‘ಒಂದಕ್ಕೆ’ ಎಲ್ಲಿ ಹೋಗಲಿ?

7

‘ಒಂದಕ್ಕೆ’ ಎಲ್ಲಿ ಹೋಗಲಿ?

Published:
Updated:

ಎಡೆಬಿಡದೆ ಸುರಿಯುತ್ತಿರುವ ಮಳೆ, ರಸ್ತೆ ತುಂಬೆಲ್ಲಾ ನೀರು, ರಸ್ತೆಯುದ್ದಕ್ಕೂ ಹಾರ್ನ್ ಮಾಡಿಕೊಂಡು ನಿಂತ ವಾಹನಗಳ ಸಾಲು... ಇದು ಮೊನ್ನೆಯ ಮಳೆಯ ದಿನ ಯಶವಂತಪುರ ವೃತ್ತದಲ್ಲಿ ಕಂಡ ದೃಶ್ಯ. ಸರ್ಕಲ್‌ ಬಳಿ ಸ್ವಲ್ಪವೂ ಮಿಸುಕಾಡದೆ ಗಂಟೆಗಟ್ಟಲೆ ನಿಂತಿದ್ದ ವಾಹನಗಳ ಸಾಲಿನಲ್ಲಿ ಆ ಬಿಎಂಟಿಸಿ ಬಸ್ಸೂ ಇತ್ತು. ಒಳಗೆ ಕುಳಿತಿದ್ದ ವಯಸ್ಸಾದ ಅಜ್ಜಿ ಕೂರಲಾರದೆ ಏಳಲಾರದೆ ಚಡಪಡಿಸುತ್ತಾ ಕಿಟಕಿಯ ಹೊರಗೆ ಕಣ್ಣು ಹಾಯಿಸುತ್ತಿದ್ದರು.

‘ಹತ್ತಿರದಲ್ಲಿ ಎಲ್ಲಾದರೂ ಸಾರ್ವಜನಿಕ ಶೌಚಾಲಯ ಇದೆಯೇ’ ಎಂದು ಪಕ್ಕ ಕೂತಿದ್ದ ಯುವತಿಯನ್ನು ಕೇಳಿದರು. ಅವರು ಮಧುಮೇಹಿ. ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾದ ಒತ್ತಡ. ಅಲ್ಲಿ ಶೌಚಾಲಯ ಎಲ್ಲಿದೆ ಎಂಬುದು ಆ ಯುವತಿಗೂ ಗೊತ್ತಿರಲಿಲ್ಲ. ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿದ್ದರಿಂದ ಬಸ್‌ ಮುಂದಕ್ಕೆ ಹೋಗಲು ಅವಕಾಶವೇ ಇರಲಿಲ್ಲ. ಕೊನೆಗೂ, ‘ಇನ್ನು ನನ್ನಿಂದಾಗಲ್ಲಪ್ಪ’ ಎಂದು ಅಜ್ಜಿ ಶೌಚಾಲಯ ಹುಡುಕುತ್ತಾ ಬಸ್‌ ಇಳಿದು ನಡೆದೇಬಿಟ್ಟರು. 

ಇದು ಅಜ್ಜಿಯೊಬ್ಬರ ಕತೆಯಲ್ಲ. ಮಳೆ, ಮೆರವಣಿಗೆ, ರಸ್ತೆ ಅಗೆತ, ಕಟ್ಟಡ ನಿರ್ಮಾಣ, ರಾಜಕಾರಣಿಗಳ ದೌಡು... ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌ ಆಗಲು ಒಂದೆರಡು ಕಾರಣವೇ? ಯಶವಂತಪುರ ಸರ್ಕಲ್‌, ಕೆ.ಆರ್‌. ಪುರಂ, ಕನಕಪುರ ರಸ್ತೆ, ರಿಚ್ಮಂಡ್‌ ಟೌನ್‌, ಜಯನಗರ ಎಕ್ಸ್‌ಟೆನ್ಷನ್‌ ಸೇರಿದಂತೆ ನಗರದ ಅನೇಕ ಸ್ಥಳಗಳಲ್ಲಿ ಮಳೆ ಬಂದರೆ ಅಥವಾ ಬೆಳಿಗ್ಗೆ, ಸಂಜೆ ಶಾಲೆ ಸಮಯದಲ್ಲಿ ಟ್ರಾಫಿಕ್‌ ಸಮಸ್ಯೆ ಮಾಮೂಲು. ಕೆಲವೊಮ್ಮೆ ಒಂದು ಗಂಟೆಯಾದರೂ ವಾಹನಗಳು ಮುಂದಕ್ಕೆ ಚಲಿಸುವುದೇ ಇಲ್ಲ. ಆಗ ಬಸ್‌ನಲ್ಲಿದ್ದ ಯಾರಿಗಾದರೂ ನೈಸರ್ಗಿಕ ಕರೆಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಎದುರಾದರೆ ಎಲ್ಲಿಗೆ ಹೋಗಬೇಕು? ರಸ್ತೆಗಳ ಸಮೀಪ ಸಾರ್ವಜನಿಕ ಶೌಚಾಲಯಗಳಾದರೂ ಎಷ್ಟಿವೆ?

ಪುರುಷರೇನೊ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ಬಿಡುತ್ತಾರೆ. ಹೇಳಿಕೊಳ್ಳಲೂ ಮುಜುಗರಪಡುವ ಮಹಿಳೆಯರ ಪಾಡೇನು? ಇಂತಹ ಸಂದರ್ಭದಲ್ಲಿ ಬಸ್‌ನಿಂದ ಇಳಿದು ಶೌಚಾಲಯ ಹುಡುಕಿಕೊಂಡು ಹೋಗುವುದೂ ಕಷ್ಟ.  ಆ ಬಸ್‌ನಲ್ಲಿದ್ದ ಪ್ರಯಾಣಿಕರ ಚರ್ಚೆ, ಅಸಮಾಧಾನ ವಾಹನಗಳ ಸರತಿಯಂತೆ ಒಂದಕ್ಕೊಂದು ಸೇರುತ್ತಲೇ ಇತ್ತು. ಎರಡು– ಮೂರು ರಸ್ತೆಗಳು ಸಂಧಿಸುವ ಜಂಕ್ಷನ್‌, ಸಿಗ್ನಲ್‌ ಮತ್ತು ಹೆಚ್ಚು ಜನದಟ್ಟಣೆ ಇರುವ ರಸ್ತೆಗಳಲ್ಲಿ ಇ– ಟಾಯ್ಲೆಟ್‌ ಸ್ಥಾಪಿಸುವುದೇ ಇದಕ್ಕೆ ಪರಿಹಾರ ಎಂಬ ಸಲಹೆಯೂ ತೂರಿಬಂತು. ರಸ್ತೆ ಬದಿಯಲ್ಲಿ ಅಲ್ಲಲ್ಲಿ ಶೌಚಾಲಯಗಳಿರಲೇಬೇಕು ಎಂಬ ಆಗ್ರಹ ಹೆಚ್ಚಾಗಿ ಕೇಳಿಬಂತು.


ಗೌತಮಿ, ಜಯನಗರ

ಬಸ್ ನಿಲ್ದಾಣ, ಸಿಗ್ನಲ್‌ ಸಮೀಪ ಶೌಚಾಲಯವಿರಲಿ

ನಾನು ಕಾಲೇಜಿನಿಂದ ದಿನಾ ಸಂಜೆ ಬಸ್‌ಗೆ ಮನೆಗೆ ಹೋಗಬೇಕು. ಟ್ರಾಫಿಕ್‌ ಇಲ್ಲದಿದ್ದರೆ ಮನೆಗೆ 35 ನಿಮಿಷದ ಹಾದಿ. ಆದರೆ ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ಟ್ರಾಫಿಕ್‌ ಇದ್ದೇ ಇರುತ್ತದೆ. ಕಾಲೇಜು ಮುಗಿದ ಕೂಡಲೇ ಮನೆಗೆ ಹೋಗುವ ಗಡಿಬಿಡಿಯಲ್ಲಿ ಶೌಚಾಲಯಕ್ಕೆ ಹೋಗಿರುವುದಿಲ್ಲ. ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ಶೌಚಾಲಯಕ್ಕೆ ಹೋಗಲು ಅವಸರವಾದರೆ ಹೆಣ್ಮಕ್ಕಳ ಪಾಡು ಹೇಳುವುದು ಬೇಡ.

ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ನಗರದ ಮಧ್ಯೆ ಇರುತ್ತವೆ. ಬಸ್‌ನಿಂದ ಇಳಿದು ಶೌಚಾಲಯಗಳನ್ನು ಹುಡುಕಿಕೊಂಡು ಹೇಗೆ ಹೋಗುವುದು? ವಯಸ್ಸಾದವರು ಹೇಗೆ ಹೋಗುತ್ತಾರೆ? ಹಾಗಾಗಿ ರಸ್ತೆಗೆ ಹತ್ತಿರದಲ್ಲಿ  ಶೌಚಾಲಯಗಳು ಲಭ್ಯವಿರಬೇಕು. ಶೌಚಾಲಯಗಳು ಇರುವ ಕಡೆ ಬೋರ್ಡ್‌ ಹಾಕಿದರೆ ಎಲ್ಲರ ಗಮನಕ್ಕೆ ಬರುತ್ತದೆ. ಬಸ್‌ನಿಲ್ದಾಣಗಳ ಸಮೀಪವೂ ಶೌಚಾಲಯ ಇರಲೇಬೇಕು.

***


ರಾಜೇಶ್‌, ಕೆ.ಆರ್‌.ಪುರಂ

ಹುಡುಗರ ಪಾಡೇ ಹೀಗಾದರೆ ಮಹಿಳೆಯರ ಗತಿ?

ನಾನು ದಿನಾ ಎಂ.ಜಿ ರಸ್ತೆಯಿಂದ ಕೆ.ಆರ್‌. ಪುರಂಗೆ ಹೋಗುತ್ತೇನೆ. ಒಂದು ದಿನ ಕೆ.ಆರ್‌. ಪುರಂನಲ್ಲಿ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡೆ. ಮೂತ್ರ ವಿಸರ್ಜನೆಗೆ ಅವಸರ ಆಯಿತು. ಬಸ್ಸಿನಿಂದ ಇಳಿದು ಅಕ್ಕಪಕ್ಕದಲ್ಲಿ ಶೌಚಾಲಯಗಳಿವೆಯೇ ಎಂದು ಹುಡುಕಿದೆ. ಸಮೀಪದಲ್ಲಿ ಇರಲಿಲ್ಲ. ಹುಡುಕಿಕೊಂಡು ಹೋದೆ. ಕೊನೆಗೆ ಒಂದು ಅಂಗಡಿಯವರನ್ನು ಶೌಚಾಲಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿ ದುಡ್ಡು ಕೊಟ್ಟು ಶೌಚಾಲಯ ಉಪಯೋಗಿಸಿದೆ. ಹುಡುಗರಿಗೇ ಇಷ್ಟೇ ಕಷ್ಟವಾದರೆ ಮಹಿಳೆಯರಿಗೆ ಎಷ್ಟು ಕಷ್ಟವಾಗಬಹುದು! ಇಂತಹ ವಿಷಯಗಳನ್ನು ಮಾತನಾಡಲು ಮುಜುಗರವಾಗುತ್ತದೆ. ಕೆಲ ಹೋಟೆಲ್‌ಗಳು, ಅಂಗಡಿಗಳಲ್ಲಿ ಅಲ್ಲಿನ ಗ್ರಾಹಕರಿಗೆ ಮಾತ್ರ ಶೌಚಾಲಯ ಉಪಯೋಗಿಸಲು ಅವಕಾಶವಿರುತ್ತದೆ. ಹಾಗಾಗಿ ಸಾರ್ವಜನಿಕ ಶೌಚಾಲಯಗಳು ಜನಸಂದಣಿ ಪ್ರದೇಶದಲ್ಲಿ ಇರಬೇಕು. 

***

ಸಮಸ್ಯೆ ಇಂದು ನಿನ್ನೆಯದಲ್ಲ


ಲೀಲಾ ಸಂಪಿಗೆ, ಸಾಮಾಜಿಕ ಕಾರ್ಯಕರ್ತೆ

ಈಚೆಗೆ ಒಮ್ಮೆ ನಾನು ಕೆಎಎಸ್ ಮಹಿಳಾ ಅಧಿಕಾರಿಗಳ ಜೊತೆ ಹಾವೇರಿಯಿಂದ ವಿಜಯಪುರಕ್ಕೆ ಹೋಗುತ್ತಿದ್ದೆ. ಅರ್ಧ ದಾರಿಯಲ್ಲಿ ಎಲ್ಲರಿಗೂ ಮೂತ್ರ ವಿಸರ್ಜನೆ ಮಾಡಲು ಅವಸರವಾಯಿತು. ಆದರೆ ದಾರಿಯಲ್ಲಿ ಸಾರ್ವಜನಿಕ ಶೌಚಾಲಯಗಳೇ ಸಿಗಲಿಲ್ಲ. ನಂತರ ಎಲ್ಲೋ ಒಂದು ಕಡೆ ಹಾಳು ಬಿದ್ದ ಮನೆ ಹಿಂದೆ ಹೋದೆವು. ಅಧಿಕಾರಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನು ಸಾಮಾನ್ಯ ಮಹಿಳೆಯರ ಪಾಡೇನು ಎಂದು ನನಗೆ ಅನಿಸಿತು.

ಉದ್ಯೋಗಸ್ಥ ಮಹಿಳೆಯರು, ಕಾಲೇಜು ಯುವತಿಯರು ಬಸ್ಸಿನಲ್ಲಿ ಓಡಾಡುತ್ತಾರೆ. ನೈಸರ್ಗಿಕ ಕ್ರಿಯೆಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹೆಚ್ಚು ಕಾಲ ತಡೆದುಕೊಂಡರೆ ಉರಿಮೂತ್ರ, ಮೂತ್ರಕೋಶದ ಸೋಂಕಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇನ್ನು ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆಯ ಕೊರತೆ. ಆ ಟಾಯ್ಲೆಟ್‌ ಬಳಸಿದರೆ ಮತ್ತೆಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತೋ ಅಂತ ಭಯ. ಅಲ್ಲಿ ಕೆಲವೊಮ್ಮೆ ನೀರೂ ಇರುವುದಿಲ್ಲ. ಶೌಚ ವ್ಯವಸ್ಥೆ ಮತ್ತು ಮಹಿಳೆಯ ವಿಚಾರದಲ್ಲಿ ಈ ಸಮಾಜ ಮತ್ತು ವ್ಯವಸ್ಥೆ ಯಾವತ್ತೂ ಆದ್ಯತೆ ಕೊಡುವುದಿಲ್ಲ. 

***


ವಿಜಯಶ್ರೀ, ಜಯನಗರ

ಇ–ಟಾಯ್ಲೆಟ್‌ ಹೆಚ್ಚಾಗಲಿ

ಮಧುಮೇಹಿಗಳಿಗೆ ಮತ್ತು ವಯಸ್ಸಾದವರಿಗೆ ಇಂತಹ ಸಮಸ್ಯೆ ಹೆಚ್ಚು ಕಾಡುತ್ತದೆ. ಹೆಚ್ಚಿನವರು ಬಿಎಂಟಿಸಿ ಬಸ್‌ಗಳಲ್ಲೇ ಓಡಾಡುತ್ತಾರೆ. ನಗರದ ಮಾರ್ಗ ಬದಿಗಳಲ್ಲಿ ಇ– ಟಾಯ್ಲೆಟ್‌  ಸ್ಥಾಪಿಸಿದರೆ ಹೆಚ್ಚು ಅನುಕೂಲ. ಜಂಕ್ಷನ್ ಮತ್ತು ವಾಹನದಟ್ಟಣೆಯಿಂದ ಹೆಚ್ಚು ಟ್ರಾಫಿಕ್‌ ಜಾಮ್‌ ಆಗುವ ಸ್ಥಳಗಳಲ್ಲಿ ಇ– ಟಾಯ್ಲೆಟ್‌  ಇರಲಿ. ಈ ಟಾಯ್ಲೆಟ್‌ಗಳನ್ನು ಬಳಸಲು ಸುಲಭ. ಜಾಗವೂ ಕಡಿಮೆ ಸಾಕಾಗುತ್ತದೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !