ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆ ಎಂಬ ಸಂಗಾತಿ

Last Updated 14 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

‘ಸಂವಹನ’ ಮನುಷ್ಯನ ಒಂದು ಮೂಲಪ್ರವೃತ್ತಿ. ಆದಿಮಾನವನಿಗೂ ಈ ಸಂವಹನ ಎನ್ನುವ ಮೂಲಭೂತ ಪ್ರಕ್ರಿಯೆಯ ಜರೂರು ಇತ್ತು. ಅದನ್ನು ವ್ಯಕ್ತಪಡಿಸಲು ಅವನು ಆಂಗಿಕ ಭಾಷೆಯ ಆಸರೆ ಪಡೆದಿದ್ದ. ಗುಟುರು ಹಾಕುವುದು, ಕಿರುಚುವುದು, ಅರಚುವುದರ ಮೂಲಕ ಸಂಭಾಷಣೆ ನಡೆಸುತ್ತಿದ್ದ. ಪುರಾತನ ಶಿಲಾಯುಗದ ಮಾನವ ತಾನು ವಾಸಿಸುತ್ತಿದ್ದ ಗುಹೆಗಳ ಗೋಡೆಯ ಹಾಗೂ ಮೇಲ್ಛಾವಣಿಗಳ ಮೇಲೆ ತಾನು ಬೇಟೆಯಾಡುತ್ತಿದ್ದ ಪ್ರಾಣಿಗಳ ಚಿತ್ರಗಳನ್ನು, ದಿನನಿತ್ಯದ ಘಟನಾವಳಿಗಳನ್ನೂ ಬಿಡಿಸುತ್ತಿದ್ದ. ಇವು ಅವನ ಅಭಿವ್ಯಕ್ತಿಯ ರೂಪವಾಗಿತ್ತು. ಹೀಗೆ ಮನುಷ್ಯನಿಗೆ ತನ್ನ ಅನುಭವವನ್ನು, ತನ್ನ ಭಾವನೆಗಳನ್ನು ಯಾರಲ್ಲಿಯಾದರೂ ಹೇಳಬೇಕೆಂಬ ತುಡಿತ ಎಂತಹುದು! ಎಷ್ಟು ಪ್ರಾಚೀನವಾದದ್ದು!

ಜಾನಪದ ಕಥೆಯೊಂದಿದೆ. ಹೆಂಡತಿ ತನ್ನ ಮನಸ್ಸಿನಲ್ಲಿ ಯಾವ ಗುಟ್ಟನ್ನೂ ಇಟ್ಟುಕೊಳ್ಳಲಾರದ ಸ್ವಭಾವದವಳು. ಅವಳ ಗಂಡನಿಗೆ ಎಲ್ಲಿಯೋ ಹೇಗೋ ನಿಧಿಯೊಂದು ಸಿಕ್ಕುಬಿಡುತ್ತದೆ. ಅದನ್ನವನು ಮನೆಗೆ ತಂದಾಗ, ಕುತೂಹಲಿಯಾದ ಅವಳನ್ನು ಒಂದು ಜಾಗಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಕೆಲವು ಮರಗಳಿಗೆ ತಾನೇ ಹಿಂದಿನ ದಿನ ಚಿನ್ನದ ನಾಣ್ಯಗಳನ್ನು ತೂಗುಹಾಕಿರುತ್ತಾನೆ. ‘ನೋಡು, ಈ ಮರಗಳಲ್ಲಿ ನಾಣ್ಯಗಳು ಹೂವು–ಹಣ್ಣುಗಳಂತೆ ಹೇಗೆ ಬೆಳೆದು ನಿಂತಿವೆ!? ಈ ದಾರಿಯಲ್ಲಿ ಹಾದು ಹೋಗುವಾಗ ಕಣ್ಣಿಗೆ ಬಿತ್ತು, ಕಿತ್ತು ತಂದೆ’ ಎನ್ನುತ್ತಾನೆ. ಅವಳು ಮಾರನೇ ದಿನ ಅಕ್ಕಪಕ್ಕದ ಮನೆಯವರಿಗೆಲ್ಲಾ ಅದನ್ನು ನಿರೂಪಿಸುತ್ತಾಳೆ. ಆದರೆ ‘ಎಲ್ಲಿಯಾದರೂ ಉಂಟೇ? ಮರದಲ್ಲಿ ಹಣ ಹುಟ್ಟಲು ಸಾಧ್ಯವೇ?’ – ಎಂದು ಯಾರೂ ಅವಳನ್ನು ನಂಬುವುದಿಲ್ಲ. ಹೀಗಾಗಿ ಜಾಣಗಂಡ ತನ್ನ ಗಂಟನ್ನು ಭದ್ರವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕಥೆ ಗಂಡನ ಜಾಣ್ಮೆಯನ್ನು ಕುರಿತು ಹೇಳಿದರೂ, ಮೂಲದಲ್ಲಿ ತನ್ನ ಹೊಟ್ಟೆಯಲ್ಲಿ ಯಾವ ಗುಟ್ಟನ್ನೂ ಇಟ್ಟುಕೊಳ್ಳಲಾಗದ ಮನುಷ್ಯಸ್ವಭಾವವನ್ನು ಅನಾವರಣಗೊಳಿಸುತ್ತದೆ.

ಅಂತೆಯೇ ಇನ್ನೊಂದು ಕಥೆಯಿದೆ. ರಾಜನಿಗೆ ಕ್ಷೌರ ಮಾಡಲು ಹೋಗುವ ಒಬ್ಬ ಕ್ಷೌರಿಕನಿಗೆ ರಾಜನ ಕಿವಿಯು ಮನುಷ್ಯನ ಕಿವಿಯಾಗಿರದೆ, ಕತ್ತೆಯ ಕಿವಿಯಾಗಿರುವುದು ತಿಳಿಯುತ್ತದೆ. ಅವನನ್ನು ಯಾರಲ್ಲಿಯೂ ಹೇಳಕೂಡದೆಂದು, ಹೇಳಿದರೆ ಶಿರಚ್ಚೇದನಮಾಡುವ ಬೆದರಿಕೆ ಹಾಕಿ ಕಳುಹಿಸಿದರೂ ಮೂರು ದಿನಗಳ ಕಾಲ ಗುಟ್ಟನ್ನು ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗದೆ, ಹೆಂಡತಿಯಲ್ಲಿ ಹೇಳಿಕೊಳ್ಳುತ್ತಾನೆ. ಅವಳಿಗೂ ಮತ್ತೊಬ್ಬರಲ್ಲಿ ಹೇಳಿಕೊಳ್ಳಲಾಗದ ಕಷ್ಟಕ್ಕೆ, ಗುಟ್ಟನ್ನು ಅಡಗಿಸಿಕೊಂಡ ಹೊಟ್ಟೆಯ ಬಾಧೆಯನ್ನು ನೀಡಲಾರಂಭಿಸಿ ಬಸುರಿಯ ಹೊಟ್ಟೆಯಂತೆ ಊದಿಕೊಂಡುಬಿಡುತ್ತದೆ. ಹೆಂಡತಿಯ ಈ ಪಾಡಿಗೆ ಉಪಾಯವೊಂದನ್ನು ಮಾಡುವ ಗಂಡ ಒಂದು ರಾತ್ರಿ ಅವಳನ್ನು ಕಾಡಿಗೆ ಕರೆದೊಯ್ದು, ನೆಲವನ್ನು ಆಳವಾಗಿ ಅಗೆದು, ‘ಈ ಗುಂಡಿಗೆ ನಿನ್ನ ಹೊಟ್ಟೆಯಲ್ಲಿಯಲ್ಲಿರುವ ಮಾತನ್ನು ಹೇಳಿಬಿಡು’ ಅನ್ನುತ್ತಾನೆ. ಅವಳು ಹಾಗೇ ಮಾಡುತ್ತಾಳೆ. ಆ ತಕ್ಷಣ ಗುಂಡಿಗೆ ಮಣ್ಣು ಮುಚ್ಚಿ ಅವಳನ್ನು ಮನೆಗೆ ಕರೆತರುತ್ತಾನೆ. ಅವಳ ಹೊಟ್ಟೆಯ ಉಬ್ಬರವೇನೋ ಇಳಿಯುತ್ತದೆ, ಆದರೆ ಅಲ್ಲಿ... ಗುಟ್ಟನ್ನು ಹೂತ ಜಾಗದಲ್ಲಿ...!

ಒಂದೇ ರಾತ್ರಿಯಲ್ಲಿ ಒಂದು ದೊಡ್ಡ ವೃಕ್ಷ ಹುಟ್ಟಿಕೊಳ್ಳುತ್ತದೆ. ಅಂದರೆ ಅಲ್ಲಿಗೆ..? ಭೂಮಿಗೂ ಗುಟ್ಟನ್ನು ತನ್ನಲ್ಲಿ ಹುದುಗಿಸಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೆಂದ ಹಾಗಾಯಿತು! ಮುಂದೆ ಆ ಮಾರ್ಗದಲ್ಲಿ ನಡೆದು ಬರುವ ತಮ್ಮಟೆ ಮಾಡುವ ಕಸುಬಿನವರು, ಈ ಮರವು ಅದಕ್ಕೆ ಯೋಗ್ಯವಾದುದೆಂದು ತೀರ್ಮಾನಿಸಿ, ಅದರಿಂದ ತಮ್ಮಟೆಯನ್ನು ಮಾಡಿ ಮಾರುತ್ತಾನೆ. ಅದು ಯಾವುದೋ ಸಂಗೀತಗಾರನಿಗೆ ಸಿಕ್ಕು, ಅವನು ರಾಜನ ಆಸ್ಥಾನದಲ್ಲಿ ಅದನ್ನು ನುಡಿಸಿ, ಅದು ಒಂದೊಂದು ಬಡಿತಕ್ಕೂ, ‘ರಾಜನ ಕಿವಿ ಕತ್ತೆ ಕಿವಿ’ ಎನ್ನುತ್ತದೆ! ಮುಂದೆ ರಾಜನ ಮಾನ ಮುಕ್ಕಾಗುವುದು –ಪ್ರಸ್ತುತ ನಾನು ಹೇಳಲು ಹೊರಟ ವಿಷಯಕ್ಕೆ ಹೊರತಾದ ಮಾತು. ಇಲ್ಲಿ ಮುಖ್ಯವಾಗಿ ಈ ಕಥೆ ಸಾರಲು ಹೊರಟಿರುವ ಅಂಶ ಮನುಷ್ಯನ ‘ಹೇಳಬೇಕೆಂಬ ತುಡಿತ’ ಎಷ್ಟು ಅನಿವಾರ್ಯವಾದದ್ದು ಎಂಬುದು.

ವೆಂಕಟರಾಜ ಪಾನಸೆಯವರ ‘ನನಗೂ ಏನೋ ಹೇಳಲಿಕ್ಕಿತ್ತು’ ಎಂಬ ಕಥೆಯು ಇದೇ ಮಾನವನ ಪ್ರವೃತ್ತಿಯನ್ನೇ ಅನಾವರಣಗೊಳಿಸುತ್ತದೆ. ನನಗೆ ಮೂಲಕಥೆ ಓದಲು ದೊರಕಲಿಲ್ಲವಾದರೂ, ಹಿರಿಯ ವಿಮರ್ಶಕರಾದ ಟಿ.ಪಿ. ಅಶೋಕರ ‘ಕಥನ ವೈವಿಧ್ಯ’ ಕೃತಿಯಲ್ಲಿ ಓದಲು ದೊರಕಿತು. ಅವರು ವಿಮರ್ಶೆಯೊಂದಿಗೆ ಕಥೆಯ ಪೂರ್ಣ ವಿವರವನ್ನೂ ಅಲ್ಲಿ ಒದಗಿಸಿರುವರು. ಉತ್ತಮಪುರುಷ ನಿರೂಪಣೆಯಲ್ಲಿ ಈ ಕಥಾನಾಯಕನು ತನ್ನಲ್ಲಿ ಏನೋ ಹೇಳಕ್ಕಿದೆಯೆಂದೂ, ಯಾರೂ ತನ್ನ ಮಾತನ್ನು ಕೇಳದೆ ಹೋಗುತ್ತಿರುವರೆಂದೂ ಎದುರಾಗುವ ಎಲ್ಲ ಪಾತ್ರಗಳೊಂದಿಗಿನ ಭೇಟಿಯನ್ನೂ ವಿವರಿಸುತ್ತಾ ಕಡೆಗೆ ಯಾರಲ್ಲೂ ಹೇಳಕೊಳ್ಳಲಾರದ ತನ್ನ ವ್ಯಥೆಯನ್ನು ತಾನು ಯಾವತ್ತೂ ಸಂಧಿಸಲು ಸಾಧ್ಯವಿರದ ಅಗೋಚರ ಶ್ರೋತೃವಿಗೆ, ಹೇಳಬೇಕಾಗಿದ್ದ ತನ್ನ ಮನೆಯ, ಮನದ ಅಳಲನ್ನು ಹೇಗೋ ಹೇಳಿ ತೀರಿಸಿ ಬಸ್ಸಿಗಾಗಿ ದಾರಿ ಕಾಯುತ್ತಾ ಒಂಟಿಯಾಗಿ ಕೂರುತ್ತಾನೆ. ಇಲ್ಲಿ ಅವನ ಮೂಲಕ ಅಗೋಚರ ಶ್ರೋತೃವಿಗೆ ಕಥೆಗಾರರು ಅವನ ಕಥೆಯನ್ನು ಅವನ ಬಾಯಿಯಿಂದಲೇ ನಿರೂಪಿಸಿದ್ದಾರೆ. ಹಾಗೆಯೇ ಯಾರೂ ತಮ್ಮ ಮಾತನ್ನು ಕೇಳದಿದ್ದಾಗ, ಬರವಣಿಗೆಯ ಮೂಲಕ ಯಾವುದೋ ತಿಳಿಯದ, ಬಹುಶಃ ಎಂದೂ ಸಂಧಿಸದ ಓದುಗನಿಗೆ ತಿಳಿಸಬಹುದು ಎಂದೂ, ಆ ಮೂಲಕ ಈ ‘ಕಥೆ ಹೇಳುವ’ ಅಥವಾ ‘ಬರೆಯುವ’ ಪ್ರಕ್ರಿಯೆಯ ಅನಿವಾರ್ಯತೆಯತ್ತ ಬೆಳಕು ಚೆಲ್ಲುತ್ತಾರೆ. ‘ಹಾಡುವುದು ಅನಿವಾರ್ಯ ಕರ್ಮ ನನಗೆ’ ಎನ್ನುವ ಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲಿನ ಹಿಂದಿನ ಉದ್ದೇಶವೂ ಕೂಡ ಇದೇ! ಹೇಳಬೇಕೆಂಬ ಒತ್ತಡ!

ಹಿರಿಯ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರು ತಮ್ಮ ‘ನಾನೇಕೆ ಬರೆಯುತ್ತೇನೆ?’ ಎಂಬ ಕೃತಿಯಲ್ಲಿ, ಸಮಾಜಪರಿವರ್ತನೆಯ ಉದ್ದೇಶವಿಟ್ಟುಕೊಂಡು ಆರಂಭಿಸಿದ ತಮ್ಮ ಬರವಣಿಗೆಯು, ಕಾಲಾಂತರದಲ್ಲಿ ಹೇಗೆ ಉದ್ದೇಶದಲ್ಲಿ ಭಿನ್ನವಾಯಿತು – ಎಂದು ಹಂತಹಂತವಾಗಿ ಗುರುತಿಸಿಕೊಂಡುದನ್ನು ಹೇಳುತ್ತಾ ಸಾಗುತ್ತಾರೆ. ‘ಸತ್ಯಾನ್ವೇಷಣೆಯೇ ಬರವಣಿಗೆಯ ಗುರಿಯಾಗಬೇಕು’ ಎಂಬ ನಿಲುವಿಗೆ ಬರುತ್ತಾರೆ. ಮನುಷ್ಯನ, ಮನುಷ್ಯಜೀವನದ ಸತ್ಯವನ್ನು ಮೂರ್ತರೂಪದಲ್ಲಿ ಅನ್ವೇಷಿಸುವುದು ಸಾಹಿತ್ಯವೊಂದೇ ಎಂಬುದು ಅರ್ಥವಾದ ಹಿನ್ನೆಲೆಯಲ್ಲಿ, ‘ಇನ್ನೊಬ್ಬರ ಕೃತಿಯನ್ನು ಓದುವುದಕ್ಕಿಂತ, ನಾನೇ ಸ್ವತಃ ಅನ್ವೇಷಿಸುವ, ಅರಸುವ, ಆವಿಷ್ಕರಿಸಿಕೊಳ್ಳುವ ಸತ್ಯದಿಂದ ನನಗೆ ಹೆಚ್ಚು ತೃಪ್ತಿ ಸಿಕ್ಕುತ್ತದೆ. ನನ್ನ ಜೀವನಕ್ಕೆ ಅರ್ಥ ಸಿಕ್ಕುತ್ತದೆ. ಇಂತಹ ತೃಪ್ತಿ ಅರ್ಥಗಳು ದೊರೆಯದಿದ್ದರೆ ಜೀವನವು ಯಾವ ಸುಖವೂ ಇಲ್ಲದೆ ನೀರಸವಾಗುತ್ತದೆ’ ಎಂದುಕೊಂಡು ತಮ್ಮ ಬರವಣಿಗೆಗೆ ಒಂದು ಸ್ಪಷ್ಟ ಉದ್ದೇಶವು ಈ ಹಂತದಲ್ಲಿ ದೊರಕಿತೆಂದು ಹೇಳುತ್ತಾರೆ.

ಪ್ರಸ್ತುತ ನನ್ನ ಲೇಖನವು ಬರವಣಿಗೆಯಲ್ಲಿರುವ ಸುಖ ಎಂತಹುದು ಎಂದು ಹೇಳಹೊರಟಿರುವುದು. ಈ ಕುರಿತು ಹೇಳಬೇಕಾದರೆ, ಬರೆಯುವ ಹಿಂದಿನ ಉದ್ದೇಶವನ್ನೂ ಹೇಳಲೇಬೇಕಾಗುತ್ತದೆ. ಆ ಕೆಲವನ್ನೇ ನಾನು ಮೇಲಿನ ನನ್ನ ಪ್ರಸ್ತಾವನೆಯಲ್ಲಿ ಮಾಡಿರುವುದು. ಏಕೆಂದರೆ, ಬರೆಯುವಾಗಿನ ಪ್ರಕ್ರಿಯೆಯು ಆ ಹಿಂದಿನ ಹೇಳಬೇಕೆಂಬ ತುಡಿತವನ್ನು ಅಥವಾ ಒತ್ತಡವನ್ನು ಕ್ರಮೇಣ ನಿವಾರಿಸುತ್ತಾ ಸಾಗುವ ಸಾಧನ! ಆ ನಿವಾರಣೆಯೇ ಸುಖ!

ಇಲ್ಲಿ ನಾನು ಸೃಜನಶೀಲ ಬರವಣಿಗೆಯನ್ನು ಕೇಂದ್ರವಾಗಿಟ್ಟುಕೊಂಡು ಲೇಖನವನ್ನು ಬರೆಯುತ್ತಿರುವೆ. ಸೃಜನೇತರ ಬರವಣಿಗೆಯು ನನ್ನ ಮಾರ್ಗವಲ್ಲವೆನ್ನುವುದೂ, ಆ ಕುರಿತು ಹೆಚ್ಚು ಪರಿಶ್ರಮವಿರದ ನನ್ನ ಮಿತಿಯೂ ಇದಕ್ಕೆ ಕಾರಣ.

ಪರಿಕಲ್ಪನೆ ಅಥವಾ ವಸ್ತುವೊಂದು ಹೊಳೆಯುವ ಪ್ರಕ್ರಿಯೆಯೇ ಒಂದು ಸೋಜಿಗ! ಆದರೆ ಅದಕ್ಕೆ ಪ್ರೇರಣೆ ನೀಡಿರಬಹುದಾದ ಆಗಿನ ಅಂಶವು ಕೇವಲ ನೆಪವಷ್ಟೇ ಎಂದು ನನ್ನ ಭಾವನೆ. ಬರೆಯುತ್ತಾ ಹೋದಂತೆ, ಅಥವಾ ಬರೆದು ಮುಗಿಸಿ ಯಾವುದೋ ಕಾಲಕ್ಕೆ ಅದನ್ನು ಬರಹಗಾರನೇ ತಿರುವಿ ಹಾಕಿದಾಗ, ತನ್ನ ಮನಸ್ಸಿನಲ್ಲಿ ಯಾವುದೋ ಕಾಲದಿಂದ ಅಡಗಿದ್ದ ಸುಪ್ತವಾದ ಭಾವನೆಯೊಂದು ಯಾವುದೋ ರೂಪದಲ್ಲಿ ಅಲ್ಲಿ ಕಾಣುವನು! ತನ್ನ ಯಾವುದೋ ಬಾಲ್ಯದ ಪ್ರಸಂಗವೊಂದು, ಹತ್ತಿರದಿಂದ ಕಂಡ ಜೀವಂತ ಪಾತ್ರವೊಂದು ಅಲ್ಲಿ ಇನ್ನಾವುದೋ ಪ್ರಸಂಗವಾಗಿ, ಮಾರ್ಪಾಡಾಗ ಒಂದು ವಿಶಿಷ್ಟ ಪಾತ್ರವಾಗಿ ಚಿತ್ರಿತವಾಗಿರುವುದನ್ನು ಕಂಡು ತಾನೇ ಬೆರಗಾಗುವನು! ಭಾಷೆಯೊಂದನ್ನು ಆಡಲು ಕಲಿತ ಮೇಲೆ, ಅದು ಎಂದಿನಿಂದಲೋ ನನ್ನೊಳಗೆ ಅಡಗಿತ್ತು ಎನಿಸುವಂತೆ ಇದೂ ಕೂಡ.

ಪಾತ್ರಗಳ ಸೃಷ್ಟಿಯನ್ನು ಮಾಡುವಾಗ, ಆ ಮಾನವರ ನಡೆನುಡಿ, ರೂಪು, ವಯಸ್ಸು, ವೃತ್ತಿ ಎಲ್ಲಾವನ್ನೂ ನಿರ್ಣಯಿಸಿ, ವಿಧಿಬರಹವನ್ನು ನಿರ್ಧರಿಸುವಾಗ ಬರಹಗಾರ ಸಾಕ್ಷಾತ್ ಬ್ರಹ್ಮನೇ ಆಗುವನು! ತನ್ನೆಲ್ಲಾ ಓದು, ಅನುಭವ, ಚಿಂತನೆ, ಕಲ್ಪನೆಗಳೊಂದಿಗೆ ರೋಚಕವೂ ಕುತೂಹಲದಾಯಕವೂ, ಕೆಲವೊಮ್ಮೆ ಗಂಭೀರವೂ ಸರಳವೂ ಎನಿಸುವ, ತನ್ನ ಮನೋವ್ಯಾಪಾರಕ್ಕೂ ಸಾಮರ್ಥ್ಯಕ್ಕೂ ಉದ್ದೇಶಕ್ಕೂ ಪೂರಕವಾಗಿ ಒಂದು ಸೃಷ್ಟಿಜಗತ್ತನ್ನೇ ನಿರ್ಮಾಣ ಮಾಡುವನು! ಏನೆಲ್ಲಾ ತನ್ನ ಆ ಕೃತಿಯಲ್ಲಿ ಅಡಕ ಮಾಡಬೇಕು, ಹೇಗೆ ಹೇಳಬೇಕು ಎನ್ನುವ ಹಂತ ಕಳೆದು, ಹಂತಹಂತದ ಬೆಳವಣಿಗೆಯನ್ನು ಅರ್ಥಾತ್ ದಾರಿಯನ್ನು ಗುರುತಿಸಿಕೊಂಡು ಸಾಗುವಾಗ ಅದೆಂಥ ದಿವ್ಯ ಅನುಭವ! ಕಗ್ಗತ್ತಲ ಕಾಡಿನಲ್ಲಿ ನಡೆಯುವ ಹಾಗೆ ಹಾದಿ ಬಹಳ ದುರ್ಗಮವಾದುದು. ಬರಹಗಾರ ತನ್ನ ಮುಂದಿನ ಹತ್ತಾರು ಹೆಜ್ಜೆಗಳ ಅಂತರವನ್ನಷ್ಟೇ ಕಾಣಲು ಸಾಧ್ಯ! ಅಡಿಯಿರಿಸಿದಂತೆ, ದಾರಿಯು ತೆರೆದುಕೊಳ್ಳುತ್ತಾ ಅಥವಾ ಕಾಣುತ್ತಾ ಸಾಗುವುದು. ಅದು ತಾನೇ ಕೊನೆಯನ್ನು ಮುಟ್ಟಿಸುವುದು. ಎಷ್ಟೋ ವೇಳೆ ಕೊನೆ ಮುಟ್ಟದ ಬಯಲಿನಲ್ಲಿಯೂ ಕೃತಿಯ ಕೊನೆಯ ಸಾಲೊಂದು ನಿಂತುಬಿಡಬಹುದಷ್ಟೇ! ಮುಂದಿನದು ಓದುಗನ ಚಿತ್ತ!

ಆದರೆ, ತಮಾಷೆ ಇರುವುದು ಮುಂದಿನ ಹಂತದಲ್ಲಿ!! ಅದು ಬರವಣಿಗೆಗೆ ಮಂಗಳ ಹಾಡಿದ ಹೊತ್ತು! ಹೇಳಿ ಮುಗಿಸಿದ ಈ ಹೊತ್ತು, ಕರ್ಮ ಕಳೆದ ನಿರಾಳತೆಯನ್ನೇನೋ ಕೊಡಬಹುದು, ಧನ್ಯತೆಯೂ ಮೂಡಬಹುದು. ಆದರೆ ಅದರ ಬೆನ್ನಿಗೇ ಪಿಚ್ಚನಿಸುತ್ತದೆ! ಆವರೆಗೂ ಯಾವುದೋ ಪ್ರಪಂಚವನ್ನೇ ಹೊತ್ತು ಮೆರೆಯುತ್ತಿದ್ದ ಮನಸ್ಸೂ ಮೆದುಳೂ... ಏನನ್ನೋ ಕಳೆದುಕೊಂಡ ಅನಾಥಭಾವವನ್ನು ಅನುಭವಿಸುತ್ತದೆ! ಬರೆಯಲು ಹೊರಟದ್ದು, ಯಾವುದೋ ಮಹಾಕಾವ್ಯವೋ ಬೃಹತ್ ಗ್ರಂಥವೋ ಆಗಿದ್ದಲ್ಲಿ, ನಿಶ್ಚಯವಾಗಿ ಆ ಕೃತಿ ಅಂತ್ಯ ಕಂಡಾಗ, ಅದರ ಕರ್ತೃವಿಗೆ ದೇಹದ ಯಾವುದೋ ಭಾಗವೇ ಕಳಚಿ ಹೋಯಿತೇನೋ ಎನ್ನುವ ಭಾವ ಬರದೇ ಇರದು. ನಾನು ಖಾಲಿಯಾಗಿಹೋದೆ, ಸೋರಿಹೋದೆ ಎನ್ನಿಸದೇ ಇರದು. ‘ಕಾದಂಬರಿಯ ಪಾತ್ರಗಳೆಲ್ಲ ತಮ್ಮತಮ್ಮ ದಾರಿ ಹಿಡಿದು ನನಗೆ ವಿದಾಯ ಹೇಳಿ ನಡೆದುಬಿಟ್ಟರು! ಆ ನನ್ನ ಸೃಷ್ಟಿಪ್ರಪಂಚದ ಜನರೊಂದಿಗೆ ಏರ್ಪಟ್ಟ ಅಗಲಿಕೆಯ ನೋವನ್ನು, ಸೂತಪುರಾಣಿಕರಂತೆ ಅವರ ಬದುಕನ್ನು ಹತ್ತಿರದಿಂದ ನೋಡಿ ದಾಖಲಿಸಿದ ಈ ಕೃತಿಯನ್ನು ತಿರುವಿಹಾಕುತ್ತ ಮರೆಯಲು ಯತ್ನಿಸಬೇಕಲ್ಲದೆ ಅನ್ಯಮಾರ್ಗವಿಲ್ಲ!’ ಎಂದು ಭಾವುಕಳಾಗಿ ನಾನೇ ನನ್ನ ಕೃತಿಯೊಂದರ ಅರಿಕೆಯ ಭಾಗದಲ್ಲಿ ಬರೆದಿರುವೆ. ! ಅಲ್ಲಿಗೆ.. ‘ಸುಖವಿರುವುದು ಪ್ರಯಾಣದ ಕೊನೆಯ ಗುರಿಯನ್ನು ಮುಟ್ಟುವುದರಲ್ಲಿ ಅಲ್ಲ; ಪ್ರಯಾಣದ ಹಾದಿಯೇ ಸುಖ!’ ಎನ್ನಲಡ್ಡಿಯಿಲ್ಲ. ಈ ಪಯಣದ ಹಿತಯಾತನೆಯ ಅನುಭವ ಬರಹಗಾರನಿಗೆ ಮಾತ್ರ ಸೀಮಿತವಾದ ಬೇಲಿಯ ನೀಲಿಯ ಹೂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT