ಮಂಗಳವಾರ, ಮೇ 26, 2020
27 °C

ಕವಲೇದುರ್ಗದ ಹಾದಿಯಲಿ

ನರೇಂದ್ರ ಎಸ್ ಗಂಗೊಳ್ಳಿ. Updated:

ಅಕ್ಷರ ಗಾತ್ರ : | |

Deccan Herald

ಒಮ್ಮೆ ನೀವು ಅಲ್ಲಿ ನಿಂತು ಕಣ್ಣುಗಳನ್ನು ಹರಿಯಬಿಟ್ಟರೆ ಸಾಕು. ಆ ಕ್ಷಣದಲ್ಲೇ ಮನದಲ್ಲಿ ನೂರೆಂಟು ಭಾವಗಳು ಕುಣಿಯತೊಡಗುತ್ತವೆ. ಕಣಶಿಲೆಗಳಿಂದ ನಿರ್ಮಿತವಾಗಿರುವ ಕಲ್ಲುಗಳ ಹಾದಿಯ ಮೇಲೆ ನೀವು ನಡೆಯುತ್ತಾ ಸಾಗುತ್ತಿದ್ದರೆ ಇತಿಹಾಸದ ಗತವೈಭವಗಳು ಕಣ್ಣೆದುರೇ ಬಿಚ್ಚಿಕೊಳ್ಳುತ್ತಾ ಸಾಗಿದಂತೆನಿಸುತ್ತವೆ. ಆ ಮೂರು ಸುತ್ತಿನ ಕೋಟೆಯ ಒಳಗಿನ ದೇವಸ್ಥಾನಗಳು ನಿಮ್ಮಲ್ಲಿ ಧನ್ಯತೆ ಮೂಡಿಸುತ್ತವೆ. ಇಂತಹ ಅನುಭವವನ್ನು ನಿಮಗೆ ನೀಡುವಂಥ ತಾಣ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ.

ಶಿವಮೊಗ್ಗ–ಹೊಸನಗರ ರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ ದೂರ ಗದ್ದೆಬದುಗಳ ಸೊಬಗನ್ನು ಸವಿಯುತ್ತಾ ಕಾಲುಹಾದಿಯಲ್ಲಿ ಸಾಗಿದರೆ 50 ರಿಂದ 60 ಅಡಿ ಎತ್ತರದ ಕವಲೇದುರ್ಗ ಕೋಟೆಯ ಹೊರ ಆವರಣ ನಿಮ್ಮನ್ನು ಎದುರುಗೊಳ್ಳುತ್ತದೆ. ಮುಖ್ಯ ಮುಂಭಾಗಿಲಿನಿಂದ ಒಳಹೊಕ್ಕರೆ ಅಚ್ಚರಿಗಳು ನಿಮ್ಮನ್ನು ಸಂಧಿಸುತ್ತವೆ. ಅಲ್ಲಿನ ವಿಶಾಲವಾದ ಸ್ನಾನಗೃಹ, ಈಗಲೂ ನೀರು ತುಂಬಿಕೊಂಡಿರುವ ಕೆರೆ, ಅರಮನೆ, ಏಕಕಾಲದಲ್ಲಿ ಐದು ಕಡೆಯಲ್ಲಿ ಜ್ವಾಲೆಗಳನ್ನು ಹೊರಸೂಸುವ ಕಲ್ಲಿನ ಒಲೆ, ಅನಾಥವಾಗಿ ಬಿದ್ದಿರುವ ನೀರು ತುಂಬುವ ಸಣ್ಣ ಬಾನಿ, ಅರೆಯುವ ಕಲ್ಲು, ತುಪ್ಪ ಮತ್ತು ಎಣ್ಣೆಯನ್ನು ತುಂಬಲು ಬಳಸುತ್ತಿದ್ದ ಕಲ್ಲಿನ ಬಾವಿ, ಬೆಟ್ಟದ ಬುಡದಲ್ಲಿರುವ ನಾಗರಕಲ್ಲುಗಳ ರಾಶಿ ಎಲ್ಲವೂ ಕೂಡ ಆಗಿನ ಕಾಲದ ವ್ಯವಸ್ಥಿತವಾದ ನೀರಾವರಿ ಪದ್ಧತಿ, ಅಡುಗೆ, ಆರಾಧನೆ ಇತ್ಯಾದಿಗಳ ಅರಿವನ್ನು ಮೂಡಿಸುತ್ತವೆ.

ಈ ಕೋಟೆಯ ಪ್ರತಿ ಸುತ್ತಿನಲ್ಲೂ ಕಾವಲುಗಾರ ಕೊಠಡಿಗಳುಳ್ಳ ಮಹಾದ್ವಾರಗಳಿವೆ. ಎರಡನೇ ದ್ವಾರವನ್ನು ದಾಟಿದ ಬಳಿಕ ಕಾಣಸಿಗುವ ಆವರಣಗೋಡೆಯುಳ್ಳ ಕಾಶಿವಿಶ್ವನಾಥನ ದೇವಸ್ಥಾನ ಇಲ್ಲಿನ ಪ್ರಧಾನ ಆಕರ್ಷಣೆ. ಬಿಸಿಲು ಗಾಳಿ ಮಳೆ ಚಳಿಗೆ ಎದೆಯೊಡ್ಡಿ ನೂರಾರು ವರ್ಷಗಳ ನಂತರವೂ ಈ ದೇವಸ್ಥಾನ ಆ ಕಾಲದ ಶಿಲ್ಪಕಲಾ ಸೊಬಗಿಗೆ ಅಪೂರ್ವ ಸಾಕ್ಷಿಯಾಗಿ ನಿಂತಿದೆ.

ದೇವಸ್ಥಾನದ ಕಲ್ಲಿನ ಹೊರಗೋಡೆಗಳಲ್ಲಿ ಕೆತ್ತಲಾಗಿರುವ ಹಾವು, ಮಂಗ, ಹಂಸ, ಆನೆ, ದೇವತೆಗಳು, ಕುದುರೆ ಸವಾರನ ಚಿತ್ರಣ ಎಲ್ಲವೂ ಆ ಕಾಲದ ಶಿಲ್ಪಕಲಾ ಸೊಬಗನ್ನು ತೆರೆದಿಡುತ್ತವೆ. ಅಲ್ಲೇ ದೇವಸ್ಥಾನದ ಪ್ರವೇಶಕ್ಕೂ ಮುನ್ನ ಕಾಣಸಿಗುವ ಅನಾಥವಾಗಿ ಬಿದ್ದುಕೊಂಡಂತಿರುವ ನಂದಿಯ ವಿಗ್ರಹ ನೂರೆಂಟು ಕತೆ ಹೇಳುತ್ತದೆ.

ಈ ದೇವಸ್ಥಾನದ ಗರ್ಭಗುಡಿಯಲ್ಲಿನ ವಿಶ್ವನಾಥೇಶ್ವರ ದೇವರನ್ನು ಒಳಗೆ ಬೆಳಕಿಲ್ಲದ ಕಾರಣ ಸರಿಯಾಗಿ ಕಾಣಿಸುವುದಿಲ್ಲ. ದೇವಸ್ಥಾನದ ಹೊರಭಾಗದಲ್ಲಿ ಎರಡು ಕಂಬಗಳ ರಚನೆ ವಿಶಿಷ್ಠವಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಇಂಥ ರಚನೆಗಳು ಕಂಡುಬರುವುದಿಲ್ಲ. ದೇವಸ್ಥಾನದ ಪಕ್ಕದಲ್ಲೇ ಇರುವ ಪ್ರಕೃತಿ ನಿರ್ಮಿತ ಕಲ್ಲುದಿಬ್ಬದ ಮೇಲೆ ಲಕ್ಮೀ ನಾರಾಯಣ ವಿಗ್ರಹವುಳ್ಳ ದೇವರ ಪುಟ್ಟದಾದ ಗುಡಿಯಿದೆ. ವಿಶೇಷವಾಗಿ ಮಳೆಗಾಲದಲ್ಲಿ ಈ ಬೆಟ್ಟವನ್ನು ಹತ್ತುವಾಗ ಬಹಳ ಜಾಗರೂಕರಾಗಿರಬೇಕು.

ಇದೆಲ್ಲವನ್ನು ಕಂಡು ಮತ್ತೆ ಮುಂದೆ ಸಾಗುತ್ತಾ ಮತ್ತೊಂದು ದ್ವಾರದ ಒಳಕ್ಕೆ ಬಂದರೆ ಆನೆ ಮತ್ತು ಕುದುರೆ ಲಾಯಗಳು, ಅರಮನೆ, ಸ್ನಾನಗೃಹದ ಅವಶೇಷಗಳು ಕಾಣುತ್ತವೆ. ಅಲ್ಲೇ ಪಕ್ಕದಲ್ಲಿ ಈಗಲೂ ಸುಸ್ಥಿತಿಯಲ್ಲಿರುವ ಕೆರೆಯೊಂದು ಗಮನ ಸೆಳೆಯುತ್ತದೆ. ಅದಕ್ಕೆ ವಿಮುಖವಾಗಿ ನಡೆದು ಮತ್ತೆ ಮೇಲೆರುತ್ತಾ ಸಾಗಿದರೆ ನೀವು ಕವಲೇದುರ್ಗದ ಒಂದು ತುದಿಯನ್ನು ತಲುಪುತ್ತೀರಿ. ಅಲ್ಲಿಂದ ಕೆಳಕ್ಕೆ ನೋಡಿದರೆ 18 ಎಕರೆ ವಿಸ್ತೀರ್ಣವುಳ್ಳ ತಿಮ್ಮಣ್ಣನಾಯಕನ ಕೆರೆ ಕಾಣುತ್ತದೆ. ಅದರ ಇನ್ನೊಂದು ಬದಿಯಲ್ಲಿನ ಶಿಖರವೊಂದರ ಮೇಲೆ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿ ನಿರ್ಮಿಸಿರುವ ಶಿಖರೇಶ್ವರ ದೇವರ ಪುಟ್ಟ ಗುಡಿಯಿದೆ. ಗರ್ಭಗುಡಿಯಲ್ಲಿ ಮಣ್ಣಿನೊಳಗೆ ಹುದುಗಿದ ಸ್ಥಿತಿಯಲ್ಲಿರುವ ಲಿಂಗ, ವರ್ತಮಾನದ ಜನಗಳ ಅಸಡ್ಡೆಗೆ ಕನ್ನಡಿ ಹಿಡಿದಂತೆ ಭಾಸವಾಗುತ್ತದೆ. ಅಲ್ಲಿ ಬೀಸುವ ತಂಪಾದ ಗಾಳಿಗೆ ಮೈಯೊಡ್ಡಿ ಒಂದಷ್ಟು ಹೊತ್ತು ಕುಳಿತರೆ ಕೋಟೆ ಸುತ್ತಾಡಿದ ದೈಹಿಕ ದಣಿವು ಪರಿಹಾರವಾಗುವುದಂತೂ ಸತ್ಯ.

ಶಿಖರೇಶ್ವರ ದೇವಸ್ಥಾನದ ಪಕ್ಕದ ಗುಡ್ಡದಲ್ಲಿನ ಬಂಡೆಯ ಮೇಲೆ ಗದಾತೀರ್ಥ ಹೆಸರಿನ ಪುಟ್ಟಕೊಳವೊಂದು ಕಾಣಸಿಗುತ್ತದೆ. ವರ್ಷ ಪೂರ್ತಿ ಈ ಪುಟ್ಟ ಕೊಳದಲ್ಲಿ ನೀರಿರುವುದು ವಿಶೇಷ. ಭಕ್ತರು ಅದನ್ನೇ ತೀರ್ಥವೆಂದು ಕುಡಿಯುವುದು ವಾಡಿಕೆ. ಕೋಟೆಯ ತುಂಬೆಲ್ಲಾ ಸಾಗುವಾಗ ಆರಂಭದಲ್ಲಿ ಕಣಶಿಲೆಗಳ (ಪೆಡಸುಕಲ್ಲುಗಳು)ಹಾಸಿನ ಕಾಲುದಾರಿ ಸಿಕ್ಕರೆ ಆ ಬಳಿಕ ಕಲ್ಲು ಮಣ್ಣುಗಳ ಹಾದಿಯಲ್ಲಿ ನಡೆಯಬೇಕು. ಅದೇನೆ ಇದ್ದರೂ ಕವಲೇದುರ್ಗ ನಿಮ್ಮಲ್ಲಿ ಒಂದು ಅದ್ಭುತವಾದ ಚೈತನ್ಯವನ್ನು ಸಂತೋಷವನ್ನು ಖಂಡಿತಾ ಮೂಡಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.