ಫೈರ್‌ಲೈನ್‌ಗಳಲ್ಲಿ ತುಂಬಿದ ಕಳೆ

4
ಬಂಡೀಪುರ: ಮಳೆಯ ಪರಿಣಾಮ ಬೆಳೆದ ಗಿಡಗಂಟಿಗಳು

ಫೈರ್‌ಲೈನ್‌ಗಳಲ್ಲಿ ತುಂಬಿದ ಕಳೆ

Published:
Updated:
ಫೈರ್‌ಲೈನ್‌ ಇದ್ದ ಜಾಗದಲ್ಲಿ ಕಳೆ ಬೆಳೆದಿರುವುದು

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಹಾಗೂ ಗೋಪಾಲಸ್ವಾಮಿ ಬೆಟ್ಟದ ಮದ್ದೂರು, ಮೂಲೆಹೊಳೆ ಮತ್ತು ಓಂಕಾರ ವಲಯಗಳಲ್ಲಿ ಕಾಡಿಗೆ ಬೆಂಕಿ ಬೀಳುವುದನ್ನು ತಡೆಯಲು ನಿರ್ಮಾಣ ಮಾಡಿದ್ದ ಫೈರ್‌ಲೈನ್‌ಗಳಲ್ಲಿ (ಬೆಂಕಿ ರೇಖೆ) ಪಾರ್ಥೇನಿಯಂ ಗಿಡ ಸೇರಿದಂತೆ ಕಳೆ ಸಸ್ಯಗಳು ಬೆಳೆದು ನಿಂತಿವೆ. ಇದು ಕಾಡಿನ ಸೌಂದರ್ಯವನ್ನೂ ಹಾಳು ಮಾಡುತ್ತಿದೆ.

ಅರಣ್ಯಕ್ಕೆ ಬೀಳುವ ಕಾಳ್ಗಿಚ್ಚಿನಿಂದ ಪಾರುಮಾಡಲು ಬೇಸಿಗೆಯ ಆರಂಭದಲ್ಲಿ ಎಲ್ಲಾ ವಲಯಗಳ ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯ ಪ್ರದೇಶದ ಒಳಗಿರುವ ರಸ್ತೆ ಹಾಗೂ ಸಫಾರಿ ನಡೆಸುವ ರಸ್ತೆಗಳಲ್ಲಿ ಫೈರ್‌ಲೈನ್‌ಗಳ ನಿರ್ಮಾಣಕ್ಕಾಗಿ ಎಲ್ಲಾ ಗಿಡಗಂಟಿಗಳನ್ನು ತೆಗೆದು ಸ್ವಚ್ಚ ಮಾಡಲಾಗಿತ್ತು. 

ಬೇಸಿಗೆಯಲ್ಲಿ ಕೀಡಿಗೇಡಿಗಳು ರಸ್ತೆಗಳಲ್ಲಿ ಹೋಗುವಾಗ ಮೋಜಿಗಾಗಿ ಆನೆಯ ಲದ್ದಿಗೆ ಬೆಂಕಿ ಇಡುವುದು, ಬೀಡಿ ಸಿಗರೇಟ್‌ಗಳನ್ನು ಸೇದು ರಸ್ತೆಯ ಬದಿಯಲ್ಲಿ ಬೀಸಾಡುವುದರಿಂದ ಕಾಡಿಗೆ ಬೆಂಕಿ ಹತ್ತಿಕೊಳ್ಳುತ್ತದೆ. ಹಾಗಾಗಿ, ವಾಹನಗಳು ಓಡಾಡುವ ರಸ್ತೆಗಳ ಬದಿಯಲ್ಲಿ ಫೈರ್‌ಲೈನ್‌ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕಾಡೆಲ್ಲ ಹಸಿರಾಗಿದೆ. ಹಾಗೆಯೇ ಫೈರ್‌ಲೈನ್‌ಗಳಲ್ಲಿ ಲಾಂಟಾನ ಮತ್ತು ಪಾರ್ಥೇನಿಯಂ ಬೆಳೆದು ನಿಂತಿವೆ.

ಬಂಡೀಪುರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 67 ಮತ್ತು ಮದ್ದೂರು, ಮೂಲೆಹೊಳೆ ವಲಯದ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಅನೇಕ ಕಿಲೋ ಮೀಟರ್‌ಗಳವರೆಗೆ ಪಾರ್ಥೇನಿಯಂ ಆವರಿಸಿಕೊಂಡಿದೆ. ರಸ್ತೆ ಬದಿಯಲ್ಲಿರುವ ಲಾಂಟಾನಗಳನ್ನು ಕೀಳುವ ಕೆಲಸವನ್ನು ಅರಣ್ಯ ಇಲಾಖೆ ಇನ್ನೂ ಮಾಡಿಲ್ಲ ಎಂಬುದು ಪರಿಸರ ಪ್ರೇಮಿಗಳ ಬೇಸರ.

‘ಪಕ್ಕದ ತಮಿಳುನಾಡಿನ ಮದುಮಲೆ ಅರಣ್ಯ ಪ್ರದೇಶದಲ್ಲೂ ಬೆಂಕಿ ರೇಖೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ರೇಖೆಗಳು ಹಾಳಾಗದಂತೆ ಸದಾ ಕಾಲ ಮತ್ತು ಈ ರೇಖೆಗಳಲ್ಲಿ ಯಾವುದೇ ಕಳೆಗಳು ಬೆಳೆಯದಂತೆ ಅಲ್ಲಿನ ಅಧಿಕಾರಿಗಳು ಎಚ್ಚರ ವಹಿಸುತ್ತಾರೆ. ಪಾರ್ಥೇನಿಯಂನಿಂದ ಹೆಚ್ಚು ತೊಂದರೆಯಾಗುತ್ತದೆ. ರಸ್ತೆಯ ಬದಿಗಳನ್ನಾದರೂ ಇಂತಹ ಕಳೆಗಳಿಂದ ಮುಕ್ತ ಮಾಡಬೇಕು. ಪಾರ್ಥೇನಿಯಂ ಗಿಡಗಳು ಕಾಡಿನ ಅಂದವನ್ನೇ ಹಾಳು ಮಾಡುತ್ತವೆ’ ಎಂದು ಹೇಳುತ್ತಾರೆ ಪರಿಸರ ಪ್ರೇಮಿ ದೇವಯ್ಯ. 

‘ಕಾಡು ಪ್ರಾಣಿಗಳಾದ ಜಿಂಕೆ, ಆನೆ, ನವಿಲು ಮೊದಲಾದ ಪ್ರಾಣಿಗಳು ರಸ್ತೆಯಲ್ಲಿ ಪ್ರತ್ಯಕ್ಷ ಆಗುತ್ತವೆ. ಪಾರ್ಥೇನಿಯಂ ಎತ್ತರಕ್ಕೆ ಬೆಳೆದಿರುವುದರಿಂದ ಜಿಂಕೆಯಂತಹ ಸಣ್ಣ ಪ್ರಾಣಿಗಳು ಕಾಣುವುದಿಲ್ಲ’ ಎಂದು ಸಫಾರಿಗೆ ಆಗಮಿಸಿದ್ದ ಮಿಥುನ್ ಅವರು ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !