ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಪ್ರತಿಭಾ ರೇ

ಅಕ್ಷರವೇ ಇವರಿಗೆ ಅಸ್ತ್ರ...
Last Updated 8 ನವೆಂಬರ್ 2013, 19:30 IST
ಅಕ್ಷರ ಗಾತ್ರ

1980ರ ಸುಮಾರಿನಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಪ್ರವೇಶಿಸಲಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬರು ವಿದೇಶಿಯರಂತೆ ತುಂಬಾ ಬೆಳ್ಳಗಿದ್ದರು. ಆ ಕಾರಣಕ್ಕಾಗಿ ಆ ಗುಡಿಯ ಪಂಡಾಗಳು (ಪೂಜಾರಿಗಳು) ಗೂಂಡಾಗಳಂತೆ ವರ್ತಿಸಿ ಅವರಿಗೆ ಪ್ರವೇಶ ನಿರಾಕರಿಸಿದರು. ದೇವಸ್ಥಾನ ಪ್ರವೇಶಿಸಲಾರದೆ ಹಿಂತಿರುಗಿದ ಒಬ್ಬ ಮಹಿಳೆಯು ಒಡಿಶಾ ಭಾಷೆಯಲ್ಲಿ ‘ಧರ್ಮದ ಬಣ್ಣ ಕಪ್ಪು’ ಎಂಬ ಲೇಖನ ಬರೆದು ನಾಡಿನ ತುಂಬೆಲ್ಲಾ ಅನ್ಯಾಯದ ವಿರುದ್ಧ ಪ್ರತಿಭಟನೆಗಳು ಏಳುವುದಕ್ಕೆ  ಕಾರಣರಾದರು. ಇಷ್ಟಕ್ಕೇ ಬಿಡದ ಆ ಪಂಡಾಗಳು ಆ ಲೇಖಕಿಯ ಮೇಲೆ ಮಾನಹಾನಿ ಖಟ್ಲೆಯನ್ನು ಹಾಕಿದರು. ಈ ಧೀರ ಮಹಿಳೆ ಅದನ್ನು ಎದುರಿಸಿ, ನ್ಯಾಯಾಲಯದಲ್ಲಿ ಜಯಶಾಲಿಯಾದರು.

1998ರಲ್ಲಿ  ಒಡಿಶಾ ರಾಜ್ಯ ಲೋಕಸೇವಾ ಆಯೋಗದ (O.P.S.C.) ಒಬ್ಬ ಸದಸ್ಯೆ ಆಯೋಗದ ಅಧ್ಯಕ್ಷರ ಭ್ರಷ್ಟಾಚಾರಗಳನ್ನು ಬಯಲಿಗೆ ಎಳೆದು ಕೇಂದ್ರ ಸರ್ಕಾರದವರೆಗೂ ದೂರುಗಳನ್ನು ಸಲ್ಲಿಸಿ ಯಶಸ್ವಿಯಾದರು. ಅಧ್ಯಕ್ಷರು ವಜಾಗೊಂಡರು; ಆದರೆ ಈ ಸದಸ್ಯೆಯ ವಿರುದ್ಧ ಒಂದು ಕೋಟಿ ರೂಪಾಯಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹಾಕಿದ ಈ ಲಂಚಾವತಾರಿ ಅಧ್ಯಕ್ಷ ಜೀವ ಬೆದರಿಕೆಯನ್ನೂ ಹಾಕಿದರು. ಆದರೆ ಧೃತಿಗೆಡದ ಆ ಸದಸ್ಯೆಯ ಸತತ ಏಳು ವರ್ಷಗಳ ಕಾನೂನು ಹೋರಾಟದ ನಂತರ ಮೊಕದ್ದಮೆ ವಜಾಗೊಂಡಿತು! ಲೇಖನಿಯು ಖಡ್ಗಕ್ಕಿಂತ ಹೆಚ್ಚು ಶಕ್ತಿಶಾಲಿ ಎಂದು ಸಾಬೀತು ಮಾಡಿದರು ಸದಸ್ಯೆಯಾಗಿದ್ದ ಆ ಲೇಖಕಿ.

ಈ ಎರಡೂ ಘಟನೆಗಳ ಕೇಂದ್ರ ವ್ಯಕ್ತಿ, 2011ರ ಜ್ಞಾನಪೀಠ ಪ್ರಶಸ್ತಿ ವಿಜೇತೆ ಡಾ. ಪ್ರತಿಭಾ ರೇ ಎಂದರೆ ಸಾಹಿತ್ಯದ ಸಾಮಾನ್ಯ ಓದುಗರಿಗೆ ಅಚ್ಚರಿಯಾದೀತು. ಪ್ರತಿಭಟನೆ ಹಾಗೂ ಪ್ರತಿಭೆಯ ಸಂಗಮದಂತಿರುವ ಪ್ರತಿಭಾ ದಾಸ್‌ (ಜನನ: 21ಜನವರಿ 1943) ಹುಟ್ಟಿದ್ದು ಒಡಿಶಾದ ಅಲ್ಜೋಲಾ ಎಂಬ ಸಣ್ಣ ಹಳ್ಳಿಯಲ್ಲಿ. ತಂದೆ ಪರಶುರಾಮ ದಾಸ್‌, ತಾಯಿ ಮನೋರಮಾ ದೇವಿಯವರ ಪ್ರೀತಿಯ ಮಗಳು. ತಂದೆ ಗಾಂಧಿವಾದಿ. ಟಾಟಾ ಸ್ಟೀಲ್‌ ಕಂಪೆನಿಯ ಉನ್ನತ ಹುದ್ದೆಯನ್ನು ತೊರೆದು ತಮ್ಮ ಗ್ರಾಮದ ಸೇವೆಗಾಗಿ, ಹುಟ್ಟಿದ ಹಳ್ಳಿಗೆ ಹಿಂತಿರುಗಿ ಶಾಲೆಯನ್ನು ಆರಂಭಿಸಿದರು. ಪರಶುರಾಮ್‌ ದಾಸ್‌ ಮಗಳ ಪಾಲಿಗೆ ಗೆಳೆಯ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕರಾಗಿದ್ದರು.

ಮಗಳು ವೈದ್ಯೆಯಾಗಬೇಕೆಂದು ತಂದೆ ಬಯಸಿದ್ದರು. ಆದರೆ ಪ್ರತಿಭಾ ತಂದೆಗೆ ತಿಳಿಯದಂತೆ ಕಟಕ್‌ನ ರೆವೆನ್‌ಶಾ ಕಾಲೇಜಿನಲ್ಲಿ ಕಲಾವಿಭಾಗಕ್ಕೆ ಸೇರಿದರು. ತಂದೆಗೆ ಗೊತ್ತಾಗುವಷ್ಟರಲ್ಲಿ ಮಗಳು ಮೊದಲನೇ ವರ್ಷದ ಬಿ.ಎ. ಮುಗಿಸಿದ್ದರು. ಮುಂದೆ ತಂದೆಯ ಪ್ರೋತ್ಸಾಹದಿಂದಲೇ ಅದೇ ಕಾಲೇಜಿನಲ್ಲಿ ಎಂ.ಎ. ಮುಗಿಸಿ-­ದರು. ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದ   ಅಕ್ಷಯಚಂದ್ರ ರೇ ಅವರನ್ನು ಮದುವೆಯಾದ ನಂತರ, ಅವರು ಪ್ರತಿಭಾ ರೇ ಆದರು. ಡಾಕ್ಟರೇಟ್‌ ಪಡೆದು ತಾವು ಓದಿದ ಕಾಲೇಜಿನಲ್ಲೇ ಉಪನ್ಯಾಸಕಿಯಾಗಿ ವೃತ್ತಿಜೀವನ ಆರಂಭಿಸಿದ ಪ್ರತಿಭಾ, ಬೇರೆ ಬೇರೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ 1998ರಲ್ಲಿ ಸ್ವಯಂ ನಿವೃತ್ತಿ  ಪಡೆದರು. ಅದೇ ವರ್ಷ ರಾಜ್ಯದ ಲೋಕಸೇವಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡರು. ಈ ಆಯೋಗದ ಲಂಚಾವತಾರಿ ಅಧ್ಯಕ್ಷರ ವಿರುದ್ಧ ಧ್ವನಿ ಎತ್ತಿ, ತಾನು ಸ್ವಯಂ ನಿಷ್ಕಳಂಕ ಸದಸ್ಯೆ ಎಂಬುದನ್ನು ಸಾಬೀತುಪಡಿಸಿ, ಆರು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದರು.

ಒಂಬತ್ತನೆಯ ವಯಸ್ಸಿನಲ್ಲೇ ತನ್ನ ಸುತ್ತಲಿನ ನಿಸರ್ಗ ವೈಭವದಿಂದ ಪ್ರಭಾವಿತರಾಗಿ ಕವನಗಳನ್ನು ಬರೆಯಲು ಆರಂಭಿಸಿದ ಪ್ರತಿಭಾ ಕಾದಂಬರಿಗಾರ್ತಿ, ಕತೆಗಾರ್ತಿಯಾಗಿ ಹೆಸರುವಾಸಿಯಾಗಿದ್ದಾರೆ.

ಬುಡಕಟ್ಟು ಜನಾಂಗದ ನಡುವೆ
ಒಡಿಶಾದ ಬೊಂಡೋ ಅರಣ್ಯದಲ್ಲಿ ಬೊಂಡೋ ಎಂಬ ಬುಡಕಟ್ಟು ಜನಾಂಗ ಇದೆ. ಈ ಜನ ತೀರಾ ಅನಾಗರಿಕರು ಹಾಗೂ ಹೊರಗಿನವರು ಪ್ರವೇಶಿಸಿದರೆ ಅಂಥವರನ್ನು ಕೊಂದು ತಿನ್ನುತ್ತಾರೆ ಎಂಬ ಪ್ರತೀತಿ ನಗರವಾಸಿಗಳಲ್ಲಿ ಇಂದಿಗೂ ಇದೆ. ಹೊಸ ಅನುಭವಗಳಿಗೆ ತಮ್ಮನ್ನು ಅರ್ಪಿಸಿಕೊಳ್ಳುವ ಪ್ರತಿಭಾ ಅವರಿಗೆ, ಕುತೂಹಲ ತಡೆಯಲಾಗಲಿಲ್ಲ. ತಮ್ಮ ತಂಗಿಯ ಗಂಡನ (ಆತ ಅರಣ್ಯ ಸೇವೆ ಅಧಿಕಾರಿ) ಸಹಾಯದಿಂದ 1985ರಲ್ಲಿ ಆ ಅರಣ್ಯವನ್ನು ಪ್ರವೇಶಿಸಿದರು. ಈ ಜನಾಂಗದ ಸರಳ ಜೀವನದಿಂದ ಆಕರ್ಷಿತರಾದ ಲೇಖಕಿ ಎರಡು ವರ್ಷ ರಜೆ ಪಡೆದು ಅವರೊಡನೆ ಇದ್ದು, ಅವರ ರೀತಿ ರಿವಾಜುಗಳನ್ನು ಸೂಕ್ಷ್ಮವಾಗಿ ಅಧ್ಯ­ಯನ ನಡೆಸಿದರು. ನಂತರ ಕಾಲೇಜಿನ ರಜಾ ದಿನಗಳನ್ನು ಈ ಆದಿವಾಸಿ­ಗಳೊಂ­ದಿಗೆ ಕಳೆದು ತಮ್ಮ ಸೂಕ್ಷ್ಮ ಅವಲೋಕನಗಳನ್ನು ‘ಆದಿಭೂಮಿ’ ಎಂಬ ಕಾದಂಬರಿ­ಯಲ್ಲಿ ಮತ್ತು ‘ಭಗವಾನರ ದೇಶ’ (land of god) ಎಂಬ ಕಥಾ­ಸಂಕಲನದಲ್ಲಿ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಬಹುಶಃ ಇಂಥ ಕಾದಂಬರಿ ಭಾರತೀಯ ಸಾಹಿತ್ಯ­ದಲ್ಲಿ ತೀರಾ ಅಪರೂಪ ಎಂಬುದು ಬಹುಪಾಲು ವಿಮರ್ಶಕರ ಅಭಿಪ್ರಾಯ.

1999ರಲ್ಲಿ ಒಡಿಶಾ ರಾಜ್ಯಕ್ಕೆ ಬಿರುಗಾಳಿ ಅಪ್ಪಳಿಸಿದಾಗ ಪ್ರತಿಭಾ ಬಿರುಗಾಳಿಯಿಂದ ಸಂತ್ರಸ್ತರಾದವರ ಸೇವೆಗೆ ನಿರಂತರ ಸೇವೆ ಸಲ್ಲಿಸಿದರು. ಈ ಅನುಭವದ ಹಿನ್ನೆಲೆಯಲ್ಲಿ ಬರೆದ ‘ಮಾಗಾನ್‌ ಮಾಟಿ’ (ಅಂಗೈ ಅಗಲ ಭೂಮಿ) ಎಂಬ ಹೃದಯ ಕಲಕುವಂಥ ಕಾದಂಬರಿಯು, ಮಾನವನ ಜೀವನ ಪ್ರೇಮ, ಜೀವನ್ಮರಣಗಳ ಮಧ್ಯದ ಹೋರಾಟವನ್ನು ಸೂಕ್ಷ್ಮವಾಗಿ ಅನಾವರಣ­ಗೊಳಿಸುತ್ತದೆ. ಇದನ್ನು ಕ್ಲಾಸಿಕ್‌ ಕಾದಂಬರಿ ಎಂದು ಬಣ್ಣಿಸಲಾಗಿತದೆ. ಹಾಗೆಯೇ 2008ರಲ್ಲಿ ಪ್ರಕಟವಾದ ಐತಿಹಾಸಿಕ ಕಾದಂಬರಿ ‘ಮಹಾರಾಣಿ ಪುತ್ರ’ ಬ್ರಿಟಿಷರ ವಿರುದ್ಧ ಬಂಡೆದ್ದು ಹೋರಾಡಿದ ಧರಣೇಂದ್ರ ಭುವಯಾನ ಎಂಬ ಆದಿವಾಸಿ ರಾಜನ ಕಥೆಯನ್ನು ಚಿತ್ರಿಸುತ್ತದೆ.

ಅಷ್ಟೇ ಅಲ್ಲದೆ, ಪೌರಾಣಿಕ ಕಥೆಗಳು ಪ್ರತಿಭಾ ಅವರ ಪ್ರತಿಭೆಯ ಕುಲುಮೆಯಲ್ಲಿ ಹೊಸ ರೂಪ ಪಡೆಯುತ್ತವೆ ಎಂಬುದಕ್ಕೆ ‘ದ್ರೌಪದಿ’ ಕಾದಂಬರಿ ಸಾಕ್ಷಿ. ಪ್ರತಿಭಾ ಅವರ ‘ಆದಿಭೂಮಿ’ ‘ದ್ರೌಪದಿ’ ‘ಅಂಗೈ ಅಗಲ ಭೂಮಿ’ ಇಂಗ್ಲಿಷ್‌ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅಂತೆಯೇ ಇವರ ಹಲವಾರು ಕಥೆಗಳು ಸಹ ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಇವರನ್ನು ಒಡಿಶಾದ ಸಾಹಿತ್ಯಾಸಕ್ತರು ‘ಒಡಿಶಾ ಕಥಾ ಜಗತ್ತಿನ ಮಹಾರಾಣಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಪ್ರತಿಭಾ ರೇ 21 ಕಾದಂಬರಿಗಳು, 24 ಕಥಾ ಸಂಕಲನಗಳು, ಒಂದು ಕವನ ಸಂಗ್ರಹ, ಹತ್ತು ಪ್ರವಾಸ ಕಥನಗಳು, ಎರಡು ವೈಚಾರಿಕ ಲೇಖನಗಳ ಸಂಗ್ರಹವನ್ನು ಒಡಿಶಾ ಸಾಹಿತ್ಯ ಸರಸ್ವತಿಗೆ ಸಲ್ಲಿಸಿದ್ದಾರೆ.

ಸಂದ ಗೌರವ
ಪ್ರತಿಭಾ ಅವರ ಸಾಹಿತ್ಯದ ಬಗ್ಗೆ 10 ಮಂದಿ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಅವರಿಗೆ ಸಂದ ಪ್ರಶಸ್ತಿ ಮತ್ತು ಗೌರವಗಳ ಪಟ್ಟಿ ತುಂಬಾ ದೊಡ್ಡದು. ಉತ್ಕಲ ವಿಶ್ವವಿದ್ಯಾಲಯದಿಂದ  ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು.   ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಎಲ್ಲರಿಗೂ ಗೊತ್ತು. ಪ್ರತಿಭಾ ಅವರ ಯಶಸ್ಸಿನ ಹಿಂದೆ ಅವರ ಪತಿ ಅಕ್ಷಯಚಂದ್ರ ರೇ ಇದ್ದಾರೆ. ಅವರ ಜೊತೆಯಲ್ಲಿ ಮೂವರು ಮಕ್ಕಳು, ಮೂವರು ಮೊಮ್ಮಕ್ಕಳು ಇದ್ದಾರೆ. l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT