ಭಾನುವಾರ, ಜನವರಿ 19, 2020
22 °C

ಪ್ರೀಮಿಯಂ ಪ್ರಿಯರಿಗೆ ‘ಒನ್‌ಪ್ಲಸ್‌ 7ಟಿ ಪ್ರೊ‘

ವಿಶ್ವನಾಥ ಎಸ್‌. Updated:

ಅಕ್ಷರ ಗಾತ್ರ : | |

Prajavani

ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಒನ್‌ಪ್ಲಸ್‌ ಕಂಪನಿಯು ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ದೊಡ್ಡದಾದ ಪರದೆ, ಕ್ಯಾಮೆರಾ ಗುಣಮಟ್ಟ, ಕಾರ್ಯಾಚರಣೆಯ ವೇಗ, ಆಡಿಯೊ, ವಿಡಿಯೊದ ಸ್ಪಷ್ಟತೆ.. ಹೀಗೆ ಹಲವು ಅಂಶಗಳ ದೃಷ್ಟಿಯಿಂದ ಕೊಡುವ ಬೆಲೆಗೆ ಉತ್ತಮ ಮೌಲ್ಯ ತಂದುಕೊಡುತ್ತದೆ. ಒನ್‌ಪ್ಲಸ್‌ 7 ಸರಣಿಯ ಮುಂದುವರಿಕೆಯಲ್ಲಿ ಒನ್‌ಪ್ಲಸ್‌ 7ಟಿ ಪ್ರೊ ಸಹ ಹಲವು ಹೊಸತನಗಳನ್ನು ಒಳಗೊಂಡಿದೆ.

ಮೇಲ್ನೋಟಕ್ಕೆ ಪ್ರಮುಖ ಬದಲಾವಣೆ ಎಂದರೆ ಕ್ಯಾಮೆರಾ ವಿನ್ಯಾಸ. 7ಟಿನಲ್ಲಿ ಟಿಯರ್‌ ಡ್ರಾಪ್‌ ಫ್ರಂಟ್ ಕ್ಯಾಮೆರಾ ಇದ್ದರೆ, 7ಟಿ ಪ್ರೊ ದಲ್ಲಿ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಇದೆ. ಹಿಂಬದಿಯಲ್ಲಿ ವೃತ್ತಾಕಾರದಲ್ಲಿ ಕ್ಯಾಮೆರಾ ಮತ್ತು ಲೆನ್ಸ್‌ ನೀಡುವ ಬದಲಾಗಿ ಲಂಬದಲ್ಲಿ ನೀಡಲಾಗಿದೆ. ಅದರ ಪಕ್ಕದಲ್ಲಿಯೇ ಆಟೊಫೋಕಸ್‌ ಸೆನ್ಸರ್‌ ಇದೆ.

6.67 ಇಂಚು ಅಗಲದ ಪರದೆ ಇದ್ದು, ಗಾತ್ರದಲ್ಲಿ ದೊಡ್ಡದಾಗಿರುವ ಜತೆಗೆ ತೂಕವೂ ಹೆಚ್ಚು. ಒಂದು ಕೈಯಿಂದ ಬಳಸಲು ಕಷ್ಟಪಡಬೇಕು. 7ಟಿನಲ್ಲಿ ಫ್ಲ್ಯಾಟ್‌ ಸ್ಕ್ರೀನ್‌ ಇದ್ದರೆ, ಪ್ರೊದಲ್ಲಿ ಕರ್ವಡ್‌ (ಬಾಗಿದ) ಎಡ್ಜ್‌ ಸ್ಕ್ರೀನ್‌ ನೀಡಲಾಗಿದೆ. ಹೀಗಾಗಿ ಫ್ಲ್ಯಾಟ್‌ ಸ್ಕ್ರೀನ್‌ ಹೊಂದಿರುವ ಮೊಬೈಲ್‌ಗಿಂತಲೂ ತುಸು ಹೆಚ್ಚಿನ ಎಚ್ಚರಿಕೆಯಿಂದ ಇದನ್ನು ಬಳಸಬೇಕು. ಏಕೆಂದರೆ ಒಂದೊಮ್ಮೆ ಕೈಜಾರಿ ಮೊಬೈಲ್‌ ಕೆಳಗೆ ಬಿದ್ದರೆ ಅಥವಾ ಯಾವುದಕ್ಕಾದರೂ ತಗುಲಿದರೆ ಅದರಿಂದ ಸ್ಕ್ರೀನ್‌ಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಬ್ಯಾಕ್‌ ಕವರ್‌ ಬಳಸಿದ್ದರೂ ಅದರಾಚೆಗೂ ಪರದೆಯ ಉಬ್ಬು ಬರುವುದರಿಂದ ಸ್ಕ್ರೀನ್‌ ಬಗ್ಗೆ ಹೆಚ್ಚು ಕಾಳಜಿ ಮಾಡಲೇಬೇಕು.

ಸೆಲ್ಫಿ ತೆಗೆಯುವಾಗ ಟಚ್‌ ಸ್ಕ್ರೀನ್‌ ಬದಲಾಗಿ ಬಟನ್‌ ಬಳಸುವುದಾದರೆ ಕಷ್ಟಪಡಬೇಕಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಸೆಲ್ಫಿ ತೆಗೆಯಲು ಹೆಬ್ಬೆರಳು ಬಳಸುತ್ತೇವೆ. ಆದರೆ, ಇದರಲ್ಲಿ ವಾಲ್ಯುಂ ಬಟನ್‌ ಎಡಭಾಗದಲ್ಲಿ ನೀಡಿರುವುದರಿಂದ ಕ್ಲಿಕ್‌ ಮಾಡುವುದು ಕಷ್ಟವಾಗುತ್ತದೆ.

ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆಯಲ್ಲಿಯೂ ಗೊರಿಲ್ಲಾ ಗ್ಲಾಸ್‌ ಬಳಸಲಾಗಿದ್ದು, ಅಲ್ಯುಮಿನಿಯಂ ಫ್ರೇಮ್‌ ಹ್ಯಾಂಡ್‌ಸೆಟ್‌ನ ಅಂದವನ್ನು ಹೆಚ್ಚಿಸಿದೆ. ಬ್ಯಾಕ್‌ ಕವರ್‌ ಇಲ್ಲದೇ ಇದ್ದರೆ ಕೈಯಿಂದ ಜಾರಿಹೋಗುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿ ಕಂಪನಿಯೇ ಒಂದು ಟ್ರಾನ್ಸ್‌ಪರೆಂಟ್‌ ಬ್ಯಾಕ್ ಕವರ್‌ ನೀಡಿದೆ.

ಲ್ಯಾಂಡ್‌ಸ್ಕೇಪ್‌, ನೈಟ್‌ ಸ್ಕೇಪ್, ಪೋರ್ಟೇಟ್‌ ಚಿತ್ರಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ. ಪೋರ್ಟೇಟ್‌ ಫೋಟೊ ಹೆಚ್ಚು ಬ್ಯೂಟಿಫೈ ಆಗಿರದೆ, ಸಹಜವಾಗಿ ಬರುತ್ತದೆ.

ಸೂಪರ್‌ ಮ್ಯಾಕ್ರೊ ಲೆನ್ಸ್‌

ಕಣ್ಣಿಗೆ ಕಾಣದೇ ಇರುವಂತಹ ಸೂಕ್ಷ್ಮವಾದ ಅಂಶಗಳನ್ನು ಸೆರೆಹಿಡಿಯಲು ಸೂಪರ್ ಮ್ಯಾಕ್ರೊ ಲೆನ್ಸ್ ಇದರಲ್ಲಿದೆ. ಸಣ್ಣ ಕೀಟಗಳು, ಎಲೆಯ ಸೂಕ್ಷ್ಮ ರಚನೆಯನ್ನು ಸ್ಪಷ್ಟವಾಗಿ ಸೆರೆಹಿಡಿಯಬಹುದು.

ಬ್ಯಾಟರಿ ಬಾಳಿಕೆ ಸಾಲದು

ಫೋನ್‌ಗೆ ಬ್ಯಾಟರಿಯೇ ಜೀವಾಳ. ಅದೇ ಇಲ್ಲದೇ ಇದ್ದರೆ ಫೀಚರ್‌ ಫೋನ್‌ ಆಗಿರಲಿ, ಸ್ಮಾರ್ಟ್‌ಫೋನ್‌ ಆಗಿರಲಿ ಯಾವುದೇ ಪ್ರಯೋಜನ ಇಲ್ಲ. ಕಂಪನಿ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎನ್ನಿಸುತ್ತಿದೆ. ಒನ್‌ಪ್ಲಸ್‌ 7ಟಿ ಯಂತೆಯೇ ಪ್ರೊದಲ್ಲಿಯೂ 4,085 ಎಂಎಎಚ್‌ ಬ್ಯಾಟರಿ ನೀಡಲಾಗಿದೆ. ಸ್ಮಾರ್ಟ್‌ಫೋನ್‌ ವೇಗ, ಕಾರ್ಯಕ್ಷಮತೆ, ದೃಷ್ಟಿಯಿಂದ ಇದು ಏನೇನೂ ಸಾಲದು. ಬ್ಯಾಟರಿ ವೇಗವಾಗಿ ಚಾರ್ಜ್‌ ಆಗಲು ವಾರ್ಪ್‌ ಚಾರ್ಜರ್‌ ಇದ್ದರೂ ಪದೇ ಪದೇ ಬ್ಯಾಟರಿ ಚಾರ್ಜ್‌ ಮಾಡುವುದರಿಂದ ಅದರ ಒಟ್ಟಾರೆ ಬಾಳಿಕೆ ಅವಧಿಯೂ ಕ್ಷೀಣಿಸಲಾರಂಭಿಸುತ್ತದೆ.

30 ನಿಮಿಷದಲ್ಲಿ ಶೇ 68ರಷ್ಟು ಚಾರ್ಜ್‌ ಆಗುತ್ತದೆ. ಆದರೆ, ಬ್ಯಾಟರಿ ಹೆಚ್ಚು ಬಾಳಿಕೆ ಬರುವುದಿಲ್ಲ. ಹೆಚ್ಚಿನ ಕೆಲಸಗಳೇನೂ ಮಾಡದೇ ಇದ್ದರೂ ಅರ್ಧದಷ್ಟು ಬ್ಯಾಟರಿ ಬೇಗನೇ ಖಾಲಿಯಾಗಿಬಿಡುತ್ತದೆ. ಫೋನ್‌ ಕಾಲ್‌, ಚಾಟ್‌ ಮಾಡುವುದರ ಜತೆಗೆ ವಿಡಿಯೊ ನೋಡಿದರೆ, ಗೇಮ್‌ ಆಡಿದರೆ ಒಂದು ದಿನವೂ ಬಾಳಿಕೆ ಬರುವುದಿಲ್ಲ. ವೇಗವಾಗಿ ಚಾರ್ಜ್‌ ಮಾಡಲು ಆಯ್ಕೆ ನೀಡುವುದಕ್ಕಷ್ಟೇ ಕಂಪನಿ ಹೆಚ್ಚು ಗಮನ ನೀಡಿದಂತೆ ಕಾಣಿಸುತ್ತಿದೆ. ಚಾರ್ಜ್‌ ಹಿಡಿದಿಟ್ಟುಕೊಳ್ಳುವಂತೆ ಮಾಡಲೂ ಗಮನ ನೀಡುವುದು ಆದ್ಯತೆಯಾಗಬೇಕಿದೆ. ಆಗ ಮಾತ್ರ ಪ್ರೀಮಿಯಂ ಸ್ಮಾರ್ಟ್‌ಫೋನ್‌ನ ಮೌಲ್ಯ ಇನ್ನಷ್ಟು ಹೆಚ್ಚಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು