ಆಸ್ಪತ್ರೆ ನೌಕರ ಸೇರಿ ಇಬ್ಬರ ಸಾವು

7

ಆಸ್ಪತ್ರೆ ನೌಕರ ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು:‌ ನಗರದ ಎರಡು ಕಡೆಗಳಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 

ಪೀಣ್ಯದ ಇಎಸ್‌ಐ ಆಸ್ಪತ್ರೆಯ ನೌಕರ ಎಚ್‌.ಜಿ.ಸಿದ್ದೇಗೌಡ (32) ಹಾಗೂ ಯಲಹಂಕ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್ (ಎಂಇಎಸ್) ಕೇಂದ್ರದ ಗುತ್ತಿಗೆ ನೌಕರ ಮೋಹನ್‌ಕುಮಾರ್‌ (59) ಮೃತರು.

ಕುಣಿಗಲ್‌ನ ಸಿದ್ದೇಗೌಡ, ನಗರದಲ್ಲಿರುವ ತಂಗಿಯ ಮನೆಯಲ್ಲಿ ವಾಸವಿದ್ದರು. ಬೆಳಿಗ್ಗೆ ಕೆಲಸಕ್ಕೆಂದು ಬೈಕ್‌ನಲ್ಲಿ ಹೊರಟಿದ್ದರು. ಗೋರಗುಂಟೆಪಾಳ್ಯ ವೃತ್ತದಲ್ಲಿ ಖಾಸಗಿ ಬಸ್‌, ಬೈಕ್‌ಗೆ ಗುದ್ದಿತ್ತು. ಕೆಳಗೆ ಬಿದ್ದ ಸಿದ್ದೇಗೌಡರ ತಲೆ ಮೇಲೆಯೇ ಬಸ್ಸಿನ ಚಕ್ರ ಹರಿದು ಹೋಗಿತ್ತು. ಅದರಿಂದಾಗಿ, ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದರು.

‘ಘಟನೆಗೆ ಬಸ್‌ ಚಾಲಕನ ನಿರ್ಲಕ್ಷ್ಯವೇ ಕಾರಣ. ಬಸ್ ಜಪ್ತಿ ಮಾಡಿ, ಚಾಲಕ ಜಗದೀಶ್ ಬುರಳಿ ಎಂಬಾತನನ್ನು ಬಂಧಿಸಲಾಗಿದೆ’ ಎಂದರು. 

ಗುದ್ದಿದ ವಾಹನ: ಯಲಹಂಕದ ವಾಯುನೆಲೆ ಬಳಿ ಅಪರಿಚಿತ ವಾಹನ ಗುದ್ದಿ ಮೋಹನ್‌ಕುಮಾರ್‌ ಮೃತಪಟ್ಟಿದ್ದಾರೆ. 

‘ಕೆ.ಜಿ.ಹಳ್ಳಿ ನಿವಾಸಿಯಾಗಿದ್ದ ಮೋಹನ್‌ಕುಮಾರ್, ಕೆಲಸಕ್ಕೆಂದು ಬೆಳಿಗ್ಗೆ ಸೈಕಲ್‌ನಲ್ಲಿ ಹೊರಟಿದ್ದರು. ರಸ್ತೆ ದಾಟುತ್ತಿದ್ದ ವೇಳೆ ಅವರಿಗೆ ಅಪರಿಚಿತ ವಾಹನ ಗುದ್ದಿತ್ತು. ಸ್ಥಳದಲ್ಲೇ ಮೃತಪಟ್ಟರು’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು. 

‘ಮೋಹನ್‌ಕುಮಾರ್‌, ನಿತ್ಯವೂ ಸೈಕಲ್‌ನಲ್ಲೇ ಕಚೇರಿಗೆ ಹೋಗುತ್ತಿದ್ದರು. ವಾಹನ ಯಾವುದೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದರು. 

ಪತಿ ಕಿರುಕುಳ ಆರೋಪ: ಗೃಹಿಣಿ ಆತ್ಮಹತ್ಯೆ

ನಾಯಂಡಹಳ್ಳಿಯಲ್ಲಿ ರಾಧಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಆನಂದ್‌ ಎಂಬುವರನ್ನು ರಾಧಾ ಮದುವೆಯಾಗಿದ್ದರು. ದಂಪತಿ ನಾಯಂಡಹಳ್ಳಿಯಲ್ಲಿ ವಾಸವಿತ್ತು. ಮನೆಯಲ್ಲೇ ರಾಧಾ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಬ್ಯಾಟರಾಯನಪುರ ಪೊಲೀಸರು ತಿಳಿಸಿದರು.

‘ರಾಧಾ ಸಾವಿಗೆ ಪತಿಯ ಕಿರುಕುಳವೇ ಕಾರಣವೆಂದು ಕುಟುಂಬದವರು ಆರೋಪಿಸುತ್ತಿದ್ದಾರೆ. ಅವರಿಂದ ದೂರು ಪಡೆಯಲಾಗಿದ್ದು, ತಲೆಮರೆಸಿಕೊಂಡಿರುವ ಪತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !