ಭಾನುವಾರ, ಆಗಸ್ಟ್ 14, 2022
25 °C

ಗ್ರಾಮೀಣ ಭಾರತಕ್ಕೆ ಗೂಗಲ್‌ ನೆರವು: ₹113 ಕೋಟಿ ದೇಣಿಗೆ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

 ಗೂಗಲ್‌- ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ಗ್ರಾಮೀಣ ಭಾಗಗಳಲ್ಲಿ 80 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಮತ್ತು ಆರೋಗ್ಯ ಕಾರ್ಯಕರ್ತರ ಕೌಶಲ ಅಭಿವೃದ್ಧಿಗಾಗಿ ₹113 ಕೋಟಿ ದೇಣಿಗೆ ನೀಡುವುದಾಗಿ ಟೆಕ್‌ ದೈತ್ಯ ಗೂಗಲ್‌ ಸಂಸ್ಥೆಯು ಗುರುವಾರ ಹೇಳಿದೆ.

‘ಗೂಗಲ್‌ ಸಂಸ್ಥೆಯು ಇತರೆ ಸಂಸ್ಥೆಗಳೊಂದಿಗೆ ಸೇರಿ ಗ್ರಾಮೀಣ ‍‍ಪ್ರದೇಶದ ಆರೋಗ್ಯ ಸೌಲಭ್ಯಗಳಿಗಾಗಿ ಸುಮಾರು 80 ಆಮ್ಲಜನಕ ಉತ್ಪಾದನಾ ಘಟಕಗಳ ಖರೀದಿ ಮತ್ತು ಸ್ಥಾಪನೆ ಮಾಡಲಿದೆ. ಇದಕ್ಕಾಗಿ ‘ಗೀವ್‌ಇಂಡಿಯಾ’ಗೆ ₹90 ಕೋಟಿ ಮತ್ತು ‘ಪಾಥ್‌’ಗೆ ₹18.5 ಕೋಟಿ ದೇಣಿಗೆ ನೀಡಲಾಗುವುದು’ ಎಂದು ಗೂಗಲ್‌ ತಿಳಿಸಿದೆ.

20,000 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ನಿರ್ವಹಣೆಯ ವಿಶೇಷ ತರಬೇತಿ ನೀಡಲು ಮತ್ತು ಗ್ರಾಮೀಣ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಅಪೋಲೊ ಮೆಡ್‌ಸ್ಕಿಲ್ಸ್‌ಗೆ ಗೂಗಲ್‌ ಹಣಕಾಸಿನ ನೆರವು ನೀಡಲಿದೆ.

‘ಭಾರತದ 15 ರಾಜ್ಯಗಳಲ್ಲಿ 180,000 ಆಶಾ ಕಾರ್ಯಕರ್ತೆಯರು ಮತ್ತು  40,000 ಎಎನ್‌ಎಂ ಕಾರ್ಯಕರ್ತರಿಗೆ ಕೌಶಲ ಕಾರ್ಯಕ್ರಮಗಳನ್ನು ನಡೆಸಲು ಅರ್ಮಾನ್‌ ಸಂಸ್ಥೆಗೆ ₹3.6 ಕೋಟಿ ನೆರವು ನೀಡಲಾಗುವುದು’ ಎಂದು ಗೂಗಲ್ ತಿಳಿಸಿದೆ.

‘ಭಾರತವು ಕೋವಿಡ್‌ ಬಿಕ್ಕಟ್ಟಿನಿಂದ ನಿಧಾನಗತಿಯಲ್ಲಿ ಮೇಲೆ ಬರುತ್ತಿದೆ. ಹಲವಾರು ಸಮುದಾಯಗಳು, ಸಂಸ್ಥೆಗಳು ಸಾಂಕ್ರಾಮಿಕವನ್ನು ಎದುರಿಸಲು ಸರ್ಕಾರಕ್ಕೆ ನೆರವಾಗುತ್ತಿವೆ. ಇದು ನಿಜಕ್ಕೂ ಸ್ಪೂರ್ತಿದಾಯಕ’ ಎಂದು ಗೂಗಲ್‌ ಇಂಡಿಯಾದ ಮುಖ್ಯಸ್ಥ ಸಂಜಯ್‌ ಗುಪ್ತಾ ಅವರು ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಸದೃಢಗೊಳಿಸಲು ₹135 ಕೋಟಿ ನೀಡುವುದಾಗಿ ಗೂಗಲ್‌ ಸಂಸ್ಥೆ ಏಪ್ರಿಲ್‌ ತಿಂಗಳಿನಲ್ಲಿ ಘೋಷಿಸಿತ್ತು. ಇದರ ಭಾಗವಾಗಿ ಕೋವಿಡ್‌ ಬಿಕ್ಕಟ್ಟಿನಿಂದ ತೊಂದರೆಗೊಳಾಗಿರುವ ಬಡ ಕುಟುಂಬಗಳಿಗೆ ನೆರವಾಗಲು ‘ಗೀವ್‌ಇಂಡಿಯಾ’ ಮತ್ತು ಯುನಿಸೆಫ್‌ಗೆ ₹20 ಕೋಟಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು