ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಟಂ’ ಪರಿಭಾಷೆಯ ಸುತ್ತಮುತ್ತ

Last Updated 2 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿನಿಯೊಬ್ಬರ ಜಡೆ ಎಳೆದು, ‘ಐಟಂ‘ ಎಂದು ಸಂಬೋಧಿಸಿದ ಯುವಕನಿಗೆ ಮುಂಬೈ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ. ಹಾಗೆ ಕರೆಯುವುದು ಅಪರಾಧ ಎಂದು ತೀರ್ಪಿತ್ತಿದೆ . ಈ ಹಿನ್ನೆಲೆಯಲ್ಲಿ ‘ಐಟಂ‘ ಪರಿಭಾಷೆಯ ಸುತ್ತ ಒಂದು ವಿಶ್ಲೇಷಣೆ ಇಲ್ಲಿದೆ.

**

ಇಂಗ್ಲಿಷಿನ ‘ಐಟಂ’ (item)ಪದಕ್ಕೆ ಶಬ್ದಕೋಶದಲ್ಲಿ ವಸ್ತು,ಪದಾರ್ಥ,ಗೃಹಬಳಕೆಯ ವಸ್ತು ಎಂಬರ್ಥವಿದೆ. ಆದರೆ,ಅದೇ ಪದವು ಹೆಣ್ಣನ್ನು ಅಳೆಯುವ ಮಾಪಕವೂ ಆಗಿದೆ! ಹೌದು. ನೀನೊಂದು ಸೂಪರ್ ‘ಐಟಂ’ ಕಣಮ್ಮಾ. ನಿನ್ನ ಐಟಂ ಸಾಂಗ್ ಇದ್ದರೆ ಬಿಡು ಆ ಸಿನಿಮಾ ಗೆದ್ದಂತೆ!

ಮನರಂಜನೆಯ ಹೆಸರಿನಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಸೂಚಿಸಲು ಈ ಪದವನ್ನು ಎಷ್ಟೊಂದು ಅಸೂಕ್ಷ್ಮವಾಗಿ ಬಳಸುತ್ತಿದ್ದೇವೆ ಎಂದರೆ ಆ ಪದದ ಮೂಲಾರ್ಥವನ್ನೇ ಮರೆತುಹೋಗುವಷ್ಟು. ಮಾರುಕಟ್ಟೆಯಲ್ಲಿ ಯಾವುದಾದರೊಂದು ಹೊಸ ಮಾದರಿ ಉಡುಪು,ವಸ್ತು ಬಂದಾಗ ಈ ಐಟಂ ಸೂಪರ್ ಆಗಿದೆ ಎಂದು ಹೇಗೆ ಹೇಳುತ್ತೇವೆಯೋ ಹಾಗೇ ಹೆಣ್ಣನ್ನೂ ಮಾರುಕಟ್ಟೆಯ ಸರಕಾಗಿ ಕಾಣಲಾಗುತ್ತಿದೆ.

ಹೀಗೆ ಎಗ್ಗಿಲ್ಲದೇ ಬಳಸುವ ‘ಐಟಂ’ ಪದ ಮುಂಬೈನ ಯುವ ಉದ್ಯಮಿ ಪಾಲಿಗೆ ಜೈಲುಶಿಕ್ಷೆ ತಂದೊಡ್ಡಿದೆ. ವರ್ಷಗಳ ಹಿಂದೆ ಆಗಿನ್ನೂ ಉದ್ಯಮಿಯಾಗಿರದ ಆ ಯುವಕ, ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳ ಜಡೆ ಹಿಡಿದೆಳೆದು ‘ಐಟಂ’ ಅನ್ನುವ ಪದ ಬಳಸಿದ್ದ. ಇದರಿಂದ ಆಘಾತಗೊಂಡಿದ್ದ ಆಕೆ100ಕ್ಕೆ ಕರೆ ಮಾಡಿದ್ದಳು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆ ಯುವಕ ಕಾಲ್ಕಿತ್ತಿದ್ದ. ಆದರೆ,ಆಕೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಘಟನೆ ನಡೆದದ್ದು2015ರಲ್ಲಾದರೂ ಆ ಘಟನೆಯಿಂದ ವಿಚಲಿತಳಾಗಿದ್ದ ಆಕೆಯ ಮನಸಿಗೆ ನೆಮ್ಮದಿ ದೊರೆಕಿದ್ದು ಈಚೆಗಷ್ಟೇ.ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಜೆ. ಅನ್ಸಾರಿ ಅವರು ಬಾಲಕಿಯನ್ನು (ಈಗ ಯುವತಿ) ಚುಡಾಯಿಸಿದ್ದ ಆ ಯುವಕನಿಗೆ ಐಪಿಸಿ ಸೆಕ್ಷನ್354ಮತ್ತು ಪೋಕ್ಸೊ ಕಾಯಿದೆಯಡಿ ಅಪರಾಧಿ ಎಂದು ಘೋಷಿಸಿ,ಒಂದೂವರೆ ವರ್ಷಕಾಲ ಜೈಲುಶಿಕ್ಷೆ ವಿಧಿಸಿದ್ದಾರೆ.

‘ಐಟಂ’ ಅನ್ನುವ ಪದ ಮಹಿಳೆಯರನ್ನು ಲೈಂಗಿಕ ಭೋಗವಸ್ತುವಾಗಿ ಚಿತ್ರಿಸುತ್ತದೆ ಮತ್ತು ಐಪಿಸಿ ಸೆಕ್ಷನ್354ರ ಅಡಿಯಲ್ಲಿ ಮಹಿಳೆಯ ಘನತೆಗೆ ಧಕ್ಕೆ ತಂದ ಅಪರಾಧಕ್ಕೆ ಕಾರಣವಾಗುತ್ತದೆ ಎಂದೂ ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.

ಈ ತೀರ್ಪು ಬಂದ ಅವಧಿಯಲ್ಲೇ ನಡೆದ ಮತ್ತೊಂದು ಘಟನೆಯಲ್ಲಿ ಬಿಜೆಪಿಯ ನಾಯಕಿಯರಾದ ಖುಷ್ಬೂಸುಂದರ್,ನಮಿತಾ,ಗೌತಮಿ ಮತ್ತು ಗಾಯತ್ರಿ ರಘುರಾಮ್ ಅವರನ್ನು ‘ಐಟಂ’ಗಳು ಎಂದು ಕರೆದಿದ್ದ ತಮ್ಮದೇ ಪಕ್ಷದ ವಕ್ತಾರ ಸೈದಾಯಿ ಸಾದಿಕ್ ಪರ ಡಿಎಂಕೆ ನಾಯಕಿ ಕನಿಮೋಳಿ ಕ್ಷಮೆ ಯಾಚಿಸಿದ್ದರು.

ಎರಡೂ ಘಟನೆಗಳಲ್ಲಿ ಬಳಸಲಾದ‘ಐಟಂ’ ಪದ ಹೆಣ್ಣೆಂದರೆ ಸುಲಭವಾಗಿ ಕೈಗೆಟುವ ವಸ್ತು ಎನ್ನುವಂಥ ಧೋರಣೆಯನ್ನೇ ಹೊಂದಿರುವಂಥದ್ದು.ಈ ಪದದ ಬಳಕೆಯ ಹಿಂದೆ ಲಿಂಗರಾಜಕಾರಣ ಸ್ಪಷ್ಟವಾಗಿ ಗೋಚರಿಸುತ್ತದೆ. ಹೆಣ್ಣೆಂದರೆ ಪುರುಷನ ಬಯಕೆಗಳನ್ನು ತೀರಿಸುವ ಒಂದು ವಸ್ತು. ಹಾಗಾಗಿ ಆಕೆಯನ್ನು ಐಟಂ,ಮಾಲು ಎಂದೆಲ್ಲ ತಮಗೆ ಇಷ್ಟವಾಗುವ ಪರಿಭಾಷೆಯನ್ನು ಸುಲಭವಾಗಿ ಬಳಸುವುದು ಸದ್ದಿಲ್ಲದೇರೂಪಿತವಾಗಿದೆ. ಸಿನಿಮಾ,ಟಿ.ವಿ., ಸಾಮಾಜಿಕ ಮಾಧ್ಯಮಗಳುಇಂಥ ಪದಗಳ ಬಳಕೆಯನ್ನು ಸಾರ್ವತ್ರೀಕರಣಗೊಳಿಸುವಲ್ಲಿ ಮುಂದಿವೆ.

ಇಂಥ ಪದಗಳ ಬಳಕೆ,ರೂಪಿಸುವ ಹಿಂದಿನ ಔಚಿತ್ಯದ ಕುರಿತು ಆ ಕ್ಷೇತ್ರಗಳ ಪರಿಣತರನ್ನು ಕೇಳಿದರೆ,ಇವೆಲ್ಲವೂ ಮನರಂಜನೆಯ,ಮಾರುಕಟ್ಟೆಯ ತಂತ್ರವನ್ನಾಗಿ ಮಾತ್ರ ಬಳಸಲಾಗುತ್ತದೆಯಷ್ಟೇ ಎನ್ನುತ್ತಾರೆ. ಆದರೆ, ಈ ಪದಗಳು ವಾಸ್ತವ ಜೀವನದಲ್ಲಿ ಬೀರುವ ಋಣಾತ್ಮಕ ಪರಿಣಾಮಗಳ ಕುರಿತು ಖೇದ ವ್ಯಕ್ತಪಡಿಸುತ್ತಾರೆ.

ಸಿನಿಮಾದಿಂದ ಆರಂಭ
80–90ರ ದಶಕದಲ್ಲಿ ಇಂಥ ಪದಗಳು ಹೆಚ್ಚು ಬಳಕೆಯಲ್ಲಿರಲಿಲ್ಲ. ಆದರೆ, ‘ಐಟಂ’ ಪದವನ್ನು ಹೆಚ್ಚು ಬಳಕೆಗೆ ತಂದಿದ್ದು ಸಿನಿಮಾ ಕ್ಷೇತ್ರ. ಈ ಹಿಂದೆ ಸಿನಿಮಾಗಳಲ್ಲಿ ಕ್ಯಾಬರೆ ಡಾನ್ಸ್,ಬಾರ್ ಡಾನ್ಸ್‌ಗಳಿರುತ್ತಿದ್ದವು. ಜ್ಯೋತಿಲಕ್ಷ್ಮಿ,ಹೆಲನ್,ಸಿಲ್ಕ್ ಸ್ಮಿತಾ ಇಂಥ ಕಲಾವಿದೆಯರು ವಿಲನ್‌ಗಳ ಜತೆಗಿದ್ದು ಇಂಥ ನೃತ್ಯಗಳನ್ನು ಮಾಡ್ತಾ ಇದ್ರು. ಆದರೆ,ಅದನ್ನು ಈಗಿನಂತೆ ಅರ್ಥೈಸಲಾಗುತ್ತಿರಲಿಲ್ಲ. ನೇರವಾಗಿ ಕ್ಲಬ್ ಡಾನ್ಸ್,ಡಿಸ್ಕೊ ಡಾನ್ಸ್ ಇರುತ್ತೆ ಎಂದೇ ನಿರ್ದೇಶಕರೂ ಹೇಳುತ್ತಿದ್ದರು. ಅದರ ಜಾಗಕ್ಕೀಗ ‘ಐಟಂ’ ಪದ ಬಂದಿದೆ. ಈ ಪದವನ್ನು ಸಿನಿಮಾ ಕ್ಷೇತ್ರವೂ ಸೇರಿದಂತೆ ಜನಸಾಮಾನ್ಯರೂ ಸ್ವೀಕಾರ್ಹ ಮಾಡಿಕೊಂಡಿದ್ದೇವೆ. ಇಂಥ ಪದಗಳು ಜನರೇಷನ್‌ನಿಂದ ಜನರೇಷನ್‌ಗೆ ಸುಲಭವಾಗಿ ದಾಟಿಕೊಂಡು ಬಂದುಬಿಡುತ್ತವೆ. ಸಿನಿಮಾ ಸೃಜನಶೀಲ ಜಗತ್ತು ಅಂತಾದರೆ,ಅಲ್ಲಿ ‘ಐಟಂ’ ಪದಕ್ಕೆ ಸೃಜನಶೀಲವಾಗಿ ಬೇರೆ ಪದವನ್ನು ಕಾಯಿನ್ ಮಾಡಬಹುದಲ್ಲವೇ? ಪುಟ್ಟ ಮಕ್ಕಳೂ ಇಂಥ ಪದಗಳನ್ನು ಬಳಸುವುದನ್ನು ನೋಡಿ ಬೇಸರ ಎನಿಸುತ್ತದೆ. ಇಂಥದ್ದಕ್ಕೆ ಕಡಿವಾಣ ಹಾಕಲೇ ಬೇಕಿದೆ ಎನ್ನುತ್ತಾರೆ ಸಿನಿಮಾ ನಿರ್ದೇಶಕಿ ಸುಮನಾ ಕಿತ್ತೂರು.

ಭರವಸೆಯ ಆಶಾಕಿರಣ
ಕೆಲವು ಜನಪ್ರಿಯ ನಟಿಯರು ‘ಐಟಂ ಸಾಂಗ್‌’ ಎಂದು ಕರೆಯುವ ನೃತ್ಯ ಗೀತೆಗೆ ನರ್ತಿಸುತ್ತಿರುವುದರಿದ ಆ ಪದವನ್ನು ಜನ, ಸಿನಿಮಾ ಉದ್ಯಮದವರು ತುಂಬಾ ಸಹಜವೆಂಬಂತೆ ಸ್ವೀಕರಿಸಿಬಿಟ್ಟಿದ್ದಾರೆ. ನಟಿಯರಿಗೂ ಇದರ ಬಗ್ಗೆ ಅರಿವಿಲ್ಲದಿರಬಹುದು. ‘ಐಟಂ’ ಎನ್ನುವುದನ್ನೇ ಕಾಂಪ್ಲಿಮೆಂಟ್ ಅಂತಲೂ ಸ್ವೀಕರಿಸಲಾಗುತ್ತಿದೆ. ಆ ಪದದ ಬಳಕೆಯ ಹಿಂದಿನ ಉದ್ದೇಶ ಸ್ಪಷ್ಟ. ಅದು ಗಂಡಸಿನ ಆಸೆಯನ್ನು ಬಿಂಬಿಸುತ್ತದೆ. ಆ ಆಸೆ ಕಣ್ಣಲ್ಲಿರಬಹುದು,ಕೈಯಲ್ಲಿರಬಹುದು ಇಲ್ಲವೇ ಮನದಲ್ಲಿರಬಹುದು. ಆದರೆ,ಇಂಥ ಸಂದರ್ಭಗಳಲ್ಲಿ ನ್ಯಾಯಾಲಯದ ತೀರ್ಪುಗಳು ಭರವಸೆಯ ಕಿರಣಗಳಾಗಿ ಗೋಚರಿಸುತ್ತವೆ ಎನ್ನುತ್ತಾರೆ ಸಿನಿಮಾ ವಿಶ್ಲೇಷಕಿ ಸಂಧ್ಯಾರಾಣಿ.

ಎಲ್ಲಿಯವರೆಗೆ ಹೆಣ್ಣನ್ನು ಗಂಡು ತನ್ನೊಂದಿಗೆ ತನ್ನಂತೆಯೇ ಇರುವ ಸಹಜೀವಿ ಅನ್ನುವುದನ್ನು ಪರಿಗಣಿಸುವ ಮನಃಸ್ಥಿತಿಯನ್ನು ರೂಪಿಸಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಹೆಣ್ಣು ವಸ್ತುವಾಗಿಯೇ ಗೋಚರಿಸುತ್ತಿರುತ್ತಾಳೆ.

*
ಹೆಣ್ಣನ್ನು ‘ಐಟಂ‘ ಗೆ ಹೋಲಿಸುವುದೇ ತಪ್ಪು. ಹೆಣ್ಣಿಗೆ ಅವಮಾನವಾಗುವಂಥ ಪದವನ್ನು ಯಾವತ್ತೂ ಬಳಸಬಾರದು. ಸಿನಿಮಾಕ್ಕೆ ಸಂಬಂಧಿಸಿದಂತೆ ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ಮಾನಿಟರಿಂಗ್ ಮಾಡಬಹುದು.
–ಬಾ.ಮಾ. ಹರೀಶ್, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT