ಗುರುವಾರ , ಡಿಸೆಂಬರ್ 5, 2019
20 °C
varamahalakshmi- jewellary

ಹಬ್ಬದ ಸಂಭ್ರಮ ಹೆಚ್ಚಿಸುವ ಬಂಗಾರದೊಡವೆ

Published:
Updated:
Deccan Herald

ಪ್ರಶಾಂತ ಸರೋವರದಲ್ಲಿ ಅರಳಿದ ಗುಲಾಬಿ ಬಣ್ಣದ ಕಮಲದ ಮೇಲೆ ಪ್ರಸನ್ನವದಳಾಗಿ ಕಂಗೊಳಿಸುವಾಕೆ, ಕೆಂಪು ರೇಷಿಮೆ ಸೀರೆಯಲ್ಲಿ ಲಕ್ಷಣವಾಗಿ ಕಾಣುವಾಕೆ... ಹವಳದ ಕೆಂಪು ತುಟಿಯಲ್ಲಿ ನೋಡಿ ನಗುವಾಕೆ... ಎರಡು ಕೈಗಳಲ್ಲಿ ಕಮಲ, ಮತ್ತೆರಡು ಕೈಗಳಲ್ಲಿ ಬಂಗಾರದ ನಾಣ್ಯಗಳ ಮಳೆ ಸುರಿಸುವಾಕೆ... ಬಾಲ್ಯದಲ್ಲಿ ಕ್ಯಾಲೆಂಡರಿನಲ್ಲಿ ಕಂಡ ಲಕ್ಷ್ಮೀಯೇ ಇಂದಿಗೂ ಮನದಲ್ಲಿ ಅಚ್ಚೊತ್ತಿರುವ ದುಡ್ಡಿನ ದೇವತೆ. ದುಡ್ಡಷ್ಟೇ ಅಲ್ಲ ಬೇಡಿದ್ದನ್ನೆಲ್ಲಾ ಕೊಡುವ ವರಮಹಾಲಕ್ಷ್ಮೀ. ಕೇಳಿದ ವರವನ್ನು ಕೊಡುವ ವರಮಹಾಲಕ್ಷ್ಮೀ ಆಚರಿಸುವ ಮನೆಮನೆಯ ಗೃಹಲಕ್ಷ್ಮಿಯರಿಗೂ ಅಲಂಕಾರವೆಂದರೆ ಪೂಜೆಯಷ್ಟೇ ಇಷ್ಟದ ಕೆಲಸ.

ಅದರಲ್ಲೂ ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬಕ್ಕೆ ಲಕ್ಷ್ಮೀ ಪದಕ, ಲಕ್ಷ್ಮೀ ಕಿವಿಯೋಲೆ, ಲಕ್ಷ್ಮೀಯ ಕಾಸಿನ ಸರ, ಲಕ್ಷ್ಮೀ ಬಾಜುಬಂಧಿ, ಸೊಂಟದ ಪಟ್ಟಿ, ಲಕ್ಷ್ಮೀ ಜಡೆಬಿಲ್ಲೆ, ಲಕ್ಷ್ಮೀ ಬ್ರೋಚ್, ಲಕ್ಷ್ಮೀಉಂಗುರ... ಒಂದೇ ಎರಡೇ ಲಕ್ಷ್ಮೀಯ ಅಷ್ಟಾವತಾರದಂತೆ ಆಭರಣಗಳಲ್ಲೂ ದೇವತೆ ಲಕ್ಷ್ಮೀ ನಾನಾ ವಿನ್ಯಾಸದಲ್ಲಿ ಕಂಗೊಳಿಸುತ್ತಾಳೆ.

ಮೊದಲು ಸೀರೆಗಳಲ್ಲಿ ಕಂಗೊಳಿಸುತ್ತಿದ್ದ ಲಕ್ಷ್ಮೀ ಈಗ ಆಭರಣ ವಿನ್ಯಾಸದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಟೆಂಪಲ್ ಜ್ಯುವೆಲರಿ, ಆ್ಯಂಟಿಕ್ ಜ್ಯುವೆಲರಿಗಳಲ್ಲಂತೂ ಲಕ್ಷ್ಮೀ ವಿನ್ಯಾಸದ ಒಡವೆಗೆ ಭಾರಿ ಬೇಡಿಕೆ. ಸರಳವಾದ ಉದ್ದನೆಯ ಸರಕ್ಕೆ ಕುಳಿತಿರುವ ಲಕ್ಷ್ಮೀ ವಿನ್ಯಾಸದ ಪದಕವೊಂದಿದ್ದರೆ ಸಾಕು ಅದನ್ನು ಧರಿಸಿದ ಗೃಹಲಕ್ಷ್ಮಿ ನೆರೆದವರ ಕೇಂದ್ರ ಬಿಂದುವಾಗಲು.

ಚಿನ್ನದ ನಾಣ್ಯಗಳ ಮಳೆ ಸುರಿಸುವ ಲಕ್ಷ್ಮೀ ಬರೀ ಕ್ಯಾಲೆಂಡರಿನಲ್ಲಷ್ಟೇ ಅಲ್ಲ, ಪುಟ್ಟ ಚಿನ್ನದ ನಾಣ್ಯವಾಗಿ ಕಿವಿಯೋಲೆಯಲ್ಲೂ ರಾರಾಜಿಸುತ್ತಾಳೆ. ಮಧ್ಯದಲ್ಲೊಂದು ಕೆಂಪು, ಹಸಿರು, ಗುಲಾಬಿ ಬಣ್ಣದ ಹರಳಿದ್ದರಂತೂ ಕಿವಿಯೋಲೆ ಒಡತಿಯ ಸೌಂದರ್ಯ ಮತ್ತಷ್ಟು ಹೆಚ್ಚೀತು. ಇನ್ನು ರಾಮ್‌ಲೀಲಾ ಕಿವಿಯೋಲೆಯ ಮುಕುಟದಲ್ಲಿ ಭದ್ರವಾಗಿ ಕುಳಿತ ಲಕ್ಷ್ಮಿಯ ಸುತ್ತ ಮುತ್ತುಗಳ ವಿನ್ಯಾಸ ನೋಡುಗರ ಕಣ್ ಸೆಳೆಯದಿರಲು ಕಾರಣವೇ ಇಲ್ಲ. ಲಕ್ಷ್ಮೀಗೂ ಕಾಸಿನ ಹಾರಕ್ಕೂ ಬಿಡಲಾರದ ನಂಟು. ಕಾಸಿನ ಸರವೊಂದಿದ್ದರೆ ಸಾಕು ಮತ್ಯಾವ ಸರವೂ ಬೇಕಿಲ್ಲ ಅನ್ನುವಷ್ಟು ಶ್ರೀಮಂತಿಕೆ ಈ ಸರದ್ದು.

ಬರೀ ಚಿನ್ನಾಭರಣಗಳಿಗಷ್ಟೇ ಅಲ್ಲ, ಈಗಿನ ಹೆಂಗಳೆಯರಿಗೆ ಇಷ್ಟವಾಗುವ ಹಗುರ ಲೋಹದಲ್ಲೂ ಲಕ್ಷ್ಮೀ ಕಳೆ ಎದ್ದು ಕಾಣುತ್ತಿದೆ. ಲಕ್ಷ್ಮೀ ವಿನ್ಯಾಸದ ಟ್ರೆಂಡ್ ಬೆಳ್ಳಿ, ಬ್ಲ್ಯಾಕ್ ಮೆಟಲ್, ವೈಟ್ ಮೆಟಲ್‌ಗೂ ವಿಸ್ತರಣೆಯಾಗಿದೆ. ಬೈತಲೆ ಬೊಟ್ಟಿನಿಂದ ಹಿಡಿದು ಮೂಗುತಿಯ ತನಕ ಲಕ್ಷ್ಮೀ ವಿನ್ಯಾಸದ ಆಭರಣಗಳನ್ನು ಧರಿಸಲು ವರಮಹಾಲಕ್ಷ್ಮೀ ಹಬ್ಬವೊಂದು ನೆಪವಷ್ಟೇ!

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು