‘ಎಫ್‌ಎಟಿಎಫ್‌ನಿಂದ ಭಾರತ ಕೈಬಿಡಿ’

ಬುಧವಾರ, ಮಾರ್ಚ್ 27, 2019
26 °C
ಹಣಕಾಸು ಕಾರ್ಯಪಡೆ ಅಧ್ಯಕ್ಷರಿಗೆ ಪಾಕಿಸ್ತಾನದ ಹಣಕಾಸು ಸಚಿವರ ಪತ್ರ

‘ಎಫ್‌ಎಟಿಎಫ್‌ನಿಂದ ಭಾರತ ಕೈಬಿಡಿ’

Published:
Updated:

ಇಸ್ಲಾಮಾಬಾದ್‌: ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಪಾಕಿಸ್ತಾನವನ್ನು ‘ಕಪ್ಪುಪಟ್ಟಿಗೆ’ ಸೇರಿಸಿರುವ ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್‌) ಉಪಾಧ್ಯಕ್ಷ ಸ್ಥಾನದಿಂದ ಭಾರತವನ್ನು ತೆಗೆದುಹಾಕಬೇಕು ಎಂದು ಪಾಕ್‌ ಆಗ್ರಹಿಸಿದೆ.

ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕ್‌ ಕೈಗೊಂಡ ಕ್ರಮಗಳಲ್ಲಿ ಯಾವ ಪ್ರಗತಿಯಾಗಿದೆ ಎಂಬುದನ್ನು ಎಫ್‌ಎಟಿಎಫ್‌ ಪರಿಶೀಲನೆ ನಡೆಸುತ್ತಿದೆ.

ಪ್ಯಾರಿಸ್‌ ಮೂಲದ ಎಫ್‌ಎಟಿಎಫ್‌, ಉಗ್ರರಿಗೆ ಹಣಕಾಸು ನೆರವು ತಡೆಯಲು ಮತ್ತು ಅಕ್ರಮ ಹಣ ವರ್ಗಾವಣೆಯ ಮೇಲೆ ಕಣ್ಣಿಟ್ಟಿದೆ. ನಿಷೇಧಿತ ಉಗ್ರರ ಸಂಘಟನೆಗಳು ಪಾಕಿಸ್ತಾನದಲ್ಲಿ ಹೇಗೆ ಕಾರ್ಯಾಚರಣೆ ನಡೆಸುತ್ತಿವೆ ಎಂಬುದನ್ನೂ ಎಫ್‌ಎಟಿಎಫ್‌ ಪರಿಶೀಲಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಎ ಮೊಹಮ್ಮದ್‌ ಉಗ್ರ ಸಂಘಟನೆ ದಾಳಿ ನಡೆಸಿದ ನಂತರ ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಎದುರಿಸುತ್ತಿದೆ.

ಕಳೆದ ವರ್ಷದ ಜೂನ್‌ನಲ್ಲಿ ಪಾಕಿಸ್ತಾನವನ್ನು ಎಫ್‌ಎಟಿಎಫ್‌ ‘ಬೂದುಪಟ್ಟಿ’ಗೆ ಸೇರಿಸಿತ್ತು. ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ತಡೆಯಲು ಪಾಕ್‌ ಸೂಕ್ತ ಕಾನೂನನ್ನು ಹೊಂದಿಲ್ಲದಿದ್ದುದೇ ಇದಕ್ಕೆ ಕಾರಣ.

ಇದೀಗ ಎಫ್‌ಎಟಿಎಫ್‌ ಅಧ್ಯಕ್ಷ ಮಾರ್ಷಲ್‌ ಬಿಲ್ಲಿಂಗ್‌ಸ್ಲೆಯಿಯಾ ಅವರಿಗೆ  ಪತ್ರ ಬರೆದಿರುವ ಪಾಕಿಸ್ತಾನದ ಹಣಕಾಸು ಸಚಿವ ಅಸಾದ್ ಉಮರ್‌, ಭಾರತದ ಬದಲಿಗೆ ಇತರೆ ಯಾವುದಾದರೂ ದೇಶವನ್ನು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಕೋರಿದ್ದಾರೆ.

ಇದರಿಂದ ಎಫ್‌ಎಟಿಎಫ್‌ನ ಕಾರ್ಯನಿರ್ವಹಣೆ ನ್ಯಾಯಸಮ್ಮತ, ತಾರತಮ್ಯರಹಿತ ಮತ್ತು ವಸ್ತುನಿಷ್ಠವಾಗಿರಲಿದೆ ಎಂದು ಹೇಳಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

‘ಪಾಕಿಸ್ತಾನದ ವಿರುದ್ಧ ಭಾರತದ ದ್ವೇಷ ಎದ್ದುಕಾಣುತ್ತಿದೆ. ನಮ್ಮ ದೇಶದ ವಾಯುಪ್ರದೇಶವನ್ನು  ಉಲ್ಲಂಘನೆ ಮಾಡಿ ಇತ್ತೀಚೆಗೆ ಬಾಂಬ್‌ ದಾಳಿ ಮಾಡಿದೆ’ ಎಂದು ಉಮರ್‌ ಪತ್ರದಲ್ಲಿ ತಿಳಿಸಿದ್ದಾರೆ.

‘ಭಾರತಕ್ಕೆ ಉಪಾಧ್ಯಕ್ಷ ಸ್ಥಾನ ತಪ್ಪುವಂತೆ ಮಾಡಲು ಸ್ನೇಹಿ ದೇಶಗಳ ಜತೆ ಪಾಕ್‌ ಮನವಿ ಮಾಡಿಕೊಳ್ಳಲಿದೆ’ ಎಂದು ಹೇಳಿದ್ದಾರೆ.

ಪಾಕ್‌ ಯುದ್ಧ ವಿಮಾನ ಭಾರತ ಹೊಡೆದುರುಲಿಸಿಲ್ಲ
ಇಸ್ಲಾಮಾಬಾದ್‌ (ಪಿಟಿಐ): ತನ್ನ ಯುದ್ಧ ವಿಮಾನ ಪಿಎಎಫ್‌ ಎಫ್‌–16 ಅನ್ನು ಇತ್ತೀಚಿನ ವೈಮಾನಿಕ ದಾಳಿಯಲ್ಲಿ ಭಾರತ ಹೊಡೆದುರುಳಿಸಿದೆ ಎಂಬ ಭಾರತದ ಹೇಳಿಕೆಯನ್ನು ಪಾಕಿಸ್ತಾನ ‘ಸಂಪೂರ್ಣ ಆಧಾರರಹಿತ’ ಎಂದು ಹೇಳಿಕೊಂಡಿದೆ.

ರಾಜಕೀಯ ಲಾಭಕ್ಕಾಗಿ ಭಾರತ ತನ್ನ ದೇಶದ ಜನರನ್ನು ತಪ್ಪುದಾರಿಗೆಳೆಯಲು ಪದೇ ಪದೇ ಈ ರೀತಿ ಹೇಳಿಕೊಳ್ಳುತ್ತಿದೆ ಎಂದು ಪಾಕ್‌ ವಾದಿಸಿದೆ.

‘ಭಾರತದ ವಿಂಗ್ ಕಮಾಂಡರ್ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನ ವಾಯುಪಡೆಯ ಎಫ್‌–16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಮತ್ತು ವಿದ್ಯುನ್ಮಾನ ಸಾಕ್ಷ್ಯ ಇದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಅವರು ಶನಿವಾರ ಹೇಳಿದ್ದರು. ಇದಾದ ಮಾರನೇ ದಿನವೇ ಪಾಕಿಸ್ತಾನ ಹೇಳಿಕೆಯನ್ನು ಅಲ್ಲಗಳೆದಿದೆ.

‘ರಾಜಕೀಯ ಲಾಭ ಪಡೆಯಲು ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ತಪ್ಪುದಾರಿಗೆಳೆಯಲು ಸುಳ್ಳು ಸುದ್ದಿಯನ್ನು ಭಾರತ ಹಬ್ಬುತ್ತಲೇ ಬರುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಮುಜುಗರವನ್ನು ತಪ್ಪಿಸಿಕೊಳ್ಳಲು ಈ ರೀತಿ ಭಾರತ ಮಾಡುತ್ತಿದೆ’ ಎಂದು ವಿದೇಶಾಂಗ ಇಲಾಖೆ ಹೇಳಿಕೆ ದೂರಿದೆ.

‘ಭಾರತ ತನ್ನ ಜನರನ್ನು ತೃಪ್ತಿಪಡಿಸಲು ಸುಳ್ಳು ವಾದವನ್ನು ಹರಡುತ್ತಿದೆ. ಆದರೆ ನಿಜವಾಗಿ ಒಂದಾದರೊಂದರಂತೆ ಸುಳ್ಳುಗಳು ಬಯಲಾಗುತ್ತಲೇ ಇವೆ’ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 2

  Frustrated
 • 7

  Angry

Comments:

0 comments

Write the first review for this !