ಚಾದರ ಚಾರಣ

ಭಾನುವಾರ, ಮಾರ್ಚ್ 24, 2019
33 °C
ನಾಜೂಕು ನಡಿಗೆಗೆ ಬೇಕು ಎಂಟೆದೆ; ವಾತಾವರಣವೇ ಸವಾಲು

ಚಾದರ ಚಾರಣ

Published:
Updated:
Prajavani

ಕಾಶ್ಮೀರ ಎಂದರೆ ಹಾಗೆ.  ಹಿಮಾಚ್ಛಾದಿತ ಬೆಟ್ಟಗಳು, ಗಿಡಮರಗಳ ಮೇಲೆ ಹತ್ತಿಯ ಹಾಗೆ ಅಂಟಿಕೊಂಡ ಮಂಜಿನ ತುಂಡುಗಳು. -35 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿ ಕ್ಷಣಕ್ಕೊಮ್ಮೆ ಮರಗಟ್ಟುವ ಕೈಕಾಲು. ಮೈಕೊರೆಯುವ ಚಳಿಯನ್ನೂ ಓಡಿಸಿ ಬಿಸಿ ಮುಟ್ಟಿಸುವ ಉಗ್ರರ ಭೀತಿ. ಹೀಗೆ ಎಲ್ಲವುದಕ್ಕೂ ಹೆದರುತ್ತಿದ್ದರೆ ಆ ಕಣಿವೆಯ ಸೌಂದರ್ಯ ಸವಿಯಲು ಸಾಧ್ಯವಿಲ್ಲ, ಅಲ್ಲವೇ?.

ಇವನ್ನೆಲ್ಲ ಅರಿತುಕೊಂಡೇ ನಾವು ಹಿಮ ನದಿಯ ಮೇಲೆ ಹೆಜ್ಜೆ ಹಾಕಲು ಹೊರಟಿದ್ದೆವು. ಬೆಂಗಳೂರಿನಿಂದ ಆರಂಭವಾದ ನಮ್ಮ ಜರ್ನಿ ಲೇಹ್ ವಿಮಾನ ನಿಲ್ದಾಣಕ್ಕೆ ತಲುಪಿತು. ಅಲ್ಲಿಂದ 80 ಕಿಲೋಮೀಟರ್ ದೂರದ ಲಮಾಯೂರ್ ಕಡೆಗೆ ಬಸ್‍ನಲ್ಲಿ ಪ್ರಯಾಣ ಮಾಡಿದೆವು. ನೋಂದಣಿ, ವೈದ್ಯಕೀಯ ಪರೀಕ್ಷೆಯಂತಹ ಪ್ರಕ್ರಿಯೆ ಮುಗಿಸಿದ ಬಳಿಕ ಚಾದರ್ ಟ್ರೆಕ್ ಶುರುವಾಯಿತು.

ಬಹುದಿನಗಳ ಕನಸು

ನಮ್ಮ ಈ ಪಯಣವನ್ನು ಬರೀ ಟ್ರೆಕ್ಕಿಂಗ್ ಎಂದರೆ ರುಚಿಸುವುದಿಲ್ಲ. ಇದು ಟ್ರೆಕ್ಕಿಂಗ್ ಮೀರಿದ ಸಾಹಸದ ಪಯಣ. ಏಕೆಂದರೆ, ನೋಡ ನೋಡುತ್ತಿದ್ದಂತೆ ಹರಿಯುವ ನದಿಯು ನೀರ್ಗಲ್ಲಿನ ಚಾದರವಾಗಿ ರೂಪಾಂತರಗೊಳ್ಳುತ್ತದೆ. ಆ ವಿದ್ಯಮಾನವೇ ಒಂದು ಸೋಜಿಗ. ಇಂಥ ಹಿಮನದಿಯ ಮೇಲೆ ನಾಜೂಕಾಗಿ ಹೆಜ್ಜೆಯಿರಿಸುವುದು ಅನಂತ ಅನುಭವದ ಗುಚ್ಛ. ನಾವು ಹೆಜ್ಜೆ ಹಾಕಲು ಹೊರಟಿದ್ದು, ಇಲ್ಲಿನ ಹಿಮವಾಗುವ ಜಾಂಸ್ಕಾರ್‌ ನದಿಯ ಮೇಲೆ.

ಇದು ಬಹಳ ವರ್ಷಗಳ ಕನಸು. ಅದು ನನಸಾಗಿದ್ದು ಈ ವರ್ಷ. ಜಾಂಸ್ಕಾರ್ ನದಿ ವರ್ಷದಲ್ಲಿ ಒಮ್ಮೆ ಮಾತ್ರ ಹೆಪ್ಪುಗಟ್ಟಿ ಕಲ್ಲಿನಂತಾಗುತ್ತದೆ. ಅದರ ಮೇಲೆ ನಡೆಯಲು ದೇಶದಾದ್ಯಂತ ಚಾರಣಪ್ರಿಯರು ಇಲ್ಲಿಗೆ ಲಗ್ಗೆಯಿಡುತ್ತಾರೆ.

ನಡಿಗೆ ಆರಂಭ

ನಾವು ಹಿಮನದಿ ಮೇಲೆ ನಡಿಗೆ ಆರಂಭಿಸಿದಾಗ ಮೊದಲಿಗೆ ಸಿಕ್ಕಿದ್ದು ಚಿಲ್ಲಿಂಗ್ ಎಂಬ ಊರು. ಊರೆಂದರೆ ನಾಲ್ಕೈದು ಮನೆಗಳಿರುವ ಜಾಗ. ಟ್ರೆಕ್ಕಿಂಗ್‍ಗೆ ಬರುವ ಪ್ರವಾಸಿಗರಿಗೆ ನೆರವಾಗುವ ಪೋಟರ್ಸ್‌ಗಳೇ ಇಲ್ಲಿನ ನಿವಾಸಿಗಳು. ವರ್ಷಕ್ಕೊಮ್ಮೆ ಚಾದರ ಚಾರಣಕ್ಕಾಗಿ ಬರುವ ಪ್ರವಾಸಿಗರೇ ಇವರ ಆದಾಯದ ಮೂಲ. ಈ ಹಳ್ಳಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರು. ಗುಹೆಗಳಂತಹ ಮನೆ, ಟೆಂಟ್‌ಗಳೇ ಇವರ ಸೂರು.

ಬೆಂಗಳೂರಿನಿಂದ ಹೋಗಿದ್ದವರು ನಾವು ನಾಲ್ಕು ಮಂದಿ. ಅಲ್ಲಿಂದ ಏಳು ಮಂದಿ ಜತೆಯಾದರು. ನಮ್ಮ ಈ 11 ಮಂದಿ ತಂಡವನ್ನು ಮುನ್ನಡೆಸುತ್ತಿದ್ದುದು 8 ಜನರಿದ್ದ ಪೋಟರ್ಸ್‍ಗಳ ತಂಡ. ಪೋಟರ್ಸ್‌ಗಳದ್ದೂ ಅಸೀಮ ಶಕ್ತಿ. ಪ್ರವಾಸಿಗರ ಎಲ್ಲ ಸಾಮಗ್ರಿಗಳು, ಟೆಂಟ್, ಆಹಾರ ಸಾಮಗ್ರಿಗಳನ್ನು ಅವರು ಹೊತ್ತು ನಡೆಯುತ್ತಾರೆ. ಎಂಟು ಜನರ ತಂಡವು ಕೆಲಸವನ್ನು ಹಂಚಿಕೊಳ್ಳುತ್ತದೆ. ಇವರಿಗೆ ಪ್ರಥಮ ಚಿಕಿತ್ಸೆ ತರಬೇತಿಯೂ ಇರುತ್ತದೆ. ದಾರಿಯಲ್ಲಿ ಮೆಡಿಕಲ್ ಕ್ಯಾಂಪ್‌ಗಳಿರುತ್ತವೆ. ಅಲ್ಲಿ ಆಮ್ಲಜನಕದ ಸಿಲಿಂಡರ್‌ ಕೂಡ ಲಭ್ಯವಿರುತ್ತದೆ. ತೀರಾ ತುರ್ತು ಇದ್ದರೆ ಸ್ಯಾಟಲೈಟ್ ಫೋನ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ ಹೆಲಿಕಾಪ್ಟರ್‌ಗೆ ಮನವಿ ಸಲ್ಲಿಸುತ್ತಾರೆ.

ಕನ್ನಡಿಗರೇ ಹೆಚ್ಚಿದ್ದರು

ನಾವು ಚಾರಣ ಮಾಡುತ್ತಿದ್ದಾಗ, ನಮ್ಮಂತೆಯೇ ಟ್ರೆಕ್ಕಿಂಗ್‍ಗೆ ಬಂದಿದ್ದ ತಂಡಗಳು ದಾರಿಯುದ್ದಕ್ಕೂ ಸಿಗುತ್ತಿದ್ದವು. ಈ ಬಾರಿ ಕನ್ನಡದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಈ ಚಾರಣದಲ್ಲಿ ಬೆಳಗಿನ ತಿಂಡಿಗೆ ಮ್ಯಾಗಿ, ಬ್ಲ್ಯಾಕ್ ಟೀ, ಬ್ರೆಡ್ ಜಾಮ್. ಮಧ್ಯಾಹ್ನದ ಊಟಕ್ಕೆ ಪಾಸ್ತಾ. ಸಂಜೆ ಹೊತ್ತಿಗೆ ಬಿಸಿಬಿಸಿ ಸೂಪ್. ರಾತ್ರಿಗೆ ರೋಟಿ, ದಾಲ್ ಮತ್ತು ಅನ್ನ. ರೋಟಿಯನ್ನು ಬೇಯಿಸುತ್ತಿದ್ದಂತೆ ಅದು ಗಟ್ಟಿಯಾಗಿ ಬಿಡುತ್ತಿತ್ತು. ಅಲ್ಲಿ ಅಷ್ಟು ಚಳಿ. ಮೊಬೈಲ್ ಕೂಡಾ ಸ್ವಿಚ್‍ಆಫ್ ಆಗಿಬಿಡುತ್ತದೆ.

ರಾತ್ರಿ ವೇಳೆ ಸಂಗಡಿಗರ ಜೊತೆ ಒಂದಿಷ್ಟು ವಿಚಾರ ವಿನಿಮಯ. ಹಾಡು, ಮನರಂಜನೆ. ಬಳಿಕ ನಿದ್ದೆ. ಆಯೋಜಕರು ಟೆಂಟ್ ಒಳಗಡೆ ಮಲಗಲೆಂದೇ ಮಾಡಿರುವ ಸ್ಲೀಪಿಂಗ್ ಬ್ಯಾಗ್ ಪೂರೈಸುತ್ತಾರೆ. ಇದರಲ್ಲಿ ಎರಡು ಪದರಗಳಿದ್ದು, ಜಿಪ್ ಹಾಕಿಕೊಂಡು ಮಲಗಬೇಕು. ಆಗ ನಮ್ಮ ಉಸಿರೇ ನಮ್ಮನ್ನು ಬೆಚ್ಚಗಾಗಿಸುತ್ತದೆ. 

15 ದಿನಗಳ ಟ್ರೆಕ್ಕಿಂಗ್

ಇದು 15 ದಿನಗಳ ಟ್ರೆಕ್ಕಿಂಗ್‌. ಚಿಲ್ಲಿಂಗ್‍ನಿಂದ ಟಿಬ್ ಕೇವ್‍ವರೆಗೆ ಹೋಗಿ ಬರಲಿಕ್ಕೆ ಐದು ದಿನ ಹಿಡಿಯುತ್ತದೆ. ನಮಗೆ ನೇಕರ್ಸ್‌ನಿಂದ ಮುಂದೆ ಹೋಗಲಾಗಲಿಲ್ಲ. ಒಂದು ದಿನ ಕಾದರೂ ನದಿಯು ಹಿಮಗಟ್ಟಲಿಲ್ಲ. ಆ ವೇಳೆಗೆ ತೀವ್ರ ಚಳಿಯಿಂದಾಗಿ ನನ್ನ ಕೈಕಾಲು ಜೋಮು ಹಿಡಿದವು. ತಂಡದಲ್ಲಿದ್ದ ಮಹಿಳೆಯೊಬ್ಬರು ಜಾರಿಬಿದ್ದರು. ಹೀಗಾಗಿ ನೇಕರ್ಸ್‌ನಿಂದ ಅನಿವಾರ್ಯವಾಗಿ ವಾಪಸಾಗಬೇಕಾಯಿತು. ನೀರ್ಗಲ್ಲಿನ ಜೊತೆ ಕಳೆದ ಆ ಐದು ದಿನಗಳ ನೆನಪಿನ ಬುತ್ತಿಯ ಜೊತೆ ಬೆಂಗಳೂರಿನ ವಿಮಾನ ಹತ್ತಿದರೂ ಮನವೆಲ್ಲಾ ಕಾಶ್ಮೀರದಲ್ಲೇ ಇದ್ದಂತಿತ್ತು. ಥ್ಯಾಂಕ್ಸ್ ಟು ಚಾದರ್ ಟ್ರೆಕ್.  ಮಾಹಿತಿಗೆ: http://ridesntreks.com

ಫಿಟ್ ಇದ್ದರೆ ಟ್ರೆಕ್!

ಚಳಿಗಾಲದ ಚಾದರ್ ಟ್ರೆಕ್‍ಗೆ ಭಾರಿ ಪೂರ್ವಸಿದ್ಧತೆ ಬೇಕು. ಒಟ್ಟು 15 ದಿನಗಳ ಈ ಚಾರಣ ಆರಂಭಕ್ಕೆ ಮೂರು ದಿನ ಮೊದಲೇ ಲಡಾಕ್‍ ತಲುಪಬೇಕು. ಮೈನಸ್ ಉಷ್ಣಾಂಶಕ್ಕೆ ದೇಹ ಒಗ್ಗಿಕೊಳ್ಳಬೇಕು. ಹೊರಡುವ ಮುನ್ನ ಅಲ್ಲಿ ಒಂದಿಷ್ಟು ವ್ಯಾಯಾಮ ಮಾಡಿಸುತ್ತಾರೆ. ಜೊತೆಗೆ ರಕ್ತದೊತ್ತಡ, ಆಮ್ಲಜನಕ, ಪಲ್ಸ್ ರೇಟ್ ಮತ್ತಿತರ ಪರೀಕ್ಷೆಗಳಲ್ಲಿ ಪಾಸಾದರೆ ಮಾತ್ರ ಟ್ರೆಕ್ಕಿಂಗ್‍ಗೆ ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಹಿಮ ಕರಗಿತು ಎಂದಾದರೆ ಅನಿವಾರ್ಯವಾಗಿ ವಾಪಸಾಗಲೇಬೇಕು. ಟ್ರೆಕ್ಕಿಂಗ್‍ಗೆ ತೆರಳುವ ಎಲ್ಲರಿಗೂ ವಿಮೆ ಇರುತ್ತದೆ.

ಮುನ್ನೆಚ್ಚರಿಕೆಗಳು

ಚಾದರ್ ಚಾರಣದ ವೇಳೆ ಪ್ರವಾಸಿಗರಿಗೆ ಹೈಪೊಥರ್ಮಿಯಾ ಆಗುವ ಸಾಧ್ಯತೆ ಹೆಚ್ಚು. ನಡೆದಾಡುವಾಗ ಒಂದು ವೇಳೆ ಹಿಮದ ಪದರ ಒಡೆದು ಕಾಲು ನೀರೊಳಗೆ ಸಿಲುಕುವ ಸಾಧ್ಯತೆ ಹೆಚ್ಚು. ಹೀಗಾದಾಗ ತಕ್ಷಣ ಅವರನ್ನು ಮೇಲಕ್ಕೆ ಎತ್ತಬೇಕು. ಒಂದು ವೇಳೆ ದೇಹಕ್ಕೆ ಶೀತಭರಿತ ನೀರು ತಾಗಿದರೆ ಅವರು ಪ್ರಜ್ಞೆ ತಪ್ಪುವ ಅಪಾಯವಿರುತ್ತದೆ. –50 ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ನೀರು ದೇಹವನ್ನು ಅರೆಗಳಿಗೆಯಲ್ಲಿ ನಜ್ಜುಗುಜ್ಜಾಗಿಸುತ್ತದೆ. ತಕ್ಷಣ ಅವರ ಬಟ್ಟೆ ಬದಲಿಸಿ ಪ್ರಥಮ ಚಿಕಿತ್ಸೆ ನೀಡಲೇಬೇಕು.

ಮತ್ತೊಂದು ಅಪಾಯವೆಂದರೆ ಜಾರುವಿಕೆ. ಹಿಮನದಿ ಮೇಲೆ ಆಯತಪ್ಪಿ ಬಿದ್ದರೆ ಮೂಳೆ ಮುರಿಯುವ ಸಾಧ್ಯತೆ ಹೆಚ್ಚು. ಪ್ರತಿ ಕ್ಷಣವೂ ಎಚ್ಚರದಿಂದ ಇರಲೇಬೇಕು. ಚಳಿ ಅತಿಯಾದರೆ ಕೈಕಾಲು ಜೋಮು ಹಿಡಿದು ಪಾರ್ಶ್ವವಾಯು ಆಗುವ ಅಪಾಯವಿರುತ್ತದೆ. ಇದಕ್ಕೆ ಪ್ರಾಸ್ಟ್‌ಬಿಟ್ ಎನ್ನುತ್ತಾರೆ. ನಿಯಮಿತವಾಗಿ ನಡೆಯುವುದು, ವ್ಯಾಯಾಮ ಮಾಡುವುದು, ಬೆಂಕಿಯಿಂದ ಮೈಬಿಸಿ ಮಾಡಿಕೊಳ್ಳುವ ವಿಧಾನಗಳನ್ನು ಅನುಸರಿಸಬೇಕು. 

ಹೀಗಿರುತ್ತೆ ಚಾದರ್ ಟ್ರೆಕ್...

* ಡಿಸೆಂಬರ್-ಜನವರಿ ತಿಂಗಳ ಅವಧಿಯಲ್ಲಿ ಮಾತ್ರ ಈ ಚಾರಣ ಮಾಡಬಹುದು.

* 18 ರಿಂದ 50 ವರ್ಷದೊಳಗಿನವರಿಗೆ ಚಾರಣಕ್ಕೆ ಅವಕಾಶ

* ಚಳಿ ತಾಳಿಕೊಳ್ಳುವ ಗುಣ ಇರುವವರು ಚಾದರ್ ಟ್ರೆಕ್ ಆಯ್ದುಕೊಳ್ಳಬಹುದು

* ದೇಹ ಸಂಪೂರ್ಣ ಫಿಟ್ ಆಗಿದ್ದು, ಆರೋಗ್ಯದಿಂದ ಕೂಡಿರಬೇಕು

* ಹೋಗುವ ಮುನ್ನ ಹೆಚ್ಚು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು, ನಿಯಮಿತ ವ್ಯಾಯಾಮ ಮಾಡುತ್ತಿರಬೇಕು.

* ಸಮಚಿತ್ತದ ಮನಸ್ಥಿತಿಯವರಾಗಿರಬೇಕು. ಯಾವುದೇ ಭೀತಿಗೆ ಒಳಗಾಗದಂತೆ ಮನಸ್ಸು ಗಟ್ಟಿಗೊಳಿಸಬೇಕು

* ಚಾದರ್ ಟ್ರೆಕ್ ಪ್ರವಾಸ ಮಾಡಿದವರ ಅನುಭವಗಳನ್ನು ಮೊದಲೇ ಓದಿಕೊಂಡಿರಬೇಕು

* ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಉಣ್ಣೆಯ ಬಟ್ಟೆ, ಕಾಲುಚೀಲ ಬೇಕೇಬೇಕು. ಇವು ಅಲ್ಲಿಯೇ ಲಭ್ಯವಿವೆ.

* ಅಗತ್ಯವಾಗಿ ಬೇಕಿರುವ ಔಷಧಿ, ಎಲೆಕ್ಟ್ರೋಲೈಟ್ ಪೌಡರ್, ಒಣಹಣ್ಣು ತೆಗೆದುಕೊಂಡು ಹೋದರೆ ಉತ್ತಮ.

* ಇಲ್ಲಿ ಮದ್ಯಪಾನ, ಧೂಮಪಾನ ನಿಷಿದ್ಧ. ಮಾಡಿದರೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !