ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತೆ ಮಾತಿಗಿಳಿದಾಗ

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಶಾಲೆಗೆ ಹೋಗುವ ಹೆಣ್ಣುಮಕ್ಕಳಿರುವ ಮನೆಯಲ್ಲಿ ‘ಎರಡು ಜಡೆಗಳು ಯಾವತ್ತೂ ಸೇರಲ್ಲ’ ಅನ್ನುವ ಗಾದೆ ನಿತ್ಯಸತ್ಯ. ಆ ಸತ್ಯ ಅಮ್ಮ-ಮಗಳಿನ ನಡುವೆ ಆ ವಯಸ್ಸಿನಲ್ಲಿ ಬರುವ ಸಣ್ಣ ಪುಟ್ಟ ಸಂಘರ್ಷಗಳೆಂದು ಭಾವಿಸಿದವರು ಸರಿಯಾದರೂ, ಆ ಸಂಭಾಷಣೆ ಮಗಳ ಎರಡು ಜಡೆಗಳಿಗೆ ಸಂಬಂಧಿಸಿದ್ದು ಎಂದು ಅರಿಯುವುದಕ್ಕೆ ಆ ಯುದ್ಧಕಾಂಡಕ್ಕೆ ಒಮ್ಮೆ ನೀವು ಹೊಕ್ಕಿ ಬಂದಿರಲೇಬೇಕು. ‘ಇವತ್ತು ನೀನು ಹಾಕಿದ ಜಡೆ ಮೊನ್ನೆ ಹಾಕಿದಂತಿಲ್ಲ’ ಎನ್ನುವ ಮಗಳ ಉದ್ಗಾರಗಳು ಒಂದೆಡೆಯಿಂದ ಕೇಳಿಬರುತ್ತಿದ್ದರೆ, ‘ಬೀರುವಿನಲ್ಲಿ ಕೂತಿರುವ ಈ ಬಟ್ಟೆಗಳೆಲ್ಲಾ ಚಂದಕ್ಕಾ ಇರೋದು? ಇವನ್ನೆಲ್ಲ ಹಾಕೋದು ಯಾವಾಗ?’ ಅನ್ನುವ ಮಾತುಗಳೊಂದಿಗೆ ಮಿಸೈಲ್‌ಗಳಂತೆ ಬೀರುವಿನಿಂದ ಒಂದೊಂದೇ ಬಟ್ಟೆಯನ್ನು ಹೊರತೆಗೆದು ಗುಡ್ಡೆ ಹಾಕಿ, ‘ಇನ್ನು ಇವೆಲ್ಲ ಹಾಕಿ ಮುಗಿಸೋ ತನಕ ಬಟ್ಟೆ ಕೊಡಿಸೋಲ್ಲ ನಿನಗೆ’ ಎನ್ನುವ ಅಮ್ಮನ ಮಾತುಗಳು ದಿನದ ಆದಿ-ಅಂತ್ಯಗಳನ್ನು ಸೂಚಿಸುತ್ತಿದ್ದ ಕಾಲ ಅದು. ಹೀಗೆ ಸಣ್ಣ–ಪುಟ್ಟದಕ್ಕೆಲ್ಲಾ ಚರ್ಚೆ–ವಾದ–ವಿವಾದಗಳಿಗೆ ಎಡೆಮಾಡಿಕೊಡುತಿದ್ದ ತಾಯಿ–ಮಗಳ ನಡುವಿನ ಸಂಭಾಷಣೆಗಳು, ವರ್ಷಗಳು ಉರುಳಿದಂತೆ ಒಂದು ಸಹಜ ಹಾಗೂ ಅಷ್ಟೇ ಆಶ್ಚರ್ಯಕರ ರೀತಿಯಲ್ಲಿ ಬದಲಾಗಿ ಹೋಗುತ್ತವೆ.

ಮನೆಯಂಗಳದಲಿ ನೆನ್ನೆ–ಮೊನ್ನೆ ಆಟದ ಸೌಟು ಹಿಡಿದು ಆಡುತಿದ್ದ ಹೆಣ್ಣುಮಕ್ಕಳು ಕಾಲೇಜಿನ ಕಾರಿಡಾರ್‌ಗಳನ್ನು ಹೊಕ್ಕುವ ಹೊತ್ತಿಗೆ ತಾಯಂದಿರಲ್ಲಿ ತಮ್ಮ ಗೆಳತಿಯರನ್ನು ಕಾಣಲು ಶುರುಮಾಡುತ್ತಾರೆ. ಅಮ್ಮಂದಿರ ಬಾಯಲ್ಲೂ ಅಷ್ಟೇ, ಮುಂಚಿನ ಎಚ್ಚರಿಕೆಯ ನುಡಿಗಳು ಈಗ ಸಲಹೆಗಳಾಗುತ್ತವೆ; ಎಷ್ಟೋ ಬಾರಿ ಕೇವಲ ಸೂಚನೆಗಳೂ ಹೌದು. ಪ್ರತಿ ನಿಮಿಷದ ಸಿಡುಕು ಕರಗಿ, ಒಬ್ಬರಿಗೊಬ್ಬರ ಮಾತು ಆತ್ಮೀಯವೆನಿಸುವ ಮಟ್ಟಿಗೆ ಈ ಸಂಭಾಷಣೆಗಳೂ ಬೆಳೆದು ನಿಂತಿರುತ್ತವೆ. ಈ ಹಂತದಲ್ಲಿ ಅದೆಷ್ಟೋ ಬಾರಿ ‘ತಾಯಿ’ ಎಂಬ ಸ್ಥಾನ ಕೂಡ ಸ್ಥಿರವಲ್ಲದೆ, ಇಬ್ಬರು ಧರಿಸಬಹುದಾದ ಅತ್ಯಮೂಲ್ಯ ಕವಚದಂತಾಗಿ, ಮನೆಯಲ್ಲಿನ ಕುರುಕ್ಷೇತ್ರ ಈಗ ಶಾಂತಿಭೂಮಿಯ ರೂಪ ತಳೆದು ತಣ್ಣಗಾಗುತ್ತದೆ.

ಹೆಣ್ಣುಮಕ್ಕಳಿಬ್ಬರು ಗೆಳತಿಯರಾದ ಮೇಲೆ ಮುಂದಿನ ಕಥೆ ಕೇಳಬೇಕಾ? ತಾಯಿ-ಮಗಳಾದರೇನು? ಅವರ ನಡುವಿನ ಸಂಭಾಷಣೆಗಳಲ್ಲಿನ ಸ್ವಾರಸ್ಯವೇನೂ ಒಂದಿಷ್ಟೂ ಕಡಿಮೆಯಾಗುವ ಸೂಚನೆ ತೋರಿಸುವುದಿಲ್ಲ. ಮಗಳ ದಿನಚರಿಯಲ್ಲಿನ ಹಲವು ಸಣ್ಣ ಸಂಗತಿಗಳು ತಾಯಿಗೆ ಅವಳ ಕಾಲೇಜಿನ ದಿನಗಳನ್ನು ನೆನಪಿಸಿದರೆ, ಆ ಕಾಲದ ಕಾಲೇಜಿನ ಕಥೆಗಳನ್ನು ಕೇಳಿ, ಅಮ್ಮನಿಗೆ ಕೀಟಲೆ ಮಾಡಿ, ಒಂದಿಷ್ಟು ರೇಗಿಸಿ, ಜೊತೆಗೆ ಕೂತು ನಗುವ ಸಂಭ್ರಮ ಮಗಳಿಗೆ. ಹೊರಗಿನ ಜಗತ್ತಿನಲ್ಲಿ ತಾನು ಈಗ ಬೆಳೆಸುತ್ತಿರುವ ಸ್ನೇಹಗಳು ಶಾಶ್ವತವಲ್ಲ ಎಂದೆನಿಸಿ, ಬಾಲ್ಯದ ಗೆಳತಿಯರು ನೂರು ಕಾರಣಗಳಿಗೆ ದೂರಾದ ಹುಡುಗಿಯರಿಗಂತೂ, ಅಮ್ಮನೇ ಕಾನ್ಸ್ಟೆಂಟ್! ಇತ್ತ ಅಮ್ಮಂದಿರಿಗೆ, ತಮ್ಮಷ್ಟೇ ಪ್ರಬುದ್ಧಳಾಗಿ ಯೋಚಿಸಬಲ್ಲ, ಸರಿ-ತಪ್ಪುಗಳನ್ನು ತೂಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಮಗಳು, ತನ್ನ ಪೋಷಕ್ತ್ವದ ಸಾರ್ಥಕತೆಯ ಸೂಚಕವಷ್ಟೇ ಅಲ್ಲಾ, ತಮ್ಮ ಜವಾಬ್ದಾರಿಗಳನ್ನು ಹಂಚಿಕೊಳ್ಳಬಲ್ಲ ಹೆಣ್ಣೂ ಆಗುತ್ತಾಳೆ.

ಗಂಡುಮಕ್ಕಳಿರುವಂತಹ ಮನೆಗಳಾದರಂತೂ, ಹೆಣ್ಣುಮಕ್ಕಳು ತಂಗಿಯರೇ ಆಗಲಿ ಅಥವಾ ಅಕ್ಕಂದಿರಾಗಲಿ, ಅಮ್ಮಂದಿರ ಭಾರ ಇಳಿಸಿ, ಅಣ್ಣ–ತಮ್ಮಂದಿರನ್ನು ಕಟ್ಟಿಹಾಕುವ ಭಾರ ಖುಷಿಯಿಂದ ಹೊರುತ್ತಾರೆ. ಇಷ್ಟಾದ
ಮೇಲಾಂತೂ ಮುಗಿಯಿತು! ಗಂಡುಪ್ರಾಣಿಗಳಲ್ಲಿ ಕೊಂಚ ಕಡಿಮೆ ಇರುವ ಆ ‘ಸೂಕ್ಷ್ಮತೆ’ ಅನ್ನುವ ಅಂಶ, ನಿರಂತರ ಚರ್ಚೆಯ ವಿಷಯ ಮಾತ್ರ ಅಲ್ಲ ಅಮ್ಮ–ಮಗಳಿಗೆ, ಬದಲಿಗೆ ಪ್ರತಿನಿತ್ಯ ಕಥೆ-ಸಂದರ್ಭಗಳನ್ನು ಹೇಳಿ, ನಕ್ಕು ನಲಿಯುವುದಕ್ಕೆ ಸಿಕ್ಕ ಸೂಕ್ತ ಕಾರಣ. ಕಾಲೇಜಿನ ಸಹಪಾಠಿಯೊಬ್ಬನ ಸಣ್ಣ ತಪ್ಪಿನಿಂದ ಹಿಡಿದು, ಮನೆಯಲ್ಲಿನ ತಂದೆ, ಅಣ್ಣ–ತಮ್ಮಂದಿರು ಪೇಚಿಗೆ ಸಿಕ್ಕ ಇಂದಿನ ಮತ್ತು ಹಿಂದೆಂದಿನ ಸಂಗತಿಗಳೂ ಜೀವತಳೆದು ಇವರ ಮಾತಿನ ಜಗತ್ತನ್ನು ಹೊಕ್ಕು ಬಣ್ಣತುಂಬುತ್ತವೆ.

ಪ್ರತಿ ಮನೆಯ ಕಥೆಯೂ ಇದೇ ಎಂದಲ್ಲಾ. ಪ್ರತಿ ತಾಯಿ–ಮಗಳೂ ಹೀಗೆ ಇರುವರೆಂದಲ್ಲಾ. ಆದರೆ, ಎಲ್ಲ ತಾಯಿ–ಮಗಳ ನಡುವಿನ ಮಾತೂ ಮುದ ನೀಡುವಂಥದ್ದು ಎಂಬುದು ನಿಜ. ಈ ಸಂಭಾಷಣೆಗಳು ಎಂದಿಗೂ ಬರಿಯ ಅಣಕ, ನಗು, ತಮಾಷೆಗಳ ಕಡಲಾಗದೆ, ಎಷ್ಟೋ ಕುಟುಂಬಗಳು ಹೆಣ್ಣುಮಕ್ಕಳತ್ತ ಕಣ್ಣುಹಾಯಿಸಲೂ ಸಮಯವಿಲ್ಲದ ಗಂಡುಪ್ರಪಂಚಗಳಾಗಿ ಉಳಿದುಹೋದಾಗ, ತಾಯಿ–ಮಗಳಿಬ್ಬರಿಗೂ ಸಾಂತ್ವನದ ಒಡಲಾಗುತ್ತದೆ. ಮಗಳಿಗೆ ಮುಂದಿನ ತನ್ನ ಜೀವನವನ್ನು ಸಾಗಿಸುವ ಅದೃಶ್ಯ ಗೈಡ್-ಬುಕ್‌ಗಳು ಈ ಸಂಭಾಷಣೆಗಳು ಎಂದರೆ ತಪ್ಪಾಗಲಾರದು. ಮಗಳಲ್ಲಿ ತನ್ನನ್ನು ಕಾಣುವ ತಾಯಿ, ಅಮ್ಮನಂತಾಗ ಬಯಸುವ ಮಗಳು, ಇವರಿಬ್ಬರ ನಡುವೆ ಹಗಲಿರುಳು ನಡೆಯುವ ಸಂವಾದ, ಮಾತುಕತೆ, ಕಡೆಗೆ ಸಿಟ್ಟು-ಸೇಡವಿನ ಜಗಳಗಳು ಕೂಡ ಅರ್ಥಹೀನವಾಗದಿರುವಂತಹ, ಅನುಭವ–ಭಾವನೆಗಳ ಚಂದದೊಂದು ಭಂಡಾರ. ಹೀಗೇ ಇರಬೇಕೆಂದು ಸ್ಕ್ರಿಪ್ಟ್ ಬರೆದು ಕೊಡುವುದಕ್ಕಾಗದು ಈ ಮಾತುಗಳಿಗೆ. ಆದರೆ, ನೀವಿನ್ನೂ ಈ ಭಂಡಾರವನ್ನು ಹೊಕ್ಕಿಲ್ಲವಾದರೆ, ಒಮ್ಮೆ ಪ್ರಯತ್ನಿಸಿ, ಏನಿಲ್ಲದಿದ್ದರೂ ಒಂದು ಗಳಿಗೆಯ ಖುಷಿಯಾದರೂ ಸಿಕ್ಕೀತು.

ಅನನ್ಯ ಕೆ.ಎಸ್‌.
ಅನನ್ಯ ಕೆ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT