ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಗಿರಿ ಕಣಿವೆಗಳ ವಾಗಮಣ್

ಆರ್.ಬಿ.ಗುರುಬಸವರಾಜ Updated:

ಅಕ್ಷರ ಗಾತ್ರ : | |

Prajavani

ವಿಸ್ತಾರವಾದ ಹುಲ್ಲುಗಾವಲು, ಆಳವಾದ ಕಣಿವೆ, ದಟ್ಟವಾದ ಪೈನ್ ಮರಗಳ ಕಾಡು, ಬೆಟ್ಟಕ್ಕೆ ಹಸಿರು ಚಾದರ ಹೊದಿಸಿದಂತೆ ಕಾಣುವ ಚಹಾ ತೋಟಗಳು, ಅಲ್ಲಲ್ಲೇ ಸುರಿಯುವ ಜಲಪಾತಗಳು, ಬಿರುಬೇಸಿಗೆಯಲ್ಲೂ ತಂಪಿನ ವಾತಾವರಣ ಸೂಸುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಕೇರಳದ ಕೋಟಯಂ ಜಿಲ್ಲೆಯ ಪೆರ್ಮುಡೆ ತಾಲ್ಲೂಕಿನಲ್ಲಿರುವ ವಾಗಮಣ್ (Vagamon)ಗಿರಿಧಾಮದ ಪರಿಸರ ಇರುವುದೇ ಹೀಗೆ. ಇಂಥ ಪ್ರಕೃತಿ ಸೌಂದರ್ಯವಿರುವ ತಾಣವಾಗಿರುವ ಕಾರಣಕ್ಕಾಗಿಯೇ ಈ ಜಾಗವನ್ನು ‘ಸ್ವರ್ಗದ ತುಣುಕು’ ಎನ್ನುತ್ತಾರೆ. ಇದು ವಿಶ್ವದ 50 ಅತ್ಯಾಕರ್ಷಕ ಗಿರಿಧಾಮಗಳಲ್ಲಿ ಒಂದು.

ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿದ್ದರೂ ಅತ್ಯಂತ ಪ್ರಶಾಂತ ಹಾಗೂ ತಂಪಾದ ಪ್ರದೇಶವಾಗಿದೆ. ಬಿರುಬೇಸಿಗೆಯಲ್ಲೂ ಇಲ್ಲಿ ಕನಿಷ್ಠ 10 ಡಿಗ್ರಿ ಸೆ. ಗರಿಷ್ಠ 23 ಡಿಗ್ರಿ ಸೆ. ಉಷ್ಣಾಂಶವಿರುತ್ತದೆ. ಹಾಗಾಗಿ ಇದನ್ನು ‘ಏಷ್ಯಾದ ಸ್ಕಾಟ್‍ಲೆಂಡ್’ ಎಂದೂ ಕರೆಯುತ್ತಾರೆ.

ಬೇಸಿಗೆಯಲ್ಲೂ ತಂಪು

ಕಳೆದ ಏಪ್ರಿಲ್‌ ತಿಂಗಳಲ್ಲಿ ಈ ವಾಗಮಣ್‌ಗೆ ಭೇಟಿ ನೀಡಿದ್ದೆ. ಇಲ್ಲಿಗೆ ಭೇಟಿ ನೀಡಲು ಹಲವು ಕಾರಣಗಳಿವೆ. ಒಂದೆಡೆ ನೈಸರ್ಗಿಕ ತಾಣ, ಗುಡ್ಡ ಬೆಟ್ಟಗಳ ನಿಸರ್ಗ ರಮಣೀಯ ಕಣಿವೆಗಳು, ಸುಂದರವಾದ ಜಲಪಾತ ಗಳಿಂದ ಪ್ರವಾಸಿಗರನ್ನು ಆಕರ್ಷಿಸಿದರೆ ಮತ್ತೊಂದೆಡೆ ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್, ಪರ್ವತಾರೋಹಣ, ರಾಕ್ ಕ್ಲೈಂಬಿಂಗ್‍ನಂತಹ ಸಾಹಸ ಕ್ರೀಡೆಗಳ ತಾಣವಾಗಿಯೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಪ್ರತಿವರ್ಷ ಅಂತರರಾಷ್ಟ್ರೀಯ ಪ್ಯಾರಾಗ್ಲೈಡಿಂಗ್ ಉತ್ಸವವನ್ನು ಆಯೋಜಿಸುತ್ತದೆ. ಆ ಸಂದರ್ಭದಲ್ಲಿ ವಾಗಮಣ್‌ಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.

ವಾಗಮಣ್‌ ಬೆಟ್ಟವನ್ನು ಲೆಮೆನ್ ಗ್ರಾಸ್ ಆವರಿಸಿಕೊಂಡಿದೆ. ಮುಂಜಾನೆಯ ಮಂಜಿನಲ್ಲಿ ಸೂರ್ಯೋದಯದ ಸೊಬಗು ಒಂದು ರೀತಿಯಾದರೆ, ಸಂಜೆಯ ಸೂರ್ಯಾಸ್ತ ಮತ್ತೊಂದು ವೈಭವದ ಮೆರುಗನ್ನು ನೀಡುತ್ತದೆ. ಮಧ್ಯಾಹ್ನ ಬಿಸಿಲಿಗೆ ಇಲ್ಲಿನ ಮರ್ಮಲಾ ಜಲಪಾತದಲ್ಲಿ ಜಲಕ್ರೀಡೆಯಾಡಿದರೆ ದೇಹ ಮತ್ತು ಮನಸ್ಸಿಗೆ ಹಿತವೆನಿಸುತ್ತದೆ. ಹಾಗಾಗಿ ಒಂದು ದಿನದ ಪ್ರವಾಸಕ್ಕೆ ವಾಗಮಣ್ ಹೇಳಿ ಮಾಡಿಸಿದ ತಾಣ.

ಸುತ್ತಾಟಕ್ಕೆ ಜೀಪ್ ಸಫಾರಿ

ಒಂದಿಷ್ಟು ಮುಂಚಿತವಾಗಿ ಪ್ಲಾನ್ ಮಾಡಿಕೊಂಡರೆ ಅಕ್ಕಪಕ್ಕದಲ್ಲಿರುವ ಸಾಕಷ್ಟು ಪ್ರವಾಸಿ ತಾಣಗಳನ್ನು ಸುತ್ತಾಡಬಹುದು. ಹೀಗೆ ಸುತ್ತಾಡಿಸುವುದಕ್ಕೆಂದೇ ಅಲ್ಲಿ ಜೀಪ್ ಸಫಾರಿ ವ್ಯವಸ್ಥೆ ಇದೆ. ಬೆಳಿಗ್ಗೆ 7.30ಕ್ಕೆ ವಾಗಮಣ್ ಬಸ್ ನಿಲ್ದಾಣದಿಂದ ಜೀಪ್ ಸಫಾರಿ ಪ್ರಾರಂಭವಾಗುತ್ತದೆ. ಸಂಜೆ 6 ಗಂಟೆಗೆ ನಿಮ್ಮನ್ನು ಹೊರಟ ಸ್ಥಳಕ್ಕೆ ತಂದು ನಿಲ್ಲಿಸುತ್ತದೆ. ಈ ಸಫಾರಿಯಲ್ಲಿ ನೀವು ಪ್ರಮುಖವಾಗಿ ವಾಗಮಣ್, ಪಾಲೊಕೋಕಂ ಪ್ಯಾರಾ, ತಾಂಗಲ್ ಪ್ಯಾರಾ, ಮುಂಡಕ್ಕಯಂ ವಾಚ್ ಟವರ್, ಕುರಿಸುಮಾಲಾ ಆಶ್ರಮ, ಮುರುಗನ್ ಮಾಲಾ ಮತ್ತು ಉಲುಪ್ಪುನಿಗಳನ್ನು ಸುತ್ತಾಡಬಹುದು. ಈ ತಿರುಗಾಟದಲ್ಲಿ ಕಾಫಿ, ಟೀ ತೋಟಗಳ ಜೊತೆಗೆ ಪೈನ್ ಮರಗಳ ಸುಂದರ ಕಾನನದ ಪ್ರದೇಶ ಮನಸ್ಸಿಗೆ ಮುದ ನೀಡುತ್ತದೆ.

ವಾಗಮಣ್ ಬಳಿಯ ತಾಂಗಲ್ ಪ್ಯಾರಾ ಪ್ರಸಿದ್ದ ಸೂಫಿ ಸಂತ ಹಸ್ರತ್ ಶೇಖ್ ಪರೀದುದ್ದೀನ್ ಅವರ ವಿಶ್ರಾಂತಿ ತಾಣ. ಈಗ ಅದು ಪ್ರಸಿದ್ಧ ತೀರ್ಥಯಾತ್ರ ಸ್ಥಳವಾಗಿದೆ. ವಾಗಮಣ್ ಸರೋವರವು ಬೋಟಿಂಗ್ ಮತ್ತು ರೋಯಿಂಗ್‍ನಂತಹ ಚಟುವಟಿಕೆಗಳಿಂದ ಯುವಕರನ್ನು ಆಕರ್ಷಿಸುತ್ತದೆ. ಮಕ್ಕಳ ಕಲಿಕೆಗಂತೂ ವಾಗಮಣ್‌ ಮಾಹಿತಿ ಒದಗಿಸುವ ಆಕರ ತಾಣ. ಹೊಸ ನಗರಗಳ ಸಂಸ್ಕೃತಿ, ವಿವಿಧ ಜಾತಿಯ ಕಾಡಿನ ಮರಗಳು, ಹುಲ್ಲುಗಳು, ಪ್ರಾಣಿ ಪಕ್ಷಿಗಳು, ಕೀಟಗಳು ಮಕ್ಕಳ ಕಲಿಕೆಗೆ ಸಾಕಷ್ಟು ಮಾಹಿತಿ ನೀಡುತ್ತವೆ.

ಹೋಗುವುದು ಹೇಗೆ?

ಕೋಟಯಂನಿಂದ ವಾಗಮಣ್‌ಗೆ 65 ಕಿ.ಮೀ ಮತ್ತು ಕೊಚ್ಚಿಯಿಂದ 93 ಕಿ.ಮೀ ದೂರವಿದೆ. ಎರಡೂ ಕೇಂದ್ರಗಳಿಂದಲೂ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಸೌಲಭ್ಯವಿದೆ. ವಾಗಮಣ್ ಸಮಿಪದಲ್ಲೇ ಸಾಕಷ್ಟು ಗೆಸ್ಟ್‌ ಹೌಸ್‌ಗಳಿವೆ. ರೆಸ್ಟೊರೆಂಟ್‍ಗಳೂ ಲಭ್ಯ ಇವೆ. ಅಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತೀಯ ಊಟ ಲಭ್ಯ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು