ಶುಕ್ರವಾರ, ಫೆಬ್ರವರಿ 26, 2021
20 °C

ಕತ್ತನ್ನು ಮುತ್ತಿಕ್ಕುವ ಮುತ್ತಿನ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೀರೆಯ ಗುಳಿಕೆನ್ನೆಯ ಹೊಳಪಿಗೆ ಪೈಪೋಟಿ ನೀಡುವ ಮುತ್ತು ಯಾರಿಗೆ ಇಷ್ಟ ಇಲ್ಲ ಹೇಳಿ? ಕಡಲಲ್ಲಿ ಬೆಳೆದು, ಸರವಾಗಿ, ಬಳೆಯಾಗಿ ಪೋಣಿಸಿಕೊಂಡು ಕತ್ತು, ಕೈ ಸುತ್ತ ಸುತ್ತಿಕೊಂಡು ನುಣುಪಿನ ಸ್ಪರ್ಶ ನೀಡುತ್ತ ಪುಳಕ ಏಳಿಸುವ ಈ ಮುತ್ತಿನ ಹಿಂದಿನ ಕಥೆಗೆ ಬಹಳ ಗಮ್ಮತ್ತಿದೆ.

ಉಪ್ಪು ನೀರಿನ ಕಡಲು, ಸಿಹಿ ನೀರಿನ ನದಿಯಲ್ಲಿ ಚಿಪ್ಪಿನೊಳಗೆ ಹುದುಗಿಕೊಂಡ ಮೃದ್ವಂಗಿ ಹೊರಗಿನ ವಸ್ತು ಪ್ರವೇಶಿಸಿದರೆ ರಕ್ಷಣೆಗಾಗಿ ಬಿಡುವ ವಸ್ತು (ನ್ಯಾಕ್ರ ಅಥವಾ ಮದರ್‌ ಆಫ್‌ ಪರ್ಲ್‌) ವೇ ಈ ಮುತ್ತು. ಉದಾಹರಣೆಗೆ ಒಂದು ಸಣ್ಣ ಮರಳಿನ ಕಣ ಅದರ ಚಿಪ್ಪಿನೊಳಗೆ ಸೇರಿಕೊಂಡರೆ ಮೃದ್ವಂಗಿ ಅದರ ಸುತ್ತಲೂ ಪದರ ಪದರವಾಗಿ ಈ ಕ್ಯಾಲ್ಸಿಯಂ ಕಾರ್ಬೋನೇಟ್‌ ಇರುವ ಹೊಳಪಿನ ದ್ರಾವಣವನ್ನು ಬಿಡುತ್ತ ಹೋಗುತ್ತದೆ. ಒಂದು ಚಿಪ್ಪಿನೊಳಗೆ ಇಂತಹ ಹತ್ತಾರು ಮುತ್ತುಗಳು ರೂಪುಗೊಂಡು ಸೃಷ್ಟಿಯ ಅತ್ಯಂತ ರಮಣೀಯ ಆಭರಣವಾಗಿ ಮಹಿಳೆಯರ ಕತ್ತು ಸೇರಿಕೊಳ್ಳುತ್ತವೆ.

ಮುತ್ತುಗಳ ಗುಣಮಟ್ಟವನ್ನು ಹೇಳುವುದೇ ಅದರ ಹೊಳಪು, ಬಣ್ಣ ಹಾಗೂ ಅರೆ ಪಾರದರ್ಶಕತೆ. ಗುಂಡನೆಯ ಅಥವಾ ನೀರಿನ ಹನಿಯಂತಹ ಆಕಾರವಿರುವ ಹಾಗೂ ಹೆಚ್ಚು ಹೊಳಪಿರುವ ಮುತ್ತು ಅತ್ಯಂತ ಶ್ರೇಷ್ಠ ಗುಣಮಟ್ಟದ್ದು. ಇದರ ಬೆಲೆ ಕೂಡ ಸಾಮಾನ್ಯರ ಕೈಗೆ ನಿಲುಕವಂತಹದ್ದಲ್ಲ. ಅದರಲ್ಲೂ ನೈಸರ್ಗಿಕವಾಗಿ ಉಪ್ಪು ನೀರಿನ ಕಡಲಲ್ಲಿ ದೊರಕುವ ಹಾಗೂ ಸಿಹಿ ನೀರಿನಲ್ಲಿ ಸಿಗುವ ಮೃದ್ವಂಗಿಗಳ ಚಿಪ್ಪಿನ ಒಳಭಾಗದ ಮದರ್‌ ಆಫ್‌ ಪರ್ಲ್‌ಗೆ ಅಂಟಿಕೊಂಡಿರುವ ಈ ಮುತ್ತುಗಳ ಬೆಲೆ ಕಟ್ಟಲು ಅಸಾಧ್ಯ. ಶುಭ್ರ ಬಿಳಿ ಬಣ್ಣದಿಂದ ಹಿಡಿದು, ನಸು ಬಿಳಿ, ನಸು ಗುಲಾಬಿ, ತಿಳಿ ಹಳದಿ, ಬೂದು, ಕಪ್ಪು ಲ್ಯಾವೆಂಡರ್‌, ನೀಲಿ ಬಣ್ಣದಿಂದ ಕಂಗೊಳಿಸುವ ಮುತ್ತುಗಳವರೆಗೂ ಲಭ್ಯ. ಪರ್ಶಿಯನ್‌ ಕೊಲ್ಲಿಯ ಮುತ್ತು ತಿಳಿ ಹಳದಿ ಬಣ್ಣದ್ದಾದರೆ, ಆಸ್ಟ್ರೇಲಿಯಾದಲ್ಲಿ ದೊರಕುವ ಮುತ್ತು ಶುಭ್ರ ಬಿಳಿ ವರ್ಣದ್ದು. ಯಾವುದೇ ನಿರ್ದಿಷ್ಟ ಆಕಾರವಿಲ್ಲದ ‘ಬಾರೂಕ್‌’, ನೇರವಾಗಿ ಚಿಪ್ಪಿಗೆ ಅಂಟಿಕೊಂಡು ಒಂದು ಕಡೆ ಚಪ್ಪಟೆಯಾಗಿರುವ ಬಟನ್‌ ಮುತ್ತುಗಳು, ಅಂಡಾಕಾರದ ಮುತ್ತುಗಳು.. ಹೀಗೆ ಆಕಾರದಲ್ಲೂ ವೈವಿಧ್ಯ. ಅತಿ ಸಣ್ಣದಾದ ಸೀಡ್‌ ಮುತ್ತುಗಳು, ರೈಸ್‌ ಮುತ್ತುಗಳು ಕೂಡ ಆಭರಣವಾಗಿ ಮಿಂಚುತ್ತವೆ.

ಉತ್ತಮ ಗುಣಮಟ್ಟದ ಓರಿಯೆಂಟಲ್‌ ಮುತ್ತುಗಳು ಅಟ್ಲಾಂಟಿಕ್‌ ಚಿಪ್ಪಿನಲ್ಲಿ ಹುಟ್ಟುತ್ತವೆ. ಓಮನ್‌ ಹಾಗೂ ಕತಾರ್‌ನ ಪರ್ಶಿಯನ್‌ ಸಮುದ್ರದಲ್ಲಿ ದೊರಕುವ ಈ ಮುತ್ತುಗಳು ಆಳ ನೀರಿನಲ್ಲಿ ದೊರಕುವಂತಹವು. ಹಾಗೆಯೇ ಭಾರತ ಮತ್ತು ಶ್ರೀಲಂಕಾದ ಮನ್ನಾರ್‌ ಕೊಲ್ಲಿಯ ಮಧ್ಯೆ ಸಿಗುವ ಮುತ್ತುಗಳಿಗೂ ಅಪಾರ ಬೆಲೆಯಿದೆ. ಇವು ನೈಸರ್ಗಿಕವಾಗಿ ದೊರಕುವ ಮುತ್ತುಗಳಾದರೆ ಚೀನಾ, ತೈವಾನ್‌ ಮೊದಲಾದ ಕಡೆ ಮುತ್ತುಗಳನ್ನು ಬೆಳೆಯುವ (ಕಲ್ಚರ್ಡ್‌) ಉದ್ಯಮ ಬೃಹತ್ತಾಗಿ ಬೆಳೆದಿದೆ. ಮೃದ್ವಂಗಿಗಳನ್ನು ಬೆಳೆಸಿ ಅವುಗಳ ಚಿಪ್ಪುಗಳೊಳಗೆ ಮರಳು ಅಥವಾ ಇನ್ನಿತರ ಸಣ್ಣ ಕಣವನ್ನು ಸೇರಿಸಿ ನದಿಯಲ್ಲಿ ಅಥವಾ ಸಮುದ್ರದ ಸೀಮಿತ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಮುತ್ತುಗಳನ್ನು ಆಯ್ಕೆ ಮಾಡುವಾಗಿ ಹೇಗೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೋ ಹಾಗೆಯೇ ಅವುಗಳನ್ನು ಕಾಪಿಡುವುದರಲ್ಲಿಯೂ ಕೆಲವೊಂದು ಅಂಶಗಳ ಬಗ್ಗೆ ನಿಗಾ ಇಡಬೇಕು. ಅವುಗಳು ಸಾವಯವ ಪದಾರ್ಥದಿಂದ ಕೂಡಿರುವುದರಿಂದ ತೇವಾಂಶ ಏರುಪೇರಾಗುತ್ತದೆ. ಹೀಗಾಗಿ ಹತ್ತಿ ಬಟ್ಟೆಯಲ್ಲಿ ಸುತ್ತಿಡಬೇಕು. ಆದರೆ ಬೇರೆ ಆಭರಣಗಳ ಜೊತೆ ಇಡಬೇಡಿ. ಅವು ಒಂದಕ್ಕೊಂದು ಉಜ್ಜಿಕೊಂಡು ಹಾಳಾಗಬಹುದು. ಯಾವುದೇ ರೀತಿಯ ರಾಸಾಯನಿಕ, ಸೋಪ್‌, ಸುಗಂಧ, ಮೇಕಪ್‌ ತಾಗಿಸಬೇಡಿ. ತಣ್ಣನೆಯ ನೀರಲ್ಲಿ ತೊಳೆದು ಒರೆಸಿಡಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು