ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ರಜೆ ಕಳೆಯುವ ಬಗೆ

Published 19 ಏಪ್ರಿಲ್ 2024, 22:39 IST
Last Updated 19 ಏಪ್ರಿಲ್ 2024, 22:39 IST
ಅಕ್ಷರ ಗಾತ್ರ

ಕವಡೆ, ಬಳೆಚೂರು, ಹುಣಸೆಬೀಜ ಇವಿಷ್ಟಿದ್ದರೆ ನಮ್ಮ ಬೇಸಿಗೆ ರಜೆ ಕಳೆದುಹೋಗುತ್ತಿತ್ತು. ನೆತ್ತಿ ಸುಡುವಂಥ ಬಿಸಿಲಿನಲ್ಲಿ ಮಕ್ಕಳನ್ನು ಹಿಡಿದಿಡುವುದೇ ಕಷ್ಟ ಎನಿಸಿದರೆ ಈಗಲೂ ಒಳಾಂಗಣದ ಆಟಗಳನ್ನು ಪರಿಚಯಿಸಿ.

ಚೌಕಾಬಾರಾ: ಬದುಕಿನ ಹಲವಾರು ಭಾವನಾತ್ಮಕ ಗೊಂದಲಗಳನ್ನು ನಿರ್ವಹಿಸುವುದನ್ನು ಕಲಿಸುವ ಆಟ ಇದು. ಇಡೀ ಆಟ ನಮ್ಮ ಅದೃಷ್ಟವನ್ನೇ ಅವಲಂಬಿಸಿದ್ದರೂ, ನಮ್ಮ ವಿವೇಚನೆಯನ್ನೂ ಅದರೊಂದಿಗೆ ದ್ವಂದ್ವಕ್ಕೆ ಬಿಟ್ಟು ನಮ್ಮ ನಡೆಗಳನ್ನು ಸಮರ್ಥಿಸುತ್ತ ಸಾಗುವ ಆಟವಿದು. ಸ್ಪರ್ಧೆಯ ಜೊತೆಗೆ ಒಂದೇ ಆಟದಲ್ಲಿ ಹಲವಾರು ಏಳುಬೀಳುಗಳಿರುತ್ತವೆ. ಪ್ರತಿ ಸಮಯದಲ್ಲಿಯೂ ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಮರಳಿ ಯತ್ನವ ಮಾಡು ಎಂಬ ಪಾಠವನ್ನು ಚೌಕಾಬಾರಾ ಹೇಳಿಕೊಡುತ್ತದೆ. ಸಾಧ್ಯವಿದ್ದಾಗಲೆಲ್ಲ ಮನೆಯ ಹಿರಿಯರೂ ಮಕ್ಕಳೊಡಗೂಡಿ ಆಡಿದರೆ ನಮ್ಮ ಬಾಂಧವ್ಯವೂ ಗಟ್ಟಿಯಾಗುತ್ತದೆ.

ಚೌಕಾಬಾರಾ ಮನೆ ಎಣಿಸುವಾಗ ಮೌಖಿಕ ಗಣಿತದ ಕೌಶಲವೂ ಬೆಳೆಯುತ್ತದೆ. ಕಣ್ಣಳತೆಯಲ್ಲಿಯೇ ಲೆಕ್ಕ ಹಾಕುವುದು, ಬಾಯಿಲೆಕ್ಕ ಹಾಕುವುದು ಮಕ್ಕಳಿಗೆ ಕರಗತವಾಗುತ್ತದೆ. ಚೌಕಾಬಾರಾದ ಸ್ವರೂಪದಲ್ಲಿಯೇ ಇರುವ ಲುಡೊ ಸಹ ಆಡಬಹುದು. ಕವಡೆಗಳಿರದಿದ್ದಲ್ಲಿ ಹುಣಸೆ ಬೀಜವನ್ನು ತಿಕ್ಕಿ, ಒಂದು ಕಡೆಯ ಸಿಪ್ಪೆ ಸವೆಸಿ ಆಟವಾಡುವುದನ್ನು ಹೇಳಿಕೊಡಿ. ಕಾಯಿಗಳ ಲೆಕ್ಕದಲ್ಲಿ ಬಳೆಚೂರು, ಗಜಗ (ಇವು ಸಿಗುವುದು ಅಪರೂಪ), ಒಡೆದ ಹುಣಸೆಬೀಜ, ಪಿಸ್ತಾದ ಸಿಪ್ಪೆಗಳಿಗೆ ಬೇರೆ ಬೇರೆ ಬಣ್ಣ ಬಳಿದು ಬಳಸಲು ತಿಳಿಸಿ.

ಪಿಸ್ತಾದ ಸಿಪ್ಪೆಗಳ ಮೇಲೆ ಮಾರ್ಕರ್‌ಪೆನ್‌ನಿಂದ ತಮ್ಮದೇ ಹೆಸರನ್ನು ಬರೆದೂ ಕಸ್ಟಮೈಸ್ಡ್‌ ಕಾಯಿಗಳನ್ನು ಮಾಡಿಕೊಂಡು ಆಡಬಹುದು. 

ಜೆಂಗಾ: ಸಹನೆ ಮತ್ತು ಸಂಯಮ ಹಾಗೂ ಸ್ಟ್ರಾಟೆಜಿಕ್‌ ಆಗಿ ಆಡುವುದನ್ನು ಹೇಳಿಕೊಡುತ್ತದೆ. ಆರು ಬಣ್ಣಗಳ ಒಂಬತ್ತು ಒಂಬತ್ತು ಚಕ್ಕೆಗಳ ಈ ಆಟ ಬ್ರಿಟಿಷ್‌ ಮೂಲದ್ದು. ಒಂದೊಂದು ಬಣ್ಣದ ಮೂರು ಮೂರು ಚಕ್ಕೆಗಳನ್ನು ಉದ್ದುದ್ದ, ಅಡ್ಡಡ್ಡ ಜೋಡಿಸುತ್ತ ಬರಬೇಕು.  ಡೈಸ್‌ ಒಂದರಲ್ಲಿ ಆರು ಬಣ್ಣಗಳನ್ನು ಗುರುತಿಸಲಾಗಿರುತ್ತದೆ. ಯಾವ ಬಣ್ಣ ಬರುವುದೋ ಆ ಬಣ್ಣದ ಚಕ್ಕೆಯನ್ನು ನಿಧಾನವಾಗಿ ತೆಗೆಯಬೇಕು. ಹಾಗೆ ತೆಗೆಯುವಾಗ ಉಳಿದ ಬಣ್ಣಗಳನ್ನು ಮುಟ್ಟುವಂತಿಲ್ಲ. 

ಮಕ್ಕಳು ಇತ್ತೀಚೆಗೆ ರೀಲ್‌ ನೋಡಿ ನೋಡಿ, ಸಿನಿಮಾ ನೋಡುವಷ್ಟು ಸಂಯಮವನ್ನೂ ಉಳಿಸಿಕೊಂಡಿಲ್ಲ ಎಂದು ದೂರುವವರಿಗೆ ಜೆಂಗಾ ಸಂಯಮದ ಪಾಠ ಹೇಳಿಕೊಡುತ್ತದೆ. ಜೊತೆಗೆ ವಿವೇಚನೆಯನ್ನೂ ಕಲಿಸಿಕೊಡುತ್ತದೆ. ಇಲ್ಲಿ ಸ್ಪರ್ಧಾರ್ತಿಯೆಂದರೆ ತನಗೆ ತಾನೇ ಆಗಿರುತ್ತಾನೆ. ಪ್ರತಿಸಲವೂ ಸಂಯಮವೇ ಶಸ್ತ್ರವಾಗಿರುತ್ತದೆ. ಸೋತಾಗ ಆಗುವ ಹತಾಶೆಯೂ ಕ್ಷಣಿಕ. ಇಲ್ಲಿ ಅಪಮಾನಕ್ಕೆ ಯಾವುದೇ ಆಸ್ಪದ ಇರುವುದಿಲ್ಲ. ಆದರೆ ಗೆಲುವಿನ ತಂತ್ರಗಳನ್ನು ಹೆಣೆಯುವಲ್ಲಿ ಚತುರರಾಗುತ್ತಾರೆ. ಇಬ್ಬರಿಂದ ಆರಂಭಿಸಿ, ಆರು ಜನರವರೆಗೂ ಆಡಬಹುದು. ಹೆಚ್ಚಾದರೂ ಆಡಬಹುದು. ಪ್ರತಿಸಲ ಒಬ್ಬರು ಸೋತಾಗಲೂ ಒಂದು ಬಣ್ಣದ ಮೂರು ಚಕ್ಕೆಗಳ ಒಂದು ಸೆಟ್‌ ಕಡಿಮೆ ಮಾಡುತ್ತ ಹೋಗಬಹುದು.  ಇವಲ್ಲದೆ ಅಳೆಗುಳಿ ಮಣೆ, ಪಗಡೆ, (ಚೀನಿ ಪದ್ಧತಿಯ) ಗೋಲಿ ಮಣೆ, ಬಹಳಷ್ಟು ಹುಣಸೆ ಬೀಜಗಳಿದ್ದಲ್ಲಿ ಸರಿ ಬೆಸ ಆಟಗಳನ್ನೂ ಆಡಿಸಬಹುದು.  ಉನೊ ಮತ್ತು ಕಾರ್ಡುಗಳನ್ನು ಆಡುವುದು, ಹೌಸಿ ಆಡುವುದು, ಮೊನೊಪಲಿ ಆಡುವುದು ಇವೆಲ್ಲ ಮಕ್ಕಳಲ್ಲಿ ವ್ಯವಹಾರಿಕ ಚಾತುರ್ಯ ಬೆಳೆಸುತ್ತವೆ. ಹಣ ಕೂಡಿಡುವ ಮನೋಭಾವವನ್ನೂ. ಖರ್ಚು ಮಾಡುವಲ್ಲಿ ಎಚ್ಚರವನ್ನೂ ಬೆಳೆಸುತ್ತವೆ.  ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ಬರುವ ಮಕ್ಕಳಿಗೆ ಎಲ್ಲಿದೆ ಈ ಒಳಾಂಗಣದ ಆಟಗಳಿಗೆ ಸಮಯ ಅಂತನಿಸಿದರೆ, ಇವನ್ನೆಲ್ಲ ಮಲಗುವ ಮುನ್ನ ಒಮ್ಮೆಯಾದರೂ ಆಟವಾಡಿಸಿ. ನೀವೂ ಬಿಡುವು ಮಾಡಿಕೊಳ್ಳಿ. ಮಧ್ಯಾಹ್ನ ಮತ್ತು ರಾತ್ರಿ ಈ ಆಟವನ್ನು ಆಡುವಾಗ ಮನೆಯನ್ನು ತಣ್ಣಗಿರಿಸಿ. ಹಿತವಾದ ಬೆಳಕಿರಲಿ. ಮಧ್ಯಾಹ್ನದ ಪುಟ್ಟ ನಿದ್ದೆಗೆ ಇದು ಸಹಕಾರಿಯಾಗಿರುತ್ತದೆ. ರಾತ್ರಿಯ ಗಾಢನಿದ್ದೆಗೂ ಮುನ್ನ ಮಕ್ಕಳು ನಗುತ್ತ ಮಲಗಿದರೆ ಚಂದದ ಬೆಳಗು ಅವರಿಗೆ ದೊರೆಯುತ್ತದೆ. ಮಲಗುವ ಮುನ್ನ ಇಂಥ ಆಟಗಳನ್ನು ಆಡಿ ಮಲಗಿದರೆ ಪ್ರಫುಲ್ಲವಾದ ಮನಸಿನಿಂದ ಏಳುವುದು ಅಭ್ಯಾಸವಾಗುತ್ತದೆ. 

ಈ ಆಟಗಳನ್ನು ಆಡುವಾಗ ಮೆಲ್ಲಲು ಕಡಲೆ, ಹುರಿಗಡಲೆ, ಹುರಿದ ಸೇಂಗಾ, ಸೌತೆಕಾಯಿ, ಕಲ್ಲಂಗಡಿ, ಕರಬೂಜುಗಳೊಂದಿಗೆ ಕೂರಲು ತಿಳಿಸಿ. ಆಟವಾಡುತ್ತ ಇವುಗಳನ್ನು ಮೆಲ್ಲುತ್ತ ಮಕ್ಕಳ ಬಾಯ್ಚಟವನ್ನು ತೀರಿಸಬಹುದು. ಜೊತೆಗೆ ಆರೋಗ್ಯಕರ ತಿನಿಸು ಅವರ ಹೊಟ್ಟೆಗಿಳಿಯುತ್ತದೆ. ಆಗ ಸಂಜೆಯ ಕುರುಕಲುಗಳಿಗೆ ಮನಸು ಹಾತೊರೆಯುವುದು ಕಡಿಮೆಯಾಗುತ್ತದೆ. ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಆರೋಗ್ಯಗಳೆಲ್ಲವೂ ಸ್ವಾಸ್ಥ್ಯಮಯವಾಗುತ್ತವೆ. 

ಮಕ್ಕಳ ಸ್ಕ್ರೀನ್‌ ಟೈಮ್‌ ಕಡಿತ ಆಗುವುದರ ಜೊತೆಗೆ ಅವರ ಮಾನಸಿಕ ಬೆಳವಣಿಗೆ ಸುರಕ್ಷಿತವಾಗಿರುತ್ತದೆ. ಸೋಲುಗೆಲುವನ್ನು ಸ್ವೀಕರಿಸುವುದನ್ನು ಕಲಿಯುತ್ತಾರೆ. ಭಾವೋದ್ವೇಗಕ್ಕೆ ಒಳಗಾಗುವುದು ಕಡಿಮೆಯಾಗುತ್ತದೆ. ಹತಾಶರಾದಾಗ, ನಿರಾಶರಾದಾಗ ಇನ್ನೊಂದು ಚಾನ್ಸ್‌ ಸಿಗಲಿದೆ ಎಂಬ ಆಶಾಭಾವನೆಯೊಂದಿಗೆ ಬದುಕು ಸ್ವೀಕರಿಸುತ್ತಾರೆ. ಆಟಗಳಾಡಬೇಕಿರುವುದು ಜೀವನ ಆನಂದಿಸಲು. ಜೀವನವೇ ಆಟವಾಗಬಾರದು ಎಂದೂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT