ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸ್ನೇಹಿ ‘ಯೆಲ್ಲೊ ಎಕ್ಸ್‌ಪ್ರೆಸ್’

Last Updated 6 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಆಟೊದವರು ಕರೆದಲ್ಲಿ ಬರುವುದಿಲ್ಲ, ಕ್ಯಾಬ್‌ನಲ್ಲಿ ಸುರಕ್ಷತೆ ಇಲ್ಲ ಎನ್ನುವ ದೂರು ಬೆಂಗಳೂರಿಗರದ್ದು. ಹೊತ್ತಲ್ಲದ ಹೊತ್ತಿನಲ್ಲಿ, ಅದರಲ್ಲೂ ಹೆಣ್ಣುಮಕ್ಕಳು ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಬೇಕಾಗಿ ಬಂದಾಗ ಅಭದ್ರತಾ ಭಾವ, ಆತಂಕ ಮನೆ ಮಾಡುವುದಿದೆ. ಇದಕ್ಕೊಂದು ಪರಿಹಾರ ಎನ್ನುವಂತೆ ವಿಶಿಷ್ಟ ರೀತಿಯ ಸೇವೆಗೆ ಸಿದ್ಧವಾಗಿದೆ ‘ಯೆಲ್ಲೊ ಎಕ್ಸ್‌ಪ್ರೆಸ್‌’.

ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚು. ಹೊತ್ತಲ್ಲದ ಹೊತ್ತಿನಲ್ಲಿ ಓಡಾಟ, ಓಡಾಟಕ್ಕಾಗಿ ಪರದಾಟ ಇದ್ದಿದ್ದೆ. ಕೆಲವು ಕಂಪನಿಗಳಲ್ಲಿ ಕ್ಯಾಬ್‌ ವ್ಯವಸ್ಥೆ ಇದೆ. ಆದರೆ, ಅದಕ್ಕೂ ಅನೇಕ ಮಿತಿಗಳಿವೆ. ಇನ್ನು ಕೆಲ ಕಂಪನಿಗಳಲ್ಲಿ ರಾತ್ರಿ ಪಾಳಿಯ ನೌಕರರಿಗಷ್ಟೆ ಕ್ಯಾಬ್‌ ವ್ಯವಸ್ಥೆ ಎನ್ನುವ ಪರಿಪಾಠವಿದೆ. ನಾವು ಕರೆದಲ್ಲಿಗೆ ‘ಬರುವುದಿಲ್ಲ’ ಎನ್ನುವ ಆಟೊ ಚಾಲಕರು, ಅಸುರಕ್ಷತೆಯ ಅಳುಕು ಹುಟ್ಟಿಸುವ ಕ್ಯಾಬ್‌ ಚಾಲಕರು.. ಇಂಥ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ‘ಯೆಲ್ಲೊ ಎಕ್ಸ್‌ಪ್ರೆಸ್‌’ ನಗರದ ಗ್ರಾಹಕರಿಗೆ ಹೊಸ ರೀತಿಯಲ್ಲಿ ಸೇವೆ ನೀಡಲಿದೆ.

ಪ್ರಸ್ತುತ ಲಭ್ಯವಿರುವ ಕ್ಯಾಬ್‌ ಸೇವೆಗಳಲ್ಲಿ ಮೊಬೈಲ್‌ಗೆ ಜಿಪಿಎಸ್‌ ಅಳವಡಿಸಲಾಗಿರುತ್ತದೆ. ಆದರೆ, ಯಾವುದೇ ಸಮಯದಲ್ಲಿ ತನ್ನ ಮೊಬೈಲ್‌ ಆಫ್‌ ಮಾಡಿಕೊಳ್ಳುವ ಮೂಲಕ ಚಾಲಕ ಕಂಪನಿಯೊಂದಿಗಿನ ಸಂಪರ್ಕವನ್ನು ಕಳೆದುಕೊಳ್ಳಬಹುದು. ಆಗ ವಾಹನದ ಬಗೆಗಾಗಲಿ, ಅದರಲ್ಲಿರುವ ಗ್ರಾಹಕರ ಬಗೆಗಾಗಲಿ ಕಂಪನಿಗೆ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ. ಈ ಸವಾಲನ್ನು ಸಮರ್ಥವಾಗಿ ಎದುರಿಸಲೆಂದು ‘ಯೆಲ್ಲೊ ಎಕ್ಸ್‌ಪ್ರೆಸ್‌’ ಜಿಪಿಎಸ್ಇನ್‌ಬಿಲ್ಟ್‌ವಾಹನ ಬಳಸಲಿದೆ. ಇದರಿಂದ ವಾಹನ ಎಲ್ಲಿ ಹೋಗುತ್ತಿದೆ, ವೇಗವೆಷ್ಟು, ಎಲ್ಲಿ ನಿಂತಿದೆ ಎಂಬೆಲ್ಲ ಮಾಹಿತಿ ಕಂಪನಿಗೆ ಸಿಗುತ್ತದೆ.

ಸಿಸಿಟಿವಿ ಕ್ಯಾಮೆರಾ ಸೌಲಭ್ಯ

ಮಹಿಳೆಯರಿಗೆ ತಾವು ಕಂಪನಿಯ ಕಣ್ಗಾವಲಿನಲ್ಲಿದ್ದೇವೆ, ಆತಂಕ ಪಡಬೇಕಿಲ್ಲ ಎನ್ನುವ ಸುರಕ್ಷಿತ ಭಾವನೆ ಮೂಡಿಸುವುದಕ್ಕಾಗಿ ವಾಹನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಸಹಾಯದಿಂದ ಚಾಲಕನ ಚಲನ–ವಲನವನ್ನು, ಗ್ರಾಹಕರ ಸುರಕ್ಷತೆಯನ್ನು, ವಾಹನದ ವೇಗವನ್ನು ಕಂಪನಿ ಅವಲೋಕಿಸುತ್ತದೆ.

ಮನರಂಜನೆ

ಬೆಂಗಳೂರಿನಲ್ಲಿ ಪ್ರಯಾಣವೆಂದರೆ ಕೆಲ ನಿಮಿಷಗಳಷ್ಟೆ ಅಲ್ಲ, ಗಂಟೆ–ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಟ್ರಾಫಿಕ್‌ನಲ್ಲಿ ಕಳೆಯಬೇಕಾಗಿ ಬರುವ ಈ ಅವಧಿಯನ್ನು ಸಹನೀಯಗೊಳಿಸಲು ಗ್ರಾಹಕರ ಪ್ರಯಾಣದ ಪ್ರತಿ ನಿಮಿಷವನ್ನೂ ಆಹ್ಲಾದಕರಗೊಳಿಸಲು ‘ಯೆಲ್ಲೊ ಎಕ್ಸ್‌ಪ್ರೆಸ್‌’ ವಾಹನದಲ್ಲಿ ವಿವಿಧ ಬಗೆಯ ಮನರಂಜನಾ ಆಯ್ಕೆಗಳನ್ನು ಅಳವಡಿಸಲಾಗಿದೆ. ಹೆಡ್ ರೆಸ್ಟ್ ಮಾನಿಟರ್ ಮೂಲಕ ಪ್ರಯಾಣಿಕರು ಹಾಡುಗಳನ್ನು ವೀಕ್ಷಿಸಬಹುದು ಹಾಗೂ ಕೇಳಬಹುದು.

‘ಯೆಲ್ಲೊ ಎಕ್ಸ್‌ಪ್ರೆಸ್’ ಮೊಬೈಲ್ ಅಪ್ಲಿಕೇಷನ್ ಮೂಲಕ ಕಾರ್ಯನಿರ್ವಹಿಸಲಿದೆ. ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಆಪರೇಟ್ ಮಾಡಬಹುದು. ಕ್ಯಾಬ್‌ ಬುಕ್‌ ಮಾಡಲು ಇಂಟರ್‌ನೆಟ್‌ ಸೌಲಭ್ಯ ಅಡ್ಡಿಯಾಗಬಾರದು. ಗ್ರಾಹಕರು ಎಲ್ಲಿಂದಲೂ, ಯಾವ ಸಮಯದಲ್ಲಿಯೂ ಸುಲಭವಾಗಿ ಕ್ಯಾಬ್‌ ಬುಕ್‌ ಮಾಡಲು ಸಾಧ್ಯವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ. ಇಂಟರ್‌ನೆಟ್ ಸಹಾಯವಿಲ್ಲದೆಯೂ ಕ್ಯಾಬ್ ಬುಕ್ ಮಾಡಬಹುದು.

ಚಾಲಕರಿಗೆ ಘನತೆಯ ಬದುಕು

ಕಂಪನಿ ಸದ್ಯದಲ್ಲಿಯೇ ಮೂರು ಸಾವಿರ ಕ್ಯಾಬ್‌ಗಳನ್ನು ಗ್ರಾಹಕ ಸೇವೆಗೆ ಬಿಡಲಿದೆ. ಎರಡು ಪಾಳಿ ಮೂಲಕ ಇಬ್ಬಿಬ್ಬರು ಚಾಲಕರು ಒಂದು ಕಾರಿಗೆ ನೇಮಕಗೊಳ್ಳುತ್ತಾರೆ. ಇದರಿಂದ ಸುಮಾರು ಎಂಟು ಸಾವಿರ ಉದ್ಯೋಗ ಸೃಷ್ಟಿಯಾಗಲಿದ್ದು, ನಗರದ ಯುವ ಚಾಲಕರಿಗೆ ಆದ್ಯತೆ ನೀಡಲಾಗುತ್ತಿದೆ.

ಅವರಿಗೆ ಹಲವು ಬಗೆಯ ಅನುಕೂಲತೆಗಳು ಹಾಗೂ ಲಾಭಗಳನ್ನು ನೀಡಲು ನಿರ್ಧರಿಸಿದ್ದೇವೆ. ಆಕರ್ಷಕ ವೇತನ, ಭತ್ಯೆಗಳು ಹಾಗೂ ರಜೆಗಳು ಚಾಲಕರ ಜೀವನಶೈಲಿಯನ್ನು ಬದಲಿಸಲು ಅನುವಾಗಲಿವೆ. ಚಾಲಕರೆಂದರೆ ಮಷೀನ್‌ಗಳಲ್ಲ. ಅವರಿಗೂ ಕುಟುಂಬವಿರುತ್ತದೆ, ಅವರಿಗೂ ವೈಯಕ್ತಿಕ ಸಮಯ ಬೇಕು. ದುಡಿಮೆಗೆ ತಕ್ಕ ಪ್ರತಿಫಲ ಬೇಕು. ಅವರ ಆರೋಗ್ಯವೂ ಮುಖ್ಯ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಚಾಲಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತೇವೆ.

ಬೆಂಗಳೂರಿನಲ್ಲಿ ಕ್ಯಾಬ್‌ ಸೇವೆಗಳಿಗೇನೂ ಕೊರತೆ ಇಲ್ಲ. ಆದರೆ, ‘ಯೆಲ್ಲೊ ಎಕ್ಸ್‌ಪ್ರೆಸ್‌’ ಗ್ರಾಹಕರ ನಿರೀಕ್ಷೆಗಳನ್ನು ತಲುಪುವೆಡೆಗೆ ಹೆಚ್ಚು ಒತ್ತು ನೀಡಿದೆ. ಗ್ರಾಹಕರ ಸುರಕ್ಷತೆಯೊಂದಿಗೆ ಚಾಲಕರ ದೂರು–ದುಮ್ಮಾನಗಳನ್ನೂ ಗಮನದಲ್ಲಿಟ್ಟುಕೊಂಡಿದ್ದೇವೆ.

–ರಮಿತ್‌ ಮಲ್ಹೋತ್ರಾ,

‘ಯೆಲ್ಲೊ ಎಕ್ಸ್‌ಪ್ರೆಸ್‌’ ಸಂಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT