ಬುಧವಾರ, ಮಾರ್ಚ್ 29, 2023
32 °C

ಆನ್‌ಲೈನ್‌ ವ್ಯಾಪಾರ ಚಿಂತನಮ್‌!

ಶರತ್‌ ಭಟ್‌ ಸೇರಾಜೆ Updated:

ಅಕ್ಷರ ಗಾತ್ರ : | |

Prajavani

ಹಬ್ಬ-ಹರಿದಿನಗಳು ಬಂದರೆ ಸಾಕು. ನಮ್ಮ ಮೆದುಳಿನಲ್ಲಿ ‘ನನಗೆ ಇಂಥದ್ದು ಬೇಕು’ ಎಂಬ ಹಾತೊರೆಯುವಿಕೆಯನ್ನು ಹುಟ್ಟಿಸುವ ಭಾಗ ಪೂರ್ಣವೇಗದಲ್ಲಿ ಕೆಲಸ ಶುರುಮಾಡಿ ಬಿಡುತ್ತದೆ. ನಮಗಿಂತ ಮೊದಲೇ ಈ ಬಯಕೆಯ ಹಮೀರನು ಉಂಡುಟ್ಟು, ಕಲ್ಪನೆಯ ಕುದುರೆಯೇರಿ, ಯಾವುದೋ ಶಾಪಿಂಗ್ ಸೈಟಿನ ಕಡೆಗೆ ಮುಖ ತಿರುಗಿಸಿ ಕೂತಿರುತ್ತಾನೆ.

ತಮಾಷೆಯೆಂದರೆ, ನಮ್ಮ ಈ ಖರೀದಿಯ ಹಂಬಲವನ್ನು ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ತಂತ್ರಜ್ಞಾನದ ಬುದ್ಧಿವಂತಿಕೆ ಬಂದುಮುಟ್ಟಿದೆ. ಹಿಂದೆಲ್ಲ ವ್ಯಾಪಾರಿಗಳು, ಯಾವುದರ ಕಿಮ್ಮತ್ತು ಎಷ್ಟು, ಹಬ್ಬದ ದಿನ ಯಾವುದು ಎಷ್ಟಕ್ಕೆ ಹೋದೀತು ಅಂತ ಚಾಲಾಕಿಯ ಲೆಕ್ಕಗಳನ್ನು ಮಾಡುತ್ತಿದ್ದರು. ದುಬಾರಿ ಕಾರಿನಲ್ಲಿ ಬಂದವರ ಹತ್ತಿರ ಸ್ವಲ್ಪ ಹೆಚ್ಚು ಕೇಳಿದರೂ ನಡೆಯುತ್ತದೆ ಅಂತ ಕಣ್ಣಲ್ಲೇ ಲೆಕ್ಕ ಹಾಕುವ ಚಾಲಾಕಿಯೆಲ್ಲ ಮಾರುವವನು ಪಳಗಿದವನಾದರೆ ಅವನಿಗೆ ಗೊತ್ತೇ ಇರುತ್ತಿತ್ತು. ಈಗ ಈ ತರದ ಯುಕ್ತಿಗಳನ್ನು ಗಣಕಯಂತ್ರಗಳಿಗೆ ಹೇಳಿಕೊಡಲಾಗುತ್ತದೆ! ಯಾವ ಗಿರಾಕಿ ಯಾವುದಕ್ಕೆ ಎಷ್ಟು ಬೆಲೆ ಕೊಟ್ಟಾನು ಅಂತ, ಸುಮ್ಮನೆ ಮೊಬೈಲಿನ ಮೇಲೆ ಬೆರಳು ಸವರಿಕೊಂಡು ಕೂತವನ ನಡವಳಿಕೆ ನೋಡಿಯೇ ಎಣಿಕೆ ಮಾಡಬಲ್ಲ ಚಾಣಾಕ್ಷ ಗಣನ ವಿಧಾನಗಳೇ (algorithm) ಮಾರುಕಟ್ಟೆಯಲ್ಲಿವೆ!

ಒಂದು ವಸ್ತು ಎಲ್ಲರಿಗೂ ಬೇಕು, ಅದರ ಖರೀದಿಗೆ ಜನ ಸಾಲುಗಟ್ಟಿ ಬರುತ್ತಿದ್ದರೆ ಅದರ ಬೆಲೆಯನ್ನು ಒಂದಷ್ಟು ಮೇಲೆ ದೂಡುವ ಹಳೆಯ ತಂತ್ರಗಳೆಲ್ಲ ಅಲ್ಗಾರಿದಮ್ಮುಗಳಿಗೆ ಕರಗತವಾಗಿವೆ. ಎಲ್ಲರಿಗೂ ಬೇಕಾಗುವ ಟಿಕೆಟ್ಟಿಗೆ ಐನೂರು ರೂಪಾಯಿ ಕೇಳಿದರೂ ಅದು ಹೋಗುತ್ತದೆ ಅಂತ ಬ್ಲ್ಯಾಕಿನಲ್ಲಿ ಮಾರುವವನಿಗೆ ಗೊತ್ತಾಗುವಂತೆ ಗಣಕಯಂತ್ರಗಳಿಗೂ ಈ ಗುಟ್ಟು ತಿಳಿಯುತ್ತದೆ. ವೆಬ್ ಸೈಟುಗಳಲ್ಲಿ ಒಟ್ಟು ಖರೀದಿಯ ಮೊತ್ತ ಎಷ್ಟು, ಎಷ್ಟು ಬೆಲೆಯದ್ದು ಎಷ್ಟು ಬಿಕರಿಯಾಯಿತು ಅಂತೆಲ್ಲ ಲೆಕ್ಕ ಹಾಕುವುದೂ ಸಲೀಸಾದ ಕೆಲಸ.

ಟೀವಿ ಕೊಂಡವನು ವಾಷಿಂಗ್ ಮೆಶಿನ್ನಿಗೂ ಕಣ್ಣು ಹಾಕುತ್ತಾನೆಯೇ, ಲ್ಯಾಪ್‌ಟಾಪ್‌ಅನ್ನು ದಿನಕ್ಕೆ ಮೂರು ಸಲ ಬಯಸಿದವನು, ಆ್ಯಪಲ್ ಫೋನಿಗೂ ಕಣ್ಣು ಬಾಯಿ ಬಿಟ್ಟು ಹಂಬಲಿಸುತ್ತಾನೆಯೇ – ಎಂಬ ಮಾಹಿತಿಯೆಲ್ಲ ಈ ವೆಬ್ ಸೈಟುಗಳಿಗೆ ಗೂಢಚಾರರಿಗೆ ಗುಟ್ಟಿನಲ್ಲಿ ಸಿಗುವ ವರದಿಯಂತೆ, ಕಾಲ ಮುಂದೆ ಬಂದು ಬೀಳುವ ಮಾಹಿತಿಯ ಸರಕು. ಯಾರಿಗೆ ಏನು ಬೇಕು, ಯಾರು ಯಾವುದಕ್ಕಾಗಿ ಚಡಪಡಿಸುತ್ತಿದ್ದಾರೆ ಎಂಬ ಗ್ರಹಿಕೆ ಇದ್ದರೆ ಬೆಲೆಗಳ ಜೊತೆ ಆಟ ಆಡುವುದು ಕಷ್ಟವೇನಲ್ಲ. ಇದೊಂಥರಾ ಶನಿವಾರ ರಾತ್ರಿ ಮದ್ಯ ಕುಡಿಯಲೇ ಬೇಕು ಅಂತ ಹೊರಟವರು ಬಾಟ್ಲಿಗೆ ಐನೂರರ ಬದಲು ಆರು ನೂರಾದರೂ ಕುಡಿಯದೇ ಇರುವುದಿಲ್ಲ ಎಂದಂತೆ!

ಇನ್ನು ಮಳೆ ಬರುತ್ತಿದ್ದರೆ ಹೆಚ್ಚು ಬೆಲೆ ಕೇಳಬೇಕೆಂದು ತಲೆ ಓಡಿಸಲಿಕ್ಕೆ ಈಗ ಆಟೋ ಓಡಿಸುವ ಮನುಷ್ಯರೇ ಆಗಬೇಕೆಂದಿಲ್ಲ, ಓಲಾದ ಊಬರಿನ ಹಿಂದಿರುವ ಗಣಕಯಂತ್ರಕ್ಕೂ ಅದು ಗೊತ್ತಾಗುತ್ತದೆ. ಅದಕ್ಕೆ Surge pricing ಎಂಬ ಚಂದದ ಹೆಸರಿನ ತೇಪೆಯನ್ನು ಬೇರೆ ಹಾಕಲಾಗಿದೆ! ಬೇಡಿಕೆ ಹೆಚ್ಚು ಪೂರೈಕೆ ಕಡಿಮೆ ಅಂತಿದ್ದರೆ, ಬೆಲೆಯನ್ನು ಸಹಜವಾಗಿಯೇ ಏರಿಸಬಹುದು ಎಂಬ ಹಳೆಯ ಸಿದ್ಧಾಂತವನ್ನು ಕಂಪ್ಯೂಟರಿಗೆ ಹೇಳಿಕೊಡುವುದು ಅಂಥ ಕಷ್ಟದ ಕೆಲಸವೇನೂ ಅಲ್ಲ ಬಿಡಿ. ಹಾಗೆಯೇ, ಯುರೋಪು ಪ್ರವಾಸಕ್ಕೆ ಹೋಗಬೇಕೆಂದು ವಾರಕ್ಕೆ ಹದಿನೈದು ಸಲ ಅದರ ಮಾಹಿತಿಯನ್ನು ಆಸೆಗಣ್ಣುಗಳಿಂದ ಹುಡುಕಿದರೆ, ‘ಇವರಿಗೆ ಇದರಲ್ಲಿ ಅತೀವ ಆಸಕ್ತಿ ಇದೆ’ ಅಂತ ಅಲ್ಗಾರಿದಮ್ಮುಗಳಿಗೆ ಗೊತ್ತಾಗಿ, ಅದು ಬೆಲೆಯನ್ನು ಸ್ವಲ್ಪ ಮೇಲೆ ತಳ್ಳಿದರೆ ಆಶ್ಚರ್ಯವೇನೂ ಪಡಬೇಕಾದ್ದಿಲ್ಲ. ಹೀಗಾಗಿ Private Modeನಲ್ಲಿ ನೋಡಿದರೆ ಅಥವಾ cookies ಅನ್ನು clear ಮಾಡಿದರೆ ಕೆಲವೊಮ್ಮೆ ಲಾಭವಾದರೂ ಆದೀತು ಅಂತ ಬಲ್ಲವರ ಅಂಬೋಣ.

ವಿದೇಶಗಳಲ್ಲೆಲ್ಲ ಇಂಥ ಜಾಗಗಳಲ್ಲಿ ಶ್ರೀಮಂತರು ವಾಸಿಸುತ್ತಾರೆ ಅಂತ ಸಾಧಾರಣವಾಗಿ ನಿಗದಿಯಾಗಿದ್ದರೆ, ಈ ವಿಚಾರವನ್ನೂ ಗಣಕಯಂತ್ರಗಳು ಬಳಸುವುದಿದೆ. ಕೊಳ್ಳಲು ಹುಡುಕುತ್ತಿರುವವನ ಐಪಿ ಅಡ್ರೆಸ್ಸು ಪುಷ್ಕಳವಾದ ಸಿರಿಯಿರುವವರ ಮನೆಗಳ ಬಡಾವಣೆಗಳ ಸಮೀಪದಲ್ಲಿದ್ದರೆ, ಅವನಿಗೆ ವಸ್ತು ದುಬಾರಿಯಾದರೂ ಆದೀತು.

ಇನ್ನು ಒಬ್ಬ ವ್ಯಕ್ತಿ ಕಳೆದ ಎರಡು ವರ್ಷಗಲ್ಲಿ ಏನನ್ನೆಲ್ಲ ಖರೀದಿಸಿದ್ದಾನೆ ಎಂಬ ಶಾಪಿಂಗ್ ಜಾತಕ ಕೈಯ್ಯಲ್ಲಿದ್ದರೆ, ಆ ಆಸಾಮಿಗೆ ಎಷ್ಟನ್ನು ಖರೀದಿಸುವ ಆರ್ಥಿಕ ತಾಕತ್ತಿದೆ ಎಂಬುದೂ ಗೊತ್ತಾದಂತೆಯೇ. ಜಾಣವ್ಯಾಪಾರಿಗಳಿಗೆ ಬೇಕಾಗುವುದು ಇಂಥ ಗುಟ್ಟುಗಳೇ. ಇಂಥಲ್ಲಿ, ಈ ಮನುಷ್ಯನ ಹತ್ತಿರ ಹೆಚ್ಚು ದುಡ್ಡಿಲ್ಲ ಅಂತ ತಿಳಿದರೆ ಕಂಪ್ಯೂಟರುಗಳು ಅವನ ಮುಂದೆ ಚೂರು ಅಗ್ಗದ ಮಾಲುಗಳನ್ನು ಹರವಿ ತೋರಿಸುವ ಸಾಧ್ಯತೆಯೂ ಉಂಟು. ಪಕ್ಕದ ಅಂಗಡಿಯವರು ಎಷ್ಟಕ್ಕೆ ಮಾರುತ್ತಿದ್ದಾರೆ ಅಂತ ಇಣುಕಿ ನೋಡುವ ವ್ಯಾಪಾರಿಯಂತೆ, ಪಕ್ಕದ ಸೈಟುಗಳ ಬೆಲೆಯನ್ನು ನೋಡಿ ಕೆಲವು ವೆಬ್ ಸೈಟುಗಳು ಬೆಳೆಯನ್ನು ಇಳಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಹೀಗೆ ಆನ್‌ಲೈನ್ ಶಾಪಿಂಗ್ ಎಂಬುದರ ಹಿಂದೆ ಎಷ್ಟೆಲ್ಲ ಕಸರತ್ತು ಇರುತ್ತದೆ, ಏನೆಲ್ಲಾ ವರಸೆಗಳಿರುತ್ತವೆ ಅಂತ ಗೊತ್ತಾದರೆ ಶಾಪ್ ಮಾಡಲಿಕ್ಕೇ ಹೆದರಿಕೆಯಾದೀತೇನೋ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು