ಗ್ರಾಮಸಹಾಯಕರನ್ನು ‘ಡಿ’ ಗ್ರೂಪ್‌ ನೌಕರರೆಂದು ಘೋಷಿಸಲು ಆಗ್ರಹ

7

ಗ್ರಾಮಸಹಾಯಕರನ್ನು ‘ಡಿ’ ಗ್ರೂಪ್‌ ನೌಕರರೆಂದು ಘೋಷಿಸಲು ಆಗ್ರಹ

Published:
Updated:
Deccan Herald

ಚಾಮರಾಜನಗರ: ಕಂದಾಯ ಇಲಾಖೆಯಲ್ಲಿ 40 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ‘ಡಿ’ ಗ್ರೂಪ್‌ ನೌಕರರು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಾಲಯದ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ಅಲ್ಲಿಂದ ಭುವನಶೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆಯಲ್ಲಿ ಸಾಗಿ ಧರಣಿ ಕುಳಿತರು. ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಅವರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಸೋಮಣ್ಣ ರೇಚಂಬಳ್ಳಿ ಅವರು ಮಾತನಾಡಿ, ‘40 ವರ್ಷಗಳಿಂದ ಗ್ರಾಮ ಸಹಾಯಕರಾಗಿ ದುಡಿಯುತ್ತಿದ್ದೇವೆ. ಆದರೆ, ನಮಗೆ ಸೇವಾ ಭದ್ರತೆ ಇಲ್ಲ. ನಮ್ಮನ್ನು ‘ಡಿ’ ಗ್ರೂಪ್‌ ನೌಕರರು ಎಂದು ಘೋಷಿಸಿ ಎಂಬುದಾಗಿ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಆದರೆ ಯಾರೂ ನಮಗೆ ಸ್ಪಂದಿಸಿಲ್ಲ. ಹಾಗಾಗಿ, ಈಗ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ಘೋಷಣೆಗೆ ಅಡ್ಡಿ ಇಲ್ಲ: ‘ಡಿ ಗ್ರೂಪ್‌ ನೌಕರನ್ನಾಗಿ ಘೋಷಣೆ ಮಾಡುವ ಬಗ್ಗೆ 2014ರಲ್ಲಿ ಅಂದಿನ ಮುಖ್ಯಮ‌ಂತ್ರಿ ಅವರು ಅಂದಿನ ಅಡ್ವೊಕೇಟ್‌ ಜನರಲ್‌ ರವಿ ವರ್ಮಕುಮಾರ್‌ ಅವರ ಬಳಿ ಕಾನೂನು ಅಭಿಪ್ರಾಯ ಕೇಳಿದ್ದರು. ಗ್ರಾಮ ಪಂಚಾಯಿತಿ ಸಹಾಯಕರನ್ನು ‘ಡಿ’ ಗ್ರೂಪ್‌ ನೌಕರರೆಂದು ಪರಿಗಣಿಸಲು ಕಾನೂನು ತೊಡಕಿಲ್ಲ ಎಂದು ಅವರು 2015ರ ಮಾರ್ಚ್‌ 2ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು’ ಎಂದು ಅವರು ಹೇಳಿದರು.

‘ಈ ಪ್ರಸ್ತಾವಕ್ಕೆ ಕಾನೂನು ಇಲಾಖೆ, ಹಣಕಾಸು ಇಲಾಖೆ, ಕಂದಾಯ ಇಲಾಖೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗಳು ಒಪ್ಪಿಗೆ ನೀಡಿದ್ದರೂ ಇನ್ನೂ ‘ಡಿ’ ಗ್ರೂಪ್‌ ನೌಕರರೆಂದು ಘೋಷಣೆ ಆಗಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಮಹದೇವಸ್ವಾಮಿ, ಉಪಾಧ್ಯಕ್ಷ ಪರಶಿವ, ಪ್ರಧಾನ ಕಾರ್ಯದರ್ಶಿ ಎನ್‌.ಮಹದೇವಸ್ವಾಮಿ, ಸಂಚಾಲಕ ಶ್ರೀನಿವಾಸ ಮೂರ್ತಿ, ಜಂಟಿ ಕಾರ್ಯದರ್ಶಿ ಪಾಪಣ್ಣ, ಸಂಘದ ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ನಾರಾಯಣ ಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವು, ಕೊಳ್ಳೇಗಾಲ ಅಧ್ಯಕ್ಷ ದೊರೆಸ್ವಾಮಿ, ಹನೂರು ಅಧ್ಯಕ್ಷ ಸಿದ್ದರಾಜು, ಯಳಂದೂರು ಅಧ್ಯಕ್ಷ ಜಯರಾಂ ಇತರರು ಇದ್ದರು.

‘ವೇತನ ಸರಿಯಾಗಿ ಸಿಗುತ್ತಿಲ್ಲ’
‘ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ. 2010ರಲ್ಲಿ 10 ಸಾವಿರ ಗ್ರಾಮ ಸಹಾಯಕರನ್ನು ಕಾಯಂ ಮಾಡಲಾಗಿದೆ. ಆದರೆ, ಇದುವರೆಗೂ ಹುದ್ದೆಗೆ ತಕ್ಕಂತೆ ಮೂಲ ವೇತನ ನಿಗದಿಯಾಗಿಲ್ಲ. ವೇತನ ಪರಿಷ್ಕರಣೆಯೂ ಆಗಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

‘ಈಗ ಮೂರು ತಿಂಗಳಿಗೊಮ್ಮೆ ವೇತನ ಬರುತ್ತಿದೆ. ಇದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ಪ್ರತಿ ತಿಂಗಳು ವೇತನ ದೊರೆಯುವಂತೆ ಮಾಡಬೇಕು. ವೇತನವು ಜಿಲ್ಲಾ ಖಜಾನೆಯಿಂದ ಪ್ರತಿ ತಿಂಗಳು ಗ್ರಾಮ ಸಹಾಯಕರ ಖಾತೆಗೆ ಜಮಾ ಆಗಬೇಕು’ ಎಂದು ಅವರು ಒತ್ತಾಯಿಸಿದರು.

ಇತರ ಬೇಡಿಕೆಗಳು: 

* ಸೇವಾ ಭದ್ರತೆ ಇಲ್ಲದ ಕಾರಣ, 2010ರ ಫೆಬ್ರುವರಿ 2ರಂದು ಸರ್ಕಾರ ಹೊರಡಿಸಿರುವ ಆದೇಶದಂತೆ ಗ್ರಾಮ ಸಹಾಯಕರನ್ನು ನಾಡ ಕಚೇರಿ/ತಾಲ್ಲೂಕು ಕಚೇರಿಗೆ ನಿಯೋಜಿಸಬಾರದು. ಯಾವುದೇ ಕಚೇರಿಗೆ ರಾತ್ರಿ ಕಾವಲುಗಾರರನ್ನಾಗಿ ನಿಯೋಜಿಸಬಾರದು

* ಗ್ರಾಮ ಸಹಾಯಕರು ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಮೃತಪಟ್ಟರೆ, ಅವರ ಕುಟುಂಬಕ್ಕೆ ‘ಸಿ’ ಗ್ರೂಪ್‌ ನೌಕರಿ ಕೊಡಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !