ಶುಕ್ರವಾರ, ಸೆಪ್ಟೆಂಬರ್ 24, 2021
24 °C

8ನೇ ಮಹಡಿಯಿಂದ ಹಾರಿ ಗೃಹಿಣಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೇಗೂರು ಮುಖ್ಯರಸ್ತೆಯ ‘ಎಸ್‌ಎನ್‌ಎನ್‌ ರಾಜ್ ಸೆರೆನಿಟಿ’ ಅಪಾರ್ಟ್‌ಮೆಂಟ್ ಸಮುಚ್ಚಯದ 8ನೇ ಮಹಡಿಯಿಂದ ಹಾರಿ ಸೀಮಾ ಸಿಂಗ್ (27) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ರಾತ್ರಿ 12.45ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮಧ್ಯಪ್ರದೇಶದ ಸೀಮಾ, ಸಾಫ್ಟ್‌ವೇರ್ ಉದ್ಯೋಗಿ ಪುಷ್ಪೇಂದ್ರ ಸಿಂಗ್ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ‘ಅಳಿಯ ಮಗಳಿಗೆ ತುಂಬ ಹಿಂಸೆ ಕೊಡುತ್ತಿದ್ದ. ಆತನ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಸೀಮಾ ಪೋಷಕರು ಆರೋಪಿಸಿರುವುದಾಗಿ ಬೇಗೂರು ಪೊಲೀಸರು ತಿಳಿಸಿದರು. 

‘ರಾತ್ರಿ 9 ಗಂಟೆಗೆ ಮನೆಗೆ ಬಂದೆ. ವಿನಾಕಾರಣ ಜಗಳ ತೆಗೆದ ಪತ್ನಿ, 12.30ರವರೆಗೂ ಕೂಗಾಡುತ್ತಲೇ ಇದ್ದಳು. ಆಕೆಯನ್ನು ಸಮಾಧಾನಪಡಿಸಲು ಸಾಧ್ಯವಾಗದೆ ನಾನು ಕೋಣೆಗೆ ತೆರಳಿದೆ. ಸ್ವಲ್ಪ ಸಮಯದಲ್ಲೇ ಸೀಮಾ ಬಾಲ್ಕನಿಯಿಂದ ಹಾರಿದ್ದಳು. ಕಟ್ಟಡದ ಇತರೆ ನಿವಾಸಿಗಳು ಹೇಳಿದಾಗಲೇ ನನಗೆ ವಿಷಯ ಗೊತ್ತಾಗಿದ್ದು’ ಎಂದು ಪುಷ್ಪೇಂದ್ರ ಹೇಳಿಕೆ ನೀಡಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆ: ಮತ್ತೊಂದು ಪ್ರಕರಣದಲ್ಲಿ ಗುರುವಾರ ಮಧ್ಯಾಹ್ನ ಆಚಾರ್ಯ ಕಾಲೇಜಿನ ಇಂಟೀರಿಯರ್ ಡಿಸೈನಿಂಗ್ ವಿದ್ಯಾರ್ಥಿನಿ ಕರ್ಮಿ ದೇನಾ (20) ‌ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಭೂತಾನ್‌ನ ಕರ್ಮಿ, ಕಾಲೇಜು ಆವರಣದಲ್ಲಿರುವ ಕಾಟೇಜ್‌ನಲ್ಲೇ ಉಳಿದುಕೊಂಡಿದ್ದಳು. ಮಧ್ಯಾಹ್ನ 12.30ರವರೆಗೂ ತರಗತಿಯಲ್ಲೇ ಇದ್ದ ಆಕೆ, ಆ ನಂತರ ಕಾಟೇಜ್‌ಗೆ ತೆರಳಿ ನೇಣು ಹಾಕಿಕೊಂಡಿದ್ದಾಳೆ. ಗೆಳತಿಯೊಬ್ಬಳು ಅಲ್ಲಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಾವುದೇ ಮರಣ ಪತ್ರ ಪತ್ತೆಯಾಗಿಲ್ಲ ಎಂದು ಸೋಲದೇವನಹಳ್ಳಿ ಪೊಲೀಸರು ಹೇಳಿದರು.

‘ಈ ಕೋರ್ಸ್ ಮಾಡಲು ನನಗೆ ಇಷ್ಟವಿಲ್ಲ. ಆದರೂ, ಪೋಷಕರ ಬಲವಂತ ಮಾಡಿ ಕಳುಹಿಸಿದ್ದಾರೆ’ ಎಂದು ಕರ್ಮಿ ತನ್ನ ಗೆಳತಿಯರ ಬಳಿ ಪದೇ ಪದೇ ಹೇಳಕೊಳ್ಳುತ್ತಿದ್ದಳು. ಅದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಅವರು ಶನಿವಾರ ನಗರಕ್ಕೆ ಬರುವ ಸಾಧ್ಯತೆ ಇದೆ. ಆರು ತಿಂಗಳ ಹಿಂದೆ ಕರ್ಮಿಯ ತಂಗಿಯೂ ಭೂತಾನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು