ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ವಂಚನೆಗೆ ದಾರಿ ಹಲವು

Last Updated 18 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಒಂದು ಹೊತ್ತಿನ ಊಟ ಇಲ್ಲದೇ ಇದ್ದರೂ ಇರಬಹುದು ಆದರೆ ಅರ್ಧ ಗಂಟೆ ಮೊಬೈಲ್‌ ಇಲ್ಲ ಅಂದರೆ ಎಲ್ಲವೂ ಅಯೋಮಯ ಆದಂತಾಗುತ್ತದೆ ಅಲ್ಲವೇ? ಮೊಬೈಲ್‌ ಇಂದಿನ ಅತ್ಯಗತ್ಯ. ದೇಶದಲ್ಲಿ ನಡೆಯುತ್ತಿರುವ ಇ–ಕಾಮರ್ಸ್‌ ಮಾರಾಟದಲ್ಲಿ ಶೇ 50ಕ್ಕಿಂತಲೂ ಹೆಚ್ಚು ಮೊಬೈಲ್‌ ಮೂಲಕವೇ ನಡೆಯುತ್ತಿದೆ. 2021ರ ವೇಳೆಗೆ ಶೇ 70ರಷ್ಟನ್ನು ಆವರಿಸಿಕೊಳ್ಳಲಿದೆ. ಹೀಗಾಗಿಯೇ ಮೊಬೈಲ್‌ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಅರಿವಿನ ಕೊರತೆ

ಸುರಕ್ಷತೆಯ ಬಗ್ಗೆ ಮೊಬೈಲ್‌ ಬಳಕೆದಾರರಿಗೆ ಜಾಗೃತಿ ಕೊರತೆಯೇ ಮುಖ್ಯ ಕಾರಣ. ಖರೀದಿ ನಡೆಸುವವರಷ್ಟೇ ಅಲ್ಲದೆ, ಮಾರಾಟ ಮಾಡುವವರೂ ವಂಚನೆಗೆ ಒಳಗಾಗುತ್ತಿದ್ದಾರೆ. ಮೊಬೈಲ್‌ ವಂಚನೆ ಹೇಗೆ ನಡೆಯುತ್ತಿದೆ? ಅದನ್ನು ತಡೆಗಟ್ಟುವುದು ಹೇಗೆ ಎನ್ನುವುದನ್ನು ಕಂಡುಕೊಳ್ಳಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಕೌಂಟ್‌ ಕಂಪನಿಯ ಉಪಾಧ್ಯಕ್ಷ ಡಾನ್‌ ಬುಷ್. ದಿನನಿತ್ಯದ ಮೊಬೈಲ್‌ ಬಳಕೆಯಲ್ಲಿ ಗ್ರಾಹಕರು ತಮ್ಮನ್ನು ರಕ್ಷಿಸಿಕೊಳ್ಳಲು ಇರುವ ಕೆಲವು ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.

ಖಾತೆ ಮೇಲೆ ನಿಯಂತ್ರಣ

ದತ್ತಾಂಶ ಸೋರಿಕೆ, ಸರಳ ಪಾಸ್‌ವರ್ಡ್‌ ಬಳಕೆ, ಮೊಬೈಲ್‌ ಕಳವು ಮೂಲಕ ವಂಚಕರು ಬಳಕೆದಾರರ ಬ್ಯಾಂಕ್‌ ಖಾತೆಯ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಶೇ 89ರಷ್ಟು ಡಿಜಿಟಲ್‌ ವಂಚನೆ ಪ್ರಕರಗಳು ಈ ರೀತಿಯಲ್ಲಿಯೇ ನಡೆಯುತ್ತಿವೆ. ಬಳಕೆದಾರರ ಬ್ಯಾಂಕ್‌ ಖಾತೆಗಳು ಮತ್ತು ಬ್ಯಾಂಕಿಂಗ್ ಆ್ಯಪ್‌ಗಳಿಂದ ಮಾಹಿತಿ ಕದಿಯಲು ವಂಚಕರು ನಕಲಿ ಜಾಲತಾಣ, ನಕಲಿ ಇ–ಮೇಲ್‌, ನಕಲಿ ಮೊಬೈಲ್‌ ಆ್ಯಪ್‌ಗಳನ್ನು ಬಳಸುತ್ತಾರೆ.

ರಕ್ಷಣೆ ಹೇಗೆ: ಪ್ರತಿಯೊಂದು ಖಾತೆಗೂ ಪ್ರತ್ಯೇಕವಾದ, ಕ್ಲಿಷ್ಟವಾದ ಪಾಸ್‌ವರ್ಡ್ ಬಳಕೆ. ಎರಡು ಹಂತದ ಸುರಕ್ಷತೆ ಬಳಕೆ.

ಕಾಲ್‌ ಸೆಂಟರ್ ವಂಚನೆ

ಕಾಲ್‌ ಸೆಂಟರ್‌ಗಳಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿಗಳಿರುತ್ತವೆ. ಜನ್ಮ ದಿನಾಂಕ, ಡ್ರೈವಿಂಗ್‌ ಲೈಸೆನ್ಸ್‌ ನಂಬರ್‌ ಅಥವಾ ಆಧಾರ್‌, ವೋಟರ್ ಐಡಿ ಇತ್ಯಾದಿ. ಸೈಬರ್ ದಾಳಿ ನಡೆಸುವ ಮೂಲಕ ಇಂತಹ ಮಾಹಿತಿಗಳನ್ನು ಕಳವು ಮಾಡಬಹುದು. ಬ್ಯಾಂಕ್‌ ಕಾಲ್‌ ಸೆಂಟರ್‌ಗಳು ದಾಳಿಯ ಮುಖ್ಯ ಕೇಂದ್ರವಾಗಿವೆ.
ಕಳವಾದ ಮೊಬೈಲ್‌: ಮೊಬೈಲ್‌ ಕಳವು ಮಾಡುವ ಮೂಲಕವೂ ಬಳಕೆದಾರರ ಬ್ಯಾಂಕ್‌ ಖಾತೆಯ ಮಾಹಿತಿ ಪಡೆಯಲಾಗುತ್ತಿದೆ. ಬಹುತೇಕರು ಮೊಬೈಲ್‌ ಬ್ಯಾಂಕಿಂಗ್‌ ನಡೆಸಿದ ಬಳಿಕ ಆ್ಯಪ್‌ ಲಾಗೌಟ್‌ ಆಗಿರುವುದಿಲ್ಲ. ಇದರಿಂದಾಗಿ ಸುಲಭವಾಗಿ ಮಾಹಿತಿ ಪಡೆದುಕೊಳ್ಳಬಹುದು. ಶೇ 34ರಷ್ಟು ವಂಚನೆಗಳು ಇದೇ ರೀತಿಯಲ್ಲಿ ನಡೆಯುತ್ತಿವೆ.

ಮೊಬೈಲ್‌ ಮಾಲ್‌ವೇರ್‌

ಎಸ್‌ಎಂಎಸ್‌, ಇ–ಮೇಲ್‌ ಮೂಲಕ ಮೊಬೈಲ್‌ಗೆ ಮಾಲ್‌ವೇರ್‌ ಹರಿಬಿಟ್ಟು ಮೊಬೈಲ್‌ ಮೇಲೆ ನಿಯಂತ್ರಣ ಹೊಂದುವಂತೆಯೂ ಮಾಡಲಾಗುತ್ತಿದೆ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬರುವುದಿಲ್ಲ.
ರಕ್ಷಣೆ ಹೇಗೆ: ಟಚ್‌ ಸ್ಕ್ರೀನ್‌ ಬಳಕೆಯೇ ಹೆಚ್ಚಿರುವುದರಿಂದ ಸ್ವೈಪ್‌ ಮಾಡಿದಾಕ್ಷಣ ಮೊಬೈಲ್ ಅನ್‌ಲಾಕ್‌ ಆಗುವಂತೆ ಇಡಬೇಡಿ. ಕ್ಲಿಷ್ಟವಾದ ಪಿನ್‌, ಪಾಸ್‌ವರ್ಡ್‌ ಬಳಸಿ. ಫೇಸ್‌ ಮತ್ತು ಫಿಂಗರ್‌ ಅನ್‌ಲಾಕ್‌ ಆಯ್ಕೆಗಳು ಇವೆಯಾದರೂ, ಸಂಪೂರ್ಣವಾಗಿ ಸುರಕ್ಷಿತ ಎನ್ನುವಂತಿಲ್ಲ. ಏಕೆಂದರೆ ನಮ್ಮ ಗಮನಕ್ಕೆ ಬರದೇ ನಮ್ಮ ಮೊಬೈಲ್‌ ಕದ್ದು ಅದನ್ನು ನಮ್ಮ ಕಣ್ಮುಂದೆ ಹಿಡಿದರೆ ಅದು ಸೆಕೆಂಡುಗಳಲ್ಲಿ ಅನ್‌ಲಾಕ್‌ ಆಗುತ್ತದೆ.

ಫಿಶಿಂಗ್‌

ಖಾತೆಯಿಂದ ಹಣ ದೋಚಲು ವಂಚಕರು ಬ್ಯಾಂಕ್‌ ಹೆಸರಿನಲ್ಲಿ ಇ–ಮೇಲ್‌ ಕಳುಹಿಸಿ, ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಲಾಗಿನ್‌ ಆಗುವಂತೆ ಸೂಚಿಸುತ್ತಾರೆ. ಅದನ್ನು ಅನುಸರಿಸಿದರೆ ತೆರೆದುಕೊಳ್ಳುವ ಜಾಲತಾಣವು ಬ್ಯಾಂಕ್‌ನ ಅಧಿಕೃತ ಜಾಲತಾಣದಂತೆಯೇ ಇರುತ್ತದೆ. ಹೀಗಾಗಿ ಇಂತಹದ್ದಕ್ಕೆ ಲಾಗಿನ್‌ ಆಗುವ ಪ್ರಯತ್ನವನ್ನೂ ಮಾಡಬೇಡಿ. ಹಾಗೆ ಮಾಡಿದರೆ, ಅದರಿಂದ ಮಾಹಿತಿ ಕಳವಾಗುತ್ತದೆ.

ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ

ಯಾವುದೇ ಬ್ಯಾಂಕ್‌ ನಿಮ್ಮ ಆನ್‌ಲೈನ್‌ ಬ್ಯಾಂಕಿಂಗ್‌ನ ಪಾಸ್‌ವರ್ಡ್‌, ಎಟಿಎಂ ಪಿನ್‌ ಕೇಳಿ ಕರೆ ಅಥವಾ ಎಸ್‌ಎಂಎಸ್‌ ಕಳುಹಿಸುವುದಿಲ್ಲ.

ಯಾರೇ ಕರೆ ಮಾಡಿದರೂ ಡೆಬಿಟ್‌ ಕಾರ್ಡ್‌ನಲ್ಲಿ ಇರುವ 16 ಸಂಖ್ಯೆಗಳು, ಕಾರ್ಡ್‌ ಅವಧಿ ಮುಕ್ತಾಯವಾಗುವ ಮಾಹಿತಿ ಮತ್ತು ಕಾರ್ಡ್‌ನ ಹಿಂಭಾಗದಲ್ಲಿ ನಮೂದಿಸಿರುವ ಮೂರು ಸಂಖ್ಯೆಗಳನ್ನು (ಸಿವಿವಿ) ಯಾವುದೇ ಕಾರಣಕ್ಕೂ ಕೊಡಬೇಡಿ.

ಡೆಬಿಟ್‌ ಕಾರ್ಡ್‌ ಬ್ಲಾಕ್‌ ಆಗಿದ್ದರೆ ನೇರವಾಗಿ ಬ್ಯಾಂಕ್‌ ಶಾಖೆಯನ್ನೇ ಸಂಪರ್ಕಿಸಿ.

ನಿಮ್ಮ ಖಾತೆಯಿಂದ ಹಣ ಕಳವಾಗುತ್ತಿದೆ ಎನ್ನುವ ಅನುಮಾನ ಬಂದರೆ ತಕ್ಷಣ ಬ್ಯಾಂಕ್‌ ಅನ್ನು ಸಂಪರ್ಕಿಸಿ. ಪಾಸ್‌ಬುಕ್‌ ಅಪ್‌ಡೇಟ್‌ ಮಾಡಿಕೊಂಡು ಹಣ ವರ್ಗಾವಣೆ ಪರಿಶೀಲಿಸಿ.

ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ನಿಂದ ನಿಮಗರಿವಿಲ್ಲದೇ ಹಣ ಕಟ್ ಆಗುತ್ತಿದ್ದರೆ, ಅಥವಾ ನೀವು ಕಾರ್ಡ್‌ ಬಳಸದೇ ಇರುವಾಗಲೂ ನಿಮ್ಮ ಮೊಬೈಲ್‌ಗೆ ಹಣ ಪಾವತಿಗಾಗಿ ಒಟಿಪಿ ಬಂದರೆ ತಕ್ಷಣವೇ ಕಾರ್ಡ್‌ನ ಹಿಂಭಾಗದಲ್ಲಿ ಇರುವ ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ, ಕಾರ್ಡ್ ಬ್ಲಾಕ್‌ ಮಾಡಿಸಿ.

ಖಾತೆಯಿಂದ ಅಥವಾ ಕಾರ್ಡ್‌ ಮೂಲಕ ಹಣ ಕಳವಾಗಿದ್ದರೆ ತಕ್ಷಣವೇ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿ. ನಿಮ್ಮ ಬ್ಯಾಂಕ್‌ ಶಾಖೆಯ ಗಮನಕ್ಕೂ ತನ್ನಿ.

ಭಾರಿ ಕ್ಯಾಷ್‌ಬ್ಯಾಕ್‌ ಪಡೆಯಿರಿ, ಕೋಟಿ ಹಣ ಗೆದ್ದಿದ್ದೀರಿ ಎನ್ನುವ ಎಸ್‌ಎಂಎಸ್‌ಗಳಿಗೆ ಪ್ರತ್ಯುತ್ತರ ನೀಡದಿರಿ. ಅಂತಹ ಮೆಸೇಜ್‌ಗಳಲ್ಲಿ ನೀಡಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT