ಡಿಜಿಟಲ್ ತಾಣದಲ್ಲಿ ಕಿರುಕುಳ: ಸಾಮಾಜಿಕ ಪ್ರಜ್ಞೆಯ ಕೊರತೆಯ ಅನಾವರಣ

ಮಂಗಳವಾರ, ಮಾರ್ಚ್ 26, 2019
33 °C

ಡಿಜಿಟಲ್ ತಾಣದಲ್ಲಿ ಕಿರುಕುಳ: ಸಾಮಾಜಿಕ ಪ್ರಜ್ಞೆಯ ಕೊರತೆಯ ಅನಾವರಣ

Published:
Updated:

ಕಳೆದ ವರ್ಷದ ಕೊನೆಯ ಹೊತ್ತಿಗೆ ತಣ್ಣಗಿನ ಸಂಚಲವೊಂದು ರೂಪುಗೊಳ್ಳುತ್ತಿತ್ತು. ಸಾಮಾಜಿಕ ಜಾಲತಾಣ ಬಳಸಲು ಸಾಧ್ಯವಿರುವ ಕೆಲವು ಹೆಣ್ಣು ಮಕ್ಕಳು ತಮಗೆ ಆದ ಲೈಂಗಿಕ ಕಿರುಕುಳವನ್ನು ಯಾವ ಹಿಂಜರಿಕೆಯೂ ಇಲ್ಲದೆ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸುತ್ತಾ ಹೇಳಲು ಪ್ರಾರಂಭಿಸಿದ್ದರು. ಇದು ಬರೀ ಟ್ವಿಟ್ಟರ್‌ನಲ್ಲಿ ಮಾತ್ರ ಶುರುವಾಗಿ ನಂತರ ದೊಡ್ಡ ದೊಡ್ಡ ವ್ಯಕ್ತಿಗಳ ಕೆಟ್ಟ ನಡವಳಿಕೆಗಳು ಬಹಿರಂಗ ಆಗುತ್ತಾ ಹೋಯಿತು. ಅದಕ್ಕೆ ಸರಿಯಾಗಿ ಒಂದು ವರ್ಷ ಮುಂಚೆ, ಹೆಣ್ಣು ಮಕ್ಕಳು ಟ್ವಿಟ್ಟರ್‌ನ್ನೇ ತ್ಯಜಿಸುತ್ತೇವೆ ಎನ್ನುವ ಅಭಿಯಾನ ಶುರುಮಾಡಿಕೊಂಡಿದ್ದರು. ಅದಕ್ಕೆ ಕಾರಣ ಸಾಮಾಜಿಕ ಜಾಲತಾಣ ಬಳಸುವ ಹೆಣ್ಣು ಮಕ್ಕಳು ಟ್ವಿಟ್ಟರ್ ತನ್ನ ಲಾಭಕ್ಕೋಸ್ಕರ ಬೇಜವಾಬ್ದಾರಿಯಾಗಿ ನಿಂದಿಸುವ, ಕಿರುಕುಳ ಹಾಗೂ ಅತ್ಯಾಚಾರ/ಕೊಲೆ ಮಾಡುವ ಬೆದರಿಕೆ ನೀಡುವ ಅಕೌಂಟುಗಳನ್ನು ಸರಿಯಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯ ಹೇರಿದ್ದರು.

ಇದು ಕಾಕತಾಳೀಯವೇ ಇದ್ದಿರಬೇಕು. ಒಂದು ವರ್ಷದ ನಂತರ ಹೆಣ್ಣುಮಕ್ಕಳ ಮೀ ಟೂ ಸಾಹಸಗಾಥೆಗೆ ಇದೇ ಟ್ವಿಟ್ಟರ್ ವೇದಿಕೆಯಾಯಿತು. ಕೆಲವು ಸಾಧ್ಯತೆಗಳನ್ನೂ ತೆರೆದು ಜಗದ ಮುಂದೆ ಇಟ್ಟಿತು. ಆದರೆ ಇದು ಮಾಧ್ಯಮವನ್ನು ದಕ್ಕಿಸಿಕೊಂಡವರ ಮಾತಾಯಿತು. ಕೆಲವು ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದ ಕಿರುಕುಳ ತಾಳಲಾರದೆ ಹೆದರಿ ಇಲ್ಲಿಂದ ಮರೆಯಾಗಿದ್ದೂ ಇದೆ.  

ಎಂಭತ್ತು ತೊಂಭತ್ತರ ದಶಕಗಳಲ್ಲಿ ತಂತ್ರಜ್ಞಾನ ತನ್ನ ಒಂದೊಂದೇ ಸಾಧ್ಯತೆಯನ್ನು ನಮ್ಮ ಮುಂದೆ ಇಡುತ್ತಾ ಹೋಗುವಾಗ ಒಂಥರಾ ಪುಳಕ ಮೂಡುತ್ತಿತ್ತು. ಈ ಕಂಪ್ಯೂಟರಿನ ಕೀಲಿಮಣೆಯ ಸಹಾಯದಲ್ಲಿ ಮೂಡುವ ಜಗತ್ತು ನಿಸ್ತಂತುವಾಗಿ ಹೋದಂತೆ ಮತ್ತಿನ್ನೇನೋ ಆದಂತೆ ಎಲ್ಲವೂ ಹೊಸತಾಗಿ ಶುರುವಾಗಿ, ಆ ಹೊಸ ಜಗತ್ತಿನಲ್ಲಿ ಹಳೆಯ ಜಗತ್ತಿನ ಗೋಳುಗಳು ಪೂರ್ವಾಗ್ರಹಗಳು ನಾಶವಾಗಿ ಹೊಸತೊಂದು ಸ್ಲೇಟಿನ ಮೇಲೆ ಹೊಚ್ಚ ಹೊಸ ಅಕ್ಷರಗಳನ್ನು ಮೂಡಿಸಿ ನವೀನ ಪ್ರಪಂಚವನ್ನು ಸೃಷ್ಟಿ ಮಾಡಬಹುದು ಎನ್ನಿಸಿತ್ತು.

ಆದರೆ ಆ ಬೆಚ್ಚನೆ ಕನಸಿಗೆ ತಣ್ಣೀರು ಬೀಳಲು ಹೆಚ್ಚು ಸಮಯ ಬೇಕಾಗಲಿಲ್ಲ ಎನ್ನುವುದು ಸತ್ಯ. ಇಂದು ಡಿಜಿಟಲ್ ಕನಸುಗಳಲ್ಲಿ ನಾವು ನೋಡುತ್ತಿರುವುದು ವಾಸ್ತವದ ಪೂರ್ವಾಗ್ರಹ, ರೋಗಿಷ್ಟ ಮನಃಸ್ಥಿತಿಯ ಕೆಟ್ಟ ಅನುಕರಣೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ತಂತ್ರಜ್ಞಾನ ಹಾಗೂ ಡಿಜಿಟಲ್ ಜಗತ್ತಿನಲ್ಲಿ ಸಾಧ್ಯತೆಗಳೆಷ್ಟಿವೆಯೋ, ನಿಜಜೀವನದಲ್ಲಿ ಎದುರಿಸಲಾಗದಷ್ಟು ಕಿರುಕುಳಗಳೂ ಅಲ್ಲೇ ಹಾಸುಹೊಕ್ಕಾಗಿವೆ.

ಹೀಗ್ಯಾಕಾಯಿತು? ಇದು ಸಂಸ್ಕೃತಿಹೀನ ಮನಸ್ಸಿಗಳು ಅಥವಾ ಸಾಮಾಜಿಕ ಜವಾಬ್ದಾರಿ ಇಲ್ಲದ ವ್ಯಕ್ತಿಗಳು ಓಡಾಡುವ ಸ್ಥಳವಲ್ಲ. ಇಲ್ಲಿರುವವರಿಗೆ ಕನಿಷ್ಠ ಶಿಕ್ಷಣ ಇದೆ. ಹಾಗೂ ಒಂದು ಕಂಪ್ಯೂಟರನ್ನೋ ಅಥವಾ ಆಂಡ್ರಾಯ್ಡ್ ಫೋನನ್ನೋ ಕೊಳ್ಳುವಷ್ಟು ಸಾಮರ್ಥ್ಯವಂತೂ ಖಂಡಿತಾ ಇದೆ. ಹಾಗಿದ್ದೂ ಇನ್ನೊಬ್ಬ ವ್ಯಕ್ತಿಗೆ ಮಾನಸಿಕ ಕಿರುಕುಳ ಉಂಟಾಗುವ ಹಾಗೆ ಮಾತನಾಡಬಾರದು ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲದೆ ಹೋದರೆ ಹೇಗೆ?

ಡಿಜಿಟಲ್ ಯುಗದ ಕನಸು ಕಾಣುತ್ತಾ ನಾವೊಂದು ಸಂಗತಿ ಮರೆತಿದ್ದೆವು. ಅದೇನೆಂದರೆ ಡಿಜಿಟಲ್ ತಾಣ ವಾಸ್ತವಕ್ಕಿಂತ ಕಡಿಮೆ ಜವಾಬ್ದಾರಿ ಬೇಡುತ್ತದೆ.  ಅಲ್ಲಿ ಯಾರು ಯಾವ ಮೂಲೆಯಲ್ಲಿ ಕೂತೂ ಹೊಲಸನ್ನು ಚೆಲ್ಲಿ ಬಿಡಬಹುದು. ಹಾಗೆ ಮಾಡಿ ಮಾಯ ಕೂಡ ಆಗಬಹುದು. ಮತ್ತೆ ತಂತ್ರಜ್ಞಾನದ ಸಾಧ್ಯತೆ ಬಳಸುವವರಿಗೆ ಗೊತ್ತಿರುವಷ್ಟು ತನಿಖೆ ಮಾಡುವವರಿಗೆ ಅರ್ಥವಾಗಿದ್ದು ಕಡಿಮೆ.

ಇತ್ತೀಚಿನ ದಿನಗಳಲ್ಲಿ ತನಿಖೆ ಮಾಡುವ ಸೈಬರ್ ಪೋಲಿಸರು ಸಾಕಷ್ಟೇ ಚುರುಕಾಗಿದ್ದಾರೆ ಎನ್ನುವುದು ತಿಳಿದಾಗಲೂ ಸಹ ಸಮಾಧಾನ ಮೂಡುವುದಿಲ್ಲ. ಕಾರಣ ವಾಸ್ತವದ ಜಗತ್ತು ಅನಾಮಿಕರಾಗಿರಲು ಕೊಡಲಾಗದಷ್ಟು ಅವಕಾಶಗಳನ್ನು ಸೈಬರ್ ಜಗತ್ತು ಕೊಡುತ್ತದೆ.

ಅಂತರರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ವರದಿ ಹೇಳುವ ಪ್ರಕಾರ ಕನಿಷ್ಠ 30%  ಮಹಿಳೆಯರು “ಆನ್ ಲೈನ್ ಅಬ್ಯೂಸ್” ಅಂದರೆ ಜಾಲತಾಣದಲ್ಲಿ ಕಿರುಕುಳಕ್ಕೆ ಒಳಗಾಗಿ ಕೆಲವೊಮ್ಮೆ ಜಾಲತಾಣದ ಬಳಕೆಯನ್ನು ನಿಲ್ಲಿಸಿಯೇ ಬಿಟ್ಟಿದ್ದರು.

ಜಾಲತಾಣ ಬಳಸುವ ಹಾಗೂ ಬೆದರಿಕೆ ಸಂದೇಶಗಳಿಗೆ ತುತ್ತಾದ  41% ಮಹಿಳೆಯರಿಗೆ ತಮ್ಮ ಸಾಮಾಜಿಕ ಹಾಗೂ ದೈಹಿಕ ಸುರಕ್ಷೆಯ ಬಗ್ಗೆ ಚಿಂತೆ ಆಗಿತ್ತು ಎಂದು ಹೇಳಿದ್ದಾರೆ. ಅಂದರೆ ಇದು ಬರೀ ಡಿಜಿಟಲ್ ಮಾಧ್ಯಮದ ಮಾತಲ್ಲ. ಇದು ವಾಸ್ತವಕ್ಕೆ ಬಂದು ಸಾಕಷ್ಟು ಕಾಲವೇ ಆಗಿದೆ. ಹಾಗಿದ್ದಾಗ ಇಂದು ನಾವು ಬರೀ ಸೈಬರ್ ಪೋಲಿಸ್ ಮಾತ್ರವಲ್ಲ ಡಿಜಿಟಲ್ ನೆಲೆಯಲ್ಲಿಫಂಚಲಾಗುವ ಸಂದೇಶಗಳ ಬಗ್ಗೆಯೂ ಒಂದು ಬಗೆಯ ನಿಯಂತ್ರಣವನ್ನು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಹೊಂದಲೇ ಬೇಕಾಗಿದೆ.

ಯಾಕೆಂದರೆ ಮಹಿಳೆಯರೆನ್ನುವ ಕಾರಣಕ್ಕೆ ನಿಂದನೆಗೆ ಒಳಗಾದವರು 58% ಜನ. ಅಂದರೆ ಅರ್ಧಕ್ಕೂ ಹೆಚ್ಚು ಬಳಕೆದಾರರು ಈ ನೆಲೆಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ ಎನ್ನುವುದು ಸಾಮಾಜಿಕ ಅಸ್ವಸ್ಥತೆಯನ್ನು ತೋರಿಸುವುದಲ್ಲದೆ ಡಿಜಿಟಲ್ ಎನ್ನುವ ಮಾರುಕಟ್ಟೆಯ ಬೆಳವಣಿಗೆಗೂ ಆರ್ಥಿಕ ಸವಾಲೊಂದನ್ನು ಸೃಷ್ಟಿ ಮಾಡಲಿದೆ.

ಇದರ ಮಾನಸಿಕ ಸಮಸ್ಯೆಗಳ ಆಯಾಮ ಇನ್ನಷ್ಟೇ ಅರ್ಥವಾಗಬೇಕಿದೆ. ಹೇಗೇ ಇದ್ದರೂ ವ್ಯಾಪಾರ ಹಾಗೂ ಸಮಾಜದ ದೃಷ್ಟಿಯಿಂದ ಅರ್ಧ ಜನರನ್ನು ಹೊರಗೆ ಇಡುವ ಅಥವಾ ಅಸುರಕ್ಷತೆಯ ಭಾವನೆ ಉಂಟು ಮಾಡುವ ಯಾವ ಪ್ರಗತಿಗೂ ಹೆಚ್ಚು ಬೆಳವಣಿಗೆ ಇಲ್ಲ ಎನ್ನುವುದು ಮನದಟ್ಟಾದರೆ ಡಿಜಿಟಲ್ ಯುಗದ ಬೆಳವಣಿಗೆಗಳು ಸಮಾಜಕ್ಕೆ ಮಾರಕವಾಗದೆ ಪೂರಕವಾಗಬಲ್ಲವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !