ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಕೊಟ್ಟ ವಿಶೇಷ ಮಗು

Last Updated 18 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಸುಮಾರು 25-28 ವರ್ಷದ ತರುಣಿ. ಮಗು ತುಂಬಾ ಮುದ್ದಾಗೇ ಇತ್ತು. ನಾನು ಕಾರ್ಯನಿರ್ವಹಿಸುವ ‘ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ’ ಯು ಇಂತಹ ಮಕ್ಕಳಿಗೆ ಮತ್ತು ಮಾತು ಮತ್ತು ಕಿವಿಯ ಸಮಸ್ಯೆ ಹಾಗೂ ಇತರೆ ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ಚಿಕಿತ್ಸೆ ಮತ್ತು ತರಬೇತಿ ನೀಡಲು ಮೀಸಲಾಗಿದೆ.

ನನ್ನ ಕೆಲಸ ಚಿಕಿತ್ಸೆ ನೀಡುವುದಕ್ಕೆ ನೇರವಾಗಿ ಸಂಬಂಧಪಡದಿದ್ದರೂ ನಮ್ಮ ಸಂಸ್ಥೆಗೆ ಬರುವ ಇಂತಹ ಮಕ್ಕಳನ್ನು ಗಮನಿಸುತ್ತಿರುತ್ತೇನೆ. ಹಾಗಾಗಿ, ಅದು ಬುದ್ಧಿಮಾಂದ್ಯ ಮಗು ಎಂದು ತಿಳಿಯಲು ಹೆಚ್ಚು ಹೊತ್ತಾಗಲಿಲ್ಲ. ಅಂದರೆ, ಅದೊಂದು ವಿಶೇಷ ಅಗತ್ಯವುಳ್ಳ ಮಗು. ನಾನು ಹಾಗೇ ಆ ಮಗುವನ್ನು ನೋಡುತ್ತಾ ಏನೋ ಯೋಚಿಸುತ್ತಿದ್ದಾಗಲೇ, ಕುಳಿತುಕೊಳ್ಳಿ ಎಂದಳು ಆ ತರುಣಿ.

ಎಲ್ಲಿಂದ ಬಂದಿದ್ದೀರಿ? ನಾನು ಸಹಜವಾಗೇ ಮಾತು ಆರಂಭಿಸಿದೆ. ಆಕೆ ಬಂದಿದ್ದು, ಮೈಸೂರಿನಲ್ಲಿರುವ ನಮ್ಮ ಸಂಸ್ಥೆಯಿಂದ ಸುಮಾರು 450 ಕಿಲೋಮೀಟರ್ ದೂರವಿರುವ ಹುಬ್ಬಳ್ಳಿಯಿಂದ. ‘ಲತಾ’ ಎಂದು ಹೆಸರು. ಸುಮಾರು ಎರಡು ವರ್ಷದಿಂದ ನಮ್ಮ ಸಂಸ್ಥೆಗೆ ಬರುತ್ತಿದ್ದಳು. ಚಿಕಿತ್ಸೆಗಾಗಿ ವಾರಕ್ಕೆರಡು ಸಲ ಕರೆದುಕೊಂಡು ಬರಬೇಕಾದ್ದರಿಂದ ಮೈಸೂರಿನಲ್ಲಿ ಉಳಿದುಕೊಂಡಿದ್ದಳು.

ಯಜಮಾನರಿಗೆ ಹುಬ್ಬಳ್ಳಿಯಲ್ಲಿ ಕೆಲಸ. 2-3 ತಿಂಗಳಿಗೊಂದ್ಸಲ ಬಂದು ಹೋಗುವುದಷ್ಟೇ. ಅತ್ತೆಯ ಮನೆಯಲ್ಲಿ ಈ ಮಗುವನ್ನು ಕಂಡರೆ ಎಲ್ಲರಿಗೂ ತಾತ್ಸಾರ. ಒಬ್ಬಳೇ ಮೈಸೂರಿಗೆ ಬಂದೆ.  ಒಬ್ಬಳೇ ಇದ್ದೀನಿ. ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳಿಕೊಟ್ಟು ಸಂಪಾದಿಸ್ತೀನಿ. ಇವನ ತಂದೆ ಇಲ್ಲಿಗೆ ಆಗಾಗ್ಗೆ ಬರೋದನ್ನು ಸಹ ಅತ್ತೆಯ ಮನೆಯವರು ತಡೀತಾರೆ. ಎಂದಳು. ಅವಳು ಮದುವೆ ಆಗಿದ್ದು ಹತ್ತಿರದ ಸಂಬಂಧಿಯನ್ನೇ. ತಾಯಿಯ ಮನೆ ಕಡೆ ಉಳಿದಿರುವುದು ಒಬ್ಬ ತಮ್ಮನಷ್ಟೇ. ಹಾಗಾಗಿ ಅತ್ತ ಕಡೆಯಿಂದಲೂ ಸಹಾಯ ಹಸ್ತವಿಲ್ಲ. 

ಸುಮಾರು 1 ವರ್ಷಕ್ಕೆ  ಇವನ ಬೆಳವಣಿಗೆ ಇವನ ವಯಸ್ಸಿನ ಬೇರೆ ಮಕ್ಕಳ ತರಹ ಇಲ್ಲಾ ಅಂತ ಅನ್ನಿಸ್ತಾ ಇತ್ತು. ವಯಸ್ಸಿಗೆ ಸರಿಯಾಗಿ ಕತ್ತು ನಿಲ್ಲಲಿಲ್ಲ, ಅಂಬೆಗಾಲಿಡಲಿಲ್ಲ. ನಾವೇ ಹಿಡಿದು ಕೂರಿಸಬೇಕಿತ್ತು. 2 ವರ್ಷ ಆದ್ರೂ ‘ಅಮ್ಮ-ಅಪ್ಪ’ ಅಂತ ಕೂಡ ಹೇಳೋಕೆ ಬರ್ತಾ ಇರಲಿಲ್ಲ. ಕೆಲವೊಮ್ಮೆ ತನ್ನ ಪಾಡಿಗೆ ತಾನಿದ್ದು ಬಿಡೋನು.

ಕೆಲವೊಮ್ಮೆ ಇದ್ದಕ್ಕಿದ್ದಂತ ಕಿರುಚಾಡೋನು, ತನಗೆ ಏನಾದರೂ ಬೇಕಾದ್ರೆ ಕೇಳೋಕೆ ಗೊತ್ತಾಗದೆ ಅಳೋದು, ಯಾವಾಗಲೂ ಜೊಲ್ಲು ಸುರಿಸೋದು, ಮಲಮೂತ್ರಕ್ಕೆ ಹೋಗಬೇಕು ಅನ್ನಿಸಿದಾಗ ಅದನ್ನ ಹೇಳೋಕೆ ಸಹ ಬರ್ತಾ ಇರಲಿಲ್ಲ. ಡಾಕ್ಟರ್ ಹತ್ರ ಒಂದ್ಸಾರಿ ತೋರಿಸಿದ್ವಿ. ಆಗ್ಲೇ ಗೊತ್ತಾಗಿದ್ದು, ಇವನಿಗೆ ಬುದ್ಧಿಮಾಂದ್ಯತೆ ಇದೆ ಅಂತ.

ರಕ್ತ ಸಂಬಂಧದಲ್ಲಿ ಮದುವೆ ಆಗಿದ್ದು ಕೂಡ ಮಗುವಿನ ಈ ಸ್ಥಿತಿಗೆ ಕಾರಣ ಅಂತ ಹೇಳಿದ್ರು. ನಮ್ಮ ಅತ್ತೆ ಮನೆಯವರು ಇವನು ಸಾಯೋವರೆಗೂ ಹೀಗೆ. ಸುಮ್ಮನೆ ಹೀಗೆ ಸೇವೆ ಮಾಡೋ ಬದ್ಲು ಯಾವುದಾದರೂ ಅನಾಥಾಶ್ರಮಕ್ಕೆ ಬಿಟ್ಟು ಬಾ ಅಂತ ಹೇಳೋರು. ಆಗೆಲ್ಲಾ ಅದೆಷ್ಟು ನೋವಾಗೋದು ಗೊತ್ತಾ. ಮನೆಕೆಲಸ ಮಾಡಿ, ಇವನನ್ನು ನೋಡಿಕೊಳ್ಳೋಕೆ ಕಷ್ಟ ಆಗೋದು.

ನಗು ಇಲ್ಲ, ಇತರ ಮಕ್ಕಳ ಹಾಗೆ ಆಟ ಆಡೋದಿಲ್ಲ. ಸಾಮಾನ್ಯವಾಗಿ ಎಲ್ಲಾ ತಂದೆ-ತಾಯಂದಿರು ಮಕ್ಕಳು ತುಂಟತನ, ಗಲಾಟೆ ಮಾಡಿದ್ರೆ ಬಯ್ಯೋದು, ಹೊಡಿಯೋದು ಮಾಡ್ತಾರೆ. ಆದರೆ, ನಮ್ಮಂತಹವರಿಗೆ ಕನಿಷ್ಠ ನನ್ನ ಮಗು ತುಂಟತನನಾದ್ರೂ ಮಾಡ್ಲಿ. ಸಹಜವಾಗಿ ಗಲಾಟೆ ಮಾಡ್ತಾ ಆಟನಾದ್ರೂ ಆಡಲಿ ಅಂತ ಅನ್ನಿಸಿಬಿಡತ್ತೆ.

ಹೇಗಾದ್ರೂ ಮಾಡಿ ಇವನು ಕನಿಷ್ಠ ತನ್ನ ಕೆಲಸಗಳನ್ನು ಮಾಡಿಕೊಳ್ಳುವಷ್ಟಾದರೂ ಸ್ವಾವಲಂಬಿ ಮಾಡಬೇಕು ಅಂತ ಮನಸ್ಸಿಗೆ ತುಂಬಾ ಅನ್ನಿಸ್ತಾ ಇತ್ತು. ಆದ್ರೆ, ಇಂತಹುದಕ್ಕೆ ಎಲ್ಲಿ ಚಿಕಿತ್ಸೆ ಕೊಡ್ತಾರೆ ಅಂತ ಗೊತ್ತಿರಲಿಲ್ಲ. ಕೆಲವೊಂದು ಕಡೆ ವಿಚಾರಿಸಿದೆ. ಆದರೆ, ಅಲ್ಲೆಲ್ಲಾ ತುಂಬಾ ದುಬಾರಿ. ಎಲ್ಲಾ ಕಡೆ ಸುತ್ತಿದೆ, ಹರಕೇನೂ ಹೊತ್ತೆ. ಆಮೇಲೆ ನಮ್ಮ ದೂರದ ಸಂಬಂಧಿಕರೊಬ್ಬರು ಈ ಸಂಸ್ಥೆ ಬಗ್ಗೆ ತಿಳಿಸಿದ್ರು.

ಈಗ ಎರಡು ವರ್ಷಗಳಿಂದ ತರಬೇತಿ ಕೊಡಿಸ್ತಾ ಇದೀನಿ.. ಮೊದಲಿಗಿಂತ ಈಗ ಎಷ್ಟೋ ಪರವಾಗಿಲ್ಲ. ‘ಅಪ್ಪ-ಅಮ್ಮ ಅಂತ ಹೇಳ್ತಾನೆ’.  ಮುಖ ಕೊಟ್ಟು ಸ್ವಲ್ಪ ಮಾತಾಡ್ತಾನೆ. ತನಗೇನು ಊಟ-ತಿಂಡಿ ಬೇಕು ಅಂತ ಕೇಳ್ತಾನೆ. ದೈಹಿಕವಾಗಿಯೂ ಸ್ವಲ್ಪ ಸದೃಢವಾಗಿದ್ದಾನೆ. ಮೊದಲೆಲ್ಲಾ ‘ಇವನು ಯಾಕೆ ಹುಟ್ಟಿದನೋ’ ಅಂತ ನೋವಾಗುತ್ತಿತ್ತು. ಆದರೆ, ಈಗನಿಸಿದೆ ಇವನು ನನಗೆ ದೇವರು ನೀಡಿರುವ ವಿಶೇಷ ಮಗು ಅಂತ. ದೊಡ್ಡವನಾದ ಮೇಲೆ ಇವನು ಎಲ್ಲರೂ ಗುರುತಿಸುವಂತಹ ವ್ಯಕ್ತಿಯಾಗಬಹುದೇನೋ. ಆದರೆ, ಕನಿಷ್ಠ ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಇಚ್ಛೆ ನನ್ನದು.

ಇದೊಂತರ ತಪಸ್ಸು ಎಂದು ನನಗೆ ಗೊತ್ತಿದೆ. ಆದರೆ, ನನಗೆ ಅದರಲ್ಲೇ ತೃಪ್ತಿ. ಇವನನ್ನು ಸಂಭಾಳಿಸುತ್ತಾ, ನಾನು ತಾಳ್ಮೆ ಕಲಿತಿದ್ದೇನೆ. ಈಗ ಇವನ ಬೆಳವಣಿಗೆನೇ ನನಗೊಂದು ಖುಷಿ. ಎನ್ನುತ್ತಾ ಆ ತಾಯಿ, ಜೊಲ್ಲು ಸುರಿಸುತ್ತಿದ್ದ ಆ ಮಗುವನ್ನು ನನ್ನ ಬಂಗಾರ ಎಂದು ಮುದ್ದಾಡಿದರೆ, ಮಗು ಮ ಮ ಮ ಮ ಮ ಎನ್ನುತ್ತಾ ಅವಳನ್ನು ಅಪ್ಪಿಕೊಂಡಿತು.

ತವರುಮನೆಯ ಬೆಂಬಲಕ್ಕೆ ತಿರುಗಿ ನೋಡದೇ, ಪತಿಯ ಮನೆಯವರ ಸಹಾಯವೂ ಇಲ್ಲದೆ, ಕೇವಲ ತನ್ನ ಮಗುವಿಗಾಗಿ ಎಲ್ಲರನ್ನೂ ಎಲ್ಲವನ್ನೂ ಬಿಟ್ಟು, ಅವನ ಬೆಳವಣಿಗೆಯಲ್ಲೇ ಖುಷಿ ಕಾಣುತ್ತಿರುವ ಆಕೆಯ ಮನೋಧೈರ್ಯ, ಪ್ರೀತಿ ವಿಸ್ಮಯವೆನಿಸಿತು. ಜೊತೆಗೆ ಕಡಿಮೆ ಖರ್ಚಿನಲ್ಲಿ ಇಂತಹ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ನಮ್ಮ ಸಂಸ್ಥೆ ಕುರಿತು ಹೆಮ್ಮೆ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT