ವೇಲೂರಿನಿಂದ ದೇವರ ವಿಗ್ರಹ ಕದ್ದು ತಂದಿದ್ದ ಇಬ್ಬರ ಬಂಧನ

7

ವೇಲೂರಿನಿಂದ ದೇವರ ವಿಗ್ರಹ ಕದ್ದು ತಂದಿದ್ದ ಇಬ್ಬರ ಬಂಧನ

Published:
Updated:
ಜಪ್ತಿಯಾದ ವಿಗ್ರಹಗಳು

ಬೆಂಗಳೂರು: ತಮಿಳುನಾಡಿನ ಭಜನಾ ಮಂದಿರದ ಬೀಗ ಮುರಿದು ಪುರಾತನ ಕಾಲದ ದೇವರ ವಿಗ್ರಹಗಳನ್ನು ಕದ್ದು ನಗರಕ್ಕೆ ತಂದಿದ್ದ ಆರೋಪಿಗಳಿಬ್ಬರು ಪರಪ್ಪನ ಅಗ್ರಹಾರ ಪೊಲೀಸರ ಅತಿಥಿಗಳಾಗಿದ್ದಾರೆ.

ಹೊಸೂರು ರಸ್ತೆ ಗೊಲ್ಲಹಳ್ಳಿ ನಿವಾಸಿ ಅರುಣ್ ಹಾಗೂ ಆತನ ಸಹಚರ ತಮಿಳುನಾಡಿನ ಶಾಕೀರ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೂರು ಪಂಚಲೋಹ ವಿಗ್ರಹಗಳು, 11 ಬೈಕ್‌ಗಳು ಸೇರಿದಂತೆ ₹ 30 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬೈಕ್ ಕಳ್ಳತನ ಸಂಬಂಧ ಇತ್ತೀಚೆಗೆ ಅರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿಗ್ರಹ ಕಳ್ಳತನವೂ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯವನಾದ ಅರುಣ್, ಕೆಲಸ ಹುಡುಕಿಕೊಂಡು ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ.  ವ್ಹೀಲಿಂಗ್ ಹಾಗೂ ಡ್ರ್ಯಾಗ್‌ರೇಸ್‌ನ ಹುಚ್ಚು ಬೆಳೆಸಿಕೊಂಡ ಈತ, ಅದಕ್ಕಾಗಿಯೇ ಸ್ನೇಹಿತ ಪ್ರಭು ಜತೆ ಸೇರಿ ಐಷಾರಾಮಿ ಬೈಕ್‌ಗಳನ್ನೇ ಕಳವು ಮಾಡಲು ಪ್ರಾರಂಭಿಸಿದ್ದ. ಇವರಿಬ್ಬರ ವಿರುದ್ಧ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ವಾಹನ ಕಳವು ಪ್ರಕರಣಗಳು ದಾಖಲಾಗಿವೆ. 

ಬೀಗ ಮುರಿದರು: ಅರುಣ್‌ಗೆ ಕೆಲ ದಿನಗಳ ಹಿಂದೆ ಸ್ನೇಹಿತನ ಮುಖಾಂತರ ಶಾಕೀರ್‌ನ ಪರಿಚಯವಾಗಿತ್ತು. ವೇಲೂರು ಜಿಲ್ಲೆ ಸಾತಂಬಕ್ಕಂ ಗ್ರಾಮದ ಭಜನಾ ಮಂದಿರದಿಂದ ವಿಗ್ರಹಗಳನ್ನು ಕದಿಯಲು ಇಬ್ಬರೂ ಸಂಚು ರೂಪಿಸಿದ್ದರು. ಅಂತೆಯೇ ಜೂನ್ ಮೊದಲ ವಾರದಲ್ಲಿ ಮಂದಿರದ ಬೀಗ ಮುರಿದು ವೇಣುಗೋಪಾಲಸ್ವಾಮಿ, ಗಣೇಶ ಹಾಗೂ ಕೃಷ್ಣನ ಮೂರ್ತಿಗಳನ್ನು ಕಳವು ಮಾಡಿಕೊಂಡು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ಗ್ರಾಮಸ್ಥರು ವೇಲೂರು ಠಾಣೆಗೆ ದೂರು ಕೊಟ್ಟಿದ್ದರು. ಇತ್ತೀಚೆಗೆ ಬೈಕ್ ಕಳ್ಳತನ ಮಾಡುವ ಯತ್ನದಲ್ಲಿ ಅರುಣ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಶಾಕೀರ್‌ನನ್ನೂ ವಶಕ್ಕೆ ಪಡೆಯಲಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !