ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಋಣಾತ್ಮಕ ಆಲೋಚನೆಗಳಿಂದ ಮನಸ್ಸಿನಲ್ಲಿ ಭಯ’

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಇಬ್ಬರದ್ದೂ ಸರ್ಕಾರಿ ಉದ್ಯೋಗ. ಇಬ್ಬರು ಒಂದೇ ಕಡೆ ಕೆಲಸ ಮಾಡುವ ಕಾರಣ ಪರಿಚಯವಾಗಿದೆ. ಮೊದಲು ಫೋನಿನಲ್ಲಿ ಬಹಳ ಮಾತನಾಡುತ್ತಿದ್ದೆವು. ಅವಳಿಗೆ ನಾನೇ ಪ್ರಪಂಚ ಅನ್ನುವಷ್ಟು ಮಾತನಾಡುತ್ತಿದ್ದಳು. ಆದರೆ ಎದುರಿಗೆ ಸಿಕ್ಕಾಗ ಏನು ಮಾತನಾಡುವುದಿಲ್ಲ. ನರ್ವಸ್ ಆಗುತ್ತಾಳೆ. ಈಗೀಗ ನನ್ನ ಬಗ್ಗೆ ನೆಗೆಟೀವ್ ಆಗಿ ಮಾತನಾಡುತ್ತಾಳೆ. ನೀನು ಬೇಡ ಎಂದು ಹೇಳುತ್ತಿದ್ದಾಳೆ. ಆದರೆ ನನಗೆ ಅವಳೇ ಪ್ರಪಂಚ ಎನ್ನುವಷ್ಟು ಅವಳನ್ನು ಹಚ್ಚಿಕೊಂಡಿದ್ದೇನೆ. ಅವಳಿಲ್ಲದೇ ಬದುಕಲು ಸಾಧ್ಯವಾಗುತ್ತಿಲ್ಲ. ಏನು ಮಾಡಲಿ?

ಪ್ರೀತಿಯಲ್ಲಿ ಬೀಳುವುದು ಒಂದು ಸುಂದರ ಅನುಭವ; ಈ ಸಮಯದಲ್ಲಿ ನಿಮ್ಮ ಸುತ್ತಲಿನ ಎಲ್ಲವೂ ನಿಮಗೆ ಸುಂದರವಾಗಿಯೇ ಕಾಣುತ್ತದೆ ಮತ್ತು ಜಗತ್ತು ನಿಮಗಾಗಿಯೇ ಇದೆ ಎಂಬ ಭಾವನೆಗಳು ಬರಲು ಆರಂಭಿಸುತ್ತವೆ. ಆದರೆ ಇಬ್ಬರು ಪ್ರೀತಿಯಲ್ಲಿ ಬಿದ್ದಾಗ ಪರಸ್ಪರ ಹೊಂದಾಣಿಕೆ ಮತ್ತು ಪ್ರೀತಿಯಲ್ಲಿ ಸ್ಥಿರತೆ ಇರಬೇಕು. ಕೆಲವೊಮ್ಮೆ ಪ್ರೀತಿ ಕೇವಲ ಆಕರ್ಷಣೆಯಾಗಿರುತ್ತದೆ. ಆಗ ಕೇವಲ ಕೆಲವು ಸಮಯ ಮಾತ್ರ ಪ್ರೀತಿ ಗಂಭೀರವಾಗಿರುತ್ತದೆ. ಆದರೆ ವಾಸ್ತವ ಹಾಗೂ ಪ್ರಾಯೋಗಿಕತೆಯ ವಿಷಯಕ್ಕೆ ಬಂದಾಗ ಪ್ರೀತಿ ಬದಲಾಗಬಹುದು. ನೀವು ಪ್ರೀತಿ ಮಾಡಿದ ಹುಡುಗಿಯನ್ನು ಗಮನಿಸಿದಾಗ ಹೀಗೆ ಅನ್ನಿಸುತ್ತಿದೆ. ಹಾಗಾಗಿ ಅವರಿಗೆ ಸ್ವಲ್ಪ ಸಮಯ ನೀಡಿ. ಅವರು ಭಾವನೆಗಳ ಹೇಗಿವೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪ್ರೀತಿ ನಿಜವಾಗಿಯೂ ಇಬ್ಬರ ನಡುವೆ ಬಾಂಧವ್ಯ ಮೂಡಿಸಲು ಸಾಧ್ಯವೇ ಎಂಬುದನ್ನು ಯೋಚಿಸಿ. ನಿಮ್ಮ ಹುಡುಗಿಗೆ ಇಷ್ಟವಿಲ್ಲದಿದ್ದರೆ ಮತ್ತೆ ನೀವು ಮುಂದುವರೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲದೇ ಇದರಿಂದ ಮುಂದೆ ನೀವೇ ನೋವು ಅನುಭವಿಸುತ್ತೀರಿ. ನಿಮ್ಮ ಸಂಬಂಧದ ಬಗ್ಗೆ ನಿಮ್ಮ ಹುಡುಗಿಯ ಜೊತೆ ಸ್ವಷ್ಟವಾಗಿ ಮಾತನಾಡಿ. ಅವರ ನಿರ್ಧಾರಗಳನ್ನು ಗೌರವಿಸಿ ಮುಂದೆ ಸಾಗಿ. ನಿಮಗೆ ತಿಳಿಯದ ಯಾವುದೋ ಒಂದು ಸುಂದರವಾದ ಸಮಯ ನಿಮಗಾಗಿ ಕಾಯುತ್ತಿರಬಹುದು.

2. ನನ್ನ ಹೆಸರು ದಿವ್ಯಾ, ತುಮಕೂರು. ನನಗೆ ಯಾವಾಗಲೂ ನೆಗೆಟೀವ್ ಆಲೋಚನೆಗಳೇ ಮನಸ್ಸಿನಲ್ಲಿ ತುಂಬಿರುತ್ತವೆ. ಅದರಿಂದ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಆ ಭಯ ನನ್ನನ್ನು ತಲ್ಲಣಗೊಳಿಸುತ್ತದೆ. ಇದರಿಂದ ಹೊರ ಬರಲು ದಾರಿಯನ್ನು ತಿಳಿಸಿ.

ನಿಮ್ಮ ಋಣಾತ್ಮಕ ಯೋಚನೆಗಳನ್ನು ವಿಶ್ಲೇಷಿಸಿ. ಅದು ನಿಮ್ಮನ್ನು ಯಾಕೆ ಕಾಡುತ್ತಿದೆ, ನಿಮ್ಮನ್ನು ಯಾವುದೋ ಅಭದ್ರತೆ ಕಾಡುತ್ತಿದೆಯಾ ಅಥವಾ ನೀವು ಯಾವುದೋ ಅನಿಶ್ಚಿತತೆಯನ್ನು ಎದುರಿಸುತ್ತಿದ್ದೀರಾ – ಎಂಬುದನ್ನು ತಿಳಿದುಕೊಳ್ಳಿ. ಏಕೆಂದರೆ, ನಾವು ಯಾವುದಕ್ಕೆ ಹೆಚ್ಚು ಒತ್ತು ನೀಡುತ್ತೇವೆಯೋ ಅದರತ್ತ ಹೆಚ್ಚು ಆಕರ್ಷಿತರಾಗುತ್ತೇವೆ. ಹಾಗಾಗಿ ಚಿಂತೆ, ಭಯ, ಅನಿಶ್ಚಿತತೆ, ಅಪರಾಧಿಭಾವ, ಹೊಟ್ಟೆಕಿಚ್ಚು, ಆತಂಕ ಮತ್ತು ಸೋಲು – ಇವುಗಳ ಮೇಲೆ ನೀವು ಹೆಚ್ಚು ಒತ್ತು ನೀಡಿದರೆ, ಅವು ಋಣಾತ್ಮಕ ಚಿಂತನೆಗಳು ನಿಮ್ಮಲ್ಲಿ ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ.

ಮೊದಲು ಋಣಾತ್ಮಕ ಚಿಂತನೆಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಿ. ಅಂತಹ ಚಿಂತನೆಗಳಿಗೆ ಹೆಚ್ಚು ಪ್ರಾಮುಖ್ಯವನ್ನು ನೀಡಿಬೇಡಿ. ನೀವು ಇರುವ ಪರಿಸರವನ್ನು ಬದಲಾಯಿಸಿ. ಹೊರ ಜಗತ್ತಿಗೆ ಕಾಲಿರಿಸಿ. ಹೊರಗಿನ ಸ್ವಚ್ಛಂದ ಗಾಳಿಯಲ್ಲಿ ದೀರ್ಘವಾಗಿ ಉಸಿರಾಡಿ. ಇದು ಋಣಾತ್ಮಕ ಚಿಂತನೆಯನ್ನು ಮನಸ್ಸಿನಿಂದ ಹೊರಗಟ್ಟಲು ಇದು ಸಹಾಯ ಮಾಡುತ್ತದೆ. ಎರಡನೆಯದಾಗಿ, ಪ್ರತಿದಿನ ವ್ಯಾಯಾಮ ಹಾಗೂ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಇದರಿಂದ ನಿಮ್ಮ ಮನಸ್ಸಿನಲ್ಲಿರುವ ಋಣಾತ್ಮಕ ಚಿಂತನೆಯೂ ಧನಾತ್ಮಕ ಚಿಂತನೆಯಾಗಿ ಪರಿವರ್ತನೆಗೊಳ್ಳಲು ಸಹಾಯವಾಗಬಹುದು. ನಮ್ಮ ಮನಸ್ಸಿಗೆ ಅದರದ್ದೇ ಆದ ಆಲೋಚನಾಶಕ್ತಿ ಇಲ್ಲ. ನಾವು ಯೋಚಿಸಿದ್ದನ್ನೇ ಮನಸ್ಸು ನಿರ್ಧರಿಸುತ್ತದೆ. ಹಾಗಾಗಿ ನೀವೇಕೆ ಧನಾತ್ಮಕ ಯೋಚನೆಗಳೇ ಮನಸ್ಸಿನಲ್ಲಿ ಹುಟ್ಟುವಂತೆ ಅಭ್ಯಾಸ ಮಾಡಬಾರದು. ಮನಸ್ಸು ಹವ್ಯಾಸಗಳನ್ನು ಹುಟ್ಟು ಹಾಕುತ್ತದೆ. ನೀವು ಯಾವುದನ್ನು ಹೆಚ್ಚು ಅಭ್ಯಾಸ ಮಾಡುತ್ತೀರೋ ಅದಕ್ಕೆ ಹೆಚ್ಚು ಮನಸ್ಸು ತೆರೆದುಕೊಳ್ಳುತ್ತದೆ. ಹಾಗಾಗಿ ಸದಾ ಧನಾತ್ಮಕರಾಗಿ.

3. ನನ್ನ ಹೆಸರು ಸರಳ. ನಾನು ಕಾಲೇಜೊಂದರಲ್ಲಿ ಉಪನ್ಯಾಸಕಿ. ನನಗೆ 13 ವರ್ಷದ ಮಗನಿದ್ದಾನೆ. ನನ್ನ ಅತ್ತೆ ಯಾವಾಗಲೂ ನನ್ನ ಹಾಗೂ ನನ್ನ ಗಂಡನ ಮೇಲೆ ಸಿಟ್ಟಾಗುತ್ತಾರೆ. ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಆದರೂ ಅವರು ಮನೆಯ ವಾತಾವರಣವನ್ನು ಹಾಳುಗೆಡವುತ್ತಾರೆ. ನನ್ನ ಮಗನಿಗೆ ಅನುಕೂಲಕರ ವಾತಾವರಣ ನೀಡುವ ಸಲುವಾಗಿ ನಾನು ಆಸೆ, ಗೌರವ, ಇಷ್ಟ–ಕಷ್ಟಗಳನ್ನೆಲ್ಲಾ ಸಾಯಿಸಿ ಬದುಕುತ್ತಿದ್ದೇನೆ. ಆದರೆ ನಮ್ಮ ಅತ್ತೆ ಯಾವಾಗಲೂ ಧಾರಾವಾಹಿಗಳನ್ನು ನೋಡುತ್ತಾರೆ. ಧಾರಾವಾಹಿಗಳಲ್ಲಿ ವರ್ತಿಸುವಂತೆ ನಮ್ಮೊಂದಿಗೆ ವರ್ತಿಸುತ್ತಾರೆ. ನನಗೆ ನನ್ನ ಮಗನದ್ದೇ ಬಗ್ಗೆ ಚಿಂತೆ. ದಯವಿಟ್ಟು ಪರಿಹಾರ ತಿಳಿಸಿ.

ಕೆಲವೊಂದು ಕಡೆ ಈ ಅತ್ತೆ–ಸೊಸೆಯ ಸಂಬಂಧವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಕಷ್ಟದ ಸಂಗತಿ. ಇದು ಒತ್ತಡದಾಯಕ ಮತ್ತು ಕೆಲವೊಮ್ಮೆ ಋಣಾತ್ಮಕವಾದದ್ದು ಕೂಡ. ಆದರೆ ಈ ಸೂಕ್ಷ್ಮವಾದ ಸಂಬಂಧವನ್ನು ಉಳಿಸಿಕೊಳ್ಳಲು ಇಬ್ಬರೂ ಸಮನಾದ ಪರಿಶ್ರಮವನ್ನು ಹಾಕಬೇಕು. ಮನೆಯ ಯಜಮಾನನು ಈ ವಿಷಯದಲ್ಲಿ ಮುಖ್ಯಪಾತ್ರವನ್ನು ವಹಿಸಿ, ಸಂಬಂಧ ಸಮತೋಲಿತವಾಗಿ ಇರುವಂತೆ ನೋಡಿಕೊಳ್ಳಬೇಕು. ನಿಮ್ಮ ವಿಷಯದಲ್ಲಿ ನಿಮ್ಮ ಅತ್ತೆಯವರಿಗೆ ತಾನು ಒಬ್ಬಂಟಿ ಹಾಗೂ ಯಾವುದೋ ಕಾರಣಕ್ಕೆ ಅನಿಶ್ಚಿತತೆ ಅವರನ್ನು ಕಾಡಿರಬಹುದು. ಹಾಗಾಗಿ ನಿಮ್ಮಲ್ಲಿ ಒಬ್ಬರು ಅವರ ಬಳಿ ವೈಯಕ್ತಿಕವಾಗಿ ಮಾತನಾಡಿ. ನಿಮ್ಮ ಪತಿ ಅವರ ಬಳಿ ಮಾತನಾಡುವುದು ಉತ್ತಮ ಮತ್ತು ಅವರನ್ನು ಮನಸ್ಸನ್ನು ಕಾಡುವ ವಿಷಯ ಯಾವುದು ಮತ್ತು ಅವರಿಗೆ ಏನು ಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ವಯಸ್ಸಿನಲ್ಲಿ ಅವರಿಂದ ಏನೂ ಹೆಚ್ಚಿಗೆ ಮಾಡಲು ಸಾಧ್ಯವಿಲ್ಲ. ಹೀಗಾಗಗ ಅವರಿಗೆ ಟೀವಿಯ ಗೀಳು ಹೆಚ್ಚಿರುತ್ತದೆ; ಅದು ಅವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅವರು ಹೇಳಿದ್ದಕ್ಕೆ ನೀವು ಒರಟಾಗಿ ಪ್ರತಿಕ್ರಿಯಿಸಬೇಡಿ, ಬದಲಾಗಿ ನಿಧಾನವಾಗಿ ಕಡೆಗಣಿಸಬೇಕು. ಆಗ ನಿಧಾನವಾಗಿ ಅವರಿಗೆ ತಾನು ಈ ರೀತಿ ವರ್ತಿಸಬಾರದು ಎಂಬುದು ಅರಿವಾಗುತ್ತದೆ. ಇನ್ನು ನಿಮ್ಮ ಮಗ ಈ ವಯಸ್ಸಿಗೆ ಬಂದಿದ್ದಾನೆ. ಅವನಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಅರಿವು ಇರುತ್ತದೆ. ಅವನ ಓದಿನ ಬಗ್ಗೆ ಅವನಲ್ಲಿ ಆತ್ಮವಿಶ್ವಾಸವನ್ನು ತುಂಬಿ. ಹುಡುಗರು ಸಾಮಾನ್ಯವಾಗಿ ಮನೆಯ ಒಳಗಿನ ಸಂಘರ್ಷಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳವುದಿಲ್ಲ. ಹಾಗಾಗಿ ಹೆಚ್ಚು ಚಿಂತಿಸಬೇಡಿ, ಅವನಿಗೆ ಒಳ್ಳೆಯದಾಗುತ್ತದೆ.

4. ನನ್ನ ಹೆಸರು ರಮೇಶ ಕಂಪ್ಲಿ. ನಾನು ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಎಂ. ಎ. ಪದವಿಯನ್ನು ಪಡೆದಿದ್ದೇನೆ. ಮನೆಯ ಆರ್ಥಿಕ ಪರಿಸ್ಥಿತಿ ನಿಭಾಯಿಸುವುದಕ್ಕೆ ಕೆಲಸ ಮಾಡುತ್ತ, ಜೊತೆಗೆ ಧಾರವಾಡದಲ್ಲೇ ಓದುತ್ತಿದ್ದೇನೆ ಕೂಡ. ನಾನು ಕಥೆ, ಕವನ, ಲೇಖನಗಳನನ್ನು ಬರೆಯುತ್ತೇನೆ. ಹಾಡು ಹಾಡುತ್ತೇನೆ. ಕೆಲಸ ಮಾಡುತ್ತಾ ಕಥೆ, ಕವನ ಬರೆಯುವುದಕ್ಕೆ ಹಾಗೂ ಸಂಗೀತ ಕಲಿಯುವುದಕ್ಕೆ ಆಗುತ್ತಿಲ್ಲ. ಕೆಲಸ ಬಿಟ್ಟರೆ ಮನೆಯ ಪರಿಸ್ಥಿತಿ ಹದಗೆಡುತ್ತೆ, ಆದರೆ ನನಗೆ ಸಂಗೀತ ಕಲಿಯುವುದಕ್ಕೆ ಆಸೆ. ಕಥೆ–ಕಾದಂಬರಿ ಬರಿಯುವ ಹುಚ್ಚು. ಈ ಎರಡರ ಮದ್ಯೆ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದ ಮನಸ್ಸಿನಲ್ಲಿ ಶಾಂತಿಯೂ ಇಲ್ಲ. ಏನು ಮಾಡಲಿ?

ಓದುವ ಸಮಯದಲ್ಲೇ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ಶಾಘ್ಲನೀಯ. ನೀವು ಒಬ್ಬ ಜವಾಬ್ದಾರಿಯುತ ವ್ಯಕ್ತಿ ಎಂಬುದನ್ನು ಅದು ತೋರಿಸುತ್ತದೆ. ಅದಕ್ಕೂ ಮಿಗಿಲಾದ ಹೆಮ್ಮೆಯ ವಿಷಯ ಎಂದರೆ ನೀವು ಕಥೆ ಹಾಗೂ ಕವನಗಳನ್ನು ಬರೆಯುವುದು. ಒಮ್ಮೆ ನಿಮ್ಮ ಮನಸ್ಸು ಸಿದ್ಧವಾದರೆ ಯಾವುದೂ ಅಸಾಧ್ಯವಲ್ಲ. ಹೀಗಾಗಿ ಎಲ್ಲದಕ್ಕೂ ಸಮಯವನ್ನು ಹೊಂದಿಸಿಕೊಳ್ಳಿ. ನಾವು ಇಷ್ಟಪಡುವ ಕೆಲಸಗಳನ್ನು ಮಾಡಲು ಸಮಯ ಹೊಂದಿಸಿಕೊಳ್ಳವುದು ಕೂಡ ಒಂದು ಕಲೆ. ನಿಮ್ಮ ಉದ್ಯೋಗ ಮತ್ತು ಓದಿಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡಿ. ಸದ್ಯದ ಮಟ್ಟಿಗೆ ನಿಮ್ಮ ಕಥೆ–ಕವನಗಳಿಗೆ ಸ್ವಲ್ಪ ಕಡಿಮೆ ಪ್ರಾಶಸ್ತ್ಯವನ್ನು ನೀಡಿ. ಒಮ್ಮೆ ನಿಮ್ಮ ಓದು ಮುಗಿದ ಮೇಲೆ ನಿಮಗೆ ಸಂಗೀತ ಹಾಗೂ ಸಾಹಿತ್ಯ ಕಲಿಯಲು ಸಾಕಷ್ಟು ಸಮಯ ದೊರಕುತ್ತದೆ. ಅದನ್ನು ನೀವು ಕೆಲಸಕ್ಕೆ ಹೋಗುವ ಸಮಯದಲ್ಲೂ ಅನುಸರಿಸಬಹುದು. ಹಿಂದೆಟು ಹಾಕಬೇಡಿ, ಒಬ್ಬ ವ್ಯಕ್ತಿಗೆ ಅನೇಕ ಕೆಲಸಗಳನ್ನು ಮಾಡುವ ಶಕ್ತಿ ಇದೆ. ಹೀಗಾಗಿ ಆದ್ಯತೆಗಳನ್ನು ಗುರುತಿಸುವುದು ಹಾಗೂ ಸಮಯವನ್ನು ಹೊಂದಿಸುವುದು – ದೊಡ್ಡ ವಿಷಯವಲ್ಲ. ಜೊತೆ ಜೊತೆಗೆ ನೀವು ಸಂಗೀತ ಕಲಿಯಲು ಮತ್ತು ನಿಮ್ಮ ಕವನಗಳನ್ನು ಪ್ರಕಟಿಸಲು ಅಂತರ್ಜಾಲ ಮಾಧ್ಯಮವನ್ನೂ ಬಳಸಿಕೊಳ್ಳಬಹುದು. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT