ ಸೃಷ್ಟಿ! ತಮ್ಮ ವಂಶವಾಹಿನಿಯನ್ನು ತಿದ್ದಿಸಿಕೊಂಡು, ತೀಡಿಸಿಕೊಂಡು ಜನಿಸಿದ ಜಗತ್ತಿನ ಮೊದಲ ಮಕ್ಕಳು ಎಂಬ ಹಿರಿಮೆಗೆ ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟ ಆ ಅವಳಿಗಳು ಪಾತ್ರವಾಗಿದ್ದವು. ಜಿಯಾಂಕಿ ಆ ಅವಳಿಗಳಿಗೆ ಇಟ್ಟ ಹೆಸರುಗಳೇ ಲುಲು ಮತ್ತು ನಾನಾ!

***

ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಬಾರದೆಂಬ ಗಾದೆ ಅನಾದಿಯಿಂದಲೂ ಪ್ರಚಲಿತದಲ್ಲಿದೆ. ಮನೆಯಲ್ಲಿ ಹೊಸ ಅತಿಥಿಯ ಆಗಮನದ ಸುಳಿವು ಸಿಕ್ಕ ಕೂಡಲೇ ದಂಪತಿಯ ಮನದಲ್ಲಿ ಕನಸಿನ ಅರಮನೆ ಆರಂಭವಾಗುತ್ತದೆ. ಮಗುವನ್ನು ಹೇಗೆ ಬೆಳೆಸಬೇಕು, ಏನು ಓದಿಸಬೇಕು, ಎಲ್ಲಿ ಓದಿಸಬೇಕು... ಹೀಗೆ ಅಪೇಕ್ಷೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಪ್ಪ–ಅಮ್ಮಂದಿರಲ್ಲಿ ಇಂಥದ್ದೇ ಆಲೋಚನೆಗಳು ಮಗುವಿನ ದೇಹಪ್ರಕೃತಿ ಬಗೆಗೂ ಮೂಡಿರುತ್ತವೆ. ಮಗುವು ಶಕ್ತಿ, ಯುಕ್ತಿವಂತನಾಗಿಯೂ, ರೋಗರಹಿತನಾಗಿಯೂ, ರೋಗಪ್ರತಿರೋಧ ಗುಣವುಳ್ಳವನಾಗಿಯೂ, ತೆಳ್ಳಗೆ ಬೆಳ್ಳಗೆ ಸುಂದರವಾಗಿಯೂ ಇರಬೇಕೆಂದು ಆಳವಾದ ಹಂಬಲ ಮನದಲ್ಲಿ ಬೇರೂರಿರುತ್ತದೆ.

ಇನ್ನೂ ಮುಂದುವರಿದು ನೀಲಿ ಕಣ್ಗಳೂ, ನೀಳಕೇಶರಾಶಿಯೂ ಸ್ಫುರದ್ರೂಪಿ ಶರೀರವೂ ಅಗಾಧವಾದ ಆಸೆಗಳು ತಾಯ್ತಂದೆಯರಲ್ಲಿ ಮೂಡಿನಿಂತಿರುತ್ತವೆ. ಒಂದು ವೇಳೆ ಅಂತಹ ಸರ್ವಗುಣ ಸಂಪನ್ನನಾದ ಮಗುವನ್ನು ಪಡೆಯುವುದು ಅಪೇಕ್ಷೆಯಷ್ಟೇ ಆಗದೆ ನಿಜವಾಗಿಬಿಟ್ಟರೆ? ಹೀಗೆ ಬೇಡಿಕೆಗೆ ತಕ್ಕಂತೆ ರೂಪಾಂತರಿಸಿದ ಮಗುವನ್ನು ಪಡೆಯುವುದು ಸಾಧ್ಯವಾಗಿಬಿಟ್ಟರೆ?

ಅಯ್ಯೋ, ಎಂತಹ ಪ್ರಶ್ನೆ ಹಾಕುತ್ತೀರಿ ಎಂದು ಪ್ರಶ್ನಿಸುವಿರಾ?

ನವೆಂಬರ್ 2018ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ಮಾನವನ ವಂಶವಾಹಿನಿ ಸಂಕಲನಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ವಿಜ್ಞಾನಿ ಜಿಯಾಂಕಿ ಇಂತಹ ಅಪರೂಪದ ಮಗುವನ್ನು ಪಡೆಯುವ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದರು. ಅಲ್ಲದೆ, ತಾವು ಅಂತಹದ್ದೊಂದು ಮಗುವನ್ನು ಸೃಷ್ಟಿ ಮಾಡಿದ್ದೇನೆಂದೂ ಸಾರಿದರು. ಅವರ ಈ ಹೇಳಿಕೆ ತೀವ್ರ ಕುತೂಹಲಕ್ಕೂ, ವಿವಾದಕ್ಕೂ ಈಡಾಯಿತು. ಈ ತಂತ್ರಜ್ಞಾನವನ್ನು ಜೀನ್ ಎಡಿಟಿಂಗ್ ಎಂದು ಕರೆಯಲಾಗುತ್ತದೆ. ಸಿನಿಮಾದಲ್ಲಿ ಹಲವಾರು ದೃಶ್ಯಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ಚಿತ್ರೀಕರಿಸಿ ಆನಂತರ ಅದನ್ನು ಸೂಕ್ತವಾಗಿ ಜೋಡಿಸಿ ಅದ್ಭುತ ಸಿನಿಮಾವೊಂದನ್ನು ಹೇಗೆ ತಯಾರಿಸಬಹುದೋ ಹಾಗೆಯೇ ನಮ್ಮ ವಂಶವಾಹಿಗಳನ್ನು ನಮಗೆ ಬೇಕಾದಂತೆ ಜೋಡಿಸಿಕೊಂಡು, ಸರಿಯಾಗಿ ಕೆಲಸ ಮಾಡದ ವಂಶವಾಹಿಗಳನ್ನು ತೆಗೆದುಹಾಕಿ ನಮ್ಮ ಇಚ್ಛೆಯಂತೆಯೇ ಮಗುವನ್ನು ಪಡೆಯಬಹುದೆಂಬ ಕಲ್ಪನೆಯೇ ಸುಂದರವಾದದ್ದು!

ಯೂಜೆನಿಕ್ಸ್

1883ರಷ್ಟು ಹಿಂದೆಯೇ ಫ್ರಾನ್ಸಿಸ್ ಗಾಲ್ಟನ್ ಎಂಬಾತ ತನ್ನ Inquiries into Human Faculty and Its Development ಎಂಬ ಪುಸ್ತಕದಲ್ಲಿ ಅಪೇಕ್ಷಿತ ಶಾರೀರಿಕ ಗುಣಗಳಿರುವ ಕೂಸನ್ನು ಪಡೆಯಬಹುದಾದ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದ್ದ. ಇದನ್ನು ಶಾಸ್ತ್ರೀಯವಾಗಿ ಯೂಜೆನಿಕ್ಸ್ ಎಂದು ಕರೆಯಲಾಗುತ್ತದೆ. ಡಿಎನ್‌ಎ ತಂತ್ರಜ್ಞಾನವು ತೀವ್ರಗತಿಯನ್ನು ಪಡೆದ ನಂತರ ಬಹಳ ಗಂಭೀರ ಸಂಶೋಧನೆಗಳು ಈ ನಿಟ್ಟಿನಲ್ಲಿ ನಡೆಯಲಾರಂಭಿಸಿದವು. ಮಾನವನ ಇನ್ಸುಲಿನ್‌ಅನ್ನು ‘ಇ ಕೋಲಿ’ ಎಂಬ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವಂತೆ ಮಾಡಿದ್ದಿರಬಹುದು, ಹಸುವಿನಹಾಲಿನಲ್ಲಿ ಮಾನವನ ಪ್ರತಿಕಣಗಳು ದೊರೆಯುವಂತೆ ಮಾಡಿದ್ದಿರಬಹುದು, ಇವೆಲ್ಲಾ ಈ ಅತ್ಯಾಧುನಿಕ ಡಿಎನ್‌ಎ ತಂತ್ರಜ್ಞಾನದಿಂದಲೇ.

ಇಂತಹ ಸಂಶೋಧನೆಗಳು ನಡೆಯುತ್ತಿದ್ದ ಕಾಲಕ್ಕೆ ಮಾನವ ತಳಿಶಾಸ್ತ್ರಜ್ಞರು ಹೊಸ ಆಲೋಚನೆಯನ್ನು ಆರಂಭಿಸಿದ್ದರು. ಒಂದುವೇಳೆ ಡಿಎನ್‌ಎಯನ್ನು ರಿಪೇರಿ ಮಾಡಲು ಸಾಧ್ಯವಾದರೆ ಅನುವಂಶೀಯ ಕಾಯಿಲೆಗಳಿಗೆ ಸುಲಭವಾಗಿ ಪರಿಹಾರ ಕಂಡುಹಿಡಿಯಬಹುದೆಂಬ ಅಲೋಚನೆ ಅವರಲ್ಲಿ ಮೂಡಿತು. ಜೀನ್ ಥೆರಪಿ ಎಂಬ ವೈದ್ಯಕೀಯ ವಿಸ್ಮಯ ಆರಂಭವಾದದ್ದು ಹೀಗೆ. ಜೀನ್ ಥೆರಪಿಯ ಮುಖಾಂತರ ನಮಗೆ ಬೇಕಾದ ಮಗುವನ್ನು ಪಡೆಯಲು ಅಸಾಧ್ಯವಾದರೂ ತೀರಾ ಭಯಾನಕವಾದ ಅಪಾಯಕಾರಿಯಾದ ಹಲವಾರು ಅನುವಂಶೀಯ ಕಾಯಿಲೆಗಳಿಗೆ ಇದರಿಂದ ಪರಿಹಾರ ನೀಡಲು ಸಾಧ್ಯವಿತ್ತು.

ಇತ್ತೀಚೆಗೆ ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ದಾರಿಗಳು ಗೋಚರಿಸಿ ಜೀನ್ ಎಡಿಟಿಂಗ್ (ವಿಜ್ಞಾನಿಗಳ ಗುಂಪೊಂದು ಇದನ್ನು ಜೀನ್ ಹ್ಯಾಕಿಂಗ್ ಎನ್ನುತ್ತಾರೆ.) ಎಂಬ ತಂತ್ರಜ್ಞಾನವನ್ನು ಆವಿಷ್ಕರಿಸಲಾಯ್ತು. ಇದರ ಮುಖ್ಯಾಂಶವಿಷ್ಟೇ ನಮ್ಮ ಡಿಎನ್‌ಎಯನ್ನು ನಮಗೆ ಬೇಕಾದಂತೆ ಕತ್ತರಿಸಿ ಜೋಡಿಸಿಕೊಳ್ಳುವುದು. ಹಾಗೆ ಮಾಡಬಹುದಾದರೆ ಕಾಯಿಲೆಗಳನ್ನು ತರುವ, ಸಮಸ್ಯೆ ಉಂಟುಮಾಡುವ ವಂಶವಾಹಿಗಳನ್ನು ಕತ್ತರಿಸಿ ಬಿಸಾಕಿ ಸರಿಯಾಗಿ ಕೆಲಸಮಾಡುವ ವಂಶವಾಹಿಗಳನ್ನು ಜೋಡಿಸಿ ಅಪೇಕ್ಷಿತ ಕೂಸನ್ನು ಪಡೆಯುವುದು ಅಸಾಧ್ಯವೇನಲ್ಲ.

ಉದಾಹರಣೆಗೆ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯ ಮೇದೋಜೀರಕ ಗ್ರಂಥಿಯಲ್ಲಿನ ಬೀಟಾ ಜೀವಕೋಶಗಳೊಳಗೆ ಇನ್ಸುಲಿನ್ ಉತ್ಪಾದಿಸುವ ಸಶಕ್ತ ವಂಶವಾಹಿಗಳನ್ನು ಸೇರಿಸಿ ಆ ಮೂಲಕ ಅವರ ದೇಹದಲ್ಲಿ ಸರಿಯಾಗಿ ಇನ್ಸುಲಿನ್ ಉತ್ಪತ್ತಿಯಾಗುವಂತೆ ಮಾಡಿದರೆ ಸುಲಭವಾಗಿ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳದೆಯೇ ಮಧುಮೇಹವನ್ನು ಹತೋಟಿಯಲ್ಲಿಡಬಹುದು! ಹೀಗೆ ವಂಶವಾಹಿಯನ್ನು ರಿಪೇರಿ ಮಾಡುವುದೆಂದು ಬರೆಯುವಾಗ, ಮಾತನಾಡುವಾಗ ಬಹಳ ಆಕರ್ಷಕವಾಗಿ ಕಂಡರೂ ಅದನ್ನು ಕಾರ್ಯರೂಪಕ್ಕೆ ತರುವುದು ಸುಲಭದ ಕೆಲಸವಲ್ಲ. ಡಿಎನ್‌ಎಯನ್ನು ನಮಗೆ ಬೇಕಾದಲ್ಲಿ ಕತ್ತರಿಸಿ ಜೋಡಿಸುವುದಕ್ಕೆ ಕೆಲವು ವಿಶೇಷ ಕೌಶಲವುಳ್ಳ ರಾಸಾಯನಿಕಗಳ ಅವಶ್ಯಕತೆಯಿರುತ್ತದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಬಹಳ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನವೇ ಕ್ರಿಸ್ಪರ್ ತಂತ್ರಜ್ಞಾನ.

ಸ್ಥೂಲವಾಗಿ ಹೇಳಬೇಕೆಂದರೆ ಕ್ರಿಸ್ಪರ್ (CRISPR– Clustered Regularly Interspaced Short Palindromic Repeats) ಇದು ಡಿಎನ್‌ಎಯ ಒಂದು ಸಣ್ಣ ತುಣುಕಷ್ಟೇ. ಮೊದಲಿಗೆ ಇದನ್ನು ಬ್ಯಾಕ್ಟೀರಿಯಾಗಳಲ್ಲಿ ಕಂಡುಹಿಡಿಯಲಾಯ್ತು. ಇದರ ಜೊತೆಗೆ ಸಿಎಎಸ್–9 (Cas9– CRISPR-associated protein 9) ಎಂಬ ಕಿಣ್ವವೊಂದು ಇರುತ್ತದೆ. ಈ ಕಿಣ್ವವು ಡಿಎನ್ಎಯ ಮೇಲೆ ಕ್ರಿಸ್ಪರ್ ತುಣುಕುಗಳಿಗೆ ಹೊಂದಬಹುದಾದ ಜಾಗವನ್ನು ಹುಡುಕಿ ಅಲ್ಲಿ ಕತ್ತರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಗುಣದಿಂದಾಗಿ ಕ್ರಿಸ್ಪರ್ ಸಿಎಎಸ್–9ನ್ನು ನಮಗೆ ಬೇಕಾದಲ್ಲಿ ಡಿಎನ್ಎ (ಸಮಸ್ಯೆ ಇರುವ ಡಿಎನ್ಎ ತುಣುಕುಗಳನ್ನು) ತುಣುಕುಗಳನ್ನು ಕತ್ತರಿಸಲು ಸಹಾಯ ಮಾಡುತ್ತವೆ. ಇದನ್ನೇ ಜೀನ್ ಎಡಿಟಿಂಗ್ ಎಂದು ಕರೆಯಲಾಗುತ್ತದೆ.

ಲುಲು ಮತ್ತು ನಾನಾ

ಇನ್ನು ಜಿಯಾಂಕಿ ಸೃಷ್ಟಿಸಿದ ಲುಲು ಮತ್ತು ನಾನಾ ಅವರ ವಿಷಯಕ್ಕೆ ಬರೋಣ.

ಎಚ್ಐವಿ ಪೀಡಿತ ಕುಟುಂಬವೊಂದು ಈ ಪ್ರಯೋಗದಲ್ಲಿ ಸ್ವಯಂಸೇವಕರಾಗಲು ಆಸಕ್ತಿ ವಹಿಸಿತು. ಆ ದಂಪತಿಗಳಲ್ಲಿ ಪತಿಗೆ ಎಚ್ಐವಿ ಸೋಂಕು ಇದ್ದುದರಿಂದ ಅವರು ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನು ನಡೆಸುವಂತೆ ಇರಲಿಲ್ಲ. ಮಗು ಪಡೆಯಲು ಅವರಿಗಿದ್ದ ಒಂದೇ ಒಂದು ದಾರಿಯೆಂದರೆ ಪ್ರನಾಳ ಶಿಶುವನ್ನು ಪಡೆಯುವುದು. ಪ್ರನಾಳ ಶಿಶುವನ್ನು ಸೃಷ್ಟಿಸುವುದು ಸದ್ಯ ಕಷ್ಟದ ಕೆಲಸವೇನಲ್ಲ. ಆದರೆ ಮಗುವಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಈಗ ಜಿಯಾಂಕಿ ಐತಿಹಾಸಿಕವಾದ ನಿರ್ಧಾರವೊಂದನ್ನು ತೆಗೆದುಕೊಂಡರು. ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿ ಆ ಪ್ರಣಾಳಶಿಶು ಎಚ್ಐವಿ ಸೋಂಕಿಗೊಳಗಾಗದಂತೆ ನೋಡಿಕೊಳ್ಳುವುದೇ ಆ ತೀರ್ಮಾನ.

ಎಚ್ಐವಿ ಒಂದು ವೈರಸ್ ಆಗಿದ್ದು, ದೇಹಕ್ಕೆ ಸೇರಿದೊಡನೆ ಅವುಗಳು ರೋಗ ತರಲು ಸಾಧ್ಯವಿಲ್ಲ. ನಮ್ಮ ಜೀವಕೋಶಗಳೊಳಗೆ ತೂರಿಹೋಗಿ, ನಮ್ಮ ವಂಶವಾಹಿಗಳೊಂದಿಗೆ ಸೇರಿ ಆನಂತರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಜೀವಕೋಶಗಳೊಳಗೆ ವೈರಸ್‌ಗಳು ತೂರಿ ಹೋಗಲು ‘ಸಿಸಿಆರ್ 5’ ಎಂಬ ಗೇಟಿನಂತೆ ಕೆಲಸ ಮಾಡುವ ಪ್ರೋಟೀನಿನ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಕೆಲವೇ ಕೆಲವು ಮಂದಿಯಲ್ಲಿ ಈ ‘ಸಿಸಿಆರ್ 5’ ಪ್ರೋಟೀನಿನಲ್ಲಿ ಕೊಂಚ ವ್ಯತ್ಯಾಸ ಇರುತ್ತದೆ. ಅದನ್ನು ಮ್ಯುಟೇಷನ್ ಎಂದು ಕರೆಯಲಾಗುತ್ತದೆ. ಹೀಗೆ ವ್ಯತ್ಯಾಸ ಇರುವ ‘ಸಿಸಿಆರ್ 5’ ಇರುವ ವ್ಯಕ್ತಿಯ ಜೀವಕೋಶದೊಳಕ್ಕೆ ಹೆಚ್ಐವಿ ಲಗ್ಗೆಯಿಡಲು ಸಾಧ್ಯವಿಲ್ಲ ಅಂದರೆ ಅಂತಹ ವ್ಯಕ್ತಿಗಳು ಹೆಚ್ಐವಿ ಸೋಂಕಿಗೆ ಒಳಗಾಗಲು ಸಾಧ್ಯವೇ ಇಲ್ಲ. ಜಿಯಾಂಕಿ ಇಂತಹ ಸಾಧ್ಯತೆಯನ್ನು ತಮ್ಮ ಪ್ರಯೋಗದ ಮೂಲಕ ತಿಳಿದುಕೊಳ್ಳಲು ನಿರ್ಧರಿಸಿದರು.

ಸಿಎಎಸ್–9 ಎಂಬ ಡಿಎನ್ಎ ತುಣುಕನ್ನು ಬಳಸಿ ಆತ ಆ ದಂಪತಿಯ ವೀರ್ಯಾಣು ಹಾಗು ಅಂಡಾಣುವಿನಿಂದ ಲಭಿಸಿದ ಏಕಕೋಶೀಯ ಭ್ರೂಣದಲ್ಲಿ ಈ ಸಿಸಿಆರ್ 5 ವಂಶವಾಹಿಯಲ್ಲಿ ಅವರು ಬದಲಾವಣೆಯನ್ನು ಮಾಡಿದರು. ಹೀಗೆ ಬದಲಾದ ಸಿಸಿಆರ್ 5 ಇರುವ ಮಾನವನ ಜೀವಕೋಶಗಳೊಳಕ್ಕೆ ಹೆಚ್ಐವಿ ತೂರಲು ಸಾಧ್ಯವಾಗದು. ಇಂತಹ ಜೀವಕೋಶ ಹೊಂದಿದ ಅವಳಿ ಮಕ್ಕಳು ಎಚ್ಐವಿಪೀಡಿತ ತಂದೆಯಿದ್ದಾಗ್ಯೂ ಸೋಂಕಿಲ್ಲದೆ ಜನ್ಮತಾಳಿದ್ದಷ್ಟೇ ಅಲ್ಲದೆ ಆರೋಗ್ಯವಾಗಿಯೂ ಇವೆಯೆಂದು ಜಿಯಾಂಕಿ ಸ್ಪಷ್ಟಪಡಿಸಿದ್ದಾರೆ. ಅವಕ್ಕೆ ಭವಿಷ್ಯದಲ್ಲಿಯೂ ಎಚ್ಐವಿ ಸೋಂಕು ತಗುಲಲು ಸಾಧ್ಯವಿಲ್ಲ. ಲುಲು ಮತ್ತು ನನಾ ಎಚ್ಐವಿ ಸೋಂಕು ನಿರೋಧಿಸುವ ಗುಣವನ್ನು ತಮ್ಮ ಸಂಪೂರ್ಣ ಜೀವಿತಾವಧಿಗೆ ಹೊಂದಿರುತ್ತಾರೆ ಎನ್ನುವುದು ಅವರ ಖಚಿತ ನಂಬಿಕೆ.

ಭವಿಷ್ಯದಲ್ಲಿ ಅನುವಂಶೀಯ ಕಾಯಿಲೆಗಳು ಮಕ್ಕಳಿಗೆ ಬರದಂತೆ ಮಾಡಲು, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮಗೆ ಬೇಕಾದಂತಹ ಮಗುವನ್ನು ಪಡೆಯಲು ಈ ತಂತ್ರಜ್ಞಾನ ಸಹಾಯಕವಾಗಬಹುದೆಂದು ನಂಬಲಾಗಿದೆ. ಜಗತ್ತಿನೆಲ್ಲೆಡೆ ಈ ಪ್ರಯೋಗಕ್ಕೆ ಪರ ವಿರೋಧಗಳು ಢಾಳವಾಗಿ ವ್ಯಕ್ತವಾಗುತ್ತಿವೆ. ನಿಸರ್ಗಕ್ಕೆ ವಿರುದ್ಧವಾದ ಪ್ರಕ್ರಿಯೆ ಇದು ಎಂಬ ಅಭಿಪ್ರಾಯವೂ ಇದೆ. ಅನುವಂಶೀಯ ಮತ್ತಿತರ ಮಾರಕ ಕಾಯಿಲೆಗಳಿಂದ ಮಕ್ಕಳು ಅನುಭವಿಸುವ ನೋವನ್ನು ತಡೆಯಲು ಈ ತಂತ್ರಜ್ಞಾನ ಬಹಳ ಅನುಕೂಲವಾಗುತ್ತದೆ, ಏಕೆ ವಿರೋಧ ಎಂಬ ಪ್ರಶ್ನೆಯೂ ಹಿಂದೆಯೇ ಕೇಳಿ ಬರುತ್ತಿದೆ. ಲುಲು ಮತ್ತು ನಾನಾ ಅವರ ಭವಿಷ್ಯದಂತೆಯೇ ಈ ತಂತ್ರಜ್ಞಾನದ ಬಳಕೆ ಪ್ರಶ್ನೆಯೂ ಡೋಲಾಯಮಾನವಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT