ಶನಿವಾರ, ಜುಲೈ 2, 2022
20 °C
ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ

ಪ್ರಜಾಪ್ರಭುತ್ವದ ಬಲವರ್ಧನೆಗೆ ಮತದಾನ ಮಾಡಿ: ನ್ಯಾಯಾಧೀಶ ಬಸವರಾಜ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ರಜಾಪ್ರಭುತ್ವದ ಬಲವರ್ಧನೆಗಾಗಿ 18 ವರ್ಷ ತುಂಬಿದ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಬಸವರಾಜ ಅವರು ಶುಕ್ರವಾರ ಕರೆ ನೀಡಿದರು. 

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆ ಕುರಿತು ಎಷ್ಟೇ ಅಭಿಯಾನ, ಅರಿವು ಕಾರ್ಯಕ್ರಮಗಳು ನಡೆದಿದ್ದರೂ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಶೇ 100ರಷ್ಟು ಮತದಾನ ನಡೆದಿಲ್ಲ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ನಡೆದ, ವಿದ್ಯಾವಂತರಿರುವ ನಗರ ಪ್ರದೇಶಗಳಲ್ಲಿ ಮತದಾನ ಪ್ರದಾನ ಕಡಿಮೆ ಇದೆ. ಇದು ವಿಷಾದಕರ’ ಎಂದರು.

‘ಮತದಾನವನ್ನು ವಿದ್ಯಾವಂತರು, ಯುವಜನತೆ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಿ ಅಧಿಕಾರಿಗಳು, ನೌಕರರು ಕೂಡ ಮತದಾನದಲ್ಲಿ ಪಾಲ್ಗೊಳ್ಳಲು ಅಗತ್ಯ ಅನುಕೂಲಗಳನ್ನು ಮಾಡಿಕೊಡಬೇಕು’ ಎಂದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ, ‘ಭಾರತ ಚುನಾವನಾ ಆಯೋಗ ಜಾರಿಯಾದ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಚುನಾವಣಾ ಅಯೋಗದಷ್ಟು ಸಮರ್ಪಕ ಕಾರ್ಯನಿರ್ವಹಣೆ, ಇತರೆ ಯಾವುದೇ ರಾಷ್ಟ್ರದ ಚುನಾವಣೆಯಲ್ಲಿ ಕಾಣಸಿಗುವುದಿಲ್ಲ. ಜಿಲ್ಲೆಯಲ್ಲಿ ಮತದಾನದ ಕುರಿತು ಅರಿವು ಕಾರ್ಯಕ್ರಮಗಳನ್ನು ಪಲ್ಸ್ ಪೊಲಿಯೋ ಶಿಬಿರ ಮಾದರಿಯಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಈಗಾಗಲೇ 8.29 ಲಕ್ಷ ಮತದಾರರು ನೋಂದಾಯಿಸಿಕೊಂಡಿದ್ದಾರೆ. 18 ವರ್ಷ ತುಂಬಿದ ಯುವ ಮತದಾರರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಹಲವಾರು ಅರಿವು ಶಿಬಿರ, ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಏರ್ಪಡಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್‌ ಮಾತನಾಡಿದರು.

ಹುಣಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಬ್ಬಿಗೂಡು ರಮೇಶ್ ಅವರು ಮುಖ್ಯ ಭಾಷಣಕಾರರಾಗಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬಹುಮಾನ ವಿತರಣೆ 

ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ವಿವಿಧ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಯುವ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಮತ್ತು ದೃಷ್ಟಿ ದೋಷ ಹೊಂದಿರುವವರಿಗೆ ಬ್ರೈಲ್ ಲಿಪಿ ಮೂಲಕ ಮತದಾನ ಮಾಡಲು ಗುರುತಿನಚೀಟಿ ವಿತರಣೆ ಮಾಡಲಾಯಿತು. ಮತ್ತು ಕಳೆದ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು