ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥರ್ಮಾಕೋಲ್‌ಗೆ ಬೇಕು ನಿಯಂತ್ರಣ

Last Updated 11 ಅಕ್ಟೋಬರ್ 2022, 23:45 IST
ಅಕ್ಷರ ಗಾತ್ರ

ಪ್ಯಾಕಿಂಗ್, ತಟ್ಟೆ, ಲೋಟ, ಶಬ್ದನಿರೋಧಕಗಳು, ಮೀನು ಸಾಗಾಣಿಕೆ ಡಬ್ಬಗಳು, ಕೃತಕ ಚಾವಣಿ, ಕಲಾಕೃತಿಗಳು – ಹೀಗೆ ಹಲವಾರು ಕಡೆ ಥರ್ಮೋಕೋಲ್‌ ಬಳಕೆಯಾಗುತ್ತಿದೆ. ಇದು ಹಗುರವಾಗಿರುವುದರಿಂದ, ಉತ್ಪಾದನಾ ವೆಚ್ಚ ಕಡಿಮೆಯಿರುವುದರಿಂದ, ಉತ್ತಮ ಶಬ್ದ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಜನಪ್ರಿಯವಾಗುತ್ತಿದೆ. ಆದರೆ ನಾವು ಬಳಸುವ ಥರ್ಮೋಕೋಲ್‍ನಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರ ಹಾನಿಯನ್ನು ಕುರಿತು ಜನಸಾಮಾನ್ಯರಲ್ಲಿ ಹೆಚ್ಚು ಜಾಗೃತಿ ಉಂಟಾಗಬೇಕಾಗಿದೆ.

ಪಾಲಿಸ್ಟೈರೀನ್ ಬಳಸಿ ಥರ್ಮೋಕೋಲ್‌ ಉತ್ಪಾದಿಸಲಾಗುತ್ತದೆ. ಒಮ್ಮೆ ಬಳಸಿದ ಥರ್ಮೋಕೋಲ್‌ ನ್ನು ಮತ್ತೆ ಥರ್ಮೋಕೋಲ್‌ ಉತ್ಪಾದನೆಯಲ್ಲಿ ಬಳಸಲು ದುಬಾರಿಯಾಗುತ್ತದೆ ಮತ್ತು ಪುರ್ನಬಳಕೆಯ ವಿಧಾನ ಕೂಡ ಸಂಕೀರ್ಣವಾಗಿದೆ. ನೈಸರ್ಗಿಕವಾಗಿ ಥರ್ಮೋಕೋಲ್‌ ತ್ಯಾಜ್ಯವು ಸಂಸ್ಕರಣೆಯಾಗದ ಕಾರಣ, ವಿಶ್ವದಾದಂತ್ಯ ಹರಡಿರುವ ಟನ್‍ಗಟ್ಟಲೆ ಥರ್ಮೋಕೋಲ್‌ ತ್ಯಾಜ್ಯದಿಂದ ಪರಿಸರ ಮಾಲಿನ್ಯದ ಸಮಸ್ಯೆ ಉಂಟಾಗುತ್ತಿದೆ.

ಥರ್ಮೋಕೋಲ್‌ನಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿರುವುದು ವರ್ಷ 2002, 2014 - ಹೀಗೆ ವಿವಿಧ ಸಮಯದಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳು ನಡೆಸಿರುವ ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ದೀರ್ಘಕಾಲ ಥರ್ಮೋಕೋಲ್‌ ಉತ್ಪನ್ನಗಳನ್ನು ಬಳಸುವುದರಿಂದ ರಕ್ತದ ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕೆಲವು ಕಡೆ ಥರ್ಮೋಕೋಲ್‌ ತ್ಯಾಜ್ಯವನ್ನು ಸುಡಲಾಗುತ್ತಿದೆ. ಆದರೆ ಹೀಗೆ ಮಾಡುವುದರಿಂದ ಹಾನಿಕಾರಕ ಸಿ.ಎಫ್.ಸಿ. ಅನಿಲಗಳು ಬಿಡುಗಡೆಯಾಗುತ್ತವೆ. ಅದಲ್ಲದೆ ಥರ್ಮೋಕೋಲ್‌ ಪೂರ್ಣವಾಗಿ ಬೂದಿಯಾಗುವುದಿಲ್ಲ. ಡಾಂಬರಿನಂತಹ ವಸ್ತು ಕೊನೆಯಲ್ಲಿ ಉಳಿಯುತ್ತದೆ ಮತ್ತು ಕೆಟ್ಟ ದುರ್ನಾತವನ್ನು ಬೀರುತ್ತದೆ. ಆದ್ದರಿಂದ ಯಾವ ಕಾರಣಕ್ಕೂ ಥರ್ಮೋಕೋಲ್‌ ತ್ಯಾಜ್ಯವನ್ನು ಸುಡುವ ಕೆಲಸ ಮಾಡಬೇಡಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಥರ್ಮೋಕೋಲ್‌ ಮಾಡಿದ ತಟ್ಟೆ, ಲೋಟ, ಚಮಚಗಳನ್ನು ಆಹಾರ–ಪಾನೀಯಗಳ ಸೇವನೆಗಾಗಿ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇವುಗಳನ್ನು ಉಪಯೋಗಿಸಿ, ಕಸದ ಬುಟ್ಟಿಗೆ ಬಿಸಾಡಿದರೆ ಆಯಿತು, ತೊಳೆಯ ಬೇಕು ಎನ್ನುವ ಸಮಸ್ಯೆ ಇಲ್ಲ ಎನ್ನುವುದು ಒಂದು ಕಾರಣವಿರಬಹುದು. ಆದರೆ ಇಂತಹ ಉತ್ಪನ್ನಗಳನ್ನು ಬಳಸಿ ಆಹಾರ, ಟೀ, ಕಾಫಿ ಮೊದಲಾದ ಪಾನೀಯಗಳನ್ನು ಸೇವಿಸಿದಾಗ ಥರ್ಮೋಕೋಲ್‌ ಹಾನಿಕಾರಕ ರಾಸಾಯನಿಕಗಳು ನಮ್ಮ ದೇಹವನ್ನು ಸೇರುತ್ತವೆ. ವಯಸ್ಕರಲ್ಲಿ ಸಂತಾನ ಸಮಸ್ಯೆಯನ್ನುಂಟುಮಾಡಿದರೆ, ಮಕ್ಕಳಲ್ಲಿ ಇದು ದೀರ್ಘಕಾಲಿನ ಮಾನಸಿಕ ಮತ್ತು ದೈಹಿಕ ಅನಾರೋಗ್ಯ ಸಮಸ್ಯೆಯನ್ನು ಉಂಟುಮಾಡಬಲ್ಲದು. ಕೆಲವರು ಥರ್ಮೋಕೋಲ್‌ ಡಬ್ಬಗಳಲ್ಲಿರುವ ಆಹಾರವನ್ನು, ಅದೇ ಡಬ್ಬದಲ್ಲಿರುವಂತೆ ಮತ್ತೆ ಬಿಸಿ ಮಾಡುತ್ತಾರೆ. ಇದರಿಂದಾಗಿ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುತ್ತದೆ.

ಥರ್ಮೋಕೋಲ್‌ ಬಳಸಿ ಕಲಾಕೃತಿಗಳನ್ನು ತಯಾರಿಸುವವರು, ಕೃತಕ ಚಾವಣಿ ನಿರ್ಮಿಸುವವರು, ಶಬ್ದನಿರೋಧಕ ವ್ಯವಸ್ಥೆ ಮೊದಲಾದ ಕೆಲಸಗಳನ್ನು ಮಾಡುವವರು ಎಚ್ಚರಿಕೆ ವಹಿಸಬೇಕು. ಥರ್ಮೋಕೋಲ್‌ ಕತ್ತರಿಸುವಾಗ ಉಂಟಾಗುವ ಸೂಕ್ಷ್ಮಕಣಗಳು ಕಣ್ಣು, ಚರ್ಮ, ಶ್ವಾಸಕೋಶ, ಜೀಣಾಂಗ, ಲಿವರ್, ಮೂತ್ರಪಿಂಡ ಮತ್ತು ನರಮಂಡಲಗಳನ್ನು ಹಾನಿ ಮಾಡಿರುವ ಉದಾಹರಣೆಗಳಿವೆ. ಹೀಗಿರುವಾಗ ಥರ್ಮೋಕೋಲ್‌ ಉತ್ಪನ್ನಗಳು, ಆಟಿಕೆಗಳನ್ನು ನಿಮ್ಮ ಮಕ್ಕಳಿಗೆ ಕೊಡುವ ಮೊದಲು ಒಂದು ಬಾರಿ ಯೋಚಿಸಿ.

ಥರ್ಮೋಕೋಲ್‌ ತ್ಯಾಜ್ಯವನ್ನು ಬಳಸಿ ಸಿ.ಡಿ. ಕವರ್‌ಗಳು. ಫೋಟೊ ಫ್ರೇಮ್‍ಗಳು ಮುಂತಾದವುಗಳನ್ನು ತಯಾರಿಸುವ ಯೋಜನೆಗಳನ್ನು ಪುಣೆ, ಥಾಣೆ ಮೊದಲಾದ ಕಡೆಯ ಪುರಸಭೆ ಅಧಿಕಾರಿಗಳು ಪ್ರಾರಂಭಿಸಿದರು. ಪ್ರತಿದಿನ ಒಂದು ಟನ್ ಥರ್ಮೋಕೂಲ್ ತ್ಯಾಜ್ಯವನ್ನು ಈ ರೀತಿ ಪರಿವರ್ತಿಸಬಹುದು; ಹೀಗೆ ತಯಾರಾದ ಉತ್ಪನ್ನಗಳಿಂದ ಸ್ಥಳೀಯ ಸಂಸ್ಥೆಗೆ ಆದಾಯ ದೊರೆಯುತ್ತದೆ ಎಂದು ಹೇಳಲಾಯಿತು. ತ್ಯಾಜ್ಯ ಥರ್ಮೋಕೋಲ್‌ ಬಳಸಿ ಉದ್ಯಮಗಳು ಬಳಸುವ ಅಂಟು ತಯಾರಿಸಬಹುದು ಎಂದು ಕೆಲವರು ಪ್ರ್ಯಾತ್ಯಕ್ಷಿಕೆಗಳ ಮೂಲಕ ತೋರಿಸಿದ್ದಾರೆ. ಆದರೆ ನಮ್ಮ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೆಟ್ಟಗಳಷ್ಟು ಇರುವ ಥರ್ಮೋಕೋಲ್‌ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸದಿದ್ದರೆ, ಜನ ಮತ್ತು ಪರಿಸರದ ಮೇಲಾಗುವ ಹಾನಿ ಹೆಚ್ಚಾಗುತ್ತದೆ. ಸಾಧ್ಯವಾದಷ್ಟು ಥರ್ಮೋಕೋಲ್‌ ನಂತಹ ಉತ್ಪನ್ನಗಳ ಬಳಕೆಯನ್ನು ಸಾರ್ವಜನಿಕರು ಕಡಿಮೆ ಮಾಡುವುದರಿಂದ ಈ ಸಮಸ್ಯೆ ಸ್ಪಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT