ಸೋಮವಾರ, ಮಾರ್ಚ್ 8, 2021
22 °C
ಬಂಡುಕೋರರಿಗೆ ಉದ್ಯೋಗ ಭದ್ರತೆ ಭರವಸೆ ನೀಡಿದ ಅಮೆರಿಕ

ಶಾಂತಿಪ್ರಕ್ರಿಯೆ: ತಾಲಿಬಾನ್‌ ಮನವೊಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಆಫ್ಗಾನಿಸ್ತಾನದ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಉದ್ಯೋಗ ಭದ್ರತೆ ನೀಡುವುದಾಗಿ ತಾಲಿಬಾನ್‌ ಬಂಡಕೋರರ ಮನವೊಲಿಕೆಯಲ್ಲಿ ಅಮೆರಿಕ ನಿರತವಾಗಿದೆ. 

ಅಮೆರಿಕ, ಪಾಕಿಸ್ತಾನ, ಚೀನಾ, ರಷ್ಯಾ ಸೇರಿದಂತೆ ವಿವಿಧ ದೇಶಗಳು ಆಫ್ಗನ್ ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ತಾಲಿಬಾನಿಗಳನ್ನು ಉತ್ತೇಜಿಸುತ್ತಿವೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಶಸ್ತ್ರಾಸ್ತ್ರ ತೊರೆದು ಬರುವ ಬಂಡುಕೋರರಿಗೆ ಪುನರ್ವಸತಿ ಕಲ್ಪಿಸುವ ವಿಸ್ತೃತ ಯೋಜನೆಯೊಂದನ್ನು ಅಮೆರಿಕದ ರಕ್ಷಣಾ ಇಲಾಖೆ ಸಿದ್ಧಪಡಿಸಿದೆ ಎಂದು ವರದಿಯಾಗಿದೆ. 

‘ತಾಲಿಬಾನ್‌ನ ಕೆಲವು ಸದಸ್ಯರು ಹೋರಾಟದ ಬಗ್ಗೆ ಅಸಹನೆ ಹೊಂದಿದ್ದು, ಶಸ್ತ್ರತ್ಯಾಗಕ್ಕೆ ಸಿದ್ಧರಿದ್ದಾರೆ. ಆದರೆ ತಮ್ಮ ಕುಟುಂಬದ ಸುರಕ್ಷತೆ ಬಗ್ಗೆ ಖಾತರಿಯಾದಲ್ಲಿ ಮತ್ತು ಕುಟುಂಬವನ್ನು ಸರಿದೂಗಿಸುವಷ್ಟು ಹಣ ಗಳಿಸುವ ಅವಕಾಶ ಸಿಕ್ಕಲ್ಲಿ ಮಾತ್ರ ಅವರು ಸಮಾಜಕ್ಕೆ ಮರು ಸೇರ್ಪಡೆಯಾಗುತ್ತಾರೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

ಭದ್ರತೆ ಕುರಿತ ಕಾಳಜಿ ಹಾಗೂ ಆಫ್ಗಾನಿಸ್ತಾನದ ನೆರೆಯ ದೇಶಗಳ ಹಿತದೃಷ್ಟಿಯಿಂದ ಸಿದ್ಧಪಡಿಸಿರುವ ಪ್ರಸ್ತಾವವನ್ನು ಅಮೆರಿಕ ಸಂಸತ್ತಿಗೆ ಪೆಂಟಗಾನ್ ಇದೇ ವಾರ ಕಳುಹಿಸಲಿದೆ. 

ಆಫ್ಗನ್‌ನಿಂದ ಸೇನೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದೆ. ಆದರೆ ಶಾಂತಿ ಪ್ರಕ್ರಿಯೆಯನ್ನು ಜಾರಿಗೊಳಿಸುವ ಕಾರಣ ಅಲ್ಪ ಪ್ರಮಾಣದ  ಸೇನೆಯನ್ನು ಅಲ್ಲೇ ಉಳಿಸಿಕೊಳ್ಳಬೇಕು ಎಂಬ ನಿಲುವನ್ನು ಪೆಂಟಗಾನ್ ವ್ಯಕ್ತಪಡಿಸಿದೆ. 

ಈ ನಿಟ್ಟಿನಲ್ಲಿ ಕಳೆದ 16 ತಿಂಗಳಿನಿಂದ ಅಮೆರಿಕ ಹಾಗೂ ಮಿತ್ರದೇಶಗಳು ಕಾರ್ಯಪ್ರವೃತ್ತವಾಗಿವೆ. ಇದರ ಫಲವಾಗಿ ಜೂನ್‌ನಲ್ಲಿ ಕದನವಿರಾಮ ಏರ್ಪಟ್ಟಿತ್ತು ಎಂದು ಪೆಂಟಗಾನ್ ಹೇಳಿಕೊಂಡಿದೆ. ಎರಡನೇ ಕದನ ವಿರಾಮ ಪ್ರಸ್ತಾವವನ್ನು ತಾಲಿಬಾನ್ ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಆದರೆ ಮಾತುಕತೆಗೆ ಉಗ್ರ ಸಂಘಟನೆಯ ಆಂತರಿಕ ಸಭೆಗಳಲ್ಲಿ ಒಲವು ವ್ಯಕ್ತವಾಗಿದೆ. 

ಮಾತುಕತೆ ಕಸರತ್ತು: 

ಈ ಮಧ್ಯೆ ಅಮೆರಿಕ ಹಾಗೂ ತಾಲಿಬಾನ್ ನಡುವೆ ಕೆಲವು ಸುತ್ತಿನ ಮಾತುಕತೆ ನಡೆದಿದೆ. ಆಫ್ಗನ್‌ ಬಂಡುಕೋರರ ರಾಜಕೀಯ ಕಚೇರಿ ಇರುವ ಕತಾರ್‌ನಲ್ಲಿ ಅಮೆರಿಕದ ಪ್ರತಿನಿಧಿ ಝಾಲ್ಮೆ ಖಲೀಲ್‌ಜಾದ್ ಅವರ ಜೊತೆ ತಾಲಿಬಾನ್ ಸದಸ್ಯರು ಚರ್ಚಿಸಿದ್ದಾರೆ. ಅಮೆರಿಕ ಹೂಡಿರುವ ದೀರ್ಘಕಾಲೀನ ಯುದ್ಧಕ್ಕೆ ಕೊನೆ ಹಾಡುವುದು ಹಾಗೂ ಶಾಂತಿ ಮಾತುಕತೆ ಮುಂದುವರಿಸುವುದು ಸಭೆಯ ಉದ್ದೇಶ.

ಖಲೀಲ್‌ಜಾದ್ ಅವರು ಕತಾರ್, ಯುಎಇನಲ್ಲಿ ನಿರಂತರವಾಗಿ ಸಭೆ ನಡೆಸಿದ್ದು, ನೆರೆಯ ದೇಶಗಳಾದ ಪಾಕಿಸ್ತಾನ ಹಾಗೂ ಭಾರತದಲ್ಲಿಯೂ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಸೋವಿಯತ್‌ಗೆ ಆಗಿದ್ದ ಗತಿ ಆಗುತ್ತದೆ: ತಾಲಿಬಾನ್

ಕಾಬೂಲ್ ವರದಿ: ಆಫ್ಗಾನಿಸ್ತಾನವನ್ನು ತೊರೆಯದಿದ್ದರೆ, 1980ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಆಗಿದ್ದ ಗತಿ ನಿಮಗೂ ಆಗುತ್ತದೆ ಎಂದು ಅಮೆರಿಕಕ್ಕೆ ತಾಲಿಬಾನ್ ಕಟುವಾಗಿ ಎಚ್ಚರಿಸಿದೆ.

ಆಫ್ಗನ್‌ನಿಂದ ಹೊರನಡೆದಿದ್ದ ಸೋವಿಯತ್, ತಾಲಿಬಾನ್ ವಿರುದ್ಧ ನಾಗರಿಕ ಯುದ್ಧದಲ್ಲಿ ತೊಡಗಿತ್ತು.

ಅಮೆರಿಕ ಹಾಗೂ ತಾಲಿಬಾನ್ ನಡುವಿನ ಸಂಬಂಧವು ಬಿಕ್ಕಟ್ಟಿನ ಬದಲಾಗಿ ಬಲಿಷ್ಠ ರಾಜತಾಂತ್ರಿಕ ನೆಲೆಗಟ್ಟಿನ ಮೇಲೆ ರೂಪುಗೊಳ್ಳಬೇಕು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲ ಮುಜಾಹಿದ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು