ಮಂಗಳವಾರ, ನವೆಂಬರ್ 19, 2019
23 °C

ಒಲ್ಲದ ದಾಂಪತ್ಯಕ್ಕೆ ಪರಿಹಾರವೇನು?

Published:
Updated:

ನನಗೆ 19 ವರ್ಷ, ಪ್ರಥಮ ವರ್ಷ ಎಂ.ಎಸ್‌ಸಿ. ಓದುತ್ತಿರುವೆ. ಎಸ್‌.ಎಸ್‌.ಎಲ್‌.ಸಿ. ಹಾಗೂ ಪ್ರಥಮ ಪಿಯುಸಿಯಲ್ಲಿ ಚೆನ್ನಾಗಿ ಓದಿದ್ದು, ಶೇ‌ 95ಕ್ಕಿಂತ ಹೆಚ್ಚು ಅಂಕ ಬಂದಿವೆ. ಆದರೆ ದ್ವಿತೀಯ ಪಿಯುಸಿಯ ಮಧ್ಯದಿಂದ ಓದುವ ವಿಧಾನದಲ್ಲಿ ತಪ್ಪಾಗಿ ಭಯ, ನನ್ನಲ್ಲೇ ಮಾತಾಡೋದು, ನೆಗೆಟಿವ್‌ ಆಗಿ ಯೋಚಿಸೋದು ಜಾಸ್ತಿಯಾಯ್ತು. ಮನಃಶಾಸ್ತ್ರಜ್ಞರ ಬಳಿ ಹೋದರೂ ನಿರೀಕ್ಷಿತ ಬದಲಾವಣೆಗಳಾಗಿಲ್ಲ. ಪ್ರಸ್ತುತ ಓದಿನಲ್ಲಿ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ನಿರಾಸಕ್ತಿ, ಸೋಮಾರಿತನ ಕಾಡುತ್ತಿದೆ. ಹೊರಬರಲು ಯಾವುದೇ ಯೋಜನೆ ಹಾಕಿಕೊಂಡರೂ ಅಸ್ಥಿರತೆ ಕಾಡುತ್ತಿದೆ, ಮನಸ್ಸು ತುಂಬಾ ಡೈವರ್ಟ್ ಆಗ್ತಿದೆ, ಏನು ಮಾಡೋದು ದಯವಿಟ್ಟು ತಿಳಿಸಿ.

ಹೆಸರು, ಊರು ಬೇಡ

ಎರಡನೆ ಪಿಯುನಲ್ಲಿ ನಿಮ್ಮ ಮತ್ತು ಸುತ್ತಲಿನವರ ನಿರೀಕ್ಷೆಗಳ ಭಾರವನ್ನು ಹೊರಲಾಗದೆ ನೀವು ಕುಸಿದಿರುವ ಸಾಧ್ಯತೆಗಳಿವೆ. ಹೀಗೆ ಒಮ್ಮೆ ಕಳೆದುಹೋಗಿರುವ ಆತ್ಮವಿಶ್ವಾಸವನ್ನು ನೀವು ಹುಡುಕಿಕೊಂಡಿದ್ದೀರಾ? ಒಟ್ಟಾರೆ ಹೇಗೋ ಓದನ್ನು ಮುಂದುವರಿಸುತ್ತಿರಬೇಕಲ್ಲವೇ? ಹಿಂದೆ ಕಳೆದುಕೊಂಡಿರುವ ಅವಕಾಶಗಳನ್ನು ನೆನೆಸಿಕೊಳ್ಳುತ್ತಾ ಇವತ್ತಿನ ವಾಸ್ತವದಲ್ಲಿ ಆಸಕ್ತಿ ಕಳೆದುಕೊಂಡಿದ್ದೀರಿ. ನಿಮ್ಮ ಬಗೆಗೇ ನಿಮಗೆ ಪ್ರೀತಿ ವಿಶ್ವಾಸವಿಲ್ಲದಿದ್ದಾಗ ಅನುಮಾನಗಳು ಸೋಮಾರಿತನ, ನಿರಾಸಕ್ತಿಗಳು ಸಹಜವಲ್ಲವೇ? ನಿಮಗೆ ಬೇಕಾಗಿರುವುದು ಔಷಧಿಯಲ್ಲ, ನಿಮ್ಮ ಬಗೆಗಿನ ಅರಿವು ಮತ್ತು ಸೋಲುಗಳನ್ನು ಒಪ್ಪಿಕೊಂಡು ನಿಮ್ಮನ್ನೇ ಪ್ರೀತಿಸಿಕೊಳ್ಳುವ ಮುಕ್ತವಾದ ಮನಃಸ್ಥಿತಿ.

ಇದಕ್ಕಾಗಿ ನೀವು ಬೇರೆಯವರ ನಿರೀಕ್ಷೆಯಂತೆ ಬದುಕುವ ಪ್ರವೃತ್ತಿಯಿಂದ ಹೊರಬಂದು ನಿಮ್ಮದೇ ಆಸಕ್ತಿಗಳತ್ತ ಮುಖ ಮಾಡಬೇಕು. ನಿಮ್ಮ ಬಗೆಗೆ ನಿಮಗೆ ಗೌರವ ಹುಟ್ಟಬೇಕಾದರೆ ಹೇಗೆ ಬದುಕಬೇಕು ಎನ್ನುವುದರ ಬಗೆಗೆ ಯೋಚಿಸಿ. ಹಂತಹಂತವಾಗಿ ಆತ್ಮಗೌರವವನ್ನು ಗಳಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿ. ಆರಂಭದಲ್ಲಿ ಹೆಜ್ಜೆ ಹೆಜ್ಜೆಗೂ ಹಳೆಯ ಸೋಲುಗಳು ನಿಮ್ಮನ್ನು ಹಿಮ್ಮೆಟ್ಟಿಸುವುದು ಸಹಜ. ಅದನ್ನು ದಾಟಲು ಮನೋವೈದ್ಯರ ಬದಲಾಗಿ ಮನೋಚಿಕಿತ್ಸಕರನ್ನು ಸಂಪರ್ಕಿಸಿ. ಔಷಧಿಗಳನ್ನು ಈಗಲೂ ತೆಗೆದುಕೊಳ್ಳುತ್ತಿದ್ದರೆ ಮನೋಚಿಕಿತ್ಸಕರ ಬೆಂಬಲದೊಂದಿಗೆ ಹಂತಹಂತವಾಗಿ ಕಡಿಮೆ ಮಾಡಿ. ನಿಮ್ಮ ಮೆದುಳು ಮತ್ತು ಜೀವನವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಹೋದಾಗ ಮೂಡುವ ಆತ್ಮಗೌರವ ನಿಮಗೆ ಆಸಕ್ತಿ ವ್ಯವಸ್ಥಿತವಾಗಿ ಕೆಲಸಮಾಡುವ ಶಕ್ತಿ ಮತ್ತೆ ಕೊಡುತ್ತದೆ.

ನನಗೆ 38 ವರ್ಷ, ಮದುವೆಯಾಗಿ 10 ವರ್ಷಗಳಾಗಿದ್ದು ಎರಡು ಮಕ್ಕಳಿವೆ. ನಾನು ಡಿಪ್ಲೋಮಾ ಓದಿದ್ದು ನೌಕರಿಯಲ್ಲಿದ್ದೇನೆ. ಒಂದೂವರೆ ವರ್ಷ ಸಂಸಾರ ಮಾಡಿದ ಮೇಲೆ ಹೆಂಡತಿ ತವರು ಮನೆಯಲ್ಲಿದ್ದಾಳೆ. ಒತ್ತಾಯದಿಂದ ಅವಳನ್ನು ನನಗೆ ಮದುವೆ ಮಾಡಿದ್ದರೆಂದು ತಿಳಿದುಬಂದಿದೆ. ಹೆಂಡತಿ ವಿಚ್ಛೇದನ ಮತ್ತು ಜೀವನಾಂಶಕ್ಕೆ ಕೇಸ್‌ ದಾಖಲಿಸಿದ್ದಾರೆ. ನಾನು ಮದುವೆಯನ್ನು ಮುಂದುವರಿಸುವ ಕೇಸ್‌ ಹಾಕಿದ್ದೇನೆ. ನನಗೆ ಗೊತ್ತಾಗದಂತೆ ಅವಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ನನಗೆ ಅವಳ ಶೀಲದ ಮೇಲೆ ಶಂಕೆಯಿದೆ. ಮರುಮದುವೆ ಆಗಬೇಕೆಂದರೆ ಕಾನೂನು ಅಡ್ಡಬರುತ್ತದೆ. ತಂದೆಯವರಿಗೆ ಇರುವ ಎರಡು ಮನೆಗಳಲ್ಲಿ ಪಾಲು ಕೇಳುತ್ತಿದ್ದಾರೆ. ಎಲ್ಲಾ ವಿಷಯಗಳಿಗೂ ತಕ್ಕ ಪರಿಹಾರ ಕೋಡುತ್ತೀರೆಂದು ಕಾಯುತ್ತಿದ್ದೇನೆ.

ಹೆಸರು, ಊರು ಬೇಡ

ನಿಮ್ಮ ವೈವಾಹಿಕ ಸಮಸ್ಯೆ ಬಹಳ ಹಳೆಯದಾಗಿದ್ದು ಈಗಾಗಲೇ ಇಬ್ಬರೂ ಕಾನೂನಿನ ಮೊರೆಹೋಗಿದ್ದೀರಿ. ನಿಮ್ಮಿಬ್ಬರನ್ನೂ ಒಂದುಗೂಡಿಸಲು ಕುಟುಂಬಗಳ ಮಟ್ಟದಲ್ಲಿ ಸಾಕಷ್ಟು ರಾಜಿಪಂಚಾಯಿತಿಗಳು ನಡೆದಿರುವ ಸಾಧ್ಯತೆಗಳಿವೆ. ನೀವು ಕೆಲವು ಮೂಲಭೂತ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಂತಿಲ್ಲ. ಕಾರಣಗಳೇನೇ ಇದ್ದರೂ ಹೆಂಡತಿಗೆ ನಿಮ್ಮ ಜೊತೆಗೆ ಬದುಕಲು ಇಷ್ಟವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನೀವು ಕೂಡ ಅವಳ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೀರಿ. ಹೆಂಡತಿಯ ನಿರಾಸಕ್ತಿ ಮತ್ತು ನಿಮ್ಮ ಶಂಕೆಗಳನ್ನಿಟ್ಟುಕೊಂಡು ಸುಖ ಸಂಸಾರವನ್ನು ಮಾಡುವುದು ಹೇಗೆ ಸಾಧ್ಯ?

ಕೇಸ್‌ಗಳು ರಾಜಿಪಂಚಾಯಿತಿಗಳ ಜಂಜಾಟದಲ್ಲಿ ನೀವು ಹೆಂಡತಿಯ ಜೊತೆ ನೇರವಾಗಿ ಮಾತನಾಡಿ ಅವಳ ಮನಃಸ್ಥಿತಿಯನ್ನು ತಿಳಿದುಕೊಂಡಂತಿಲ್ಲ. ಒಮ್ಮೆ ಆ ಪ್ರಯತ್ನವನ್ನೂ ಏಕೆ ಮಾಡಬಾರದು? ನೀವಿಬ್ಬರೇ ಕುಳಿತು ಒಬ್ಬರನ್ನೊಬ್ಬರು ದೂಷಿಸದೆ ಇಬ್ಬರೂ ನಿಮಗೆ ಆಗಿರುವ ಮತ್ತು ಆಗುತ್ತಿರುವ ಕಷ್ಟಗಳನ್ನು ಹಂಚಿಕೊಳ್ಳಿ. ಒಂದಾಗಿ ಬದುಕುವುದು ಸಾಧ್ಯವೇ ಚರ್ಚೆ ಮಾಡಿ. ಅದಿಲ್ಲದಿದ್ದರೆ ವಿಚ್ಛೇದನವನ್ನು ಶೀಘ್ರವಾಗಿ ಪಡೆದುಕೊಳ್ಳುವುದು ಹೇಗೆ ಎಂದು ಇಬ್ಬರೂ ಒಟ್ಟಾಗಿ ತೀರ್ಮಾನಿಸಿ.
ಕಾನೂನು ಮತ್ತು ಜೀವನಾಂಶದ ವಿಚಾರಕ್ಕೆ ವಕೀಲರ ಸಲಹೆ ಪಡೆಯಿರಿ. ಒಟ್ಟಾಗಿರುವುದು ಸಾಧ್ಯವೇ ಇಲ್ಲವೆಂದಾದರೆ ಆದಷ್ಟು ಬೇಗ ನಿಮ್ಮ ಮಿತಿಯಲ್ಲಿ ಜೀವನಾಂಶವನ್ನು ಕೊಡುವ ಬಗೆಗೆ ಚರ್ಚೆಮಾಡಿ. ವಿಳಂಬ ಮಾಡಿದಷ್ಟೂ ನಿಮ್ಮ ಮನಸ್ಸಿನ ಕಹಿ ಹೆಚ್ಚುತ್ತದೆ ಮತ್ತು ಇನ್ನೊಂದು ಮದುವೆಯ ಆಸಕ್ತಿಯನ್ನು ಮುಂದೂಡಬೇಕಾಗುತ್ತದೆ.

ಹೆಂಡತಿ ಮತ್ತು ಅವರ ಮನೆಯವರ ಮೇಲಿನ ಸಿಟ್ಟಿನಿಂದ ಕೇಸ್‌ಗಳನ್ನು ಮುಂದುವರೆಸಿದರೆ ನಿಮ್ಮ ಜೀವನವೂ ಕಳೆದುಹೋಗುತ್ತದೆ ಎಂದು ಮರೆಯಬೇಡಿ. ಕೇವಲ ನಿಮ್ಮ ಸಂತೋಷವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಿ. ವಕೀಲರ, ಸ್ನೇಹಿತರ, ಮನೆಯವರ ಸಲಹೆ ಪಡೆದರೂ ನಿರ್ಧಾರ ಮಾತ್ರ ಪೂರ್ಣ ನಿಮ್ಮದೇ ಆಗಿರಲಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ಪ್ರತಿಕ್ರಿಯಿಸಿ (+)