ಶನಿವಾರ, ಜೂನ್ 6, 2020
27 °C

ಟೆಸ್ಟ್ ಏಕೆ ಉಳಿಯಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಟ್ ಕೊಹ್ಲಿ ಬಳಗದ ಗೆಲುವಿನ ಸಂಭ್ರಮ

ಈ ಕಾಲದಲ್ಲಿ ಬ್ಯಾಟ್‌–ಬಾಲ್ ಹಿಡಿದು ಅಂಗಳಕ್ಕೆ ಇಳಿಯುವ ಇಂದಿನ ಎಳೆಯ ಕ್ರಿಕೆಟಿಗರ ಕಂಗಳಲ್ಲಿ ‘ಚುಟುಕು’ ಬಣ್ಣಬಣ್ಣದ ಕನಸುಗಳು ತೇಲಾಡುತ್ತವೆ. ಸಿಕ್ಸರ್‌, ಬೌಂಡರಿಗಳನ್ನು ಸಿಡಿಸುವ ತಂತ್ರಗಳತ್ತಲೇ ಚಿತ್ತ ಹರಿಯುತ್ತದೆ. ಬಹುತೇಕ ಪಾಲಕರೂ ಅಷ್ಟೇ. ತಮ್ಮ ಮಗ ಐಪಿಎಲ್‌ ಆಡಲಿ, ಬೊಗಸೆ ತುಂಬ ಹಣ ಗಳಿಸಲಿ ಎಂದೇ ಆಶಿಸುತ್ತಾರೆ. ಅದಕ್ಕೆ ತಕ್ಕಂತೆ ಹಲವಾರು ಪ್ರತಿಭಾವಂತ ಯುವಕರು ಐಪಿಎಲ್, ಕೆಪಿಎಲ್‌ನಂತಹ ಹಣ ಗಳಿಸಬಹುದಾದ ಟೂರ್ನಿಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ‘ಭವಿಷ್ಯ’ ರೂಪಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ.

ಆದರೂ ಈ ಕಾಲದಲ್ಲಿ ಐದು ದಿನಗಳ ಮಾದರಿಯ ಟೆಸ್ಟ್‌ ಕ್ರಿಕೆಟ್‌ ಉಳಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಮುಂದಿನ ವರ್ಷದಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಕೂಡ ಆರಂಭವಾಗಲಿದೆ. ಸುದೀರ್ಘ ವೇಳಾಪಟ್ಟಿಯ ಈ ಟೂರ್ನಿಯು 2021ರವರೆಗೆ ನಡೆಯಲಿದೆ. ಆ್ಯಶಸ್ ಸರಣಿಯ ಪಂದ್ಯಗಳನ್ನು ಬಿಟ್ಟರೆ ಬಹುತೇಕ ಎಲ್ಲ ದೇಶಗಳಲ್ಲಿಯೂ ಟೆಸ್ಟ್ ಕ್ರಿಕೆಟ್ ನೋಡಲು ಅಂಗಳಕ್ಕೆ ಬರುವವರ ಸಂಖ್ಯೆ ಹೆಚ್ಚೇನಿಲ್ಲ. ಕ್ರಿಕೆಟ್‌ ಆಟವನ್ನು ಧರ್ಮದಂತೆ ಆರಾಧಿಸುವ ಭಾರತದಲ್ಲಿಯೂ ಟೆಸ್ಟ್‌ ಪಂದ್ಯ ನಡೆದರೆ ಮೈದಾನದ ಗ್ಯಾಲರಿಗಳು ತುಂಬಿ ತುಳುಕುವುದಿಲ್ಲ. ಅದೇ ಐಪಿಎಲ್ ಅಥವಾ ಟ್ವೆಂಟಿ–20 ಪಂದ್ಯಗಳಿಗೆ ಟಿಕೆಟ್‌ಗಳು ಕಾಳಸಂತೆಯಲ್ಲಿ ನಾಲ್ಕು ಪಟ್ಟು ಬೆಲೆಗೆ ಬಿಕರಿಯಾಗುತ್ತವೆ. ಪರಿಸ್ಥಿತಿ ಹೀಗಿದ್ದ ಮೇಲೆ ಟೆಸ್ಟ್‌ ಕ್ರಿಕೆಟ್ ಏಕೆ ಉಳಿಯಬೇಕು ಎಂಬ ಪ್ರಶ್ನೆ ಯುವಪೀಳಿಗೆಯ ಮನದಲ್ಲಿ ಏಳುವುದು ಸಹಜ.ಟೆಸ್ಟ್ ಕ್ರಿಕೆಟ್‌ನಲ್ಲಿರುವ ಕೆಲವು ಅಂಶಗಳನ್ನು ನೋಡಿದರೆ ಟೆಸ್ಟ್ ಉಳಿಯಬೇಕು ಎನಿಸಬಹುದು.

ಇಲ್ಲಿರುವುದು ಕ್ರಿಕೆಟ್ ಮಾತ್ರ

‘ಐಪಿಎಲ್‌ನಲ್ಲಿ ಆಡುತ್ತಿದ್ದರೆ ನಾನು ರೂಪದರ್ಶಿಯೋ, ಕ್ರಿಕೆಟಿಗನೋ ಎಂಬ ಗೊಂದಲ ಮೂಡುತ್ತದೆ. ಆದರೆ ಟೆಸ್ಟ್‌ ಮಾದರಿಯಲ್ಲಿ ಅಪ್ಪಟ ಕ್ರಿಕೆಟಿಗನಾಗಿರುತ್ತೇನೆ’ ಎಂದು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್‌ ಒಮ್ಮೆ ಹೇಳಿದ್ದರು. ಮೂರು ಮಾದರಿಗಳಲ್ಲಿಯೂ ಶ್ರೇಷ್ಠ ಬೌಲಿಂಗ್ ಮಾಡಿರುವ ಖ್ಯಾತಿ ಅವರದ್ದು.

ಐದು ದಿನಗಳ ಪಂದ್ಯದಲ್ಲಿ ಬಿಳಿ ಪೋಷಾಕು ತೊಟ್ಟು ಕಣಕ್ಕಿಳಿಯುವ ಆಟಗಾರ ತನ್ನ ಕೌಶಲ ಮತ್ತು ಸಾಮರ್ಥ್ಯಗಳನ್ನು ಒರೆಗೆ ಹಚ್ಚುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾನೆ. ಪ್ರತಿ ಅವಧಿಯಲ್ಲಿಯೂ (ಊಟ, ಚಹಾ ಮತ್ತು ನಂತರದ ಅವಧಿಗಳು) ಒಂದೊಂದು ರೀತಿಯ ಪರೀಕ್ಷೆಗಳು ಎದುರಾಗುತ್ತವೆ. ಕೆಲವು ಪಂದ್ಯಗಳಲ್ಲಿ 600 ರನ್‌ಗಳಿಗೂ ಹೆಚ್ಚಿನ ಮೊತ್ತ ಗಳಿಸಿದ ತಂಡ ಇನ್ನು ಕೆಲವು ಪಂದ್ಯಗಳಲ್ಲಿ ಒಂದೇ ಅವಧಿಯಲ್ಲಿ 40 ರನ್‌ಗಳಿಗೆ ಸರ್ವಪತನ ಕಾಣಬಹುದು. ವಾತಾವರಣ, ಪಿಚ್‌ ಸ್ಥಿತಿಗತಿಗಳನ್ನು ಅರಿತು ಆಡುವ ಕಲೆ ಸಿದ್ಧಿಸುವುದು ಟೆಸ್ಟ್‌ ಕ್ರಿಕೆಟ್‌ನಲ್ಲಿಯೇ.

(ಟೆಸ್ಟ್‌ ಪಂದ್ಯವೊಂದರ ವೇಳೆ ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಮತ್ತು ಮಹೇಂದ್ರಸಿಂಗ್ ದೋನಿ)

‘ಕ್ರಿಕೆಟ್‌ನ ಪ್ರತಿಯೊಂದು ಕೌಶಲವನ್ನು ರೂಢಿಸಿಕೊಳ್ಳುವ ಏಕೈಕ ವೇದಿಕೆ ಟೆಸ್ಟ್‌’ ಎಂದು ಅಲೆಕ್ ಸ್ಟಿವರ್ಟ್‌ ಹೇಳುತ್ತಾರೆ.

ಶ್ರೇಷ್ಠ ಪಾಲುದಾರಿಕೆಯ ಬ್ಯಾಟಿಂಗ್, ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಂದ ದಂಡಿಸಿಕೊಂಡು ಅವರನ್ನೇ ಔಟ್ ಮಾಡಿ ಸಂಭ್ರಮಿಸುವ ಬೌಲರ್‌ಗಳನ್ನು ಇಲ್ಲಿ ನೋಡಬಹುದು. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮನರಂಜನೆ ಹೆಚ್ಚು. ಆದರೆ ಸುದೀರ್ಘವಲ್ಲ. ಆದರೆ ಇಂದು ಕೆಲವು ಟೆಸ್ಟ್‌ ಪಂದ್ಯಗಳು ಐದನೇ ದಿನದವರೆಗೂ ರೋಚಕತೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹೊಸ ಕೌಶಲ್ಯಗಳು ಬಳಕೆಯಾಗುತ್ತಿವೆ. ಆದ್ದರಿಂದ ಟೆಸ್ಟ್‌ ಕ್ರಿಕೆಟ್‌ ಮೌಲ್ಯವರ್ಧನೆಯಾಗುತ್ತಿದೆ.

ಕ್ರಿಕೆಟ್‌ ಸೊಬಗಿನ ಸೆಲೆ ಇರುವುದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ. ಆದ್ದರಿಂದಲೇ ಈ ಮಾದರಿ ಉಳಿಯಬೇಕು ಎಂದು ಬಹುತೇಕ ಹಿರಿಯ ಕ್ರಿಕೆಟಿಗರು, ವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಅದಕ್ಕಾಗಿಯೇ ಇದನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿವೆ. ಹೊನಲು ಬೆಳಕಿನಲ್ಲಿ ತಿಳಿಗುಲಾಬಿ ಚೆಂಡು ಬಳಸಿ ಟೆಸ್ಟ್‌ಗಳನ್ನು ಆಡಿಸುವುದು  ಒಂದು ಪ್ರಯತ್ನ. ಮುಸ್ಸಂಜೆಯಲ್ಲಿ ನಡೆಯುವ ಪಂದ್ಯ ವೀಕ್ಷಿಸಲು ಹೆಚ್ಚು ಜನ ಬರುತ್ತಾರೆ ಎನ್ನುವ ಆಶಾಭಾವನೆ ಇದೆ. ಆಲ್ಲದೇ ಟಿ.ವಿ.ಯ ’ಪ್ರೈಮ್‌ ಟೈಮ್’ ಲಾಭ ಪಡೆಯುವ ಲೆಕ್ಕಾಚಾರವೂ ಇಲ್ಲಿದೆ.

‘ಟೆಸ್ಟ್ ಮತ್ತು ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಪರಿಣತರಾದವರು ಉಳಿದೆಲ್ಲ ಮಾದರಿಗಳಲ್ಲಿಯೂ ಚೆನ್ನಾಗಿ ಆಡಬಲ್ಲರು. ಆದ್ದರಿಂದ ಟೆಸ್ಟ್‌ ಕ್ರಿಕೆಟ್ ಶ್ರೇಷ್ಠವಾದದ್ದು’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳುತ್ತಾರೆ. ಸದ್ಯ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿಯೂ 50ಕ್ಕೂ ಹೆಚ್ಚಿನ ರನ್‌ ಸರಾಸರಿ ಹೊಂದಿರುವ ಅಗ್ರಮಾನ್ಯ ಬ್ಯಾಟ್ಸ್‌ಮನ್ ಅವರು. ಅವರ ಶೈಲಿಯನ್ನು ಅನುಕರಿಸುವವರ ದೊಡ್ಡ ಬಳಗವೇ ಇವತ್ತು ಭಾರತದಲ್ಲಿದೆ.

ಜಿ.ಆರ್. ವಿಶ್ವನಾಥ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸ್ಟೀವ್ ವಾ, ಅಲನ್ ಬಾರ್ಡರ್, ಜಾಕ್ ಕಾಲಿಸ್, ಬ್ರಯನ್ ಲಾರಾ ಅವರಂತಹ ಬ್ಯಾಟಿಂಗ್ ಮಾಂತ್ರಿಕರು, ಕಪಿಲ್ ದೇವ್, ಮುತ್ತಯ್ಯ ಮುರಳೀಧರನ್ ಶೇನ್ ವಾರ್ನ್, ಜಾವಗಲ್ ಶ್ರೀನಾಥ್, ಗ್ಲೆನ್ ಮೆಕ್‌ಗ್ರಾ, ಕರ್ಟ್ನಿ ವಾಲ್ಶ್, ಅನಿಲ್ ಕುಂಬ್ಳೆ ಅವರಂತಹ ಶ್ರೇಷ್ಠ ಬೌಲರ್‌ಗಳು ಮತ್ತೆ  ಮತ್ತೆ ಹುಟ್ಟಿ ಬರಬೇಕು. ಕ್ರಿಕೆಟ್‌ ಬೆಳೆದು ಶ್ರೀಮಂತವಾಗಬೇಕು. ಅದಕ್ಕಾಗಿ ಟೆಸ್ಟ್‌ ಮಾದರಿ ಉಳಿಯಬೇಕು. ವಿಶ್ವ ಚಾಂಪಿಯನ್‌ಷಿಪ್ ಉದ್ದೇಶವೂ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು