ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಅಡುಗೆ ಕಲಿಕೆ ಪೋಷಕರಿಗಿರಲಿ ನಿಗಾ

Last Updated 25 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಏಳು ವರ್ಷದ ಶ್ರಾವಣಿಗೆ ಮ್ಯಾಗಿ ತಿನ್ನುವ ಬಯಕೆ. ಅಮ್ಮ ಮಧ್ಯಾಹ್ನ ನಿದ್ರೆಗೆ ಜಾರಿರುವುದನ್ನು ಗಮನಿಸಿದ ಆಕೆ ಅಡುಗೆಕೋಣೆಗೆ ಹೋಗಿ ಲೈಟರ್‌ ಹಿಡಿದು ಗ್ಯಾಸ್‌ ಹಚ್ಚಿಯೇ ಬಿಟ್ಟಳು. ಬೆಂಕಿ ಧಗ್ಗನೆ ಹೊತ್ತಿಕೊಂಡಿತು. ಶ್ರಾವಣಿಯ ಕೈಕಾಲು, ಮುಖಕ್ಕೆ ಗಂಭೀರ ಗಾಯಗಳಾದವು.

ಇಂತಹ ಘಟನೆಗಳು ನಡೆದಾಗಲೆಲ್ಲ ‘ಮಕ್ಕಳು ಅಡುಗೆ ಮಾಡುವುದು ಸುರಕ್ಷಿತವೇ’ ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತದೆ.

ಕಳೆದ ಎರಡು ಅವಧಿಯ ಕೊರೊನಾ– ಲಾಕ್‌ಡೌನ್‌ನಲ್ಲಿ ಅನೇಕ ಮಕ್ಕಳು ಇಂಥ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ತಮಗಿಷ್ಟದ ತಿನಿಸು ತಯಾರಿಸಿ ಬೀಗಿದ್ದಾರೆ. ಪೋಷಕರು ಅದರ ವಿಡಿಯೊ ಮಾಡಿ ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನೇನು ಈ ವರ್ಷದ ಬೇಸಿಗೆ ರಜೆ ಆರಂಭವಾಗುತ್ತವೆ. ಇಂಥ ಪ್ರಯತ್ನಗಳು ಪುನರಾವರ್ತನೆಯಾಗಬಹುದು..

ಮಕ್ಕಳು ಅಡುಗೆ ಮಾಡುವುದೂ ಕಲಿಕೆಯ ಒಂದು ಭಾಗವೇ. ಆದರೆ ಅದು ಸುರಕ್ಷಿತ ಕಲಿಕೆಯಾದಾಗ ಮಾತ್ರ. ಇದರಿಂದ ಮಕ್ಕಳಿಗೆ ಬಾಲ್ಯದಿಂದಲೇ ಅಡುಗೆ ಪರಿಕರ, ಪದಾರ್ಥಗಳ ಪರಿಚಯವಾಗುತ್ತದೆ. ಸೇವಿಸುವ ಆಹಾರದ ಬಗ್ಗೆ ಅರಿವು ಮೂಡುತ್ತದೆ. ಜಂಕ್‌ ಫುಡ್‌ಗಳ ದಾಸರಾಗುವುದನ್ನು ತಪ್ಪಿಸಬಹುದು. ಮನೆ ಅಡುಗೆಯ ಬಗ್ಗೆ ವಿಶ್ವಾಸ ವೃದ್ಧಿಯಾಗುತ್ತದೆ. ತಿನಿಸಿನ ವಿಚಾರದಲ್ಲಿ ಸ್ವಯಂ ಮಾರ್ಗದರ್ಶನ, ಸ್ವಾವಲಂಬನೆ ಬೆಳೆಯುತ್ತದೆ.

ತರಕಾರಿ ಕತ್ತರಿಸುವಾಗ, ಪದಾರ್ಥಗಳನ್ನು ಬೆರೆಸುವಾಗ, ಹಿಟ್ಟು ಕಲೆಸುವಾಗ ಕಣ್ಣು ಮತ್ತು ಕೈಗಳ ಹೊಂದಾಣಿಕೆಯ ಕೌಶಲ ವೃದ್ಧಿಯಾಗುತ್ತದೆ. ಮಕ್ಕಳ ಚಿಂತನಾ ಶಕ್ತಿ ಬೆಳವಣಿಗೆಗೆ, ಕ್ರಿಯಾಶೀಲತೆ ವೃದ್ಧಿಗೆ ಅಡುಗೆ ಸಹಕಾರಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ ಎನ್ನುತ್ತಾರೆ ಮಕ್ಕಳ ಮನೋವೈದ್ಯರು.

ಮಕ್ಕಳ ಪ್ರಯೋಗಶೀಲತೆಗೂ ಅಡುಗೆ ಮನೆ ವೇದಿಕೆ ಒದಗಿಸುತ್ತದೆ. ಇಷ್ಟದ ಪದಾರ್ಥಗಳನ್ನು ಬಳಸಿಕೊಂಡು ಹೊಸದೊಂದು ರೆಸಿಪಿ ತಯಾರಿಸಬಹುದು. ತಿನಿಸು ತಯಾರಿಸುವಾಗ ಅದು ರುಚಿಕಟ್ಟಾಗಿ ಬರದಿದ್ದರೆ ಮತ್ತೊಂದು ಪದಾರ್ಥ ಸೇರಿಸಿ ಇನ್ನೊಂದು ರೆಸಿಪಿ ಸಂಶೋಧನೆಗೆ ನಾಂದಿ ಹಾಡಬಹುದು. ಪ್ರತಿದಿನ ತರಗತಿ, ಪಾಠ, ಹೋಂವರ್ಕ್‌ನಲ್ಲಿ ಮುಳುಗುವ ಮಕ್ಕಳು ಅದರಿಂದ ಹೊರಬಂದು ಅಡುಗೆ ಕಾರ್ಯದಲ್ಲಿ ತೊಡಗಿಕೊಂಡರೆ ಚೈತನ್ಯ ಬರುತ್ತದೆ ಎನ್ನುವ ಮನೋವೈದ್ಯರು, ಇದೆಲ್ಲವೂ ಪೋಷಕರ ನಿಗಾವಣೆಯಲ್ಲೇ ನಡೆಯಬೇಕು ಎಂದು ಎಚ್ಚರಿಸುತ್ತಾರೆ.

ಯಾವ ವಯಸ್ಸಿಗೆ ಅಡುಗೆ ಮಾಡಬಹುದು?

ಪೋಷಕರಿಗೆ ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುವುದು, ತರಕಾರಿ ತೊಳೆದುಕೊಡುವುದು, ಚಪಾತಿ ಲಟ್ಟಿಸುವುದು, ಮನೆಯ ಸದಸ್ಯರಿಗೆ ಊಟ ಬಡಿಸುವುದು, ಪಾತ್ರೆ ತೊಳೆಯುವುದು ಈ ಎಲ್ಲ ಪ್ರಕ್ರಿಯೆಗಳೂ ಕುಟುಂಬದ ಸದಸ್ಯರು ಮತ್ತು ಮಕ್ಕಳ ನಡುವೆ ಆರೋಗ್ಯಕರ ಬಾಂಧವ್ಯ ಬೆಳೆಸುತ್ತವೆ. ಆದರೆ, ಗ್ಯಾಸ್‌ ಹೊತ್ತಿಸುವುದು, ತರಕಾರಿ ಕತ್ತರಿಸುವುದು ಒಳ್ಳೆಯದಲ್ಲ.

‘ತಾಯಿ ತರಕಾರಿ ಹೆಚ್ಚುವುದನ್ನು ಮಗು ನೋಡಿರುತ್ತದೆ. ಆದರೆ ಚಾಕುವನ್ನು ಹೇಗೆ ನಿಭಾಯಿಸಬೇಕು, ಹೇಗೆ ಹಿಡಿದುಕೊಳ್ಳಬೇಕು ಎಂಬ ಜ್ಞಾನ ಇನ್ನೂ ವೃದ್ಧಿಯಾಗಿರುವುದಿಲ್ಲ. ತರಕಾರಿ ಕತ್ತರಿಸುವಾಗ ಬೆರಳಿಗೆ ಚಾಕು ತಾಗಿ ಸಣ್ಣ, ಪುಟ್ಟ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು. ಹಾಗೆಯೇ ಲೈಟರ್‌ ಹಿಡಿದು ಗ್ಯಾಸ್‌ ಹೊತ್ತಿಸುವುದನ್ನು ಗಮನಿಸುವ ಮಗು, ಅಜಾಗರೂಕತೆಯ ಬಳಕೆಯಿಂದ ಆಗುವ ಪರಿಣಾಮವನ್ನು ನೋಡಿರುವುದಿಲ್ಲ. ಪೋಷಕರು ಆ ಬಗೆಯ ಜ್ಞಾನವನ್ನು ಮಕ್ಕಳಿಗೆ ನೀಡಬೇಕು’ ಎನ್ನುತ್ತಾರೆ ಮನೋವೈದ್ಯೆ ಡಾ.ಕೆ.ಎಸ್‌.ಪವಿತ್ರಾ.

‘ಶ್ರಾವಣಿ ಕೂಡ ಮ್ಯಾಗಿ ಮಾಡಿ ತಿನ್ನಬೇಕು ಎಂದು ಆ ಕ್ಷಣಕ್ಕೆ ಯೋಚಿಸಿದಳೇ ಹೊರತು, ಮ್ಯಾಗಿ ಮಾಡುವಾಗ ಅವಘಡ ಸಂಭವಿಸಿದರೆ ತನಗೆ ಏನಾಗಬಹುದು ಎಂದು ಆಲೋಚಿಸಲಿಲ್ಲ. ಏಳು ವರ್ಷಕ್ಕೆ ಆ ರೀತಿಯ ಆಲೋಚನೆಯನ್ನು ಮಕ್ಕಳಿಂದ ನಿರೀಕ್ಷೆ ಮಾಡಲೂ ಆಗುವುದಿಲ್ಲ. 9 ರಿಂದ 10 ವರ್ಷ ಮೇಲ್ಪಟ್ಟ ಮಕ್ಕಳು ಅಡುಗೆ ತಯಾರಿಯಲ್ಲಿ ತೊಡಗಬಹದು. 14 ರಿಂದ 15 ವರ್ಷದ ಮಕ್ಕಳು ಯಾರ ಸಹಾಯವೂ ಇಲ್ಲದೆ ಅಡುಗೆ ಮಾಡಬಹುದು. ಆದರೆ, ಅವರಿಗೆ ಸಕಾರಾತ್ಮಕ, ನಕಾರಾತ್ಮಕ ಅಂಶಗಳು ಗೊತ್ತಿರಬೇಕು’ ಎನ್ನುವುದು ಪವಿತ್ರಾ ಅವರ ಸಲಹೆ.

ಜಾಲತಾಣಕ್ಕೆ ಸೀಮಿತ ಆಗಬೇಡಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ, ಫೋಟೊ ಹಂಚಿಕೊಳ್ಳಲಷ್ಟೇ ಮಕ್ಕಳು ಅಡುಗೆ ತಯಾರಿಯಲ್ಲಿ ತೊಡಗಿದರೆ ಪ್ರಯೋಜನವಿಲ್ಲ. ಅದು ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಅಪಾಯವೂ ಇದೆ. ವಿಡಿಯೊ ಮಾಡಿ ಆದ ಬಳಿಕ ಪಾತ್ರೆ ತೊಳೆಯುವುದು, ಶೆಲ್ಫ್‌ ಸ್ವಚ್ಛಗೊಳಿಸುವುದನ್ನೂ ಮಕ್ಕಳು ಮಾಡಬೇಕು. ಅಡುಗೆ ಅಂದರೆ ಅನೇಕ ಹಂತಗಳನ್ನು ಒಳಗೊಂಡಿದೆ. ತರಕಾರಿ ಹೆಚ್ಚುವುದರಿಂದ ಹಿಡಿದು ಅಡುಗೆ ಆದ ಬಳಿಕ ಕೋಣೆ ಸ್ವಚ್ಛಗೊಳಿಸುವವರೆಗೆ ಪ್ರಕ್ರಿಯೆ ಮುಂದುವರಿಯುತ್ತದೆ. ಈ ಎಲ್ಲ ಹಂತಗಳಲ್ಲೂ ಮಕ್ಕಳು ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಆ ರೀತಿ ಒಳಗೊಳ್ಳುವಂತೆ ಪೋಷಕರು ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ ಪವಿತ್ರಾ.

ಫೇಸ್‌ಬುಕ್‌, ಯೂಟ್ಯೂಬ್‌ನಲ್ಲಿ ಬರುವ ಸಂದೇಶಗಳು ಕೇವಲ ಒಂದು ಮುಖವನ್ನು ಮಾತ್ರ ಬಿಂಬಿಸಿರುತ್ತವೆ ಎಂಬುದನ್ನು ಮಕ್ಕಳು, ಪೋಷಕರು ಅರಿಯಬೇಕು. ಮಗು ಚಾಕು ಕೈಯಲ್ಲಿ ಹಿಡಿದಿದೆ ಎಂದರೆ ಕೇವಲ ಕೈಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಅದು ಮಿದುಳಿಗೂ ಸಂಬಂಧಿಸಿರುತ್ತದೆ. ಗ್ಯಾಸ್‌ ಬಳಕೆ, ಮಿಕ್ಸಿ, ಚಾಕು ಬಳಕೆಯ ಬಗ್ಗೆ ಮಕ್ಕಳಲ್ಲಿ ಮುಂಚಿತವಾಗೇ ಜಾಗೃತಿ ಮೂಡಿಸಿರಬೇಕು. ಮಕ್ಕಳು ಅಡುಗೆಯಲ್ಲಿ ಸಹಾಯ ಮಾಡುವುದು ಬೇರೆ. ಸ್ವತಃ ಅಡುಗೆ ಮಾಡುವುದೇ ಬೇರೆ. ಅದಕ್ಕೆ ಸಾಕಷ್ಟು ತಯಾರಿ, ತರಬೇತಿ ಅಗತ್ಯ.

ಎಲ್ಲರೂ ಕಲಿಯಬೇಕು

ಅಡುಗೆ ಕಲಿಕೆ ಪ್ರಕ್ರಿಯೆ ಹೆಣ್ಣುಮಕ್ಕಳಿಗೆ ಮಾತ್ರವೇ ಎನ್ನುವ ಭಾವ ಕೆಲ ಪೋಷಕರಲ್ಲಿದೆ. ಇದು ಮಕ್ಕಳಲ್ಲಿ ಲಿಂಗ ತಾರತಮ್ಯವನ್ನು ಸದ್ದಿಲ್ಲದೆ ಹುಟ್ಟುಹಾಕುತ್ತದೆ. ಕೆಲ ಮನೆಯಲ್ಲಿ ಗಂಡು ಮಕ್ಕಳು ಅಡುಗೆ ಮಾಡುತ್ತಿದ್ದಾರೆ ಎಂದರೆ ಅವರನ್ನು ಓರೆಗಣ್ಣಿನಿಂದ ನೋಡುವವರೇ ಹೆಚ್ಚು. ಆದರೆ, ಅಡುಗೆ ಕಲಿಕೆ ಪ್ರಕ್ರಿಯೆಯಲ್ಲಿ ಹೆಣ್ಣು– ಗಂಡು ಇಬ್ಬರನ್ನೂ ತೊಡಗಿಸಿಕೊಳ್ಳಬೇಕು. ಅಡುಗೆ ಕಲಿಕೆ ಪ್ರತಿಯೊಬ್ಬರಲ್ಲೂ ಸ್ವಾವಲಂಬನೆ ಬೆಳೆಸುತ್ತದೆ.

ಅಡುಗೆ ಕಲಿಸುವ ಮುನ್ನ...

ಮಕ್ಕಳು ಅಡುಗೆ ಮಾಡುವಾಗ ಪೋಷಕರ ನಿಗಾ ಕಡ್ಡಾಯ.

ಹಣ್ಣು, ತರಕಾರಿ ಕತ್ತರಿಸುವಾಗ ಪೇಪರ್‌ ಕಟರ್‌ ಬಳಕೆ ಇರಲಿ, ಚಾಕು ಬಳಕೆ ಬೇಡ.

ಗ್ಯಾಸ್‌, ಎಲೆಕ್ಟ್ರಾನಿಕ್‌ ಸ್ಟವ್‌, ಮಿಕ್ಸಿ, ಚಾಕುಗಳಿಂದ ಆಗುವ ಅಪಾಯದ ಬಗ್ಗೆ ಅರಿವು ಮೂಡಿಸಿ.

14 ರಿಂದ 15 ವರ್ಷದವರೆಗೆ ಗ್ಯಾಸ್‌, ಮಿಕ್ಸಿಯನ್ನು ಸ್ವಂತ ಬಳಕೆಗೆ ಬಿಡಬಾರದು.

ಚಿಕ್ಕ ಮಕ್ಕಳನ್ನು ಸಲಾಡ್‌ ತಯಾರಿ, ತರಕಾರಿ ಸಿಪ್ಪೆ ಸುಲಿದುಕೊಡುವುದು ಈ ರೀತಿಯ ಸಹಾಯದಲ್ಲಿ ಬಳಸಿಕೊಳ್ಳಿ.

ಪೋಷಕರು ಎದುರಿಗೆ ಇದ್ದಾಗ ಮಾತ್ರ ತರಕಾರಿ ಕತ್ತರಿಸಿ ಎಂದು ಮಕ್ಕಳಿಗೆ ತಿಳಿ ಹೇಳಿ.

ಫೇಸ್‌ಬುಕ್‌, ಯೂಟ್ಯೂಬ್‌ ನೋಡಿ ಅಡುಗೆ ತಯಾರಿಗೆ ಪ್ರೋತ್ಸಾಹಿಸಬೇಡಿ.

ಸೂಕ್ತ ತರಬೇತಿ ನಂತರವೇ ಅಡುಗೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT