ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ನೊಂದಿಗೆ ಕೈತೋಟ ಮಾಡಿ!

Last Updated 5 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ರಸಗೊಬ್ಬರ ಬಳಸದ ತರಕಾರಿ, ಸೊಪ್ಪು ತಿನ್ನಬೇಕು, ಹಣ್ಣಗಳನ್ನೂ ಬೆಳೆದುಕೊಳ್ಳಬೇಕು.ಬೇಕೆಂದಾಗ ನಮ್ಮದೇ ಕೈತೋಟದಿಂದ ಕೊಯ್ದು ಆ ಹಣ್ಣು ತರಕಾರಿಗಳನ್ನು ಸೇವಿಸಬೇಕು. ಇದು ಎಷ್ಟು ಮುದ ನೀಡುವ ಕನಸು ಅಲ್ವಾ? ಇಂಥವೆಲ್ಲ ನನಸಾಗುತ್ತದೆಯೇ ಎಂಬ ಅನುಮಾನವೂ ಇದೆ ಅಲ್ಲವಾ?

ಅನುಮಾನಪಡಬೇಡಿ. ನಿಮ್ಮಲ್ಲಿ ಆ್ಯಂಡ್ರಾಯ್ಡ್‌ ಅಥವಾ iOS ಸೌಲಭ್ಯವಿರುವ ಫೋನ್‌ ಇದೆಯಾ? ಹಾಗಿದ್ದರೆ ಕೈತೋಟದ ಕನಸು ನನಸಾದಂತೆಯೇ. ನಿಜ. ಸ್ವಂತ ಜಾಗವಿಲ್ಲದವರೂ ನಿಮ್ಮದೇ ಕೈತೋಟ ಹೊಂದುವ ಅವಕಾಶವನ್ನು ಬೆಂಗಳೂರಿನ ‘ಫಾರ್ಮಿಜೆನ್‌’ ಎಂಬ ಸ್ಟಾರ್ಟ್‌ ಅಪ್‌ ಸಂಸ್ಥೆ ಕಲ್ಪಿಸಿಕೊಡುತ್ತಿದೆ. ಮೊಬೈಲ್ ಅಪ್ಲಿಕೇಷನ್ (ಆ್ಯಪ್‌) ಮೂಲಕ ಕೈತೋಟ ಬೆಳೆಸುವ ವಿಭಿನ್ನ ಯೋಜನೆಯೊಂದನ್ನು ಸಾಕಾರಗೊಳಿಸುತ್ತಾ, ಅದುಯಶಸ್ವಿಯಾಗಿದೆ.

ಫಾರ್ಮಿಜೆನ್‌ ಆರಂಭವಾದದ್ದು 2017ರ ಜೂನ್‌ನಲ್ಲಿ. ಶಮೀಕ್‌ ಚಕ್ರವರ್ತಿ, ಗೀತಾಂಜಲಿ ರಾಜಮಣಿ ಮತ್ತು ಸುಧಾಕರನ್‌ ಬಾಲಸುಬ್ರಮಣಿಯನ್‌ ಎಂಬ ಯುವೋದ್ಯಮಿಗಳ ಸ್ಟಾರ್ಟ್‌ಅಪ್ ಸಂಸ್ಥೆ ಇದು. ಅಮೆಜಾನ್‌ ಮತ್ತು ಯಾಹೂ ಕಂಪನಿಗಳಲ್ಲಿ ಕೆಲಸ ಮಾಡಿದ್ದ ಶಮೀಕ್‌ ಮತ್ತು ಪತ್ನಿ ಗೀತಾಂಜಲಿ‌ ನವೋದ್ಯಮ ಆರಂಭಿಸುವ ಚಿಂತನೆ ನಡೆಸಿದಾಗ ಕೃಷಿ ಕ್ಷೇತ್ರದಲ್ಲಿ ಹೊಸದನ್ನು ಮಾಡುವ ಉಮೇದು ಬಂತಂತೆ.

‘ವೈಟ್‌ಫೀಲ್ಡ್‌ ಬಳಿಯ ನಮ್ಮ ಮನೆಯಲ್ಲಿ ನಿತ್ಯ ಬಳಕೆಗೆ ಬೇಕಾದ ಸೊಪ್ಪು ತರಕಾರಿಗಳನ್ನು ನಾವೇ ಬೆಳೆಯುತ್ತಿದ್ದೆವು. ಸೊಪ್ಪು, ತರಕಾರಿ, ಹೂವು ಮತ್ತು ಹಣ್ಣು ಬೆಳೆಯುವುದನ್ನೇ ನಮ್ಮ ಸ್ಟಾರ್ಟ್‌ಅಪ್‌ ಯೋಜನೆಯಾಗಿ ರೂಪಿಸಬಹುದಲ್ಲ ಎಂದು ಚರ್ಚಿಸಿದೆವು. ಸ್ನೇಹಿತ ಸುಧಾಕರನ್‌ ಜೊತೆಗೂಡಿದರು. ನಮಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಅನುಭವವಿರಲಿಲ್ಲ. ಆದರೆ ತಂತ್ರಜ್ಞಾನ ಬಳಸಿ ಸ್ಟಾರ್ಟ್‌ಅಪ್‌ ಮೂಲಕ ಹೇಗೆ ಅನುಷ್ಠಾನಕ್ಕೆ ತರಬೇಕು, ಮಾರುಕಟ್ಟೆ ಒದಗಿಸಿಕೊಳ್ಳಬೇಕು ಎಂಬ ನಿರ್ದಿಷ್ಟ ಯೋಜನೆ ನಮ್ಮಲ್ಲಿತ್ತು. ಹಾಗಾಗಿ, 2017ರ ಕೊನೆಯವರೆಗೂ ನಮಗೆ ಪ್ರತಿನಿತ್ಯವೂ ತಪ್ಪು–ಒಪ್ಪುಗಳ ಮೂಲಕ ಹೊಸದನ್ನು ಕಲಿಯುವ ಅವಧಿಯಾಗಿತ್ತು. ವರ್ತೂರಿನಲ್ಲಿ 1 ಎಕರೆ 40 ಗುಂಟೆ ಜಮೀನಿನಲ್ಲಿ ಮೊದಲ ತೋಟ ಮಾಡಿದೆವು. ಅಲ್ಪಾವಧಿಯಲ್ಲಿಯೇ 79 ಮಂದಿ ಸದಸ್ಯತ್ವ ಪಡೆದರು. ಅದೇ ಉಮೇದಿನಲ್ಲಿ ಹೊಸ ಹೊಸ ಕೇಂದ್ರಗಳನ್ನು ಆರಂಭಿಸಿದೆವು’ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಮೀಕ್‌.

ಫಾರ್ಮಿಜೆನ್‌ ಕಾರ್ಯನಿರ್ವಹಣೆ...

ರೈತರಿಂದ ಜಮೀನನ್ನು ಗುತ್ತಿಗೆ ಪಡೆಯುವ ಫಾರ್ಮಿಜೆನ್‌ ಅದೇ ರೈತರನ್ನು ಪಾಲುದಾರರನ್ನಾಗಿಸಿಕೊಳ್ಳುತ್ತದೆ.ಇಡೀ ಜಮೀನು ಮತ್ತು ಕೈತೋಟಗಳ ನಿರ್ವಹಣೆ, ಬೀಜ ಬಿತ್ತುವುದು, ಗಿಡ ನೆಡುವುದು, ನೀರುಣಿಸುವುದು, ಬೆಳೆಗಳನ್ನು ಬದಲಾಯಿಸುವುದು ಮತ್ತು ಸದಸ್ಯರಿಗೆ ಬೆಳೆ ಸಂಬಂಧಿ ಮಾರ್ಗದರ್ಶನ, ಕೊಯ್ಲು ಮುಂತಾದ ದೈನಂದಿನ ಮತ್ತು ಆಯಾ ವಾರದ ವ್ಯವಹಾರಗಳ ಜವಾಬ್ದಾರಿಯೂ ಅವರದ್ದೇ. ಹಣಕಾಸು ಮತ್ತು ತಂತ್ರಜ್ಞಾನ ಸಂಬಂಧಿ ವ್ಯವಹಾರ, ಹೊಸ ಸದಸ್ಯರ ಸಂಪರ್ಕ ಮತ್ತು ಮಾಹಿತಿ ನೀಡುವುದು, ಹಾಲಿ ಸದಸ್ಯರೊಂದಿಗೆ ಸಂವಹನದಂತಹ ಮೂಲ ಹೊಣೆಗಾರಿಕೆ ಫಾರ್ಮಿಜೆನ್‌ನದು. ಪ್ರತಿ ತೋಟಕ್ಕೂ ಒಂದೊಂದು ಹೆಸರು; ಆಯಾ ಹೆಸರಿನಿಂದಲೇ ತೋಟ ಮತ್ತು ಸದಸ್ಯರನ್ನು ಗುರುತಿಸಲಾಗುತ್ತದೆ.ಬೆಂಗಳೂರು ನಗರದ ಹೊರವಲಯದವರ್ತೂರಿನಲ್ಲಿ ಆರು, ಬನ್ನೇರುಘಟ್ಟ ರಸ್ತೆ ವ್ಯಾಪ್ತಿಯಲ್ಲಿ ಮೂರು ದೇವನಹಳ್ಳಿ ಭಾಗದಲ್ಲಿ ಎರಡು ಕನಕಪುರ ರಸ್ತೆ, ಮುತ್ಕೂರು, ಕೂಗೂರು ಹಾಗೂ ನೆಲಮಂಗಲ– ತಲಾ ಒಂದೊಂದು ಫಾರ್ಮಿಜೆನ್‌ ತೋಟಗಳಿವೆ. ಹೊರರಾಜ್ಯಗಳಲ್ಲಿ ಮೂರು ತೋಟಗಳಿವೆ. ‌ ಪ್ರತಿ ತೋಟಕ್ಕೂ ಒಂದೊಂದು ಹೆಸರು. ಕಲ್ಪವೃಕ್ಷ, ಪಿಂಕ್‌ ಗವ್ವಾ, ಗ್ರೀನ್‌ ಲೀವ್ಸ್‌, ರಾಮದೂತ, ಬ್ರಹ್ಮಿಣಿ ಫಾರ್ಮ್‌ ಹೀಗೆ...

‘ಫಾರ್ಮಿಜೆನ್‌’ 600 ಚದರ ಅಡಿಗಳಷ್ಟು ಸ್ಥಳಾವಕಾಶವನ್ನು ಸದಸ್ಯರಿಗೆ ಬಿಟ್ಟುಕೊಡುತ್ತದೆ. ಇದನ್ನು ಪ್ಲಾಟ್‌ ಎನ್ನಲಾಗುತ್ತದೆ. ಒಂದೊಂದು ಪ್ಲಾಟ್‌ನಲ್ಲಿಯೂ ತಲಾ ಆರು ಪಾತಿಗಳು.ಸದಸ್ಯರು ತಿಂಗಳಿಗೆ ₹ 2,500 ಪಾವತಿಸಿದರೆ ಆ ಪ್ಲಾಟ್‌ಗೆ ಅವರೇ ಮಾಲೀಕರು.ಪ್ರತಿ ಪಾತಿಯಲ್ಲಿಯೂ ಬೇರೆ ಬೇರೆ ಬೆಳೆ ಬೆಳೆಯಬಹುದು. ಫಾರ್ಮಿಜೆನ್‌ ಆ್ಯಪ್‌ನಲ್ಲಿ ನೀಡಲಾಗಿರುವ ಬೆಳೆಗಳ ಪಟ್ಟಿಯಿಂದ ತಮಗೆ ಬೇಕಾದ ತರಕಾರಿ, ಸೊಪ್ಪುಗಳನ್ನು ಸದಸ್ಯರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಅವರು ನೀಡುವ ಮಾಹಿತಿ.

‘ಆಯಾ ಪ್ಲಾಟ್‌ನ ಮಾಲೀಕರಿಗೆ ಪ್ರತಿದಿನ ಮಾಹಿತಿ ಅಪ್‌ಡೇಟ್‌ ಮಾಡುತ್ತೇವೆ. ನೀರುಣಿಸಿದ್ದು, ಹಾಕಿದ ಗೊಬ್ಬರ ಮತ್ತು ಔಷಧಿ, ಕೊಯ್ಲಿಗೆ ಸಿದ್ಧವಾಗಿರುವ ತರಕಾರಿ/ಸೊಪ್ಪಿನ ವಿವರ, ಯಾವ ಬೆಳೆ ಪೂರ್ಣಗೊಂಡಿದೆ ಮತ್ತು ಹೊಸ ಗಿಡಗಳನ್ನು ಯಾವಾಗ ನೆಡಬೇಕು ಮುಂತಾದ ಮಾಹಿತಿಗಳನ್ನು ಕೊಡುತ್ತಿರುತ್ತೇವೆ. ಅವರು ಭೇಟಿ ನೀಡಬೇಕಾದ ದಿನವನ್ನೂ ನೆನಪಿಸಲಾಗುತ್ತದೆ. ಕೆಲವರು ವಾರಾಂತ್ಯವನ್ನು ನಮ್ಮಲ್ಲಿಯೇ ಕಳೆಯುವುದುಂಟು. ನಿವೃತ್ತರು, ಯುವಜನರು ತಮ್ಮ ಬೆಳೆಗಳಿಗೆ ತಾವೇ ಕೈಯಾರೆ ಸಾವಯವ ಔಷಧಿ ಸಿಂಪಡಿಸುತ್ತಾರೆ, ನೀರುಣಿಸುತ್ತಾರೆ’ ಎಂದು ಶಮೀಕ್‌ ವಿವರಿಸುತ್ತಾರೆ.

ಬನ್ನೇರುಘಟ್ಟ ಸಮೀಪದ ಲಕ್ಷ್ಮೀಪುರದಲ್ಲಿರುವ ‘ಸ್ವಯಂ ಕೃಷಿ’ ತೋಟಕ್ಕೆ ಜಮೀನು ನೀಡಿರುವ ಸುನಿಲ್‌ ಎಂಬ ಕೃಷಿಕ ಕುಟುಂಬದ ಯುವಕ ಫಾರ್ಮಿಜೆನ್‌ ಜೊತೆಗಿನ ಗುತ್ತಿಗೆಯಿಂದಾಗಿ ಪೂರ್ಣಪ್ರಮಾಣದ ಕೃಷಿಕರಾಗಿ ಮುಂದುವರಿದಿದ್ದಾರೆ.‌ಋತು ಮತ್ತು ಹವಾಮಾನಗಳಿಗೆ ಅನುಗುಣವಾಗಿ ಬೆಳೆ ಆಯ್ಕೆ ಮತ್ತು ರಕ್ಷಣೆ ಬಗೆಗಿನ ಅವರ ಅನುಭವ ಫಾರ್ಮಿಜೆನ್‌ ಸದಸ್ಯರಿಗೆ ನೆರವಾಗುತ್ತಿದೆ.

‘ಮನೆಯಲ್ಲಿ ಹೆಚ್ಚಾಗಿ ಬಳಸುವ ತರಕಾರಿಗಳನ್ನೇ ಬೆಳೆದುಕೊಳ್ಳಲು ಆಸಕ್ತಿವಹಿಸುತ್ತಾರೆ. ಬೀನ್ಸ್‌, ಅಲಸಂದೆ,‌ಹೂ ಕೋಸು, ಹಸಿಮೆಣಸು, ಬದನೆ, ಕ್ಯಾರೆಟ್‌, ಮೂಲಂಗಿ, ನವಿಲುಕೋಸು, ಬೆಂಡೆಕಾಯಿ, ದಂಟಿನ ಸೊಪ್ಪು, ಹರಿವೆ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಕುಂಬಳಕಾಯಿ, ಸೋರೆಕಾಯಿ ಹೀಗೆ ನಿತ್ಯ ಬಳಕೆಯ ತರಕಾರಿಗಳನ್ನೇ ಹೆಚ್ಚಾಗಿ ಇಲ್ಲಿ ಬೆಳೆಯುತ್ತಾರೆ. ತರಕಾರಿ ಗಿಡ ನೆಟ್ಟು 2 ತಿಂಗಳ ನಂತರ ವಾರಕ್ಕೆ ಕನಿಷ್ಠ 5–6 ಕೆಜಿಗಳಷ್ಟು ತರಕಾರಿ ಅವರಿಗೆ ಸಿಗುತ್ತದೆ. ಒಂದೇ ಸದಸ್ಯತ್ವದಲ್ಲಿ ಬೆಳೆದ ಉತ್ಪನ್ನಗಳನ್ನು ಬೇರೆ ಕುಟುಂಬಗಳೊಂದಿಗೆ ಹಂಚಿಕೊಳ್ಳುವುದಿದೆ. ಅಂದರೆ ಮಾರುಕಟ್ಡೆ ದರಕ್ಕಿಂತಲೂ ಕಡಿಮೆಗೆ ಸಾವಯವ ಉತ್ಪನ್ನಗಳನ್ನು ಬೆಳೆದು ಬಳಸುವ ಅವಕಾಶವಿದು’ ಎಂದು ವಿವರಿಸುತ್ತಾರೆ, ಸುನಿಲ್‌.

ಫಾರ್ಮಿಜೆನ್ ಚಟುವಟಿಕೆ ಕುರಿತ ಮಾಹಿತಿಗೆ ಭೇಟಿ ಕೊಡಿ:https://www.farmizen.com

***

ಮಕ್ಕಳಿಗೆ ಕೃಷಿ ಪಾಠ!

ಬೆಂಗಳೂರಿನಂತಹ ನಗರಗಳಲ್ಲಿ ಅಪ್ಪ–ಅಮ್ಮ–ಮಗು ಎಂಬ ಮೈಕ್ರೊ ಕುಟುಂಬಗಳೇ ಫಾರ್ಮಿಜೆನ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿವೆ. ತಮ್ಮ ಮಗು ಕೃಷಿಯ ಬಗ್ಗೆ ತಿಳಿದುಕೊಳ್ಳಲು, ಶುದ್ಧ ವಾತಾವರಣ ನೀಡಲು ಮತ್ತು ಆರೋಗ್ಯಪೂರ್ಣವಾದ ಸಾವಯವ ಉತ್ಪನ್ನಗಳನ್ನು ಸೇವಿಸಲು ಸಿಕ್ಕಿರುವ ಅವಕಾಶವಿದು ಎಂಬುದು ಅವರ ಲೆಕ್ಕಾಚಾರ.

‘ವಾರಾಂತ್ಯದಲ್ಲಿ ತಮ್ಮ ಪ್ಲಾಟ್‌ನಲ್ಲಿ ಗಿಡಗಳ ಆರೈಕೆ ಮಾಡಿ ತೋಟದಲ್ಲಿಯೇ ಆಹಾರ ಸೇವಿಸಿ ಸಂಜೆ ಮರಳುತ್ತಾರೆ. ಕೆಲವು ಮಕ್ಕಳು ಸಂಜೆಯವರೆಗೂ ಪಾತಿಗಳನ್ನೂ, ಗಿಡಗಳನ್ನೂ ಕಾಳಜಿ ಮಾಡುವುದಿದೆ. ಹೀಗೆ ಪ್ರಕೃತಿಯ ಮಧ್ಯೆ ಕಾಲ ಕಳೆಯುವುದೇ ತಮಗಿಷ್ಟ ಎಂದು ಮಕ್ಕಳು ಹೇಳುತ್ತಾರೆ. ಹಾಗಾಗಿ ವಾರಾಂತ್ಯದಲ್ಲಿ ಇದೊಂದು ಪಿಕ್‌ನಿಕ್‌ ತಾಣದಂತಿರುತ್ತದೆ’ ಎಂದು ಹೇಳುತ್ತಾರೆ ಬನ್ನೇರುಘಟ್ಟದ ‘ಸ್ವಯಂಕೃಷಿ ಫಾರ್ಮ್‌’ನ ಸುನಿಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT