ಹೂವಿನ ಹಿಪ್ಪರಗಿ ಶಾಖಾ ಕಾಲುವೆಗೆ ನೀರು ಮೇ 16ರಂದು

ಕೊಲ್ಹಾರ: ರೈತ ಸಂಘ, ವಿವಿಧ ಮಠಾಧೀಶರು, ರೈತರು ನಡೆಸಿದ ಹೋರಾಟದ ಪ್ರತಿಫಲವಾಗಿ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ಮೇ 16ರಂದು ಹೂವಿನ ಹಿಪ್ಪರಗಿ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಭರವಸೆಯನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮಂಗಳವಾರ ನೀಡಿದ್ದಾರೆ.
ಕೂಡಗಿ ಬಳಿಯ ರೈಲ್ವೆ ಸೇತುವೆ ಕೆಳಗೆ ನಡೆದಿರುವ ಕಾಲುವೆ ಕಾಮಗಾರಿ ವೀಕ್ಷಣೆಗೆ ಮಂಗಳವಾರ ತೆರಳಿದ್ದ ರೈತರು, ತಕ್ಷಣ ನೀರು ಬಿಡುಗಡೆಗೆ ಒತ್ತಾಯಿಸಿದರು.
ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯಿಂದ ಹೂವಿನ ಹಿಪ್ಪರಗಿ ಶಾಖಾ ಕಾಲುವೆ ಮುಖಾಂತರ ನೀರು ಹರಿಸಿ, ಹೂವಿನ ಹಿಪ್ಪರಗಿ ಕೆರೆ ಸೇರಿದಂತೆ ಸುತ್ತಲಿನ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ವಿನಾಯಕ ಹರನಟ್ಟಿ ಹಾಗೂ ಸಹಾಯಕ ಎಂಜಿನಿಯರ್ ಚಂದ್ರಶೇಖರ ವಾರದ ಭರವಸೆ ನೀಡಿದ್ದಾರೆ.
ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ‘ಭೀಕರ ಬರಗಾಲ ಹಾಗೂ ಹೆಚ್ಚಿನ ತಾಪಮಾನದಿಂದಾಗಿ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದ್ದು. ಕೆರೆಗಳು ತುಂಬಿದರೆ ಈ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಲಿದೆ. ಸಾಕಷ್ಟು ಅಡಚಣೆಗಳ ಮಧ್ಯೆಯೂ ಅಧಿಕಾರಿಗಳು ತ್ವರಿತವಾಗಿ ಕೆಲಸ ಮುಗಿಸಿ ನೀರು ಹರಿಸಲು ಸಿದ್ಧತೆ ಮಾಡಿಕೊಂಡಿದ್ದು ಸಂತಸ ತಂದಿದೆ’ ಎಂದು ಹೇಳಿದರು.
ಅಖಂಡ ಕರ್ನಾಟಕ ರೈತ ಸಂಘದ ಸಿದ್ರಾಮ ಅಂಗಡಗೇರಿ, ಈರಣ್ಣ ದೇವರಗುಡಿ, ರಮೇಶ ಕೋರಿ, ಸಿದ್ದಲಿಂಗಯ್ಯ ಹಿರೇಮಠ, ಸಿದ್ದಪ್ಪ ಪೂಜಾರಿ, ಸಿ,ಬಿ.ತೊಟದ, ಹಣಮಂತ ತೊಟದ, ಈರಪ್ಪ ಚೌಧರಿ, ಹಣಮಂತ್ರಾಯ ಗುಣಕಿ, ಹಣಮಂತ ಬಜಂತ್ರಿ, ಅಣ್ಣಪ್ಪ ಬಜಂತ್ರಿ, ಮುತ್ತು ಪೂಜಾರಿ, ಮಲ್ಲು ನಾಡಗೌಡ, ಲಕ್ಷಣ ಪೂಜಾರಿ, ಸೋಮಣ್ಣ ಶಿವಯೋಗಿ, ಶ್ರೀಶೈಲ ಶಿವಯೋಗಿ, ಮುತ್ತು ಸಾಸನೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.