ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ: ಅಂಬೇಡ್ಕರ್ ಮತ್ತು ಮಹಿಳಾವಾದ..

ವಿಕಾಸ್ ಆರ್ ಮೌರ್ಯ
Published 12 ಏಪ್ರಿಲ್ 2024, 21:31 IST
Last Updated 12 ಏಪ್ರಿಲ್ 2024, 21:31 IST
ಅಕ್ಷರ ಗಾತ್ರ

ಮಹಿಳೆಯರು ಸಾಮಾಜಿಕವಾಗಿ ಸಬಲಗೊಳ್ಳಬೇಕು. ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಿರಬೇಕು. ಹೆಣ್ಣುಮಕ್ಕಳ ಮೇಲೆ ಮದುವೆಯನ್ನು ಹೇರಬಾರದು. ಗಂಡನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಬೇಕು. ಆಕೆ ಗಂಡನ ಗುಲಾಮಳಾಗಬಾರದು. ಮಹಿಳೆಗೆ ಅವಳದ್ದೇ ಆದ ಸ್ವಾತಂತ್ರ್ಯವಿದೆ ಹೀಗೆ ಹಲವು ವಿಚಾರಗಳನ್ನು ತಮ್ಮ ಬದುಕು, ಬರೆಹ, ಭಾಷಣಗಳಲ್ಲಿ ಪ್ರತಿಪಾದಿಸಿದ್ದ ಮಹಾನ್‌ ಚೇತನ ಡಾ.ಬಿ.ಆರ್‌.ಅಂಬೇಡ್ಕರ್‌.

ಏಪ್ರಿಲ್ 14 ಅಂಬೇಡ್ಕರ್‌ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವರ ಚಿಂತನೆಗಳ ಸ್ಮರಣೆ ಇದು.

ಅಂಬೇಡ್ಕರ್

ಅಂಬೇಡ್ಕರ್

ಡಾ. ಬಿ.ಆರ್.ಅಂಬೇಡ್ಕರ್‌ ಅವರನ್ನು ಓದಿಕೊಂಡಿರುವವರಿಗೆ ಅವರ ಮಹಿಳಾವಾದ ಪರಿಚಯವಾಗದೇ ಇರಲಾರದು. ಹಿಂದೂ ಕೋಡ್‌ಬಿಲ್, ಮಹಿಳಾ ಕಾರ್ಮಿಕರ ಕಲ್ಯಾಣ, ಸಮಾನ ವೇತನ, ತಾಯ್ತನದ ಸೌಲಭ್ಯ, ಮಹಿಳಾ ಶಿಕ್ಷಣ ಮುಂತಾದ ಪ್ರಬುದ್ಧ ಭಾರತದ ನಡೆಗಳಲ್ಲಿ ಅಂಬೇಡ್ಕರ್ ಕೊಡುಗೆ ಚಿರಪರಿಚಿತವಾಗಿವೆ.

ಮನುಸ್ಮೃತಿಯು ಮಹಿಳೆಯರಿಂದ ಕಿತ್ತುಕೊಂಡ ಹಕ್ಕುಗಳನ್ನು ಮರುಸ್ಥಾಪಿಸಲು ಅವರು ಶ್ರಮಿಸಿದರು. ಮಹಿಳೆಯರು ಸಾಮಾಜಿಕವಾಗಿ ಸಬಲಗೊಳ್ಳಬೇಕು. ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಿರಬೇಕು. ಹೆಣ್ಣುಮಕ್ಕಳ ಮೇಲೆ ಮದುವೆಯನ್ನು ಹೇರಬಾರದು. ಗಂಡನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಬೇಕು. ಆಕೆ ಗಂಡನ ಗುಲಾಮಳಾಗಬಾರದು. ಮಹಿಳೆಗೆ ಅವಳದ್ದೇ ಆದ ಸ್ವಾತಂತ್ರ್ಯವಿದೆ ಹೀಗೆ ಹಲವು ವಿಚಾರಗಳನ್ನು ಅವರ ಬದುಕು, ಬರೆಹ, ಭಾಷಣಗಳಲ್ಲಿ ನಾವು ಕಾಣಬಹುದಾಗಿದೆ.  ಅಂಬೇಡ್ಕರ್‌ ಅವರ ‘ಜಾತಿಪದ್ಧತಿಯ ಉಗಮ’ ಸಿದ್ಧಾಂತವು ಮೇಲ್ಜಾತಿಯ ಪುರುಷರು ತಮ್ಮ ಸಮುದಾಯದ ಹೆಣ್ಣನ್ನು ‘ಸ್ವಜಾತಿ ವಿವಾಹ’ದಲ್ಲಿ ಕಟ್ಟಿಹಾಕುವ ಮೂಲಕ ಅವಳನ್ನು ‘ಅಸ್ವತಂತ್ರಗೊಳಿಸಿ’ ‘ಪುರುಷಾಧೀನಳಾಗಿಸಿ’ ಜಾತಿಪದ್ಧತಿಯನ್ನು ಸೃಷ್ಟಿಸಿಕೊಂಡರು. ತಳಜಾತಿಗಳು ಇದನ್ನೇ ಅನುಕರಿಸಿದರು. ಇದಕ್ಕೆ ಮನುಸ್ಮೃತಿಯು ಧಾರ್ಮಿಕ ಪಾವಿತ್ರ್ಯತೆಯನ್ನು ಒದಗಿಸಿತು ಎಂದು ವಿವರಿಸುತ್ತದೆ. ಇದನ್ನೇ ‘ಮನುವಾದಿ ಗಂಡಾಳ್ವಿಕೆ’ ಎನ್ನಲಾಗುತ್ತದೆ. ಹಾಗಾಗಿ ಅಂಬೇಡ್ಕರ್ ಪ್ರಣೀತ ಮಹಿಳಾವಾದದ ದೃಷ್ಟಿಕೋನವು ವರ್ಗ, ಜಾತಿ ಮತ್ತು ಜೆಂಡರ್ ಒಳಗೊಳ್ಳುತ್ತದೆ. ಜಾತಿಶ್ರೇಣೀಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಜಾತಿಶ್ರೇಣೀಕರಣವು ‘ಶ್ರಮಿಕರ ವಿಭಜನೆ’ಯಂತೆ ಮಹಿಳೆಯರನ್ನೂ ಸಮಾನ ಶೋಷಿತರನ್ನಾಗಿ ಮಾಡಿಲ್ಲ. ಜಾತಿಶ್ರೇಣಿಯಲ್ಲಿ ಕೆಳಚಲಿಸಿದಷ್ಟೂ ಮಹಿಳೆಯರ ಸ್ಥಾನಮಾನ ಜಾತಿಯಾಧಾರಿತವಾಗಿ ಪತನವಾಗುತ್ತಾ ಹೋಗುತ್ತದೆ.

ಅಂಬೇಡ್ಕರ್‌ ಅವರು ಹಿಂದೂ ಕೋಡ್‌ಬಿಲ್ ಮೂಲಕ ಎಲ್ಲಾ ಜಾತಿಶ್ರೇಣಿಯ ಮಹಿಳೆಯರ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿದ್ದರು.  ‘ಮನುವಾದಿ ಗಂಡಾಳ್ವಿಕೆ’ಯು ಜಾತಿಪದ್ಧತಿಯನ್ನು ಜಾರಿಗೊಳಿಸಲು ಕಂಡುಕೊಂಡ ಮೂರು ದಾರಿಗಳನ್ನು ಅಂಬೇಡ್ಕರ್ ಗುರುತಿಸಿದ್ದಾರೆ

1. ಸತಿಪದ್ಧತಿ 2. ಬಲವಂತದ ವೈಧವ್ಯ 3. ಹೆಣ್ಣುಮಕ್ಕಳ ಬಾಲ್ಯವಿವಾಹ. ಈ ಮೂರು ಆಚರಣೆಗಳ ಮೂಲಕ ಅಂತರ್ಜಾತಿ ವಿವಾಹಕ್ಕೆ ತಡೆಯೊಡ್ಡಿದ್ದರಿಂದಲೇ ಲೆಕ್ಕವಿಲ್ಲದಷ್ಟು ಜಾತಿಗಳು ರೂಪುಗೊಂಡವು. ಹಾಗಾಗಿಯೇ ಜಾತಿವಿನಾಶಕ್ಕೆ ಅಂಬೇಡ್ಕರ್ ಸೂಚಿಸಿದ ಮೊಟ್ಟಮೊದಲ ಹೆಜ್ಜೆ ‘ಅಂತರ್ಜಾತಿ ವಿವಾಹ’. ಇಂದು ಮೇಲಿನ ಮೂರೂ ದಾರಿಗಳ ಬದಲಿಗೆ ‘ಮರ್ಯಾದೆ’ ಹೆಸರಿನಲ್ಲಿ ಹೆತ್ತವರೇ ತಮ್ಮ ಹೆಣ್ಣುಮಕ್ಕಳನ್ನು ಹತ್ಯೆ ಮಾಡುತ್ತಿದ್ದಾರೆ. ಇದಕ್ಕೆ ಆಯಾ ಜಾತಿಸಮುದಾಯದ ಸಮ್ಮತಿಯೂ ಇದೆ. ಈ ಕ್ರೂರಕೃತ್ಯಕ್ಕೆ ‘ಮರ್ಯಾದೆಗೇಡು ಹತ್ಯೆ’ ಎಂಬ ಹೆಸರನ್ನೂ ಇಟ್ಟುಕೊಂಡಿದ್ದಾರೆ. ಮರ್ಯಾದೆಗೇಡು ಹತ್ಯೆಗೆ ಮೂಲಕಾರಣ ತಿಳಿದೋ ತಿಳಿಯದೆಯೋ ಜಾತಿಪದ್ಧತಿಯ ನಾಶಗೈಯ್ಯಲು ಮುಂದಾಗುವ ಯುವಜನತೆಯನ್ನು ಅದರಲ್ಲೂ ಹೆಣ್ಣನ್ನು ‘ಮನುವಾದಿ ಗಂಡಾಳ್ವಿಕೆ’ಯು ಶಿಕ್ಷಿಸುವುದಾಗಿದೆ. ಆ ಮೂಲಕ ಹೆಣ್ಣುಸಂಕುಲಕ್ಕೆ ‘ಗೆರೆ’ ದಾಟದಂತೆ ನೀಡುತ್ತಿರುವ ಎಚ್ಚರಿಕೆಯಾಗಿದೆ. ಈ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಜೆಂಡರ್‌ನೊಂದಿಗೆ ಜಾತಿಶ್ರೇಣೀಕರಣದ ದೃಷ್ಟಿಕೋನವೂ ಬಹುಮುಖ್ಯವಾಗುತ್ತದೆ. ಹಾಗಾಗಿ ‘ಮನುವಾದಿ ಗಂಡಾಳ್ವಿಕೆ’ ಪರಿಕಲ್ಪನೆಯು ಅಂಬೇಡ್ಕರ್‌ ಅವರು ಮಹಿಳಾವಾದಕ್ಕೆ ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ. 

ಭಾರತದ ನೈಜ ಸ್ವಾತಂತ್ರ್ಯವು ಜಾತಿವಿನಾಶದಲ್ಲಿದೆ. ಜನಚಳವಳಿಗಳು ಜಾತಿವಿನಾಶದಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ ಮಹಿಳಾವಾದವು ಜಾತಿವಿನಾಶ ಚಳವಳಿಯ ನಾಯಕತ್ವ ವಹಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ವರ್ಗ, ಜಾತಿ ಮತ್ತು ಜೆಂಡರ್ ಚಳವಳಿಗಳು ಒಗ್ಗಟ್ಟಿನಿಂದ ಅಂಬೇಡ್ಕರ್ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಬೇಕಿದೆ.

****

ಅಂಬೇಡ್ಕರ್‌ ಅವರ ವ್ಯಕ್ತಿತ್ವವನ್ನು ಪ್ರೇರಣೆಯಾಗಿಟ್ಟುಕೊಂಡು ಬದುಕು ಕಟ್ಟಿಕೊಂಡವರ ಮಾತುಗಳನ್ನು ಓದೇಶ ಸಕಲೇಶಪುರ ಇಲ್ಲಿ ನಿರೂಪಿಸಿದ್ದಾರೆ.

ಪ್ರತಿರೋಧಿಸಲು ಕಲಿಸಿಕೊಟ್ಟವರು

ಮನುಸ್ಮೃತಿಯಲ್ಲಿ ಬಂಧಿಯಾಗಿದ್ದ ಮಹಿಳೆಯರ ಹಕ್ಕುಗಳಿಗೆ ವಿಮೋಚನೆ ಕೊಡಿಸಿದವರು ಅಂಬೇಡ್ಕರ್. ನನ್ನ ಮನೆಯೊಳಗೇ ಅಸ್ಪೃಶ್ಯತೆ ಹಾಗೂ ಜಾತೀಯತೆಯನ್ನು ಕಂಡಿದ್ದ ನನಗೆ, ಚಿಕ್ಕಂದಿನಲ್ಲೇ ಪ್ರತಿರೋಧವೂ ಹುಟ್ಟಿಕೊಂಡಿತು. ಮುಂದೆ ರೈತಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಮಹಿಳೆಯರ ಪಾಲ್ಗೊಳ್ಳುವಿಕೆ ಮಹತ್ವ ಸಾರುವುದಕ್ಕೆ ಮತ್ತು ಅಂತರ್ಜಾತಿ ವಿವಾಹ ಸೇರಿದಂತೆ ಹಲವು ಚಳವಳಿಗಳ ಭಾಗವಾಗುವಲ್ಲಿ ಅಂಬೇಡ್ಕರ್ ಚಿಂತನೆಗಳ ಪ್ರಭಾವ ಸಾಕಷ್ಟಿದೆ.

–ಅನಸೂಯಮ್ಮ ಬಿ. ರೈತಪರ ಹೋರಾಟಗಾರ್ತಿ.

ದೂಳು ಒರೆಸಿದ ಚೇತನ

ಹೋರಾಟಗಾರರ ಒಡನಾಡಿ ಅಂಬೇಡ್ಕರ್. ಹಕ್ಕುಗಳ ಪರವಾಗಿ ಹೋರಾಡುವವರಿಗೆ ಅಂಬೇಡ್ಕರ್ ಚಿಂತನೆಗಳು ಬೇಕೇ ಬೇಕು. ನಮ್ಮ ಬೇಡಿಕೆ ಮತ್ತು ಹಕ್ಕಿಗೆ ನ್ಯಾಯಬದ್ಧ ಅವಕಾಶ ಕಲ್ಪಿಸಿದವರು ಅಂಬೇಡ್ಕರ್. ನಾನೆಂದರೆ ಕೇವಲ ನಾನಲ್ಲ, ನಾನೊಬ್ಬ ಸಮಾಜದ ಅವಿಭಾಜ್ಯ ಅಂಗ ಎಂಬುದನ್ನು ಒತ್ತಿ ಹೇಳಿದರು. ನ್ಯಾಯದ ಕಣ್ಣನ್ನು ಮಸುಕುಗೊಳಿಸಿದ್ದ ದೂಳನ್ನು ಒರೆಸಿದ ಚೇತನ ಅಂಬೇಡ್ಕರ್.

–ಡಾ. ಎಚ್‌.ಎಸ್. ಅನುಪಮಾ, ಲೇಖಕಿ.

ಓದಲು ಅವರೇ ಸ್ಫೂರ್ತಿ

ಅಂಬೇಡ್ಕರ್ ಅವರು ಓದಿದ ಪರಿ, ಬಡತನದಿಂದ ಎದ್ದು ಬಂದ ಬಗೆ, ಮೌನವಾಗಿಯೇ ಸಂವಿಧಾನದ ಎಳೆಗಳಲ್ಲಿ ಭದ್ರಪಡಿಸಿದ ನಮ್ಮ ಹಕ್ಕುಗಳು, ಅದರಲ್ಲೂ ಮಹಿಳೆಯರಿಗಾಗಿ ಜಾರಿಗೆ ತಂದ ಹಿಂದೂ ಕೋಡ್ ಬಿಲ್‌ಗಾಗಿ ಭಾರತದ ಎಲ್ಲ ಧರ್ಮದ, ಎಲ್ಲ ಜಾತಿಯ ಮತ್ತು ಎಲ್ಲ ವರ್ಗದವರು ಋಣಿಯಾಗಿದ್ದೇವೆ. ನನ್ನ ಜನರು ಗುಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ಬಿಟ್ಟು ಗ್ರಂಥಾಲಯಗಳ ಮುಂದೆ ನಿಲ್ಲುವಂತಾಗಬೇಕು ಎಂದು ಹೇಳಿದ ಮಾತಿನಿಂದ ಪ್ರಭಾವಿತಳಾಗಿ ಓದಿನ ಕಡೆ ಗಮನ ಕೊಟ್ಟೆ. ತಂದೆ, ಬಂಧು-ಬಳಗದ ವಿರೋಧವಿದ್ದರೂ ಓದಿ ಮುಂದೆ ಬಂದೆ. ಬದುಕಿನಲ್ಲಿ ನನ್ನದೇ ಆದ ಜಾಗವೊಂದು ಮಾಡಿಕೊಂಡೆ. ಇದಕ್ಕೆಲ್ಲ ಅಂಬೇಡ್ಕರ್ ಸಹ ಸ್ಫೂರ್ತಿ.

–ಕೆ.‌‌ ಷರೀಫಾ, ಸಾಹಿತಿ.

ಆಳವಾಗಿ ಪ್ರಭಾವ ಬೀರಿದ ವ್ಯಕ್ತಿತ್ವ

80ರ ದಶಕದಲ್ಲಿ ಸಾಮಾಜಿಕ ಸಂಚಲನ ಮೂಡಿಸಿದ ದಲಿತ ಸಂಘರ್ಷ ಸಮಿತಿಯ ಹೋರಾಟಗಳು ಅಂಬೇಡ್ಕರ್ ಅನುಭವಿಸಿದ ಅಪಮಾನಗಳನ್ನು ತೆರೆದಿಟ್ಟವು ಮತ್ತು ಅವರ ಚಿಂತನೆಗಳ ಸಾಮಾಜಿಕ ಪ್ರಸ್ತುತತೆಯನ್ನು ಎತ್ತಿ ಹಿಡಿದವು. ಡಿಎಸ್‌ಎಸ್‌ ಹೋರಾಟಗಳಲ್ಲಿ ಸಕ್ರಿಯವಾಗಿ  ತೊಡಗಿಸಿಕೊಂಡಿದ್ದರಿಂದ ಸಾಮಾಜಿಕ ಅನಿವಾರ್ಯತೆಗಳು ನನ್ನನ್ನು ಕೂಡ ಆವರಿಸಿದವು. ಮಹಿಳೆಯಾಗಿ ನನಗೆ ಅಂಬೇಡ್ಕರ್ ಅವರ ಮಹಿಳಾಪರ ಚಿಂತನೆಗಳು, ವಕೀಲಳಾಗಿ ಅವರ ಅಪಾರ ವಿದ್ವತ್ತು ಮತ್ತು ಸಂವಿಧಾನ ರಚನೆಯ ಸಂದರ್ಭದಲ್ಲಿ ಮೂಡಿ ಬಂದ ಅತ್ಯಂತ ಗಹನ ಚಿಂತನೆಗಳು ನನ್ನನ್ನು ತೀವ್ರವಾಗಿ ಪ್ರಭಾವಿಸಿವೆ. ವ್ಯಕ್ತಿಯಾಗಿ ಸ್ಥಾನಮಾನ ಪಡೆಯುವುದು ಅವರಿಗೆ ಮುಖ್ಯವಾಗಿರಲಿಲ್ಲ. ಕಷ್ಟವೂ ಆಗಿರಲಿಲ್ಲ. ಆದರೆ, ಸೈದ್ಧಾಂತಿಕ ಮತ್ತು ಸಾಮುದಾಯಿಕ ಚಿಂತನೆ ಮತ್ತು ಹೋರಾಟಗಳು ಹಾಗೂ ಅದರ ಫಲಿತಾಂಶಗಳು ನನ್ನಂಥವರ ಮೇಲೆ ಆಳವಾಗಿ ಪ್ರಭಾವ ಬೀರಿವೆ.

–ಬಾನು ಮುಷ್ತಾಕ್, ಲೇಖಕಿ ಹಾಗೂ ವಕೀಲೆ.

ಹೋರಾಟದ ಬದುಕಿಗೆ ಪ್ರೇರಣೆ

ಜಾತಿ ಮತ್ತು ವರ್ಗ ತಾರತಮ್ಯದ ವ್ಯವಸ್ಥೆ ಕಿತ್ತೊಗೆಯದೆ ವಿಮೋಚನೆ ಇಲ್ಲ ಎಂಬ ಅಂಬೇಡ್ಕರ್ ಮಾತು ನನ್ನನ್ನು ಬಹಳ ಪ್ರಭಾವಿಸಿದೆ. ಮಹಿಳೆಯರ ಆರ್ಥಿಕ ಹಕ್ಕುಗಳಿಗಾಗಿ ಮಂಡಿಸಿದ್ದ ಹಿಂದೂ ಕೋಡ್ ಬಿಲ್‌ಗೆ ಒಪ್ಪಿಗೆ ಸಿಗದಿದ್ದಾಗ ಅಂಬೇಡ್ಕರ್ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರೊಳಗಿದ್ದ ತಾಯ್ತನಕ್ಕೊಂದು
ನಿದರ್ಶನ. ಭಾರತದಲ್ಲಿ ವರ್ಗ ಮತ್ತು ಜಾತೀಯತೆ ವಿರುದ್ಧದ ಹೋರಾಟಕ್ಕೆ ದನಿ ಎತ್ತಿದವರು ಅಂಬೇಡ್ಕರ್. ಅವರ ಬದುಕು ಮತ್ತು ಚಿಂತನೆ ವೈಯಕ್ತಿಕ ಮತ್ತು ಹೋರಾಟದ ಬದುಕಿಗೆ ಪ್ರೇರಣೆಯಾಗಿದೆ.

–ಕೆ. ನೀಲಾ, ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ.

******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT