ಭಾನುವಾರ, ಸೆಪ್ಟೆಂಬರ್ 20, 2020
23 °C
ಶತ್ರುವಿನ ಶತ್ರು ಎಲ್ಲ ಸಂದರ್ಭಗಳಲ್ಲೂ ತನಗೆ ಮಿತ್ರನಾಗಬೇಕು ಎನ್ನಲಾಗದು

ಬಂಗಾಳ: ಬಲಕ್ಕೆ ವಾಲಿದ ಎಡ!

ರಂಜನ್ ದಾಸ್‌ಗುಪ್ತ Updated:

ಅಕ್ಷರ ಗಾತ್ರ : | |

ನಾನು ಹುಟ್ಟಿದ್ದು ಎಡಪಂಥದ ಕಡೆ ಒಲವು ಇರುವ ಕುಟುಂಬದಲ್ಲಿ. ನನ್ನ ತಂದೆ ಕೋಲ್ಕತ್ತ ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. 80ರ ದಶಕದಲ್ಲಿ ರಾಜ್ಯ ಸರ್ಕಾರದ ಕಾನೂನು ಸಮಿತಿಯ ಸದಸ್ಯ ಕೂಡ ಆಗಿದ್ದರು. ನನ್ನ ಸಂಬಂಧಿಕರಾದ ಸರೋಜ್ ಮುಖರ್ಜಿ ಅವರು ಎಡರಂಗದ ಅಧ್ಯಕ್ಷ ಆಗಿದ್ದರು. ನಾವು ಪಕ್ಕಾ ಎಡಪಂಥೀಯ ಆದರ್ಶಗಳಲ್ಲಿ ನಂಬಿಕೆ ಇದ್ದವರು, ಕಾಂಗ್ರೆಸ್ ಹಾಗೂ ಇತರ ಎಡಪಂಥೀಯ ಅಲ್ಲದ ಪಕ್ಷಗಳ ಬಲಪಂಥೀಯ ಮೌಲ್ಯಗಳನ್ನು ವಿರೋಧಿಸಿದ್ದವರು. ಆದರೆ, ನಂತರದ ದಿನಗಳಲ್ಲಿ ಎಡರಂಗದ ಸರ್ವಾಧಿಕಾರಿ ಧೋರಣೆಯನ್ನು ಗಮನಿಸಿದಾಗ ನಮ್ಮ ಸಿದ್ಧಾಂತಗಳಿಗೆ ಹಾಗೂ ಕನಸುಗಳಿಗೆ ಏಟು ಬೀಳಲು ಆರಂಭವಾಯಿತು.

ಈಗತಾನೇ ಮುಗಿದಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಆದ ನಂತರ ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಿದಾಗ, ನನ್ನಂತಹ ಅನೇಕರು ಗೊಂದಲಕ್ಕೆ ಒಳಗಾದರು. ಎಡರಂಗದಂತಹ ಅತ್ಯಂತ ಕಟ್ಟುನಿಟ್ಟಿನ ಸಂಘಟನೆಗೆ ಸೇರಿದ, ಸಂಘಟನೆಯ ನಿಯಂತ್ರಣಕ್ಕೆ ಒಳಪಟ್ಟ ಅಸಂಖ್ಯ ಬೆಂಬಲಿಗರು ಬಿಜೆಪಿಗೆ ಮತ ಚಲಾಯಿಸಿದ್ದು ಹೇಗೆ? ಎಡಪಂಥೀಯ ನಾಯಕರು ಎನ್‌ಡಿಎಗೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದರೂ, ತಳ ಹಂತದ ಕಾರ್ಯಕರ್ತರು ಬಿಜೆಪಿ ಪರವಾಗಿ ಸಾಮೂಹಿಕವಾಗಿ ಮತ ಚಲಾಯಿಸಿದರು. ಇದರ ಜೊತೆಯಲ್ಲೇ, ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ಸಿನ ಕೆಲವರು ಅತೃಪ್ತರು ಚಲಾಯಿಸಿದ ಮತಗಳು ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ 18 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಳ್ಳಲು ನೆರವಾದವು. ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದುಕೊಂಡಿರುವ ಸ್ಥಾನಗಳು 22. ಈ ಸಂಖ್ಯೆಗೆ ಕೇವಲ ನಾಲ್ಕು ಕಡಿಮೆ ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಇದು ಊಹಿಸಲಿಕ್ಕೂ ಅಸಾಧ್ಯವಾದುದು.

ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಯಾವ ಸಂದರ್ಭದಲ್ಲೂ ನೆಲೆ ಹೊಂದಿರಲಿಲ್ಲ. ಎಡಪಂಥೀಯರ ಆಡಳಿತ ಉತ್ತುಂಗದಲ್ಲಿ ಇದ್ದಾಗ ಇಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಏಕೈಕ ಅಭ್ಯರ್ಥಿ ದಿವಂಗತ ತಪನ್ ಸಿಕ್ದರ್. ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಬಿಜೆಪಿಯು ಬಂಗಾಳದ ಒಳಕ್ಕೆ ಸದ್ದಿಲ್ಲದೆಯೇ ದಾರಿ ಮಾಡಿಕೊಂಡಿವೆ. ತೃಣಮೂಲ ಕಾಂಗ್ರೆಸ್ ಒಳಗೆ ಇದ್ದ ತಿಕ್ಕಾಟಗಳು, ಕೆಲವು ಗುಂಪುಗಳು ತೋರಿಸುತ್ತಿದ್ದ ಇನ್ನೊಬ್ಬರನ್ನು ಹತ್ತಿಕ್ಕುವ ಮನೋಭಾವ ಹಾಗೂ ಆಡಳಿತ ಪಕ್ಷದ ಕೆಲವು ತಪ್ಪು ನೀತಿಗಳು ಬಿಜೆಪಿಗೆ ನೆಲೆ ಕಂಡುಕೊಳ್ಳಲು ಸಹಾಯ ಮಾಡಿದವು. ಜಾತ್ಯತೀತವಾದವು ಅತ್ಯಂತ ಗಟ್ಟಿಯಾಗಿ ಇರುವ ರಾಜ್ಯ ಪಶ್ಚಿಮ ಬಂಗಾಳ ಎಂಬ ಮಾತು ಈ ಹಿಂದೆ ಇತ್ತು.

ರಾಜ್ಯದ ಎಲ್ಲ ಕಡೆಗಳಲ್ಲೂ ಎಡಪಕ್ಷಗಳ ಸದಸ್ಯರು ಹಾಗೂ ಬೆಂಬಲಿಗರು ತೃಣಮೂಲ ಕಾರ್ಯಕರ್ತರ ದಾಳಿಗೆ ಗುರಿಯಾದರು. ಹೀಗೆ ದಾಳಿಗೆ ಗುರಿಯಾದವರು ಅತ್ತಿತ್ತ ಚದುರಿ ಹೋದರು. ಕೆಲವರು ತಮ್ಮ ಮನೆಗಳನ್ನು ತೊರೆದುಹೋದರು. ಇದು, ಹಿಂದಿನ ದಿನಗಳಲ್ಲಿ ಎಡಪಕ್ಷಗಳು ನಡೆಸಿದ್ದ ಹಿಂಸೆಗಳಿಗೆ ಪ್ರತಿಹಿಂಸೆ ಎಂಬಂತೆ ಇತ್ತು. ಸಿದ್ಧಾರ್ಥ ಶಂಕರ್ ರಾಯ್ ಅವರ ಅವಧಿಯ ನಂತರದ ಕಾಲಘಟ್ಟದಲ್ಲಿ ಕಾಂಗ್ರೆಸ್ ಕೂಡ ತನ್ನ ನೆಲೆಯನ್ನು ಒಂದಿಷ್ಟರಮಟ್ಟಿಗೆ ಕಳೆದುಕೊಂಡಿತು. ಆರಂಭದಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಇದ್ದ ಕಾಂಗ್ರೆಸ್, ನಂತರ ಅದರ ಜೊತೆಗಿನ ನಂಟು ಕಡಿದುಕೊಂಡು ತನ್ನ ಸದಾಕಾಲದ ಶತ್ರು ಎಡಪಕ್ಷಗಳ ಜೊತೆ ಕೈಜೋಡಿಸಿತು. ಇದು ನಗೆಪಾಟಲಿಗೆ ಕಾರಣವಾಯಿತು.

ಬಂಗಾಳದ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸುವುದಾದರೆ; ಎಡಪಕ್ಷಗಳ ಧೋರಣೆ ಬಗ್ಗೆ ಸ್ಪಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸಾಮ್ರಾಜ್ಯಶಾಹಿ ವಿರೋಧಿ ಮನಸ್ಸು ಹೊಂದಿರುವ, ಬದ್ಧತೆಯುಳ್ಳ ಪಕ್ಷವೊಂದರ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್ಸಿಗಿಂತಲೂ ದೊಡ್ಡ ಶತ್ರು ಹಾಗೂ ದೊಡ್ಡ ಅಪಾಯವಾಗಿರುವ ಪಕ್ಷವೊಂದರ ಪರವಾಗಿ ಮತ ಚಲಾಯಿಸಿದ್ದು ಹೇಗೆ?

ತೃಣಮೂಲ ಕಾಂಗ್ರೆಸ್ಸಿಗೆ ಒಂದು ಪಾಠ ಕಲಿಸಬೇಕು ಎಂಬ ಉದ್ದೇಶದಿಂದಲೇ ತಾವು ಬಿಜೆಪಿ ಪರವಾಗಿ ಮತ ಚಲಾಯಿಸಿರುವುದಾಗಿ ಎಡಪಕ್ಷಗಳ ಕೆಲವು ಕಾರ್ಯಕರ್ತರು ಬಹಿರಂಗವಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಕದನ ಪ್ರಮುಖವಾಗಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆಯೇ ಆಗಿತ್ತು ಎಂಬುದು ನಿಜ. ಮಮತಾ ಬ್ಯಾನರ್ಜಿ ಅವರು ಹತ್ತು ಹಲವು ರೋಡ್‌ ಷೋಗಳನ್ನು ದಣಿವರಿಯದೆ ನಡೆಸಿದರು,  ಉರಿಬಿಸಿಲಿನಲ್ಲೇ ಮೈಲುಗಟ್ಟಲೆ ಹೆಜ್ಜೆ ಹಾಕಿ ತಮ್ಮ ಪಕ್ಷದ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ ಬರುವಂತೆ ಮಾಡಲು ಯತ್ನಿಸಿದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಈ ರಾಜ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ರೋಡ್‌ ಷೋಗಳನ್ನು, ಸಭೆಗಳನ್ನು ನಡೆಸಿದರು.

ಈ ಪಕ್ಷಗಳ ಸಭೆಗಳಿಗೆ, ರೋಡ್‌ ಷೋಗಳಿಗೆ ಹೋಲಿಕೆ ಮಾಡಿದರೆ ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮಗಳಿಗೆ ಹಾಗೂ ಎಡಪಕ್ಷಗಳ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಬೇರೆಯವರು ಅಸೂಯೆಪಟ್ಟುಕೊಳ್ಳುವಷ್ಟು ಸಂಖ್ಯೆಯ ಸ್ಥಾನಗಳನ್ನು ಗೆದ್ದುಕೊಂಡ ನಂತರ ಬಿಜೆಪಿಯು ಎಡಪಕ್ಷಗಳಿಗೆ ಅಧಿಕೃತವಾಗಿ ಧನ್ಯವಾದ ಸಮರ್ಪಿಸಿತು. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೇನಾದರೂ ಇದೆಯೇ? ಬದ್ಧತೆ ಇರುವ ಎಡಪಕ್ಷಗಳು ತಮ್ಮ ಧೋರಣೆಗೆ ತದ್ವಿರುದ್ಧವಾಗಿ ಇರುವ ಇನ್ನೊಂದು ಪಕ್ಷವನ್ನು ಬೆಂಬಲಿಸಿದ್ದಾದರೂ ಹೇಗೆ? ಶತ್ರುವಿನ ಶತ್ರು ತನಗೆ ಎಲ್ಲ ಸಂದರ್ಭಗಳಲ್ಲೂ ಮಿತ್ರನಾಗಬೇಕು ಎಂದೇನೂ ಇಲ್ಲ ಎಂಬುದು ಇವರಿಗೆ ಒಮ್ಮೆಯೂ ಅರ್ಥವಾಗಲಿಲ್ಲವೇ?

ಜೋಸೆಫ್‌ ಸ್ಟಾಲಿನ್ ಅವರು ಎರಡನೆಯ ವಿಶ್ವ ಯುದ್ಧದ ಸಂದರ್ಭದಲ್ಲಿ ಫ್ರಾಂಕ್ಲಿನ್ ರೂಸ್‌ವೆಲ್ಟ್‌ ಹಾಗೂ ವಿನ್‌ಸ್ಟನ್‌ ಚರ್ಚಿಲ್ ಜೊತೆ ಸೇರಿದರು. ಆ್ಯಕ್ಸಿಸ್‌ಗೆ (ಇಟಲಿ, ಜಪಾನ್ ಮತ್ತು ಜರ್ಮನಿ ದೇಶಗಳ ಒಕ್ಕೂಟ) ವಿರುದ್ಧವಾದ ಒಕ್ಕೂಟವೊಂದರ ಅಗತ್ಯ ಇತ್ತು. ಆ್ಯಕ್ಸಿಸ್ ಗುಂಪು ಐತಿಹಾಸಿಕವಾಗಿಯೂ ಸೋವಿಯತ್‌ನ ಅತಿದೊಡ್ಡ ಶತ್ರುವೇ ಆಗಿತ್ತು. ಜಪಾನಿನ ಆಕ್ರಮಣ ತಡೆಯಲು ಮಾವೊ ಅವರು ಚಿಯಾಂಗ್ ಕೈಶೆಕ್ ಜೊತೆ ಕೈಜೋಡಿಸಿದರು.

ನಾವು ಇತಿಹಾಸದಿಂದ ಯಾವ ಪಾಠವನ್ನೂ ಕಲಿಯುವುದಿಲ್ಲ ಎಂಬುದು ಒಂದು ದುರಂತ. ‘ದೀದಿ, ಮೋದಿ ಇಬ್ಬರೂ ಒಂದೇ’ ಎನ್ನುವ ಕೀಳು ಅಭಿರುಚಿಯ ಘೋಷಣೆಯ ಮೂಲಕ ಎಡಪಕ್ಷಗಳು ಆತ್ಮಘಾತುಕ ಕೃತ್ಯದಲ್ಲಿ ತೊಡಗಿದವು. ಇದು ಹಿಂದೆಂದೂ ಆಗಿರದಂತಹ ಕೃತ್ಯವಾಗಿತ್ತು. ಎಡಪಕ್ಷಗಳು ಪ್ರತಿಪಾದಿಸುವ ಆಶಯಗಳಿಗಾಗಿಯೇ ಹೋರಾಟ ನಡೆಸುತ್ತಿರುವ- ಅಂದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳಲು ಬಿಡಬಾರದು ಎನ್ನುವ ಆಶಯ- ಪಕ್ಷವೊಂದನ್ನು ಸೋಲಿಸಲು, ಎಡಪಕ್ಷಗಳು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಪಕ್ಷದೊಂದಿಗೆ ಸ್ನೇಹ ಸಂಪಾದಿಸುವುದು ತೀರಾ ಅಪಾಯಕಾರಿ. ತ್ರಿಪುರಾ ರಾಜ್ಯದ ಹಿಂದಿನ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗೂ ಬುದ್ಧದೇವ ಭಟ್ಟಾಚಾರ್ಯ ಅವರು ‘ಬಿಜೆಪಿಗೆ ಮತ ನೀಡಬೇಡಿ’ ಎಂದು ಹೇಳಿದ್ದ ಎಚ್ಚರಿಕೆಯ ಮಾತುಗಳನ್ನು ತಿರಸ್ಕರಿಸಲಾಯಿತು. ಪಶ್ಚಿಮ ಬಂಗಾಳದ ತಣ್ಣನೆಯ ಪರಿಸರದಲ್ಲಿ ‘ಕೇಸರಿ ಸಂಸ್ಕೃತಿ’ ಪ್ರವೇಶಿಸಲು ಪರೋಕ್ಷವಾಗಿ ಸಹಾಯ ಮಾಡಿರುವುದು, ಆ ಮೂಲಕ ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ನಾಶ ಮಾಡಿರುವುದಕ್ಕೆ ಕಾರಣ ಎಡಪಕ್ಷಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು