ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ನಿರಾಸೆಗೆ ಕೊನೆ ಎಂದು?

ಏನಾದ್ರೂ ಕೇಳ್ಬೋದು
Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ನಾನು ಸ್ನಾತಕೋತ್ತರ ಪದವಿ ಮುಗಿಸಿ ನ್ಯೂಸ್‌ಪೇಪರ್ ಒಂದರಲ್ಲಿ ಇಂಟರ್ನ್‌ಶಿಪ್‌ ಮುಗಿಸಿದೆ. ನ್ಯೂಸ್‌ಪೇಪರ್‌ನಲ್ಲೇ ಕೆಲಸ ಮಾಡುವ ಆಸೆ ಇದ್ದ ಕಾರಣ ಟಿವಿ ವಾಹಿನಿಗಳಿಗೆ ಹೋಗಲಿಲ್ಲ. ನ್ಯೂಸ್‌ಪೇಪರ್‌ಗಳಿಗೆ ರೆಸ್ಯೂಮೆ ಕೊಟ್ಟರೂ ಎಲ್ಲೂ ಕೆಲಸಕ್ಕೆ ಕರೆಯಲಿಲ್ಲ, ಇದರಿಂದ ತುಂಬಾ ನಿರಾಸೆ ಆಗಿತ್ತು. ಕೆಲಸವೇ ಸಿಗುವುದಿಲ್ಲ ಎಂಬ ಬೇಸರ ಕಾಡಿತ್ತು. ಇಂತಹ ನಿರಾಸೆಯನ್ನು ಹೋಗಲಾಡಿಸುವುದು ಹೇಗೆ?
–ಫಣಿ, ರಾಮನಗರ

ಉತ್ತರ:ಕೆಲವೊಮ್ಮೆ ಓದಿಗೆ ತಕ್ಕಂತಹ ಕೆಲಸವನ್ನು ಪಡೆಯಲು ಕಾಯಬೇಕಾಗುತ್ತದೆ ಮತ್ತು ಅದಕ್ಕೆ ನಮ್ಮಲ್ಲಿ ತಾಳ್ಮೆಯೂ ಇರಬೇಕು. ಜೊತೆಗೆ ನೀವು ಈಗ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದರೆ ಅದರಲ್ಲೇ ಮುಂದುವರಿಯಿರಿ. ಇದರಿಂದ ನಿಮಗೆ ಕೆಲಸದ ರೀತಿ ನೀತಿಗಳು ತಿಳಿಯುತ್ತವೆ. ಜೊತೆಗೆ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ನಿರುದ್ಯೋಗಿ ಎಂಬ ಭಾವನೆ ನಿಮ್ಮಲ್ಲಿ ಮೂಡುವುದಿಲ್ಲ. ಅದರೊಂದಿಗೆ ಕೆಲವು ಪತ್ರಿಕೋದ್ಯಮ ಕೋರ್ಸ್‌ಗಳನ್ನು ಮಾಡಿಕೊಳ್ಳುವ ಮೂಲಕ ಆ ವಿಷಯದಲ್ಲಿ ಅಪ್‌ಡೇಟ್ ಆಗಬಹುದು ಮತ್ತು ಹೊಸ ಕೆಲಸ ಸಿಗುವವರೆಗೂ ಕಾಯಬೇಕಾಗುತ್ತದೆ. ನಿಮ್ಮಲ್ಲಿರುವ ನಿರಾಸೆಯನ್ನು ಹೋಗಲಾಡಿಸಬೇಕು ಎಂದರೆ ನಿಮ್ಮನ್ನು ನೀವು ಏನಾದರೂ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಇದರಿಂದ ಬ್ಯುಸಿಯಾಗಿರಬಹುದು. ಅದು ನಿಮ್ಮ ಹವ್ಯಾಸ ಅಥವಾ ನಿಮಗೆ ಒಲವಿರುವ ಕೆಲಸವೂ ಆಗಿರಬಹುದು. ಇಲ್ಲಿ ನೀವು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು ಅದೇನೆಂದರೆ ಕೆಲಸ ಪಡೆದುಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ನೀವು ತಾಳ್ಮೆಯಿಂದ ಕಾಯಬೇಕು.

***
ನಾನು ಅಂತಿಮ ವರ್ಷದ ಬಿ.ಎಸ್‌ಸಿ. ಓದುತ್ತಿದ್ದೇನೆ. ನಾನು ಮೊದಲಿನಿಂದಲೂ ಚೆನ್ನಾಗಿ ಓದುತ್ತಿದ್ದೆ. ಆದರೆ ಈಗೀಗ ನನಗೆ ಪಾಸ್ ಆಗಲು ಕಷ್ಟ ಆಗುತ್ತಿದೆ. ನನಗೆ ಏನಾದ್ರೂ ಸಾಧನೆ ಮಾಡಬೇಕು ಎಂಬ ಆಸೆ ಇದೆ. ಆದರೆ ಆಗುತ್ತಿಲ್ಲ. ಮುಂದೆ ಏನು ಮಾಡಬೇಕು ಗೊತ್ತಿಲ್ಲ. ತುಂಬಾ ನೆಗೆಟಿವ್ ಯೋಚನೆ ಬರುತ್ತದೆ. ಓದಲು ಆಗುತ್ತಿಲ್ಲ. ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.
ತನುಜಾ, ಊರು ಬೇಡ

ಉತ್ತರ:
ನಿಮ್ಮ ಮನಸ್ಸಿಗೆ ತೊಂದರೆ ಮಾಡುತ್ತಿರುವ ಅಂಶ ಯಾವುದು? ಹಾಗೂ ಯಾವ ಕಾರಣಕ್ಕೆ ನಿಮಗೆ ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಂಶವನ್ನು ಕಂಡುಕೊಳ್ಳಿ. ಓದಿನ ಮೇಲಿನ ನಿಮ್ಮ ಗಮನ ಚದುರಿ ಹೋಗುತ್ತಿದೆ ಮತ್ತು ಅದರ ಹಿಂದಿನ ಕಾರಣವೇನು ಎಂಬುದು ನಿಮಗೇ ತಿಳಿಯಬೇಕು. ನಿಮಗೆ ಏನಾದರೂ ಸಾಧನೆ ಮಾಡಬೇಕು ಎನ್ನಿಸಿದರೆ ಮೊದಲು ನೀವು ಏನು ಮಾಡಬೇಕು ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ಇರಬೇಕು. ಆಗ ಮಾತ್ರ ನೀವು ಸರಿಯಾದ ಮಾರ್ಗದಲ್ಲಿ ಮುಂದುವರಿಯಲು ಸಾಧ್ಯ. ನಿಮಗೆ ಈ ವಿಷಯದಲ್ಲಿ ಗೊಂದಲವಿದ್ದರೆ ವೃತ್ತಿ ಸಲಹೆಗಾರರನ್ನು ಸಂಪರ್ಕಿಸಿ. ಅವರು ನಿಮಗೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬದನ್ನು ಪರಿಗಣಿಸಿ ನಿಮಗೆ ತಿಳಿಸುತ್ತಾರೆ. ಅದರೊಂದಿಗೆ ನಿಮ್ಮ ಆಹಾರಕ್ರಮ ಹಾಗೂ ವ್ಯಾಯಾಮವನ್ನು ಗುರುತಿಸಿ. ಇದರಿಂದ ನೀವು ಸದೃಢರಾಗಿ ಆರೋಗ್ಯದಿಂದಿರಬಹುದು. ಜೊತೆಗೆ ನಿಮಗೆ ಏನು ಮಾಡಬೇಕು ಎಂಬುದರ ಮೇಲೆ ಗಮನ ಹರಿಸಲು ಸಹಾಯವಾಗುತ್ತದೆ. ಪ್ರತಿದಿನ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸನ್ನು ಋಣಾತ್ಮಕ ಯೋಚನೆ ಮಾಡುವುದರಿಂದ ತಪ್ಪಿಸಬಹುದು.

***
ನನ್ನ ಸ್ನೇಹಿತನಿಗೆ 23 ವರ್ಷ. ಮೊದಲು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈಗ ಕೆಲಸ ಬಿಟ್ಟು ಸುಮ್ಮನೆ ಇದ್ದಾನೆ. ಅವನದ್ದು ಸ್ನಾತಕೋತ್ತರ ಪದವಿ ಮುಗಿದಿದೆ. ಅವನು ಸದಾ ಮಬ್ಬಿನಿಂದಿರುತ್ತಾನೆ. ಯಾವಾಗಲೂ ಕ್ರಿಯಾಶೀಲನಾಗಿರುವುದಿಲ್ಲ. ಡ್ರೈವಿಂಗ್ ಮಾಡುವಾಗ ಮಾತ್ರ ತುಂಬಾ ಎಚ್ಚರಿಕೆಯಿಂದಿರುತ್ತಾನೆ. ಅವನು ಬೇರೆ ಸಮಯದಲ್ಲೂ ಕ್ರಿಯಾಶೀಲನಾಗಿರಲು ಏನು ಮಾಡಬೇಕು?
–ಶಿವಕುಮಾರ್, ಬೆಂಗಳೂರು

ಉತ್ತರ: ಈ ವಯಸ್ಸಿನಲ್ಲಿ ನಿಮ್ಮ ಸ್ನೇಹಿತ ಒಂದು ಕ್ಷಣವನ್ನು ವ್ಯರ್ಥವಾಗಲು ಬಿಡಬಾರದು. ಅವರು ಅವರಿಗಾಗಿ, ಕುಟುಂಬಕ್ಕಾಗಿ ಹಾಗೂ ದೇಶಕ್ಕಾಗಿ ಏನಾದರೂ ಮಾಡಬೇಕು. ಇದು ತುಂಬಾ ಅತ್ಯಮೂಲ್ಯ ಸಮಯ. ಹಾಗಾಗಿ ಅವರ ಬಳಿ ಏನು ಮಾಡದೇ ಸುಮ್ಮನೆ ಕುಳಿತು ಕಾಲಹರಣ ಮಾಡಬಾರದೆಂದು ತಿಳಿಸಿ. ಪ್ರತಿದಿನ ಬೆವರಿಳಿಸಿ ಕಠಿಣ ವ್ಯಾಯಾಮ ಮಾಡಲು ಹೇಳಿ. ಇದರಿಂದ ಅವರ ಸೋಮಾರಿ ದೇಹ ಹಾಗೂ ಮನಸ್ಸು ಚಟುವಟಿಕೆಯಿಂದ ಇರುತ್ತದೆ. ಜಂಕ್ ಪುಡ್ ದೂರ ಮಾಡಿ ಒಳ್ಳೆಯ ಆಹಾರ ಸೇವಿಸುವಂತೆ ಸಲಹೆ ನೀಡಿ. ಸುತ್ತಲೂ ನಡೆಯುತ್ತಿರುವ ವಿಷಯಗಳ ಬಗ್ಗೆ ಅವರಿಗೆ ತಿಳಿಸಿ. ಅವರು ಅಪ್‌ಡೇಟ್ ಆಗಲು ಸಹಾಯ ಮಾಡುವ ಹೊಸ ಹೊಸ ಸ್ನೇಹಿತರನ್ನು ಸಂಪಾದಿಸಲು ಹೇಳಿ. ಇದರಿಂದ ಅವರು ಸಾಮಾಜಿಕವಾಗಿ ತೆರೆದುಕೊಳ್ಳಬಹುದು. ಆಗಲೂ ಅವರು ಜೀವನದ ಬಗ್ಗೆ ನಿರಾಸಕ್ತಿ ತೋರಿದರೆ ಅವರನ್ನು ಒಬ್ಬ ಒಳ್ಳೆಯ ಆಪ್ತಸಮಾಲೋಚಕರ ಬಳಿ ಕರೆದ್ಯೊಯಿರಿ. ಅದರಿಂದ ಅವರಿಗೆ ಖಂಡಿತ ಸಹಾಯವಾಗುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT