ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಕ್ರೋಮ್‌ಗೂಅಂಟಿದ ಮಾಲ್‌ವೇರ್‌

Last Updated 10 ಜುಲೈ 2019, 19:30 IST
ಅಕ್ಷರ ಗಾತ್ರ

ಹೆಚ್ಚು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆಯೇ ಕೆಲವರು ಮೈಮರೆತುಬಿಡುತ್ತಾರೆ’ ಎನ್ನುವುದು ಗೂಗಲ್‌ ಸಂಸ್ಥೆಗೂ ಅನ್ವಯಿಸಬಹುದೇನೊ. ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ ವೈಯಕ್ತಿಕ ಮಾಹಿತಿ ರಕ್ಷಣೆಗೆ ಗೂಗಲ್‌ ಕೈಗೊಂಡಿರುವ ಕ್ರಮಗಳು ಏನೇನೂ ಸಾಲದು ಎಂದೆನಿಸುತ್ತಿದೆ.

ನಮ್ಮ ವೈಯಕ್ತಿಕ ಮಾಹಿತಿಯೇ ಗೂಗಲ್‌ಗೆ ಬಂಡವಾಳ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಗೂಗಲ್‌ಗೆ ಪರ್ಯಾಯ ಕಷ್ಟವೇ ಆಗಿರುವುದರಿಂದ ಅದರಿಂದ ಹೊರಬರಲು ಸಾಧ್ಯವಿಲ್ಲದಾಗಿದೆ. ಹಾಗಂತ ಬಳಕೆದಾರರ ರಕ್ಷಣೆಯನ್ನು ನಿರ್ಲಕ್ಷ್ಯಿಸುವುದು ಎಷ್ಟರ ಮಟ್ಟಿಗೆ ಸರಿ? ಜಗತ್ತಿನಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಗೂಗಲ್‌, ದತ್ತಾಂಶ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕಿದೆ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ವೈಯಕ್ತಿಕ ಮಾಹಿತಿ ಕದಿಯುವ ಆ್ಯಪ್‌ಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಲೇ ಇದೆ. ಮಾಹಿತಿಗಳು ಸೋರಿಕೆಯಾದ ಮೇಲೆ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆಯುತ್ತಿದೆ. ಈ ಬಗ್ಗೆ ತಜ್ಞರು, ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದಾಗ್ಯೂ ಕಂಪನಿ ಮಾತ್ರ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸುವ ಕಡೆಗೆ ಗಮನ ತೋರಿದಂತೆ ಕಾಣುತ್ತಿಲ್ಲ.

ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್‌ ಎಂಜಿನ್‌ ‘ಗೂಗಲ್‌ ಕ್ರೋಮ್‌’ನಲ್ಲಿ ಕ್ರಿಪ್ಟೊ ಕರೆನ್ಸಿ ಹಗರಣ ಹರಡಲು ಮತ್ತು ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತಿದೆ’ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಹೀಗಾಗಿ ಸರ್ಚ್‌ ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ತರಲು ಕಂಪನಿ ಮುಂದಾಗಿದೆ. ಎಕ್ಸ್‌ಟೆನ್ಶನ್‌ ಕ್ರಿಯೇಟ್‌ ಮಾಡುವವರು ಪಡೆಯುವ ಮಾಹಿತಿಗಳ ಮೇಲೆ ಮಿತಿ ಹೇರಲು ಗೂಗಲ್‌ ನಿರ್ಧರಿಸಿದೆ. ಇದು ಗೂಗಲ್‌ ಡ್ರೈವ್‌ಗೂ ಅನ್ವಯಿಸಲಿದೆ.

ವೈಶಿಷ್ಟ್ಯಗಳನ್ನು ಅಳವಡಿಸಲು ಅಗತ್ಯವಿರುವ ದತ್ತಾಂಶಗಳನ್ನು ಮಾತ್ರವೇ ಪಡೆಯಲು ಎಕ್ಸ್‌ಟೆನ್ಶನ್‌ ಕೊಡುವವರಿಗೆ ಅವಕಾಶ ನೀಡಲಾಗುವುದು’ ಎಂದು ಗೂಗಲ್‌ನ ಎಂಜಿನಿಯರಿಂಗ್‌ ಉಪಾಧ್ಯಕ್ಷ ಬೆನ್‌ ಸ್ಮಿತ್‌ ಹೇಳಿದ್ದಾರೆ.

ಅಂದರೆ, ಬಳಕೆದಾರರು ಕ್ರೋಮ್‌ನ ಹೊಸ ಎಕ್ಸ್‌ಟೆನ್ಶನ್‌ ಡೌನ್‌ಲೋಡ್‌ ಮಾಡುವಾಗ ಹೆಚ್ಚಿನ ಮಾಹಿತಿಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ನಾವು ಟೈಪಿಸುವಾಗ ಸ್ಪೆಲ್‌ ಚೆಕ್‌ ಮಾಡುವ ಆಯ್ಕೆಗೆ ನಾವಿರುವ ಸ್ಥಳದ ಮಾಹಿತಿ ಅನಗತ್ಯ.

ಕ್ರೋಮ್‌ ಎಕ್ಸ್‌ಟೆನ್ಶನ್‌ ಹಿಂದಿರುವ ನಿರ್ಮಾಣಗಾರರು ಬಳಕೆದಾರರಿಂದ ಹೇಗೆ ಮಾಹಿತಿಗಳನ್ನು ಪಡೆಯಲಾಗುವುದು ಎನ್ನುವುದನ್ನು ವಿವರಿಸುವ ಖಾಸಗಿ ನಿಯಮಗಳನ್ನು ಪೋಸ್ಟ್‌ ಮಾಡಬೇಕು. ಈ ಮುಂಚೆ ವೈಯಕ್ತಿಕ ಮತ್ತು ಸೂಕ್ಷ್ಮವಾದ ಬಳಕೆದಾರರ ಮಾಹಿತಿಗಳನ್ನು ನಿರ್ವಹಿಸುವ ಡೆವಲಪರ್‌ಗಳಿಗೆ ಮಾತ್ರವೇ ಈ ನಿಮಯ ಅನ್ವಯಿಸಲಾಗಿತ್ತು. ಆದರೆ ಇದೀಗ ಎಕ್ಸ್‌ಟೆನ್ಶನ್‌ ನೀಡುವವರೂ ಅದನ್ನು ಪಾಲಿಸಬೇಕಾಗುತ್ತದೆ.

ಬಳಕೆದಾರರ ಮಾಹಿತಿಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ, ಸಂಗ್ರಹಿಸುವ ಬಗೆ, ಅವುಗಳ ಬಳಕೆ ಮತ್ತು ಹಂಚುವಿಕೆಯ ಕುರಿತು ಎಕ್ಸ್‌ಟೆನ್ಶನ್‌ ನೀಡುವವರು ಪಾರದರ್ಶಕವಾಗಿರಬೇಕು. ಈ ಬಗ್ಗೆ ಬದಲಾವಣೆಗಳನ್ನು ತರಲು ಡೆವಲಪರ್‌ಗಳಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ. ಹೊಸ ನಿಯಮ ಉಲ್ಲಂಘಿಸುವ ಅ್ಯಪ್‌ಗಳನ್ನು ವೆಬ್‌ಸ್ಟೋರ್‌ನಿಂದ ಕೈಬಿಡಲಾಗುವುದು ಎಂದು ಸ್ಮಿತ್‌ ಎಚ್ಚರಿಕೆ ನೀಡಿದ್ದಾರೆ.

’ತಾನು ಅಭಿವೃದ್ಧಿಪಡಿಸಿರುವ ಎಕ್ಸ್‌ಟೆನ್ಶನ್‌ ಹ್ಯಾಕ್‌ ಆಗಿದೆ’ ಎಂದು ಫೈಲ್‌ ಶೇರಿಂಗ್ ವೆಬ್‌ಸೈಟ್‌ ಮೆಗಾ ಡಾಟ್‌ ಎನ್‌ಜೆಡ್‌ ಪ್ರಕಟಣೆಯಲ್ಲಿ ತಿಳಿಸಿತ್ತು. 2017ರಲ್ಲಿ ಗೂಗಲ್‌ ನಾಲ್ಕು ಎಕ್ಸ್‌ಟೆನ್ಶನ್‌ಗಳನ್ನು ತೆಗೆದುಹಾಕಿತ್ತು. 2018ರಲ್ಲಿ ಅದಕ್ಕಿಂತಲೂ ಹೆಚ್ಚಿನ ಎಕ್ಸ್‌ಟೆನ್ಶನ್‌ಗಳು ನಿಯಮ ಉಲ್ಲಂಘಿಸಿವೆ ಎಂದು ತಿಳಿಸಿದೆ.

ಎಕ್ಸ್‌ಟೆನ್ಶನ್ ನಿಯಮ ಉಲ್ಲಂಘನೆ ಇದೇನು ಹೊಸತಲ್ಲ. ಫೈರ್‌ಫಾಕ್ಸ್‌ ಸರ್ಚ್‌ ಎಂಜಿನ್‌ ನಿರ್ಮಿಸಿರುವ ಮೊಜಿಲ್ಲಾ ತನ್ನ ಬ್ರೌಸರ್‌ ಸ್ಟೋರ್‌ನಿಂದ 23 ಆ್ಯಡ್‌ ಆನ್‌ಗಳನ್ನು ತೆಗೆದುಹಾಕಿದೆ. ಫೈರ್‌ಫಾಕ್ಸ್‌ನಲ್ಲಿದ್ದ ಒಂದು ಆ್ಯಂಡ್‌ ಆನ್‌ ‘Web Security’ಯನ್ನು 2.20 ಲಕ್ಷ ಬಾರಿ ಇನ್‌ಸ್ಟಾಲ್‌ ಮಾಡಲಾಗಿತ್ತು. ಇದು ಬಳಕೆದಾರರ ಮಾಹಿತಿಯನ್ನು ಕದ್ದು ಜರ್ಮನಿಗೆ ರವಾನಿಸುತ್ತಿತ್ತು ಎಂದು ವರದಿಯಾಗಿದೆ.

ಗೂಗಲ್‌ ವೆಬ್‌ಸ್ಟೋರ್‌ನಲ್ಲಿ 1.80 ಲಕ್ಷಕ್ಕೂ ಅಧಿಕ ಎಕ್ಸ್‌ಟೆನ್ಶನ್‌ಗಳಿವೆ. ಕ್ರೋಮ್‌ ಬಳಸುತ್ತಿರುವವರಲ್ಲಿ ಅರ್ಧದಷ್ಟು ಬಳಕೆದಾರರು ಕೆಲವು ಎಕ್ಸ್‌ಟೆನ್ಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಹೀಗಾಗಿ ತಕ್ಷಣಕ್ಕೆ ಬದಲಾವಣೆ ಕಷ್ಟ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT