ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗೆ ಸೇರಿದರೆ ಗುಂಡು ...

Last Updated 28 ಜೂನ್ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕುಡಿತದ ಚಟಕ್ಕೆ ಬೀಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದನ್ನು ಇತ್ತೀಚಿನ ಎರಡು ಅಧ್ಯಯನಗಳು ಪತ್ತೆ ಹಚ್ಚಿವೆ. ಕೆಲವು ಸಮುದಾಯಗಳಲ್ಲಿ ಮಾನಿನಿಯರು ಮದ್ಯ ಸೇವಿಸುವುದು ಹೊಸದೇನಲ್ಲ. ಆದರೆ ಹೆಚ್ಚುತ್ತಿರುವ ಪಬ್ ಸಂಸ್ಕೃತಿ, ಆಧುನಿಕ ಮನೋಭಾವ ಇತರರಲ್ಲೂ ಇಂತಹದ್ದೊಂದು ಅನಾರೋಗ್ಯಕರ ಬೆಳವಣಿಗೆಗೆ ಕಾರಣ ಆಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಈಗ ಮೂಡಿದೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕವಾಗಿ ಮತ್ತು ವೈಜ್ಞಾನಿಕವಾಗಿ ಮಹಿಳೆಯ ಮದ್ಯವ್ಯಸನದ ಆಯಾಮಗಳನ್ನು ಈ ಲೇಖನ ಚರ್ಚಿಸುತ್ತದೆ.

`ಬಾಣಂತನದ ಸಂಭ್ರಮದಲ್ಲಿ ನಾನು ಮತ್ತು ಮಗು ಬೆಚ್ಚಗಿರಲಿ ಎಂದು ನನ್ನಮ್ಮ ಕೊಟ್ಟ `ಬ್ರಾಂದಿ' ಕ್ರಮೇಣ ನನಗೆ ಒಂದು ಅಭ್ಯಾಸವೇ ಆಗಿಹೋಯ್ತು ಮೇಡಂ. ಮೊದಲೇ ಗಂಡ ಕುಡುಕ. ಸಂಸಾರದ ಚಿಂತೆಗಳಲ್ಲಿ ಮುಳುಗಿದ್ದಾಗ ಒಂದಷ್ಟು `ಕುಡಿದರೆ' ಸಮಾಧಾನ ಎಂದು ನಾನೂ ಕುಡಿಯುವುದನ್ನು ಮುಂದುವರಿಸಿದೆ. ನನ್ನ ಗಂಡನ ಹಾಗೆ ನಾನೂ ಮದ್ಯವ್ಯಸನಿಯೇ. ವ್ಯತ್ಯಾಸವಿಷ್ಟೇ. ನಾನು ಕುಡಿಯುವುದು ಯಾರಿಗೂ ಗೊತ್ತಿಲ್ಲ. ಅವರು ಕುಡಿಯುವುದು ಎಲ್ಲರಿಗೂ ಗೊತ್ತು! ನನಗೆ ಎಲ್ಲರೆದುರು ಕುಡಿಯುವ `ಧೈರ್ಯ'ವಿಲ್ಲ. ಅವರು ಯಾರೆದುರು ಬೇಕಾದರೂ ರಾಜಾರೋಷವಾಗಿ ಕುಡಿಯುತ್ತಾರೆ. ಇದರಿಂದ ಹೊರಬರಬೇಕು ಎಂದು ನನಗನಿಸುತ್ತದೆ. ಸಮಾಜದ ಭೀತಿ ನನಗಿದೆ. ಅವರಿಗೆ ಇವೆರಡೂ ಇಲ್ಲ'.
***
`ನನಗೆ ಚಿಕ್ಕಂದಿನಿಂದ ಆಸ್ತಮಾ ಇತ್ತು. ವೈದ್ಯರ ಚಿಕಿತ್ಸೆಗೆ ಮೈಲಿಗಟ್ಟಲೆ ದೂರ ನಡೆಯಬೇಕು. ದುಡ್ಡೂ ಸಾಲದು. ಯಾರೋ ವೈದ್ಯರು ನಮ್ಮ ಮನೆಯವರಿಗೆ ಹೇಳಿದರಂತೆ. ಸ್ವಲ್ಪ ಆಲ್ಕೋಹಾಲ್ ಕೊಡಿ, ಆಸ್ತಮಾಗೆ ಒಳ್ಳೇದು ಅಂತ. ಅಲ್ಲಿಂದ ನನ್ನ ಆಸ್ತಮಾದ ಔಷಧಿ ಆಲ್ಕೋಹಾಲ್ ಆಯ್ತು. ಬರುತ್ತಾ ಬರುತ್ತಾ ಕಾಯಿಲೆ ಏನೂ ಕಡಿಮೆಯಾಗಲಿಲ್ಲ. ಆದರೆ ಕುಡಿಯುವ ಚಟ ಮಾತ್ರ ಮುಂದುವರೀತು'.
***
`ಒಂಟಿತನ, ಖಿನ್ನತೆ, ಇವೆಲ್ಲದರಿಂದ ಹೊರಬರಲು ನನಗೆ ಸಿಕ್ಕಿದ್ದು ಕುಡಿಯುವ ದಾರಿ. ಮದುವೆ ಮನೆಗಳಲ್ಲಿ, ನೆಂಟರು ಬಂದಾಗ, `ಸ್ಪೆಷಲ್' ಮಾಡಿದಾಗ ಹೆಂಗಸರೂ ಕುಡಿಯುವ ಅಭ್ಯಾಸ ನಮ್ಮಲ್ಲಿ ಮೊದಲಿನಿಂದಲೂ ಇತ್ತು. ಆದರೆ ಕ್ರಮೇಣ ನನಗೆ ಇದು ಚಟವಾಯಿತು. ನನ್ನನ್ನು ಕಂಡರೆ ನಮ್ಮ ಮನೆ ಜನರಿಗೆಲ್ಲ ತಾತ್ಸಾರ. ಅದನ್ನು ತಡೆಯಲಾಗದೇ ನಾನು ಮತ್ತೂ ಹೆಚ್ಚು ಕುಡೀತೀನಿ. ಕದ್ದು ಮುಚ್ಚಿ ಯಾರಯಾರ ಹತ್ತಿರವೋ ಬಾಟಲಿ ತರಿಸಲು ಮುಜುಗರ. ಆದರೆ ವಿಧಿಯಿಲ್ಲ. ನನ್ನನ್ನು ಆ ಚಟದಿಂದ ಹೊರತರುವ ಆಸಕ್ತಿ ಮನೆ ಜನರಿಗಿಲ್ಲ. ಏಕೆಂದರೆ ಅದಾಗಲು ಅವರ ನಡವಳಿಕೆ ಬದಲಾಗಬೇಕಲ್ಲ!'
***
`ನಾನು ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದು ಬಂದವಳು. ನೀರು, ಕಾಫಿ, ಟೀ ಹಾಲು ಬಿಟ್ಟರೆ ಬೇರೇನೂ ಕುಡಿದು ಗೊತ್ತಿಲ್ಲದಿದ್ದವಳು. ನಮ್ಮ ಯಜಮಾನರು ದಿನನಿತ್ಯ `ತೀರ್ಥ' ಸೇವನೆ ಮಾಡುವವರೇ. ಮೊದಮೊದಲು ಅವರನ್ನು ತಡೆದೆ, ಬೈದೆ, ಗಲಾಟೆ ಮಾಡಿದೆ. ಕೊನೆಗೆ ಅನ್ನಿಸಿತು, ಆಲ್ಕೋಹಾಲಿನಿಂದ ಅದೆಷ್ಟು ಸಂತೋಷ ಸಿಗುತ್ತದೋ ನೋಡೇಬಿಡೋಣ ಅಂತ! `ನಾನೂ ಕುಡೀತೀನಿ' ಎಂದಾಗ ಇವರೇನು ತುಂಬಾ ಸಂತೋಷ ಪಡಲಿಲ್ಲ. ಆದರೆ ಅಡ್ಡಿ ಮಾಡಲಿಲ್ಲ. ಇವಳೂ ಕುಡಿದರೆ ತನಗೆ ಮಾತನಾಡುವುದನ್ನು ನಿಲ್ಲಿಸುತ್ತಾಳೆ ಅಂತ ಇರಬೇಕು. ಈಗ ನಾನೂ ಕೆಲವೊಮ್ಮೆ ಇವರ ಜೊತೆ ಕುಡೀತೀನಿ.
***
ಈ ಮೇಲಿನ ಅನುಭವಗಳು ಏನು ಹೇಳುತ್ತವೆ? `ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು' ಎಂಬುದು ನಿಜವಲ್ಲ ಎಂದು. ಈಗಾಗಲೇ ವೈಜ್ಞಾನಿಕವಾಗಿ `ಗಂಡಿಗೂ ಗುಂಡು ಆಗಿಬರುವುದಿಲ್ಲ' ಎಂಬುದು ಸಿದ್ಧವಾಗಿದೆಯಷ್ಟೇ. ಇನ್ನು ಮದ್ಯವ್ಯಸನಕ್ಕೆ ಒಳಗಾಗುತ್ತಿರುವ ಮಹಿಳೆಯರ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಹಲವು ಸಂಶೋಧನೆಗಳು ನಡೆದಿದೆ. ಕನ್ನಡತಿಯರಂತೂ ಈ ದಿಕ್ಕಿನಲ್ಲಿ ಸಾಕಷ್ಟು ಮುಂದುವರಿದಿದ್ದಾರೆ. ಯುವತಿಯರು ಯುವಕರಿಗೆ ಸರಿಸಮನಾಗಿ ಮದ್ಯ ಸೇವನೆಯಲ್ಲಿ ತೊಡಗಿದ್ದಾರೆ ಎನ್ನುತ್ತವೆ ಇತ್ತೀಚಿನ ಅಧ್ಯಯನಗಳು.

`ಸಮಾನತೆ'ಗಾಗಿ ಹುಡುಗಿಯರೂ ಹುಡುಗರಂತೆ ಕುಡಿಯ ಬಹುದೇ ಇಲ್ಲವೇ ಎಂಬ ಪ್ರಶ್ನೆಗಿಂತ ನಮ್ಮ ಚರ್ಚೆ ಇಂದು ಸಾಗಬೇಕಾದದ್ದು, ಹುಡುಗ- ಹುಡುಗಿಯರಿಬ್ಬರಿಗೂ ಆರೋಗ್ಯದ ದೃಷ್ಟಿಯಿಂದ ಮದ್ಯಪಾನ ಒಳ್ಳೆಯದಲ್ಲ ಎಂಬ ಕಡೆಗೆ.

`ದೇವತೆಗಳೇ ರಾಮರಸ, ಸೋಮರಸ ಕುಡಿಯುತ್ತಿದ್ದರು' `ಸ್ವಲ್ಪ ಕುಡಿದರೆ ಹಾರ್ಟ್‌ಗೆ ಒಳ್ಳೇದಂತೆ', `ಕುಡಿದರೆ ಮಾತ್ರ ನಿದ್ರೆ ಆರಾಮಾಗಿ ಬರುತ್ತೆ' ಈ ಎಲ್ಲ ಹೇಳಿಕೆಗಳನ್ನೂ ಬದಿಗೊತ್ತಿ `ಮದ್ಯವ್ಯಸನ ಮನುಷ್ಯರಿಗೆ ಒಳ್ಳೆಯದಲ್ಲ' ಎಂಬ ನಿಲುವು ಅಗತ್ಯ. ಮದ್ಯವ್ಯಸನಕ್ಕೆ ಒಳಗಾದ ಮಹಿಳೆಯರ ಪ್ರಮಾಣ ಏರುತ್ತಿರುವುದು ಸತ್ಯ. ಆದರೆ ವ್ಯಸನ ಮುಕ್ತಿಗಾಗಿ (de- addiction) ಬರುವ ಮಹಿಳೆಯರ ಪ್ರಮಾಣ ಹೆಚ್ಚುತ್ತಿಲ್ಲ. ಅದಕ್ಕೆ ಇರುವ ಅಡ್ಡಿಗಳು ಹಲವಾರು.

ಭಾರತೀಯ ಸಮಾಜದಲ್ಲಂತೂ `ಮಹಿಳೆಯರೂ ಕುಡಿಯಲು ಸಾಧ್ಯವಿದೆ' ಎಂಬ ಸಾಧ್ಯತೆಯನ್ನೇ ಹೆಚ್ಚಿನವರು ನಿರಾಕರಿಸುತ್ತಾರೆ. ಮಹಿಳಾ ರೋಗಿ ತಮ್ಮ ಬಳಿ ಯಾವುದೇ ಆರೋಗ್ಯದ ಸಮಸ್ಯೆ ಹೊತ್ತು ಬಂದಾಗ ವೈದ್ಯರು `ನಿಮಗೆ ಕುಡಿಯುವ ಅಭ್ಯಾಸ ಇದೆಯೇ?' ಎಂದು ಕೇಳುವ ಅವಶ್ಯಕತೆಯೇ ಇಲ್ಲ ಎಂದುಕೊಳ್ಳುತ್ತಾರೆ.

ಸಾಮಾನ್ಯವಾಗಿ ಮಹಿಳೆಯರು, ಅವರ ಕುಟುಂಬದವರು ಈ ಪ್ರಶ್ನೆಯನ್ನು ಇಷ್ಟಪಡುವುದಿಲ್ಲ. ಆದರೆ  ಯಾವುದೇ ವ್ಯಸನದ ಬಗ್ಗೆ ವೈದ್ಯರು ಕೇಳಬೇಕಾದದ್ದು, ಪುರುಷ ಅಥವಾ ಮಹಿಳಾ ರೋಗಿ ಉತ್ತರಿಸಬೇಕಾದದ್ದು ಅತ್ಯಗತ್ಯ.

ಸಮಾನತೆಯ ಪರಿಕಲ್ಪನೆಯಲ್ಲಿ ನೋಡಿದಾಗಲೂ ವ್ಯಸನಗಳ ವಿಷಯದಲ್ಲಿ ನಾವು ಗುರಿ ಇಡಬೇಕಾದದ್ದು ಪುರುಷರೂ ಮಹಿಳೆಯರಿಗೆ ಸಮಾನವಾಗಿ ಭಾವನಾತ್ಮಕ ಸಬಲತೆ ಗಳಿಸುವ ಬಗ್ಗೆ! ಅಂದರೆ ಒತ್ತಡಗಳನ್ನು `ಕುಡಿಯದೇ' ಎದುರಿಸಬಲ್ಲ ಹೆಚ್ಚಿನ ಮಹಿಳೆಯರ `ಮನೋಬಲ'ವನ್ನು ಪುರುಷರೂ ಹೊಂದುವ ಬಗ್ಗೆ. ಹಾಗಾಗದೆ ತಾನೇ ವ್ಯಸನಿಯಾಗಿ `ದುರ್ಬಲ'ಳಾಗುವುದರಿಂದ ಸಮಾನತೆಯ ಹಾದಿಯಲ್ಲಿ ಮಹಿಳೆ ಒಂದು ಹೆಜ್ಜೆ ಕೆಳಗಿಳಿದಂತೆ!

 ನಿಮ್ಮ ಆತ್ಮೀಯರಲ್ಲಿ ಮಹಿಳಾ ಮದ್ಯವ್ಯಸನಿಗಳಿದ್ದರೆಈ ಕೆಳಗಿನ ಅಂಶಗಳನ್ನು ಗಮನಿಸಿ.

 ಅವರನ್ನು ಅಪಮಾನಿಸಿ, ಕೀಳು ದೃಷ್ಟಿಯಿಂದ ಕಾಣಬೇಡಿ.

 ಮದ್ಯವ್ಯಸನಿ ಮಹಿಳೆಯ ಒಳಗೆ ಖಿನ್ನ ಮನಸ್ಸು ಹಾಗೂ ಒಂಟಿತನದ ನೋವು ಇರುವ ಸಾಧ್ಯತೆ     ಹೆಚ್ಚು. 

 ಚಿಕಿತ್ಸೆಗೆ ಅವರ ಮನ ಒಲಿಸಿ.

 ಮನೋವೈದ್ಯರ ಬಳಿ, ವ್ಯಸನ ಮುಕ್ತಿ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿ.

 ಮಹಿಳೆಯ ಕುಟುಂಬದಲ್ಲಿ ಇರಬಹುದಾದ ಇತರ ಮದ್ಯವ್ಯಸನಿಗಳೂ (ಮಗ/ ಗಂಡ) ಚಿಕಿತ್ಸೆಗೆ    ಒಳಪಡುವುದು ಅಗತ್ಯ.

 ಖಿನ್ನತೆ- ಒಂಟಿತನಗಳಿಂದ ಹೊರಬರಲು ಸಾಮಾಜಿಕ ಬೆಂಬಲ ಅವಶ್ಯಕ.

 ಮದ್ಯವ್ಯಸನಿ ಮಹಿಳೆ ಹಲವು ಆರೋಗ್ಯದ ತೊಂದರೆಗಳಿಂದ ಬಳಲುವ ಸಾಧ್ಯತೆ ಇರುತ್ತದೆ.  (ತಲೆನೋವು, ಹಲ್ಲಿನ ತೊಂದರೆ, ಹೊಟ್ಟೆ ನೋವು- ಉರಿ, ಮುಖದ ಚಹರೆಯಲ್ಲಿ ಬದಲಾವಣೆ, ರಕ್ತಹೀನತೆ ಇತ್ಯಾದಿ).

 ಯಾವುದೇ ಬಗೆಯ ರೋಗಕ್ಕೆ ಚಿಕಿತ್ಸೆ ಪರಿಣಾಮಕಾರಿ ಆಗುವುದು ಮದ್ಯವ್ಯಸನದಿಂದ ಮುಕ್ತರಾದಾಗ ಮಾತ್ರವೇ ಎಂಬುದನ್ನು ನೆನಪಿಡಬೇಕು.

ವ್ಯಸನಮುಕ್ತಿ ಕೇಂದ್ರ ವರ್ಜ್ಯ?
ಡಿತದ ಚಟಕ್ಕೆ ಒಳಗಾಗುವ ಮಹಿಳೆಯರ ಪ್ರಮಾಣ ಹೆಚ್ಚುತ್ತಿದ್ದರೂ, ವ್ಯಸನಮುಕ್ತಿ ಕೇಂದ್ರಕ್ಕೆ ಅವರು ಹೆಚ್ಚಿನ ಪ್ರಮಾಣದಲ್ಲಿ ಬಾರದೇ ಇರಲು ಹಲವಾರು ಕಾರಣಗಳಿವೆ:


ಎಂದಿನಂತೆ ಮಹಿಳೆಯರ ಆರೋಗ್ಯದ ಬಗ್ಗೆ ಸಮಾಜಕ್ಕೆ, ಕುಟುಂಬಕ್ಕೆ, ಸ್ವತಃ ಮಹಿಳೆಗೆ ಇರುವ ನಿರ್ಲಕ್ಷ್ಯ.

ಮದ್ಯವ್ಯಸನಿಯಾದ ಮಹಿಳೆ ಒಂಟಿಯಾಗಿ, ಯಾರೊಂದಿಗೂ ಬೆರೆಯದೆ ಆ ಅಭ್ಯಾಸವನ್ನು ಮುಂದುವರಿಸುವುದು.

`ಈ ಅಭ್ಯಾಸ ಗೊತ್ತಾದರೆ ಜನ ಏನೆಂದಾರು?' ಎಂಬ ಹೆದರಿಕೆಯಿಂದ, ಕಳಂಕದ ಭೀತಿಯಿಂದ ಮಹಿಳೆ ಮತ್ತು ಕುಟುಂಬದವರು ಚಿಕಿತ್ಸೆಗೆ ಬರಲು ಮುಂದಾಗುವುದಿಲ್ಲ.

ಮದ್ಯವ್ಯಸನಕ್ಕೂ ಮಹಿಳೆಯ ನೈತಿಕತೆಗೂ ಸಮಾಜ ಬಲವಾದ ನಂಟು ಹಾಕುತ್ತದೆ. (`ಕುಡೀತಾಳೆ ಎಂದ ಮೇಲೆ ಇವಳ ನಡತೆ ಸರಿಯಿಲ್ಲ', `ಕೆಟ್ಟ ಹೆಂಗಸು' ಇತ್ಯಾದಿ ) ಹಾಗಾಗಿ ಮದ್ಯವ್ಯಸನಿ ಮಹಿಳೆಯ ಈ ವ್ಯಸನಕ್ಕೆ ಕಾರಣ ಆಗಿರಬಹುದಾದ ಖಿನ್ನತೆ, ಕೌಟುಂಬಿಕ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ.

ಮನೋವೈದ್ಯರನ್ನು ಕಾಣಲು ಹಿಂಜರಿಕೆ.

ಕುಡಿಯುವುದನ್ನು ಬಿಟ್ಟರೆ ತಾನು ಬದುಕಿರಲು ಸಾಧ್ಯವೇ ಎಂಬ ಅನುಮಾನ.

ಮದ್ಯಪಾನಿಗಳ ವಯೋಮಾನ ಮತ್ತು ಶೇಕಡಾವಾರು ಪ್ರಮಾಣ

ವಯೋಮಾನ  ಶೇಕಡಾ

25 ವರ್ಷ       10%
25- 29 ವರ್ಷ 15%
30- 39 ವರ್ಷ 23%
40- 49 ವರ್ಷ 26%
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
(NFHS)

ಮದ್ಯದ ದರ್ಬಾರು
ಬದಲಾದ ಜೀವನಶೈಲಿ, ಜಾಗತೀಕರಣದ ಪ್ರಭಾವ, ವಿದೇಶಿ ಸಂಸ್ಕೃತಿಯ ಅನುಕರಣೆ, ಆರ್ಥಿಕ ಸ್ವಾತಂತ್ರ್ಯ, ವಾರವಿಡೀ ಬಿಡುವಿಲ್ಲದ ದುಡಿಮೆ, ವಾರಾಂತ್ಯದಲ್ಲಿ ವೀಕೆಂಡ್ ಪಾರ್ಟಿ, ಮೋಜು-ಮಸ್ತಿ... ಇದು ಮೆಟ್ರೊ ನಗರಗಳ ಜೀವನ ಕ್ರಮ.

ಪಾರ್ಟಿ ಎಂದ ಮೇಲೆ ಅಲ್ಲಿ ಮದ್ಯಪಾನದ ಕಾರುಬಾರು ಇರಲೇ ಬೇಕು. ಹೆಣ್ಣು- ಗಂಡಿನ ಭೇದವಿಲ್ಲದೆ ಎಲ್ಲರೂ ಪಾನಮತ್ತರಾಗಿ ತೂರಾಡುವುದು ಇಂದಿನ ಟ್ರೆಂಡ್. ಹೆಣ್ಣು ತನ್ನನ್ನು ತಾನು ಗಂಡಿನ ಸಮಾನವಾಗಿ ಕಂಡುಕೊಳ್ಳಲು ಅವನಂತೆಯೇ ಸಿಪ್ ಎಳೆಯಬಹುದು. ಆದರೆ ಮದ್ಯ ಮಾತ್ರ ಪುರುಷರಿಗಿಂತಲೂ ಮಹಿಳೆಯರ ಮೇಲೆ ಬಹಳ ಬೇಗ ಹಾಗೂ ಬಹಳ ತೀವ್ರವಾದ ಪರಿಣಾಮ ಬೀರುತ್ತದೆ!


ಸ್ವಾಭಾವಿಕವಾಗಿ ಮಹಿಳೆಯರ ದೇಹರಚನೆ ಪುರುಷರಿಗಿಂತಲೂ ಭಿನ್ನವಾಗಿರುತ್ತದೆ. ಅವರಲ್ಲಿ ಅಧಿಕ ಕೊಬ್ಬಿನಂಶ ಇರುತ್ತದೆ ಮತ್ತು ಕೊಬ್ಬು ಮದ್ಯವನ್ನು ಬಹಳ ಬೇಗ ಹೀರಿಕೊಳ್ಳುತ್ತದೆ. ಋತುಚಕ್ರದ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಅಸಮತೋಲನವು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಇದರಿಂದ ರಕ್ತದಲ್ಲಿ ಮದ್ಯದ ಸಾಂದ್ರತೆ (blood alcohol concentration- BAC) ಹೆಚ್ಚುತ್ತದೆ. ಅದರಲ್ಲೂ ಗರ್ಭಾವಸ್ಥೆ ಹಾಗೂ ಹೆರಿಗೆಯ ನಂತರದ ಸಮಯದಲ್ಲಿ ಮದ್ಯಪಾನ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಗರ್ಭಧಾರಣೆಯ ಮೊದಲ ನಾಲ್ಕು ವಾರಗಳಂತೂ ಅಪಾಯದ ಅತಿರೇಕವೆಂದೇ ಹೇಳಬಹುದು. ಆದ್ದರಿಂದ, ಮಹಿಳೆಯರೇ, ಪಾರ್ಟಿಗೆ ಹೋಗಿ ಎಂಜಾಯ್ ಮಾಡಿ. ಆದರೆ, ಅಲ್ಲಿರುವ ಮದ್ಯದ ಮೇಲೆ ನಿಮ್ಮ ಹಿಡಿತವಿರಲಿ, ಮದ್ಯದ ಹಿಡಿತಕ್ಕೆ ನೀವು ಸಿಲುಕಬೇಡಿ.

-ಡಾ. ಜಿ.ಪಿ.ಗುರುರಾಜ್, ಮನೋವೈದ್ಯ

ನಿಮಗೆ ಗೊತ್ತೇ?
ಭಾರತದಲ್ಲಿ ಸುಮಾರು ಶೇ 30ರಿಂದ 35ರಷ್ಟು ಯುವಜನ ಹಾಗೂ ಅವರಲ್ಲಿ ಶೇ 5ರಷ್ಟು ಯುವತಿಯರು ನಿಯಮಿತವಾಗಿ ಮದ್ಯಪಾನ ಮಾಡುತ್ತಾರೆ.

ಕಳೆದ ಮೂರು ದಶಕಗಳಲ್ಲಿ (1980-2010) ಮದ್ಯಪಾನ ಚಟಕ್ಕೆ ಗುರಿಯಾಗುವವರ ವಯೋಮಾನ 28ರಿಂದ 18ಕ್ಕೆ ಇಳಿಕೆಯಾಗಿದೆ.

ರಾತ್ರಿ ವೇಳೆ ನಡೆಯುವ ಮೂರನೇ ಒಂದು ಭಾಗದಷ್ಟು ರಸ್ತೆ ಅಪಘಾತ ಹಾಗೂ ಸಾವುಗಳಿಗೆ ಮದ್ಯಪಾನ ಕಾರಣ.

ಹಿಂಸೆ, ಕಿರುಕುಳ ಸೇರಿದಂತೆ ಶೇ 25ರಷ್ಟು ಅಪರಾಧಗಳ ಹಿಂದೆ ಮದ್ಯಪಾನ ಇದೆ.

ಮುಂದಿನ ಐದು ವರ್ಷಗಳಲ್ಲಿ ಮಹಿಳೆಯರ ಮದ್ಯಪಾನ ಮಾರುಕಟ್ಟೆ ಶೇ 25ರಷ್ಟು ಹೆಚ್ಚಾಗುವ ಅಂದಾಜಿದೆ.

(ಮಾಹಿತಿ: ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ- NIMHANS

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT