ಖೇಲ್‌ ಖೇಲ್‌ ಮೇ... ಟ್ಯೂಷನ್‌

7
ಪುರವಂಕರ– ವೊಕಾರ್ಟ್‌ ಸಹಯೋಗದ ಕಾರ್ಯಕ್ರಮ

ಖೇಲ್‌ ಖೇಲ್‌ ಮೇ... ಟ್ಯೂಷನ್‌

Published:
Updated:
Deccan Herald

ಗಲ್ಲಿಗೊಂದರಂತೆ ಖಾಸಗಿ ಶಾಲೆಗಳಿರುವ ನಗರದಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗುವವರು ಕಡು ಬಡವರು ಮತ್ತು ಸ್ಲಂಗಳಲ್ಲಿ ವಾಸಿಸುವ ಮಕ್ಕಳಷ್ಟೇ. ಈ ಮಕ್ಕಳ ಬಗ್ಗೆ ಎಲ್ಲರಿಗೂ ತಿರಸ್ಕಾರ. ಕೆಲವು ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳಿದ್ದಾರೆ. ಆ ಬೆರಳೆಣಿಕೆಯ ಮಕ್ಕಳಿಗಾದರೂ ಸರಿಯಾದ ಶಿಕ್ಷಣ ಸಿಗುತ್ತಿದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ‘ಈ ಮಕ್ಕಳು ಓದಲ್ಲ, ಬರಿಯಲ್ಲ. ವಿದ್ಯೆ ತಲೆಗೆ ಹತ್ತಲ್ಲ’ ಎಂಬುದು ಶಿಕ್ಷಕರ ಸಮಜಾಯಿಷಿಯಷ್ಟೇ. ಈ ಮಕ್ಕಳೂ ಎಲ್ಲ ಮಕ್ಕಳಂತೆ ಬುದ್ಧಿವಂತರು ಎನ್ನುತ್ತಾರೆ ‘ಎಜು ರಿಕ್ರಿಯೇಷನ್‌ ಸೆಂಟರ್‌’ನ ರೂವಾರಿಗಳು.  

ಶಾಲೆಯಿಂದ ಮನೆಗೆ ಮರಳಿದ ಬಳಿಕ ಸ್ಲಂಗಳಲ್ಲಿ ವಾಸಿಸುವ ಮಕ್ಕಳು ಇನ್ನೇನು ಮಾಡುತ್ತಾರೆ! ರಸ್ತೆಯಲ್ಲೇ ಆಡುತ್ತಾ ಕಾಲ ಕಳೆಯುತ್ತಾರೆ. ಹುಡುಗರಾದರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ಹಾಗೂ ಮಾದಕ ವ್ಯಸನಿಗಳಾಗುವ ಸಾಧ್ಯತೆಯೇ ಹೆಚ್ಚು. ಹೆಣ್ಣುಮಕ್ಕಳು ಲೈಂಗಿಕ ಶೋಷಣೆಯಂಥ ಸಮಸ್ಯೆಗಳಿಗೆ ಸಿಲುಕುತ್ತಾರೆ. ಅವರು ಸಮಾಜ ಘಾತುಕರಾಗಿ ಬದಲಾಗುವ ಮುನ್ನವೇ ಅವರಲ್ಲೊಂದು ಸುಂದರ ಬದುಕಿನ ಕನಸು ತುಂಬುವುದು, ಶುಚಿತ್ವ, ಸಾಮಾಜಿಕ ನಡವಳಿಕೆಗಳ ಬಗ್ಗೆ ತಿಳಿ ಹೇಳುವ ಉದ್ದೇಶದಿಂದ ‘ಪುರವಂಕರ’ ಮತ್ತು ‘ವೊಕಾರ್ಟ್‌ ಫೌಂಡೇಷನ್’ ಜೊತೆಗೂಡಿ ಎಜು ರಿಕ್ರಿಯೇಷನ್‌ ಸೆಂಟರ್‌ನ ಅಡಿ, ಹಲಸೂರು ಮತ್ತು ಶ್ರೀರಾಂಪುರದ ಸರ್ಕಾರಿ ಶಾಲಾ ಮಕ್ಕಳಿಗೆ ಸಂಜೆ 4.30ರಿಂದ 6.30ವರೆಗೆ ಟ್ಯೂಷನ್‌ ನಡೆಸುತ್ತಿದೆ.

ಖೇಲ್‌ ಖೇಲ್‌ ಮೆ...
ಈ ಯೋಜನೆಯ ಹೆಸರು ‘ಖೇಲ್ ಖೇಲ್‌ ಮೆ’. ಹೆಸರಿನಂತೆಯೇ ಇಲ್ಲಿ ಆಡುತ್ತಾಡುತ್ತಾ ಮಕ್ಕಳು ಅಕ್ಷರ ಕಲಿಯುತ್ತಿದ್ದಾರೆ. ಮಕ್ಕಳೇ ಕಲಿಕೆಗೆ ಸಂಬಂಧಿಸಿದ ಚಾರ್ಟ್‌ಗಳನ್ನು ಸಿದ್ಧಪಡಿಸುತ್ತಾರೆ. ಚಿತ್ರಕಲೆ, ಸಂಗೀತ, ಕತೆ ಹೇಳುವುದು, ಮಗ್ಗಿ ಕಂಠಪಾಠ ಮುಂತಾದ ಚಟುವಟಿಕೆ ನಡೆಸಲಾಗುತ್ತಿದೆ. ಸಂಜೆ ಬೀದಿಯಲ್ಲಿ ವ್ಯರ್ಥವಾಗಿ ಕಾಲ ಕಳೆಯುತ್ತಿದ್ದ ಮಕ್ಕಳು ಈಗ ಆಡುತ್ತಾಡುತ್ತಾ ಜೀವನದ ಪಾಠ ಕಲಿಯುತ್ತಿದ್ದಾರೆ.

ಸುಮಾರು ನೂರರಿಂದ ನೂರೈವತ್ತು ಮಕ್ಕಳು ಹಲಸೂರಿನ ಎರಡು ಕೇಂದ್ರ ಮತ್ತು ಶ್ರೀರಾಂಪುರದ ಒಂದು ಕೇಂದ್ರದಲ್ಲಿ ಟ್ಯೂಷನ್‌ ಪಡೆಯುತ್ತಿದ್ದಾರೆ. ನಾಲ್ಕು ವರ್ಷದಿಂದ ಹನ್ನೆರಡು ವರ್ಷದೊಳಗಿನ ಮಕ್ಕಳು ಇಲ್ಲಿದ್ದಾರೆ. ಟ್ಯೂಷನ್‌ ಎಂದ ಕೂಡಲೇ ಯಥಾಪ್ರಕಾರ ಶಾಲಾ ಪಠ್ಯ ಬೋಧನೆ ಎಂಬ ಭಾವನೆ ಬರುತ್ತದೆ. ಆದರೆ, ಇಲ್ಲಿನ ಮಕ್ಕಳಿಗೆ ಜೀವನ ಪಾಠ ಕಲಿಸಲಾಗುತ್ತದೆ. 

‘ಟ್ಯೂಷನ್‌ಗೆ ಬರುವ ಮಕ್ಕಳಿಗೆ ಮೊದಲಿನಿಂದ ಎಲ್ಲವನ್ನೂ ಹೇಳಿಕೊಡಬೇಕಾಗಿದೆ. ಅಕ್ಷರ ಜ್ಞಾನದ ಜೊತೆಗೆ ಸಮಾಜದಲ್ಲಿ ಎಲ್ಲರ ಜೊತೆ ಬೆರೆಯುವಾಗ ಇರಬೇಕಾದ ಕನಿಷ್ಠ ಸಂವಹನ ಕೌಶಲ ಕಲಿಸಲಾಗುತ್ತದೆ. ಕನ್ನಡ, ತಮಿಳು, ತೆಲುಗು ಹೀಗೆ ಬೇರೆ ಬೇರೆ ಮಾತೃಭಾಷೆಯ ಮಕ್ಕಳಿದ್ದಾರೆ. ಬೇರೆ ಬೇರೆ ವಯಸ್ಸಿನವರಿದ್ದಾರೆ. ಅವರೆಲ್ಲ ಶಾಲೆಗೆ ಹೋಗುತ್ತಿದ್ದರೂ ಅವರ ಜ್ಞಾನಮಟ್ಟ ಬಹಳ ಕಡಿಮೆ. ಕೆಲವರಿಗೆ ಕನ್ನಡ ಅಕ್ಷರ ಮಾಲೆಗಳೇ ಬರೆಯಲು ಬರುವುದಿಲ್ಲ. ಕನ್ನಡ ಅಕ್ಷರದ ಜೊತೆ ಇಂಗ್ಲಿಷ್‌ ಅಕ್ಷರ ಹಾಗೂ ಪದಗಳನ್ನೂ ಕಲಿಸುತ್ತಿದ್ದೇವೆ, ಇದು ಅವರ ಶಾಲಾ ಕಲಿಕೆಗೆ ನೆರವಾಗುತ್ತಿದೆ’ ಎಂದು ಇಲ್ಲಿನ ಶಿಕ್ಷಕಿ ಲಾವಣ್ಯ ಹೇಳುತ್ತಾರೆ.

ಲಾವಣ್ಯ ಶ್ರೀರಾಂಪುರದ ಖಾಸಗಿ ಶಾಲೆಯೊಂದರ ಶಿಕ್ಷಕಿ. ಶಾಲೆ ಬಿಟ್ಟ ನಂತರ ಸ್ಲಂ ಮಕ್ಕಳಿಗೆ ಪಾಠ ಮಾಡುತ್ತಾರೆ. ಪಠ್ಯೇತರ ಚಟುವಟಿಕೆ, ಹಾಡು, ಆಟ, ಚಿತ್ರಕಲೆ ಎಲ್ಲವನ್ನೂ ಒಬ್ಬರೇ ನಡೆಸುತ್ತಿದ್ದಾರೆ. ಬಿಬಿಎಂಪಿ ಕಟ್ಟಡವೊಂದರ ಕೊಠಡಿಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲಿನ ಶಾಲೆಗಳಿಗಿಂತ ಹೆಚ್ಚು ಮಕ್ಕಳು ಈ ಟ್ಯೂಷನ್‌ ಕೇಂದ್ರಕ್ಕೆ ಬರುತ್ತಿದ್ದಾರೆ ಎಂಬುದೇ ಇವರಿಗೆ ಖುಷಿಯ ವಿಚಾರ.

‘ಇಲ್ಲಿ ಹೋಮ್‌ ವರ್ಕ್‌ ಮಾಡಿಸುವುದಿಲ್ಲ. ಶಾಲಾ ಪಠ್ಯಗಳನ್ನು ಬೋಧಿಸುವುದಿಲ್ಲ. ವಿವಿಧ ವಯೋಮಾನದ ಮಕ್ಕಳನ್ನು ಒಟ್ಟಿಗೆ ಕೂರಿಸಿ ಶಾಲಾ ಪಠ್ಯಗಳನ್ನು ಅರ್ಥ ಮಾಡಿಕೊಳ್ಳಲು ಪೂರಕವಾಗುವ ಚಟುವಟಿಕೆಗಳನ್ನು ಮಾಡಿಸುತ್ತೇವೆ. ಸಂಜೆಯ ಎರಡು ಗಂಟೆಯ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವಂತೆ ಮಾಡಿದ್ದೇವೆ. ಇದರಲ್ಲಿ ಶಾಲೆ ಬಿಟ್ಟ ಮಕ್ಕಳೂ ಇದ್ದಾರೆ. ಮುಂದೆ ಅವರನ್ನು ಶಾಲೆಗಳಿಗೆ ಸೇರಿಸುವ ಪ್ರಯತ್ನ ನಮ್ಮದು. ಸಾಧ್ಯವಾದರೆ ಮುಕ್ತ ಶಾಲೆಯ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಂತೆ ಮಾಡುವ ಯೋಚನೆ ನಮ್ಮದು’ ಎನ್ನುತ್ತಾರೆ ವೊಕಾರ್ಟ್‌ ಫೌಂಡೇಷನ್‌ನ ಪ್ರತಿನಿಧಿ ಐಶ್ವರ್ಯಾ.

 ಇಡೀ ಬೆಂಗಳೂರಿಗೆ ವಿಸ್ತರಿಸುವ ಗುರಿ
‘ಬೆಂಗಳೂರಿನ ಬಹುತೇಕ ಸರ್ಕಾರಿ ಶಾಲೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಒಂಬತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ಸರ್ಕಾರದ ನಿಯಮದ ಪರಿಣಾಮವಾಗಿ ಮಕ್ಕಳು ಪಾಸಾಗುತ್ತಾ ಒಂಬತ್ತನೇ ತರಗತಿಗೆ ಬಂದಿರುತ್ತಾರೆ. ಆದರೆ, ಕನಿಷ್ಠ ಅಕ್ಷರ ಜ್ಞಾನವೇ ಇರುವುದಿಲ್ಲ. ಮುಂದೆ ಅವರು ಶಿಕ್ಷಣ ಮುಂದುವರಿಸದೇ ಬಾಲಕಾರ್ಮಿಕರಾಗಿಯೋ, ದುಶ್ಚಟಗಳಿಗೆ ಬಲಿಯಾಗುತ್ತಾರೆ. ಹೆಣ್ಣುಮಕ್ಕಳನ್ನು ಮನೆಕೆಲಸಕ್ಕೆ ಹಚ್ಚುತ್ತಾರೆ. ಇವರನ್ನು ಸ್ಲಂಗಳಿಂದ ಆಚೆ ತರಬೇಕಿದ್ದರೆ ಉತ್ತಮ ಶಿಕ್ಷಣ ಸಿಗಬೇಕು. ಈ ಉದ್ದೇಶದಿಂದ ಪುರವಂಕರದ ಜೊತೆಗೂಡಿ ಹಲಸೂರು ಮತ್ತು ಶ್ರೀರಾಮಪುರದಲ್ಲಿ ‘ಖೇಲ್‌ ಖೇಲ್‌ ಮೆ’ ಹೆಸರಿನಲ್ಲಿ ಸ್ಲಂ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಬೆಂಗಳೂರಿನ ಇನ್ನೂ ಹಲವು ಪ್ರದೇಶಗಳಲ್ಲಿ ಈ ಕಾರ್ಯಕ್ರಮ ವಿಸ್ತರಿಸುವ ಗುರಿ ಇದೆ. ಮುಂಬೈನ ಸ್ಲಂನಲ್ಲೂ ವೊಕಾರ್ಟ್‌ ಈ ಕಾರ್ಯಕ್ರಮ ನಡೆಸುತ್ತಿದೆ’ ಎಂದು ವೊಕಾರ್ಟ್‌ ಫೌಂಡೇಷನ್‌ ಪ್ರತಿನಿಧಿ ಐಶ್ವರ್ಯಾ ಕೃಷ್ಣಮೂರ್ತಿ ವಿವರಿಸುತ್ತಾರೆ.

ಸ್ಲಂ ಮಕ್ಕಳೂ ಬುದ್ಧಿವಂತರು
‘ಸ್ಲಂ ಮಕ್ಕಳಾದರೂ ಎಲ್ಲ ಮಕ್ಕಳಂತೆ ಚುರುಕಾಗಿದ್ದಾರೆ. ಪಾಠದ ಜೊತೆಗೆ ಚಿತ್ರಕಲೆ, ಸಂಗೀತ, ನೃತ್ಯ ಮುಂತಾದ ಚಟುವಟಿಕೆಗಳಲ್ಲಿಯೂ ಆಸಕ್ತಿ ತೋರುತ್ತಿದ್ದಾರೆ. ಆರಂಭದಲ್ಲಿ ಅವರಲ್ಲಿದ್ದ ನಾಚಿಕೆ, ಅಂಜಿಕೆ ಈಗ ದೂರವಾಗಿದೆ. ಹೇಳಿಕೊಟ್ಟದ್ದನ್ನು ಬಹಳ ಬೇಗ ಕಲಿಯುತ್ತಿದ್ದಾರೆ. ಇಂಗ್ಲಿಷ್‌ ಕಲಿಯುತ್ತಿದ್ದಾರೆ. ಸಂಜೆ ತರಗತಿಯ ಬೀಗ ತೆಗೆಯುವ ಮುನ್ನವೇ ಮಕ್ಕಳು ಹಾಜರಾಗಿರುತ್ತಾರೆ. ಮಕ್ಕಳ ಚಟುವಟಿಕೆ ಬಗ್ಗೆ ಪೋಷಕರಿಗೂ ತೃಪ್ತಿ ಇದೆ’ ಎನ್ನುತ್ತಾರೆ ಶಿಕ್ಷಕಿ ಲಾವಣ್ಯ.

ಜೀವನ ಮೌಲ್ಯ
ಖೇಲ್‌ ಖೇಲ್‌ ಮೆ ಯೋಜನೆ ದೇಶದ 30 ಕೇಂದ್ರಗಳಲ್ಲಿ ಚಾಲ್ತಿಯಲ್ಲಿದೆ. ವರ್ಷದಲ್ಲಿ ಸುಮಾರು 2000 ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಬೆಂಗಳೂರಿನ 3ಕೇಂದ್ರಗಳಲ್ಲಿ ಸುಮಾರು 100 ಮಕ್ಕಳಿದ್ದಾರೆ. ಸತ್ಯ, ಸಹಕಾರ, ಮಾನವತೆ, ಪ್ರೀತಿ, ತಾಳ್ಮೆ, ಕೃತಜ್ಞತೆ, ದಾನ ಮುಂತಾದ ಜೀವನ ಮೌಲ್ಯಗಳನ್ನು ಹೇಳಿಕೊಡಲಾಗುತ್ತದೆ ಎನ್ನುತ್ತಾರೆ ಪರವಂಕರದ ನಿರ್ದೇಶಕಿ ಅಮಂದ ಪುರವಂಕರ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !