ನಿಮ್ಹಾನ್ಸ್‌ ‘ಕ್ಯಾಂಪಸ್‌ನಲ್ಲಿ ಒಂದು ನಡಿಗೆ’

7
ಹುಚ್ಚಾಸ್ಪತ್ರೆಯ ಕಳಂಕ ತೊಡೆದು ಹಾಕಲು ವಿನೂತನ ಪ್ರಯೋಗಕ್ಕೆ ಹೊರಟಿದೆ ಸಂಸ್ಥೆ

ನಿಮ್ಹಾನ್ಸ್‌ ‘ಕ್ಯಾಂಪಸ್‌ನಲ್ಲಿ ಒಂದು ನಡಿಗೆ’

Published:
Updated:
Deccan Herald

ಬೆಂಗಳೂರು: ನಿಮ್ಹಾನ್ಸ್‌ ಅಂದರೆ ಅದು ಹುಚ್ಚರ ಆಸ್ಪತ್ರೆ, ಅಲ್ಲಿ ರೋಗಿಗಳನ್ನು ಕತ್ತಲು ಕೋಣೆಯಲ್ಲಿ ಕೂಡಿ ಹಾಕುತ್ತಾರೆ, ಶಾಕ್‌ ಟ್ರೀಟ್‌ಮೆಂಟ್ ಕೊಡುತ್ತಾರೆ... ಈ ರೀತಿಯ ಸಿನಿಮೀಯ ಕಲ್ಪನೆಗಳು ನಿಮಗೂ ಇವೆಯೇ? ಹಾಗಾದರೆ, ಒಮ್ಮೆ ಕ್ಯಾಂಪಸ್‌ಗೆ ಭೇಟಿ ಕೊಟ್ಟು ನೀವೇ ಖುದ್ದಾಗಿ ನೋಡಿ!

ಹತ್ತು ಹಲವು ಅಪನಂಬಿಕೆಗಳ ಕಳಂಕವನ್ನು ಹೊತ್ತುಕೊಂಡಿರುವ ನಿಮ್ಹಾನ್ಸ್‌ ಸಂಸ್ಥೆ ಈಗ ಅದನ್ನೆಲ್ಲಾ ಹೋಗಲಾಡಿಸಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕರಿಗಾಗಿ ‘ಕ್ಯಾಂಪಸ್‌ನಲ್ಲಿ ಒಂದು ನಡಿಗೆ’ ಕಾರ್ಯಕ್ರಮವನ್ನು ಯೋಜಿಸಿದೆ.

‘ನಿಮ್ಹಾನ್ಸ್‌ (ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ) 300 ಎಕರೆ ವಿಸ್ತೀರ್ಣ ಹೊಂದಿದೆ. ಕ್ಯಾಂಪಸ್‌ನಲ್ಲಿ ಹಲವು ಪ್ರಭೇದಗಳ ಪಕ್ಷಿಗಳು, ಹಾವುಗಳು ಇವೆ. ಜೀವವೈವಿಧ್ಯಕ್ಕೆ ಹೆಸರಾಗಿದೆ. ಇಲ್ಲಿ ಕತ್ತಲೆ ಕೋಣೆಗಳೇನೂ ಇಲ್ಲ.

‘ರೋಗಿಗಳನ್ನು ಕೂಡಿಟ್ಟುಕೊಂಡು ಚಿಕಿತ್ಸೆ ನೀಡುವುದಿಲ್ಲ. ಅವರೂ ಎಲ್ಲರಂತೆ ಓಡಾಡಿಕೊಂಡು ಇರುತ್ತಾರೆ. ತೀರಾ ಅಗತ್ಯ ಇದ್ದ ರೋಗಿಗಳಿಗೆ ಕೆಲವು ಸೆಕೆಂಡ್‌ ಮಾತ್ರ ಶಾಕ್‌ ಟ್ರೀಟ್‌ಮೆಂಟ್‌ ಕೊಡಲಾಗುತ್ತದೆ. ಇಲ್ಲಿ ಬಂದು ನೋಡಿದರೆ ನಿಮ್ಹಾನ್ಸ್‌ ಬಗ್ಗೆ ಬೇರೆಯದೇ ಲೋಕ ನಿಮಗೆ ಗೋಚರವಾಗುತ್ತದೆ’ ಎಂದು ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗದ ಪ್ರೊ.ಕೆ.ಎಸ್‌.ಮೀನಾ ಹೇಳಿದರು.

‘ನಿಮ್ಹಾನ್ಸ್‌ನಲ್ಲಿ ಅತ್ಯಮೂಲ್ಯ ಸಂಶೋಧನೆಗಳು ಆಗುತ್ತಿವೆ. ಇಲ್ಲಿನ ಸಂಶೋಧನಾ ಕೇಂದ್ರಕ್ಕೆ ರಾಷ್ಟ್ರೀಯ ಮಾನ್ಯತೆ ದೊರೆತಿದೆ. ಭೇಟಿ ನೀಡುವವರಿಗೆ ಈ ಕೇಂದ್ರದ ಪರಿಚಯ ಮಾಡಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

₹100 ಕೊಟ್ಟು ಹೆಸರು ನೋಂದಾಯಿಸಿಕೊಂಡವರನ್ನು ಇದೇ 27ರಂದು ಬೆಳಿಗ್ಗೆ 9.30 ಹಾಗೂ 10.30ಕ್ಕೆ ಎರಡು ತಂಡಗಳಲ್ಲಿಕ್ಯಾಂಪಸ್ ತೋರಿಸಲಾಗುತ್ತದೆ. ಮೊದಲು ಸುಂದರ ಉದ್ಯಾನ ನಿಮ್ಮನ್ನು ಸ್ವಾಗತಿಸುತ್ತದೆ. ಬಳಿಕ ಕ್ಯಾಂಪಸ್‌ನ ಪ್ರಮುಖ ಜಾಗಗಳು ದರ್ಶನ ನೀಡಲಿವೆ.

ಏನೇನೆಲ್ಲಾ ನೋಡಬಹುದು: ರೋಗಿಗಳ ಸಾರ್ವಜನಿಕ ವಾರ್ಡ್‌, ವಿಶೇಷ ವಾರ್ಡ್‌ ಹಾಗೂ ತಂಗುದಾಣಗಳನ್ನು ನೋಡಬಹುದು. ಅಲ್ಲಿರುವ ರೋಗಿಗಳೊಂದಿಗೆ ಮಾತನಾಡಬಹುದು. ಚಿಕಿತ್ಸೆಯ ಕುರಿತು ಮಾಹಿತಿ ಪಡೆಯಬಹುದು. ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರ, ಬುದ್ಧಿ ಮಾಂದ್ಯತೆ ಇರುವ ಮಕ್ಕಳು ನಡೆಸುವ ಕೆಫೆಯನ್ನು ಕೂಡ ನೀವು ನೋಡಬಹುದು. ಅವರು ಅಲ್ಲೇ ಬ್ರೆಡ್‌ ಹಾಗೂ ಕೇಕ್‌ಗಳನ್ನು ತಯಾರಿಸುತ್ತಾರೆ.

ಕ್ಯಾಂಪಸ್‌ನಲ್ಲಿ ವಿಶೇಷವಾದ ಕಲಾ ಕೇಂದ್ರ ಇದೆ. ಅಲ್ಲಿ ಆಸ್ಪತ್ರೆಯ ಇತಿಹಾಸದ ಕುರಿತು ಸಿನಿಮಾ ತೋರಿಸಲಾಗುತ್ತದೆ. ಉದ್ಯಾನದಲ್ಲಿರುವ ಪಕ್ಷಿಗಳು ಹಾಗೂ ಹಾವುಗಳ ಕುರಿತು ವಿಡಿಯೊ ಮೂಲಕ ಮಾಹಿತಿ ನೀಡಲಾಗುತ್ತದೆ.

events.mhedu@gmail.comಗೆ ಇ–ಮೇಲ್‌ ಮಾಡುವ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !