ಗುರುವಾರ , ಏಪ್ರಿಲ್ 9, 2020
19 °C
ಮಾರುಕಟ್ಟೆಯಲ್ಲಿ ಹೊಸ ಮೊಬೈಲ್ ಅಪ್ಲಿಕೇಷನ್‌

‘ಎಲ್ಸಾ’ ಎಂಬ ಇಂಗ್ಲಿಷ್‌ ಟೀಚರ್ !

ಗವಿ ಬ್ಯಾಳಿ Updated:

ಅಕ್ಷರ ಗಾತ್ರ : | |

Prajavani

ಜಾಗತಿಕ ಮತ್ತು ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್‌ ವ್ಯಾಪಕವಾಗಿ ಬಳಕೆಯಲ್ಲಿದೆ. ಇಂಗ್ಲಿಷ್ ಭಾಷೆಯೊಂದು ಗೊತ್ತಿದ್ದರೆ ಜಗತ್ತನ್ನೇ ಸುತ್ತಾಡಬಹುದು ಎನ್ನುವಂತಾಗಿದೆ. ಹೀಗೆ ಸಂವಹನ ಕೊಂಡಿಯಾಗಿ ಮತ್ತು ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್‌ ಕಲಿಯುವುದು ಅವಶ್ಯಕ ಅನಿವಾರ್ಯ.

ಇದು ಇಂದು ನಿನ್ನೆಯಿಂದ ಶುರುವಾಗಿರುವುದಲ್ಲ. ದಶಕಗಳ ಹಿಂದೆಯೇ ಇಂಗ್ಲಿಷ್ ಕಲಿಯಲೇಬೇಕಾದ ಅನಿವಾರ್ಯ ಒದಗಿಬಂದಿತ್ತು. ಇದಕ್ಕಾಗಿಯೇ ರ‍್ಯಾಪಿಡೆಕ್ಸ್‌, 30 ದಿನಗಳಲ್ಲಿ ಇಂಗ್ಲಿಷ್ ಕಲಿಯಿರಿ ಎಂಬ ಪುಸ್ತಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಬಂದಷ್ಟೇ ವೇಗದಲ್ಲಿ ಬಿಕರಿಯಾದವು. ಆದರೆ, ಇವುಗಳಿಂದ ಪ್ರಯೋಜನವಿಲ್ಲ ಎಂದಾದಾಗ ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌ ಮತ್ತು ಕಮ್ಯುನಿಕೇಶನ್‌ ಕ್ಲಾಸ್‌ಗಳು ಗಲ್ಲಿಗೊಂದರಂತೆ ಹುಟ್ಟಿಕೊಂಡವು. ನಾಲ್ಕೈದು ವರ್ಷಗಳಿಂದೀಚೆಗೆ, ‘ಕೋರ್ಸ್‌, ಕ್ಲಾಸ್‌’ಗಳೆಲ್ಲ ಹೋಗಿ, ಆ ಜಾಗದಲ್ಲಿ ಇಂಗ್ಲಿಷ್‌ ಕಲಿಸಲು ಮೊಬೈಲ್ ಆ್ಯಪ್‌ಗಳು ಬಂದುಬಿಟ್ಟಿವೆ. ಭಾಷಾ ಕಲಿಕೆಯ ಆ್ಯಪ್ ಯುಗ ಆರಂಭವಾಗಿದೆ.

ಇಂಥ ಆ್ಯಪ್‌ಗಳ ಸಾಲಿಗೆ ‘ಎಲ್ಸಾ’ ಹೆಸರಿನ ಹೊಸ ಆ್ಯಪ್‌ ಸೇರಿದೆ. ಸರಳ ಮತ್ತು ಸುಲಭವಾಗಿ ಸರಿಯಾದ ಇಂಗ್ಲಿಷ್‌ ಉಚ್ಚಾರಣೆ ಕಲಿಸುವುದು ಇದರ ವಿಶೇಷತೆ. ಈ ಅಪ್ಲಿಕೇಷನ್‌ಗಳಲ್ಲಿ ಶಬ್ದಗಳನ್ನು ಹೇಗೆ ಉಚ್ಚರಿಸಬೇಕು ಎಂಬುವುದನ್ನು ಕಲಿಸಿಕೊಡುತ್ತದೆ. ವಾಕ್ಯ ನೀಡಿ ಉಚ್ಚರಿಸಲು ಹೇಳುತ್ತದೆ. ನೀವು ಉಚ್ಚರಿಸಿದ ಬೆನ್ನಲ್ಲೇ ಅದರ ಮೌಲ್ಯಮಾಪನ ನಡೆಯುತ್ತದೆ. ಅಂಕಗಳನ್ನೂ ನೀಡುತ್ತದೆ. 

ವಾಕ್ಯದ ಉಚ್ಚಾರ ಎಲ್ಲಿ ತಪ್ಪಾಗಿದೆ ಅದು ಮಾತ್ರ ಕೆಂಪು ಅಕ್ಷರಗಳಲ್ಲಿ ಗೋಚರಿಸುತ್ತದೆ. ಆ ಪದವನ್ನು ಸರಿಯಾಗಿ ಹೇಗೆ ಉಚ್ಚರಿಸಬೇಕು ಎಂದು ಹೇಳಲಾಗುತ್ತದೆ. ಇದರಿಂದ ನೀವು ಮಾತನಾಡುವ ಇಂಗ್ಲಿಷ್ ಭಾಷೆ ಉತ್ತಮಗೊಳ್ಳುವ ಜತೆಗೆ ಆತ್ಮವಿಶ್ವಾಸವೂ ಬೆಳೆಯುತ್ತದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಗ್ರಾಹಕರು, ತಮ್ಮ ದೇಶ,  ರಾಜ್ಯ, ಪ್ರದೇಶ, ಪ್ರಾಂತ್ಯ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವಿದೆ. ಅದರ ಅನುಸಾರ ಇಂಗ್ಲಿಷ್‌ ಉಚ್ಚಾರಣೆಯನ್ನು ತಾಳೆ ಹಾಕಲಾಗುತ್ತದೆ. ಬೇರೆ, ಬೇರೆ ರಾಷ್ಟ್ರಗಳಲ್ಲಿ ಇಂಗ್ಲಿಷ್‌ ಶಬ್ದಗಳು ಹೇಗೆ ವಿಭಿನ್ನವಾಗಿ ಉಚ್ಚಾರವಾಗುತ್ತವೆ ಎನ್ನುವುದನ್ನು ನೋಡಬಹುದು.

ಸ್ಯಾನ್ ಫ್ರಾನ್ಸಿಸ್ಕೊ ಮೂಲದ ‘ವು ವ್ಯಾನ್‌ ಹಾಗೂ ಜೀವಿಯರ್ ಆ್ಯಂಗೇರ್‌’ ಕಂಪನಿ ಈ ಆ್ಯಪ್‌ ಅಭಿವೃದ್ಧಿಪಡಿಸಿ ಮೂರೂವರೆ ವರ್ಷಗಳ ಹಿಂದೆಯೇ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಗಲೇ ವಿಯೆಟ್ನಾಂ,ಪೋರ್ಚ್‌ಗಲ್‌, ಅಮೆರಿಕ ಮಾರುಕಟ್ಟೆ ಪ್ರವೇಶಿಸಿದೆ. ಈ ವರ್ಷ ಭಾರತ ಸೇರಿದಂತೆ ಶ್ರೀಲಂಕಾ, ಇಂಡೊನೇಷ್ಯಾ, ಜಪಾನ್‌, ಬಾಂಗ್ಲಾದೇಶದ ಮಾರುಕಟ್ಟೆ ಪ್ರವೇಶಿಸಿದೆ.  

ಎಲ್ಸಾ ಹೇಗೆ ವಿಭಿನ್ನ?

ಇಂಗ್ಲಿಷ್‌ ಕಲಿಕೆಗೆ ಈಗಾಗಲೇ ಸಾಕಷ್ಟು ಆ್ಯಪ್‌ಗಳಿವೆ. ಇವುಗಳಿಗಿಂತ ‘ಎಲ್ಸಾ’ ಹೇಗೆ ವಿಭಿನ್ನ ಎಂಬ ಪ್ರಶ್ನೆಗೆ ‘ಎಲ್ಸಾ’ ಕಾರ್ಪೊರೇಷನ್‌ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಿತೇಶ್‌ ಮೋನಪ್ಪ ಹೇಳುವುದು ಹೀಗೆ... 

ಇಂದಿನ ದಿನಗಳಲ್ಲಿ ಕಮ್ಯುನಿಕೇಶನ್‌ ಇಂಗ್ಲಿಷ್‌ ಮುಖ್ಯ. ನಮ್ಮ ಆ್ಯಪ್‌ ಇಂಗ್ಲಿಷ್‌ ಸ್ಪೀಕಿಂಗ್‌ಗೆ ಒತ್ತು ನೀಡುತ್ತದೆ. ನಿತ್ಯದ ಬದುಕಿನಲ್ಲಿ ಇಂಗ್ಲಿಷ್‌ ಭಾಷೆಯನ್ನು ಸಂವಹನ ಮಾಧ್ಯಮವಾಗಿ ಹೇಗೆ ಪರಿಣಾಮಕಾರಿಯಾಗಿ ಬಳಸಬೇಕು ಎನ್ನುವುದನ್ನು ಕಲಿಸುತ್ತದೆ. 

ಆ್ಯಪ್‌ನಲ್ಲಿರುವ ಹಲವು ಹಂತಗಳು  ಇಂಗ್ಲಿಷ್‌ ಶಬ್ದ, ವಾಕ್ಯ ಬಳಕೆ ಸಾಮರ್ಥ್ಯ ಹೆಚ್ಚಿಸುತ್ತದೆ. ಇಂಗ್ಲಿಷ್‌ ಶಬ್ದವನ್ನು ಹೇಗೆ ಸರಿಯಾಗಿ ಉಚ್ಚರಿಸಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ಯಾವ ಶಬ್ದಕ್ಕೆ ಹೆಚ್ಚು ಒತ್ತು ನೀಡಬೇಕು. ಯಾವ ಪದವನ್ನು ನಿಧಾನವಾಗಿ ಹೇಳಬೇಕು ಎಂಬ ಸೂಕ್ಷ್ಮವನ್ನು ಆ್ಯಪ್‌ ತಿಳಿಸುತ್ತವೆ. ಕ್ಷಣಾರ್ಧದಲ್ಲಿ ಮೌಲ್ಯಮಾಪನ ನಡೆದು ಫಲಿತಾಂಶ ಬರುತ್ತದೆ. ಡಿಕ್ಷನರಿ, ರ‍್ಯಾಪಿಡೆಕ್ಸ್‌ ಇತ್ಯಾದಿ ಪುಸ್ತಕಗಳಲ್ಲಿ ಈ ಸೌಲಭ್ಯ ದೊರೆಯುವುದಿಲ್ಲ.  

ವರದಿಯೊಂದರ ಪ್ರಕಾರ ಭಾರತದಲ್ಲಿ 12 ಕೋಟಿ ಮಂದಿ ಇಂಗ್ಲಿಷ್‌ ಮಾತನಾಡುತ್ತಾರೆ. ಆದರೆ, ನಾವು ಮಾತನಾಡುವ ಇಂಗ್ಲಿಷ್‌ನಲ್ಲಿ ಸಹಜವಾಗಿ ನಮ್ಮ ಮಾತೃಭಾಷೆಯ ಛಾಯೆ, ಪ್ರಭಾವ ಇದ್ದೇ ಇರುತ್ತದೆ. ನಾವು ನಮ್ಮ ವಿಚಾರ, ಕಲ್ಪನೆಗಳನ್ನು ಜಾಗತಿಕ ಮಾರುಕಟ್ಟೆಗೆ ತಿಳಿಸಬೇಕಾದರೆ ಗುಣಮಟ್ಟದ ಇಂಗ್ಲಿಷ್‌ ಅಗತ್ಯ.

ಸದ್ಯ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಗ್ರಾಮೀಣ ಪ್ರದೇಶಗಳ ಸರ್ಕಾರಿ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ನಮ್ಮ ಉತ್ಪನ್ನ  ತಲುಪಿಸಬೇಕು ಎನ್ನುವ ಯೋಜನೆ ಇದೆ. ಈ ದಿಶೆಯಲ್ಲಿ ಮಾತುಕತೆ ಕೂಡ ನಡೆಯುತ್ತಿವೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸರಿಯಾದ ಇಂಗ್ಲಿಷ್‌ ಜ್ಞಾನ ನೀಡಿದರೆ ಭವಿಷ್ಯದಲ್ಲಿ ಅವರು ಅನುಭವಿಸಬಹುದಾದ ಕೀಳರಿಮೆ, ಎದುರಾಗಬಹುದಾದ ಮುಜುಗರ ತಡೆಯಬಹುದು.

ಈಗ ದೇಶದ ಹಳ್ಳಿ, ಹಳ್ಳಿಗೂ ಅಂತರ್ಜಾಲ ಸಂಪರ್ಕ ಇದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್‌ ಫೋನ್‌ಗಳಿವೆ. ಆ್ಯಪ್‌ ಆಧಾರಿತ ಇಂಗ್ಲಿಷ್‌ ಕಲಿಕೆಗೆ ದೊಡ್ಡ ಮಾರುಕಟ್ಟೆ ಇದೆ. ಹೀಗಾಗಿ ಗೂಗಲ್‌ ಕಂಪನಿ ಈಚೆಗೆ ಎಲ್ಸಾ ಕಾರ್ಪೊರೇಷನ್‌ನಲ್ಲಿ ₹50 ಕೋಟಿ ಬಂಡವಾಳ ಹೂಡಿದೆ ಎನ್ನುತ್ತಾರೆ ರಿತೇಶ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು