ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯ ಧ್ಯಾನ

ನೆನಪು
Last Updated 24 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ನದಿಗೂ ನಮ್ಮ ಹೆಣ್ಣುಮಕ್ಕಳಿಗೂ ಎಲ್ಲಿಲ್ಲದ ಬಂಧ. ಬಹುಶಃ ಹೆಚ್ಚಿನ ನದಿಗಳಿಗೆಲ್ಲಾ ಹೆಣ್ಣಿನ ಹೆಸರೇ ಇಟ್ಟಿರುವುದ ರಿಂದಲೋ ಏನೋ ನಮ್ಮ ಹೆಣ್ಮಕ್ಕಳು ನದಿಯನ್ನು ತಮ್ಮ ಒಡಹುಟ್ಟಿದವರು ಅಂತಾನೇ ಪರಿಭಾವಿಸಿ ಕೊಂಡಿರಬೇಕು. ಅದಕ್ಕೇ ಅವರೆಲ್ಲರೂ ನದಿ ನೋಡುತ್ತಾ, ಅದರೊಳಗೆ ಆಡುತ್ತಾ, ಹಾಡುತ್ತಾ, ಕನಸು ಕಾಣುತ್ತಾ, ದುಃಖ ತೋಡಿಕೊಳ್ಳುತ್ತಾ, ಖುಷಿ ಹಂಚಿಕೊಳ್ಳುತ್ತಾ, ಒಳಗಿನ ಗುಟ್ಟನ್ನೆಲ್ಲಾ ನದಿಯ ದಂಡೆಯ ಮೇಲೆ ಹರವಿಟ್ಟು ಒಣಗಿಸಿ ಹಗುರವಾಗುತ್ತಾ ಬೆಳೆದವರು.

ಬೆಳಗಿನ ತಿಂಡಿಯಾಗುವುದೊಂದೇ ತಡ, ಅದೇ ಹೊತ್ತಿಗೆ ಸರಿಯಾಗಿ ಮಾತನಾಡಿಕೊಂಡಂತೆ ಆ ಊರಿನ ಹೆಣ್ಣುಮಕ್ಕಳೆಲ್ಲಾ ಬುಟ್ಟಿ ತುಂಬಾ ಪಾತ್ರೆ ತುಂಬಿಕೊಂಡು ಪಾತ್ರೆ ತೊಳೆಯುವ ನೆಪದಲ್ಲಿ ಹೊಳೆಯ ದಂಡೆಯ ಮೇಲೆ ಕುಂತು ಪಾತ್ರೆ ಉಜ್ಜುತ್ತಾ, ಉಜ್ಜುತ್ತಾ, ಮನಸ್ಸನ್ನು ಕೂಡ ತಿಕ್ಕಿ ಬೆಳಗಿಸಿಕೊಂಡವರು.

ಛೆ! ಅವರ ಮಗಳು ಕಾಫಿ ತೋಟದ ರೈಟರ್ ಜೊತೆ ಮಾತ್ರ ಓಡಿ ಹೋಗಬಾರದಿತ್ತು. ಆಕೆ ಬೇರೆ ಹೆಣ್ಣುಮಕ್ಕಳಿಗೆ ಹೇಳಿದ್ದೇ ಬಂತು. ಅದಕ್ಕೆ ಅವಳ ಕಾಲ ಬುಡಕ್ಕೆ ಬಂದು ಬಿದ್ದದ್ದು. ತಲೆಗೆ ಹೊಯ್ದದ್ದು ಕಾಲಿಗೆ ಬಂದು ಬೀಳದೆ ಇರುತ್ತದಾ ಮತ್ತೆ! ಅಂತ ಗಾದೆ ಮಾತನ್ನು ವೇದಾಂತಿಗಳಂತೆ ಉದ್ಧರಿಸಿ, ಹೇಳಿದ್ದು. ಕೇಳಿದ್ದು ಎಲ್ಲಾ ತೀರಿದ ಮೇಲೆ, ಇರಲಿ ಬಿಡಿ, ನಮಗ್ಯಾಕೆ ಕಂಡವರ ಮನೆಯ ಉಸಾಬರಿ, ನಮಗೂ ಬೆಳೆದ ಹೆಣ್ಣುಮಕ್ಕಳು ಇದ್ದಾರಲ್ಲ ಅಂತ ಹಲುಬಿಕೊಂಡು, ಇಷ್ಟೆಲ್ಲಾ ಹೇಳಿದ್ದಕ್ಕೆ ಪ್ರಾಯಶ್ಚಿತವೆಂಬಂತೆ ಹೊಳೆಯ ನಡುವಿಗೊಮ್ಮೆ ಇಳಿದು, ಮುಖಕ್ಕೊಮ್ಮೆ ತಿಳಿ ನೀರು ಸಿಂಪಡಿಸಿಕೊಂಡು, ಮನೆಯಲ್ಲಿ ರಾಶಿ ಬಿದ್ದಿರುವ ಕೆಲಸಗಳ ಬಗ್ಗೆ ಸುಮ್ಮಗೆ ಹಳಿದುಕೊಂಡು ಬುಟ್ಟಿ ತಲೆ ಮೇಲೆ ಹೇರಿಕೊಂಡು ಸರಸರನೇ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದು ನಡೆಯುತ್ತಾರೆ. ಇವರೆಲ್ಲರ ಹಸಿ ಬಿಸಿ ಮಾತುಗಳನ್ನು ಕೇಳಿಸಿಕೊಂಡು ಹೊಳೆ ಕಿಲಕಿಲನೆ ನಗುತ್ತಾ ಸಾಗುತ್ತಿದೆ.

ಹೆಣ್ಣುಮಕ್ಕಳಿಗೆ ಈ ಹೊಳೆಯ ತುಡಿತ ಅದೆಷ್ಟೆಂದರೆ, ಮತ್ತೆ ಮಧ್ಯಾಹ್ನಕ್ಕೆ ಮುಂಚೆ ಮತ್ತೊಮ್ಮೆ ಅದೇ ಬುಟ್ಟಿ ತುಂಬಾ ಕೊಳೆ ಬಟ್ಟೆ ಹೇರಿಕೊಂಡು ಅವರೆಲ್ಲಾ ಹಾಜರು. ಮತ್ತೆ ಅದೇ ಹಳೇ ಮಾತುಗಳನ್ನು ಹೊಸ ಬಗೆಯಲ್ಲಿ ಹೇಳಿಕೊಳ್ಳುತ್ತಿದ್ದರು. ಮಾತನಾಡಲು ಏನು ವಸ್ತು ಸಿಗದಿದ್ದರೆ, ಪ್ರತೀ ಬಟ್ಟೆ ತಿಕ್ಕುವಾಗಲು ನೂರೆಂಟು ಮುನಿಸಿನ ಬೈಗುಳಗಳು. ಇದೆಂಥಾ ಮಣ್ಣು ಹೀಗೊಂದು ಮೆತ್ತಿಕೊಂಡು ಬರುವುದುಂಟಾ?. ಅಥವಾ ಮಣ್ಣೊಡ್ಡರಂತೆ ಹೊರಗೆ ಕೆಲಸ ಮಾಡೋಕೆ ಹೋಗ್ತಾರೋ?. ಇಲ್ಲಿ ನೋಡಿದ್ರೆ ಈ ಕೈಯಲ್ಲಿ ಹಿಡಿದದ್ದನ್ನ ಆ ಕೈಯಲ್ಲಿ ಇಟ್ಟರೆ ಎಲ್ಲಿ ಕೈ ಸವೆದು ಹೋಗಿ ಬಿಡುತ್ತದೋ ಅನ್ನೋ ಜಾಯಮಾನದವರು ಅಂತ ಬಡ ಬಡಿಸಿಕೊಂಡರೆ, ಮತ್ತೊಬ್ಬಳು ಎತ್ತಿ ಎತ್ತಿ ಕುಕ್ಕಿ ಬಡಿಯುತ್ತಾ ತನ್ನ ಮನಸಿನ ದುಗುಡಗಳನ್ನೆಲ್ಲಾ ಎತ್ತಿ ಒಗೆಯುತ್ತಿರುವಂತೆ ಅನ್ನಿಸುತ್ತಿತ್ತು. ಮತ್ತೊಮ್ಮೆ, ಇದೊಂದೇ ಬಟ್ಟೆಗೆ ಮೂರು ಗೀಟು ಸಾಬಾನು ಬೇಕೇನೋ! ಬಡಿದು ಬಡಿದು ನನ್ನ ರೆಟ್ಟೆಯೇ ಬಿದ್ದು ಹೋಗುತ್ತದೆ ಅಂತ ಮಣ ಮಣಿಸುತ್ತಾ ಕೊಳಕು, ಕರೆಗಳನ್ನೆಲ್ಲಾ ತಿಕ್ಕಿ ತೊಳೆದು ಶುಭ್ರಗೊಳಿಸುತ್ತಾಳೆ. ಬಟ್ಟೆಯನ್ನು ಶುಭ್ರಗೊಳಿಸಲು ಸಹಕರಿಸುವಂತೆ ಹೊಳೆ ಮತ್ತಷ್ಟು ತಿಳಿಯಾಗಿ ಹರಿಯುತ್ತದೆ. ಒಗೆದ ಬಟ್ಟೆಗಳೆಲ್ಲಾ ಹೊಳೆದಂಡೆ ಮೇಲೆ ಒಣಗಿಕೊಳ್ಳುತ್ತಾ ಬಿಸಿಲ ಪರಿಮಳವನ್ನು ಅಂಟಿಸಿಕೊಂಡು ಗರಿ ಗರಿಯಾಗಿ ಗರಿಗೆದರಿ ಹಾರತೊಡಗುತ್ತವೆ. ಎಲ್ಲರಿಗೂ ಒಂದೊಂದು ಬಗೆಯಲ್ಲಿ ಹಗುರವಾಗುವ ತವಕ. ಹಗುರವಾಗುತ್ತಿದ್ದಂತೆಯೇ ಅರಿವಿಲ್ಲದೆಯೇ ರೆಕ್ಕೆಯೊಂದು ಅಂಟಿಕೊಂಡು ಮನಸು ಹಾರಲು ತೊಡಗಿಕೊಳ್ಳುತ್ತದೆ.

ಇಷ್ಟಕ್ಕೇ ನಮ್ಮ ಹೆಂಗಳೆಯರಿಗೆ ನದಿಯ ನಂಟು ಬಿಟ್ಟು ಹೋಗುವುದಿಲ್ಲ. ಮತ್ತೆ ಸಂಜೆಯಾಗುವುದೇ ತಡ ತಲೆಯ ಮೇಲೊಂದು ಕೊಡಪಾನ ಇಟ್ಟುಕೊಂಡು ನದಿಯ ಕಡೆಗೆ ಅವರೆಲ್ಲ ಬಂದು ಒಟ್ಟು ಸೇರುವುದು ರೂಡಿ. ಒಂದು ದಿನ ಒಬ್ಬರ ಮುಖ ಒಬ್ಬರು ನೋಡಲಾಗದೇ ಇದ್ದರೆ ಚಡಪಡಿಸುವಂತಾಗುತ್ತದೆ. ಎದೆಯೊಳಗಿನ ದುಗುಡ ಹಾಗೇ ಹೆಪ್ಪುಗಟ್ಟಿಕೊಳ್ಳುತ್ತದೆ. ಇವರೆಲ್ಲ ಕಿಲಕಿಲನೆ ನಗುತ್ತಾ ಹೊಳೆಗೆ ಕಾಲಿಳಿಸಿದರೆ ಹೊಳೆ ಮತ್ತಷ್ಟು ಸಂಭ್ರಮದಿಂದ ಝುಳುಝುಳೆಂದು ಹರಿಯತೊಡಗುತ್ತದೆ. ಅಷ್ಟಕ್ಕೂ ಹೊಳೆ ಮತ್ತು ಅವಳು ಬೇರೆ ಬೇರೆಯಲ್ಲ ತಾನೇ?. ಇಬ್ಬರದ್ದೂ ಹರಿಯುತ್ತಾ, ಬೆಳೆಯುತ್ತಾ, ಇತರರನ್ನು ಬದುಕಿಸುವ, ಹಸಿರಾಗಿಸುವ ಗುಣ. ಅದಕ್ಕಾಗಿಯೇ ಅವರಿಗೂ ಅರೆಗಳಿಗೆ ನದಿಯ ಬದಿಗೆ ಮುಖ ಮಾಡದಿದ್ದರೆ ಅದೇನೋ ಕಳಕೊಂಡ ಭಾವ. ನದಿಯದ್ದೂ ಅವಳದ್ದೇ ತದ್ರೂಪ ಭಾವ.

ಕಾಲದ ವೇಗದ ಓಟದಲ್ಲಿ ಹೊಸ ಗಾಳಿ ಬೀಸಿದೆ, ಹೊಸ ನೀರು ನುಗ್ಗಿದೆ. ಹೊಳೆಯೆಡೆಗೆ ಬರುವ ಕಾಲು ಹಾದಿ ಮುಚ್ಚಿದೆ. ಮನೆಯ ಹಿಂಬದಿಯಲ್ಲಿಯೇ ಬಟ್ಟೆ ತೊಳೆಯಲು ಕಲ್ಲು ಬಂದು ಬಿದ್ದಿದೆ. ನಲ್ಲಿ ತಿರುವಿದರೆ ಭರ್‍ರೆಂದು ನೀರು ಸುರಿಯ ತೊಡಗುತ್ತದೆ. ಒಳಗೆ ಮೆಷಿನಿನೊಳಗೆ ಬಟ್ಟೆ ತೂರಿದರೆ ಸಾಕು ತನ್ನಷ್ಟಕ್ಕೆ ಗುರ್‍ರೆಂದು ಸದ್ದು ಮಾಡುತ್ತಾ ಒಗೆದು ಒಣಗಿಸಿ ಬಿಡುತ್ತದೆ. ಮೋಟಾರು ಚಾಲು ಮಾಡಿದರೆ ಸದ್ದು ಮಾಡುತ್ತಾ ಅನಾಯಾಸವಾಗಿ ನೀರು ಟ್ಯಾಂಕಿಗೆ ತುಂಬಿ ಕೊಳ್ಳುತ್ತದೆ. ಕೋಣೆ ಕೋಣೆಯಲ್ಲೂ ನಲ್ಲಿ ನಿಂತು ಹೊಳೆ ಹರಿಯುವ ದಾರಿಯಲ್ಲಿ ಕಾಡು ಬೆಳೆದಿದೆ. ಇಷ್ಟಾಗಿಯೂ ಅಕ್ಕಪಕ್ಕದ ಮನೆಯವರಿಗೆ ಬಿಡುವಿಲ್ಲದಷ್ಟು ಕೆಲಸವಂತೆ. ಅವರದ್ದನ್ನು ಇವರು, ಇವರದ್ದನ್ನು ಹೇಳಿಕೊಳ್ಳಲು ಒಂದು ಅಡ್ಡ ಗೋಡೆ ನಿರ್ಮಾಣವಾಗಿ ಬಿಟ್ಟಿದೆ. ಒಬ್ಬರಿಗೊಬ್ಬರು ಸರಿಯಾಗಿ ಮುಖ ತೋರಿಸದೆ ಬದುಕುವ ಪರಿಸ್ಥಿತಿ. ಎಲ್ಲರ ಹೃದಯದ ಬಡಿತಗಳಿಗೆ ಕಿವಿಯಾಗುತ್ತಿದ್ದ ಕವಿತೆ ಮಾತ್ರ ದಿಕ್ಕೆಟ್ಟು ಹೊಳೆ ದಂಡೆಯ ಕಲ್ಲಿನ ಮೇಲೆ ಕುಳಿತು ಹೊಳೆಯೊಂದಿಗೆ ಮಾತಿಗಿಳಿದಿದೆ. ಗಾಳಿ ಹಗುರವಾಗಿ ಬೀಸತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT