ಅಫ್ಗನ್: ನೆಲೆ ಕಳೆದುಕೊಂಡ ‘ಲಿಟ್ಲ್‌ ಮೆಸ್ಸಿ’

7
ಖ್ಯಾತಿ ಬಂದರೂ ಭೀತಿ ಹೋಗಲಿಲ್ಲ..!

ಅಫ್ಗನ್: ನೆಲೆ ಕಳೆದುಕೊಂಡ ‘ಲಿಟ್ಲ್‌ ಮೆಸ್ಸಿ’

Published:
Updated:
Deccan Herald

ಕಾಬೂಲ್: ಈ ಪೋನ ಹೆಸರು ಮುರ್ತಾಜಾ ಅಹ್ಮದಿ. ಅರ್ಜೆಂಟಿನಾದ ಫುಟ್ಬಾಲ್ ತಾರೆ ಲಿಯೊನಲ್ ಮೆಸ್ಸಿ ಅಂದರೆ ಅಚ್ಚುಮೆಚ್ಚು. ಮೆಸ್ಸಿಯನ್ನು ಭೇಟಿ ಮಾಡುವ ಕನಸೂ ನನಸಾಯಿತು. ಆದರೆ ಏಳು ವರ್ಷದ ಬಾಲಕ ಸಾವಿರಾರು ಅಫ್ಗನ್ ನಿರಾಶ್ರಿತರ ರೀತಿ ನೆಲೆಕೆಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಕಳೆದ ನವೆಂಬರ್‌ನಲ್ಲಿ ತಾಲಿಬಾನ್ ಉಗ್ರರು ಹೂಡಿದ ಯುದ್ಧದ ಪರಿಣಾಮ ಘಜ್ನಿ ಪ್ರಾಂತ್ಯದ ತಮ್ಮ ಮನೆ ತೊರೆದು ಮುರ್ತಾಜಾ ಮತ್ತವನ ಕುಟುಂಬ ಅಲ್ಲಿಂದ ವಲಸೆ ಹೋಗಬೇಕಾಯಿತು. ಹೀಗಿದ್ದರೂ ಮುರ್ತುಜಾ ಕಾರಣಕ್ಕಾಗಿ ತಾಲಿಬಾನಿಗಳು ಮತ್ತೆ ಹಿಂಸೆ ನೀಡಬಹುದು ಎಂಬ ಭೀತಿಯಲ್ಲೇ ಇಡೀ ಕುಟುಂಬ ಕಾಲಕಳೆಯುತ್ತಿದೆ. ಇದಕ್ಕೆ ಕಾರಣವೂ ಇದೆ.

ಲಿಟ್ಲ್ ಮೆಸ್ಸಿ: ಮೆಸ್ಸಿ ಬಗ್ಗೆ ಮುರ್ತುಜಾ ಎಷ್ಟು ಒಲವು ಹೊಂದಿದ್ದನೆಂದರೆ, ಮೆಸ್ಸಿಯ ಜರ್ಸಿ ಹೋಲುವ ಪ್ಲಾಸ್ಟಿಕ್ ಬ್ಯಾಗ್‌ ಅನ್ನೇ ಜರ್ಸಿ ರೀತಿ ಧರಿಸಿದ್ದ. ಅದರ ಮೇಲೆ ನಂ.10 ಎಂದು ಪೆನ್‌ನಿಂದ ಬರೆದುಕೊಂಡಿದ್ದ ಅವನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ 2016ರಲ್ಲಿ ಭಾರಿ ಸುದ್ದಿಯಾಗಿತ್ತು.

ಮಾಧ್ಯಮಗಳೂ ಈ ಸುದ್ದಿಯನ್ನು ಇನ್ನಷ್ಟು ಬಿತ್ತರಿಸಿದ್ದರಿಂದ ಇದು ಮೆಸ್ಸಿ ಅವರ ಗಮನ ಸೆಳೆಯಿತು. ಕತಾರ್‌ನಲ್ಲಿ ಮೆಸ್ಸಿ ಹಾಗೂ ‘ಲಿಟ್ಲ್ ಮೆಸ್ಸಿ’ ಭೇಟಿಯೂ ನಡೆದುಹೋಯಿತು. ಅಂದು ತಮ್ಮ ಪುಟ್ಟ ಅಭಿಮಾನಿಗೆ ಆಟೋಗ್ರಾಫ್ ನೀಡಿ ಜೆರ್ಸಿ ಹಾಗೂ ಫುಟ್ಬಾಲ್ ಉಡುಗೊರೆ ಕೊಟ್ಟು ಹೋಗಿದ್ದರು ಮೆಸ್ಸಿ. ಆದರೆ ಮುರ್ತುಜಾನ ಈ ಸಂತಸ ಬಹಳ ದಿನ ಉಳಿಯಲಿಲ್ಲ.

ಊರು ಬಿಡಿಸಿತು ಗುಂಡಿನ ಸದ್ದು

ಜಘೋರಿ ಜಿಲ್ಲೆಯಲ್ಲಿ ಅಂದು ರಾತ್ರಿ ದಿಢೀರನೆ ಎದುರಾದ ಗುಂಡಿನ ಮೊರೆತವು ತಕ್ಷಣವೇ ಊರು ಖಾಲಿ ಮಾಡುವಂತೆ ಮಾಡಿತು ಎಂದು ಹೇಳುತ್ತಾ ಕಣ್ಣೀರು ಒರೆಸಿಕೊಂಡರು ಮುರ್ತಾಜಾ ತಾಯಿ ಶಫಿಕಾ. ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ಮನೆಯ ಯಾವ ಸಾಮಗ್ರಿಯನ್ನೂ ಅವರು ತರಲು ಸಾಧ್ಯವಾಗಲಿಲ್ಲ. ಶಫಿಕಾ ಅವರ ಕುಟುಂಬವು ಷಿಯಾ ಪ್ರಾಬಲ್ಯದ ಹಝಾರಾ ಜನಾಂಗೀಯ ಗುಂಪಿಗೆ ಸೇರಿದ್ದು, ಸುನ್ನಿ ತಾಲಿಬಾನ್‌ಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುಟುಂಬವೀಗ ಕಾಬೂಲ್‌ನ ಇಕ್ಕಟ್ಟಾದ ಕೊಣೆಯೊಂದರಲ್ಲಿ ಕಾಲ ದೂಡುತ್ತಿದೆ.

ಜಘೋರಿ ಜಿಲ್ಲೆಯಿಂದ ಉಗ್ರರನ್ನು ಭದ್ರತಾ ಪಡೆಗಳು ಹಿಮ್ಮೆಟ್ಟಿಸಿದ್ದರೂ, ಅಲ್ಲಿಗೆ ಪುನಃ ಹೋಗಿ ಸುರಕ್ಷಿತವಾಗಿ ಬದುಕಬಲ್ಲೆವು ಎಂಬ ಬಗ್ಗೆ ಶಫಿಕಾ ಅವರಿಗೆ ಸಂದೇಹವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !