ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಬೆಳಕಿನಿಂದ ಜಲಜನಕ ಆಮ್ಲಜನಕ

Last Updated 24 ಜನವರಿ 2023, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ವಿದ್ಯುಚ್ಛಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಸಾಂಪ್ರದಾಯಿಕ ಇಂಧನದ ಬೆಲೆ ಹೆಚ್ಚಳ; ಜೊತೆಗೆ ಕೊಂಚ ಪರಿಸರ ಕಾಳಜಿ ಇದಕ್ಕೆ ಕಾರಣ. ಭೂಮಿಯ ವಾತಾವರಣದಲ್ಲಿ ಹೇರಳವಾಗಿರುವ ಜಲಜನಕದಂತಹ ಅನಿಲಗಳನ್ನು ಬಳಸಿಕೊಂಡೂ ವಾಹನ ಚಾಲನೆ, ವಿದ್ಯುತ್‌ ಉತ್ಪಾದನೆಗೆ ಆದ್ಯತೆ ಈಗ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ಸಂಶೋಧನೆಯೊಂದಾಗಿದೆ. ಸೂರ್ಯನ ಬೆಳಕನ್ನು ಬಳಸಿಕೊಂಡು ನೀರನ್ನು ಆಮ್ಲಜನಕ ಹಾಗೂ ಜಲಜನಕವಾಗಿ ಬೇರ್ಪಡಿಸಿ ಶಕ್ತಿಯಾಗಿ ಬಳಸಿಕೊಳ್ಳುವ ಹೊಸ ತಂತ್ರಜ್ಞಾನ ದೊರೆತಿದೆ.

ಅಮೆರಿಕದ ಮಿಶೆಗನ್‌ ವಿಶ್ವವಿದ್ಯಾನಿಲಯದ ಪರಿಸರ ಹಾಗೂ ಇಂಧನ ವಿಜ್ಞಾನಿಗಳು ಈ ಸಂಶೋಧನೆಯ ರೂವಾರಿಗಳು. ಸಸ್ಯಗಳು ಪತ್ರಹರಿತ್ತನ್ನು ಬಳಸಿಕೊಂಡು ದ್ಯುತಿಸಂಶ್ಲೇಷಣ ಕ್ರಿಯೆಯನ್ನು ನಡೆಸುವ ಪ್ರಕ್ರಿಯೆಯನ್ನೇ ನಕಲು ಮಾಡಿ, ಕೃತಕವಾದ ಫಲಕಗಳನ್ನು ಸೃಷ್ಟಿಸಿದ್ದಾರೆ. ಈ ಫಲಕಗಳ ಮೇಲೆ ನೀರನ್ನು ಹರಿಸಿ ಸೂರ್ಯನ ಶಾಖವನ್ನು ಬಳಸಿಕೊಂಡು ವಿಭಜಿಸಿ, ಅನಿಲವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸುವ ಸಾಧನಗಳನ್ನು ಅಳವಡಿಸಿದ್ದಾರೆ.

ನೀರನ್ನು ಯಾವುದೇ ಶಾಖದ ಮೂಲದಿಂದಲೂ ಆವಿ ಮಾಡಬಹುದು. ಆದಿಮಾನವನೂ ಸೌದೆಯಿಂದ ನೀರನ್ನು ಕಾಯಿಸಿ ಪ್ರಯೋಗಿಸಿದ್ದನು. ಈಗಲೂ ಈ ಪುರಾತನ ಪದ್ಧತಿ ಚಾಲ್ತಿಯಲ್ಲಿದೆ. ಕೈಗಾರಿಕಾ ಯುಗದ ಬಳಿಕ ಕಲ್ಲಿದ್ದಲು, ಪೆಟ್ರೋಲಿಯಂ ಇಂಧನಗಳನ್ನು ಬಳಸಿ ನೀರನ್ನು ಕಾಯಿಸುವ ವಿಧಾನ ಪ್ರಸಿದ್ಧವಾಯಿತು. ಆದರೆ, ಇಲ್ಲಿನ ಸವಾಲಿರುವುದು ಕೇವಲ ನೀರನ್ನು ಕಾಯಿಸುವುದಲ್ಲ. ನೀರನ್ನು ಕಾಯಿಸಿದರೆ ನೀರು ಬಿಸಿಯಾಗಿ ದ್ರವರೂಪವನ್ನು ಬದಲಿಸಿಕೊಳ್ಳುವುದೇ ಹೊರತು ಆಮ್ಲಜನಕ, ಜಲಜನಕವಾಗಿ ಪರಿವರ್ತನೆಯಾಗದು. ಅದು ಕೇವಲ ಅನಿಲರೂಪ ಪಡೆಯುತ್ತದೆಯಷ್ಟೇ. ಅದು ತಂಪಾದಾಗ ಮತ್ತೆ ನೀರಾಗಿ ರೂಪ ಪಡೆಯುತ್ತದೆ. ಶಾಖದ ಮೂಲಕವೇ ಆಮ್ಲಜನಕ ಹಾಗೂ ಜನಜನಕವನ್ನು ಬೇರ್ಪಡಿಸಬೇಕಾದರೆ ನೀರನ್ನು 500ರಿಂದ 2000 ಡಿಗ್ರಿ ಸೆಲ್ಷಿಯಸ್ ವರೆಗೆ ಕಾಯಿಸಬೇಕಾಗುತ್ತದೆ. ಈ ಪ್ರಕ್ರಿಯೆ ತೀರಾ ದುಬಾರಿ ಹಾಗೂ ಪರಿಸರಕ್ಕೆ ಹಾನಿಕಾರಿ. ಅಲ್ಲದೇ, ಬೇರ್ಪಟ್ಟ ಅನಿಲದ ಬಳಕೆಯೂ ಕಷ್ಟ.

ಶೇ 9ರಷ್ಟು ಪರಿಣಾಮಕಾರಿ:ಹಾಗಾಗಿ, ಆಮ್ಲಜನಕ ಹಾಗೂ ಜನಜನಕವನ್ನು ನೀರಿನಿಂದ ಹೊರತೆಗೆಯಬೇಕಾದರೆ, ‘ಎಲೆಕ್ಟ್ರೋಲಿಸಿಸ್’ ಎಂಬ ವಿಧಾನವನ್ನು ಬಳಸಲಾಗುತ್ತದೆ. ಆನೋಡ್ ಹಾಗೂ ಕ್ಯಾಥೋಡ್‌ಗಳ ಸಹಾಯದಿಂದ ವಿದ್ಯುತ್‌ ಹರಿಸಲಾಗುತ್ತದೆ. ಆಗ ಆನೋಡ್‌ ಬಳಿಗೆ ಆಮ್ಲಜನಕವೂ ಕ್ಯಾಥೋಡ್ ಬಳಿಗೆ ಜಲಜನಕದ ಅಣುಗಳು ಶೇಖರಗೊಳ್ಳುತ್ತವೆ. ಇದು ಈಗ ಬಳಕೆಯಲ್ಲಿರುವ ವೈಜ್ಞಾನಿಕ ಪದ್ಧತಿ. ಈ ಮಾದರಿಗೆ ಮಾರ್ಪಾಟುಗಳನ್ನು ಮಾಡಿರುವ ಮಿಶೆಗನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಎಲೆಕ್ಟ್ರೋಲಿಸಿಸ್ ವಿಧಾನಕ್ಕೆ ಸೌರ ವಿದ್ಯುತ್ ಬಳಸಿದ್ದಾರೆ. ಈ ಪ್ರಯೋಗದಲ್ಲಿ ಈ ಹೊಸ ವಿಧಾನವು ಹಳೆಯ ವಿಧಾನಕ್ಕಿಂತ ಶೇ 9ರಷ್ಟು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿರುವುದು ವಿಶೇಷ.

ಈ ಸಂಶೋಧನೆಯ ಮಹತ್ವವೇನೆಂದರೆ, ದ್ಯುತಿಸಂಶ್ಲೇಷಣ ಕ್ರಿಯೆಯನ್ನು ಬಳಸುತ್ತಿರುವ ಕಾರಣ ಶೂನ್ಯ ಪರಿಸರ ಮಾಲಿನ್ಯವಾಗುತ್ತದೆ. ಜೊತೆಗೆ, ಸೂರ್ಯನ ಶಕ್ತಿ ಅನಿಯಮಿತ. ಹಾಗಾಗಿ, ಇದು ಬಹುತೇಕ ಉಚಿತ ತಂತ್ರಜ್ಞಾನ. ‘ಇದಕ್ಕೂ ಮಿಗಿಲಾಗಿ, ಅನಿಲವನ್ನು ಬೇರ್ಪಡಿಸಲು ಬಳಸುವ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರೋಲೈಟ್ ಮೆಂಬ್ರೇನ್‌ಗಳನ್ನು ಗಾತ್ರದಲ್ಲಿ ನೂರುಪಟ್ಟು ಕುಗ್ಗಿಸಲಾಗಿದೆ. ಹಾಗಾಗಿ, ಸ್ಥಳವನ್ನು ಉಳಿಸುವ ಅವಕಾಶ ಹೆಚ್ಚು. ಇದರಿಂದಾಗಿ ಸಣ್ಣ ಸ್ಥಳಾವಕಾಶದಲ್ಲೇ ಅನಿಲ ಸ್ಥಾವರನ್ನು ಸ್ಥಾಪಿಸಬಹುದು. ಈಗಿನಂತೆ ಒಂದು ದೊಡ್ಡ ಕಾರ್ಖಾನೆಯೇ ಬೇಕು ಎಂದೇನಿಲ್ಲ’ ಎಂದು ವಿಶ್ವವಿದ್ಯಾನಿಲಯದ ಎಲೆಕ್ಟ್ರಿಕಲ್‌ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಜೆಟಿಯನ್ ಮಿ ಹೇಳಿದ್ದಾರೆ.

ಉತ್ಪಾದನೆಯಾದ ಆಮ್ಲಜನಕ ಹಾಗೂ ಜಲಜನಕವನ್ನು ಎಂದಿನಂತೆ ಅಗತ್ಯ ಕೆಲಸಗಳಿಗೆ ಬಳಸಿಕೊಳ್ಳಬಹುದು. ಕೋವಿಡ್–19 ಬಳಿಕ ವೈದ್ಯಕೀಯ ಬಳಕೆಗೆ ಈಗ ಆಮ್ಲಜನಕದ ಬಳಕೆ ಹೆಚ್ಚಾಗಿದೆ; ಅಲ್ಲದೇ, ಆಮ್ಲಜನಕವನ್ನು ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಳ್ಳುವ ಪದ್ಧತಿಯೂ ಸೃಷ್ಟಿಯಾಗಿದೆ. ಜೊತೆಗೆ, ಕೈಗಾರಿಕಾ ಬಳಕೆಗೂ ಆಮ್ಲಜನಕ ಬೇಕಿದೆ. ಜಲಜನಕ ವಾಹನ ಕ್ಷೇತ್ರ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಬಾಹ್ಯಾಕಾಶ ಉಡಾವಣಾ ರಾಕೆಟ್‌ಗಳಿಗೆ ಬೇಕಾಗುವ ಅಗಾಧ ಪ್ರಮಾಣದ ಜಲಜನಕವನ್ನು ಪರಿಸರದಿಂದ ಸಂಗ್ರಹಿಸುವ ವಿಧಾನ ಇದರಿಂದ ಸರಳವಾಗಲಿದೆ. ಇಸ್ರೋ, ನಾಸಾ ಮಾದರಿಯ ವಿಜ್ಞಾನ ಸಂಸ್ಥೆಗಳಿಗೆ ಈ ಸಂಶೋಧನೆ ವರದಾನವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಫ್ಯೂಯೆಲ್‌ ಸೆಲ್‌ ತಂತ್ರಜ್ಞಾನ ಬಳಸಿ ಜಲಜನಕದಿಂದ ವಿದ್ಯುತ್‌ ಸಹಾ ಉತ್ಪಾದಿಸಬಹುದು. ಈ ವಿದ್ಯುತ್‌ ವಾಹನಗಳಿಗೂ ಬಳಕೆಯಾಗಬಹುದು.

ಸ್ಥಳೀಯ ಉದ್ಯಮಿಗಳಿಗೆ ಸ್ವಾವಲಂಬನೆ: ಜೊತೆಗೆ ಸ್ಥಳೀಯ ಉದ್ಯಮಿಗಳಿಗೆ, ಸಣ್ಣ ಕೈಗಾರಿಕೋದ್ಯಮಿಗಳಿಗೆ ಈ ಸಂಶೋಧನೆ ಸಹಾಯ ಮಾಡಲಿದೆ. ಈ ತಂತ್ರಜ್ಞಾನದ ಮೂಲಕ ಅನಿಲ ಘಟಕಗಳನ್ನು ಸ್ಥಾಪಿಸಲು ಹೆಚ್ಚು ಹಣ ಮತ್ತು ಜಾಗ ಬೇಕಾಗಿಲ್ಲ. ಸೌರಫಲಕಗಳನ್ನು ಅಳವಡಿಸುವ ಜಾಗ ಬೇಕಷ್ಟೇ. ಕೃಷಿಯೇತರ ಭೂಮಿ, ಬರಡು ಭೂಮಿಗಳನ್ನು ಈ ರೀತಿಯ ಘಟಕಗಳನ್ನಾಗಿ ಪರಿವರ್ತಿಸಬಹುದು. ಒಂದು ಸಣ್ಣ ಕೈಗಾರಿಕಾ ಶೆಡ್ ಇದ್ದಲ್ಲಿ ಅನಿಲ ಉತ್ಪಾದನೆ ಮಾಡಿಕೊಳ್ಳಬಹುದು ಎನ್ನುತ್ತಾರೆ, ಹೊಸ ತಂತ್ರಜ್ಞಾನದಿಂದ ಅಗ್ಗದ ಜಲಜನಕ ಉತ್ಪಾದನೆ ಕೃತಿಯ ಕರ್ತೃ ಹಾಗೂ ವಿಜ್ಞಾನಿ ಪೆಂಗ್‌ ಝೌ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT