ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಗೆ ಗೌರವ

Last Updated 8 ಮಾರ್ಚ್ 2013, 19:59 IST
ಅಕ್ಷರ ಗಾತ್ರ

-ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ತಾವು ನಾಟಕ ರಂಗವನ್ನು ಪ್ರವೇಶಿಸಿದ್ದು ಹೇಗೆ?
ನಮ್ಮ ತಂದೆ ಎಸ್.ಪಿ.ರಂಗರಾವ್ ಅವರು ಕಾಲೇಜಿನಲ್ಲಿದ್ದಾಗ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರಂತೆ. ನಾವು ಸಣ್ಣವರಿದ್ದಾಗ ಕತೆಗಳನ್ನು ಸುಮ್ಮನೇ ಹೇಳದೆ ಅಭಿನಯಿಸಿ ತೋರಿಸುತ್ತಿದ್ದರು. ತಂದೆ ತಾಯಿಯರಿಗಿದ್ದ ಆಸಕ್ತಿ, ಪ್ರವರ್ತನೆಗಳೇ ನನ್ನ ರಂಗ ಪ್ರವೇಶಕ್ಕೆ ಕಾರಣ.

10 ವರ್ಷದವಳಾಗಿದ್ದಾಗ ಪಿ.ದಾಸಪ್ಪನವರು ನಿರ್ದೇಶಿಸಿದ `ಮಾಯ' ಎಂಬ ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಅಲ್ಲಿಂದ ಮುಂದೆ, ಬಿ.ಎಸ್ಸಿ ಓದುತ್ತಲೇ ಸುಮಾರು 1944-45ರಲ್ಲಿ `ಪರ್ವತ ವಾಣಿ' ಹಾಗೂ ಬಿ.ಎಸ್. ವೆಂಕಟರಾಮ್ ಅವರು ಸ್ಥಾಪಿಸಿದ `ಛಾಯಾ ಕಲಾವಿದರು' ಎಂಬ ಹವ್ಯಾಸಿ ನಾಟಕ ಕಂಪನಿಯಲ್ಲಿ `ಬಹದ್ದೂರ್ ಗಂಡ' ನಾಟಕದಲ್ಲಿ ಅಭಿನಯಿಸುವ ಮೂಲಕ ಕರ್ನಾಟಕದ ಮೊತ್ತಮೊದಲ ಹವ್ಯಾಸಿ ನಟಿ ಎನಿಸಿಕೊಂಡೆ. ಅನಂತರ ಕೈಲಾಸಂ, ಎ.ಎನ್. ಮೂರ್ತಿರಾಯರ ಹಲವು ನಾಟಕಗಳಲ್ಲಿ ಅಭಿನಯಿಸಿದೆ.

- ನೀವು ಚಿಕ್ಕಂದಿನಲ್ಲಿ ನೃತ್ಯಗಾರ್ತಿ ಆಗಿದ್ದಿರೆಂದು ಕೇಳಿದ್ದೇನೆ?
ನಾನು, ನನ್ನ ಅಕ್ಕ ತಂಗಿಯರು ವಿ.ಎಸ್.ಕೌಶಿಕ್ ಅವರ ಬಳಿ ಸುಮಾರು 2-3 ವರ್ಷ ಭರತನಾಟ್ಯ ಅಭ್ಯಾಸ ಮಾಡಿದೆವು. ಅನಂತರ ಕೇರಳದ ಕಥಕ್ಕಳಿ ಗುರು ಪರಮೇಶ್ವರ ವಾರಿಯರ್ ಎಂಬುವವರ ಬಳಿ 10- 12 ವರ್ಷ ಕಥಕ್ಕಳಿ ನೃತ್ಯ ಅಭ್ಯಾಸ ಮಾಡಿದೆವು. ಕರ್ನಾಟಕದಾದ್ಯಂತ ನೃತ್ಯ ಪ್ರದರ್ಶನ ನೀಡಿ `ಸಾಂಗ್ಲಿ ಸಹೋದರಿ' ಯರೆಂದೇ ಹೆಸರು ಪಡೆದೆವು.

ನಾನು ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಓದುತ್ತಿದ್ದಾಗಲೂ ನೃತ್ಯ ನಾಟಕಗಳನ್ನು ಸಂಯೋಜಿಸಿದ್ದೆ. 20ನೇ ವಯಸ್ಸಿನಲ್ಲಿ ಹವ್ಯಾಸಿ ರಂಗ ಕಲಾವಿದ ರಾಮಚಂದ್ರ ಮೂರ್ತಿ ಅವರೊಡನೆ ವಿವಾಹವಾಯಿತು. ನಾಟಕ ಆಡುವುದಕ್ಕೆ ತೊಂದರೆ ಆಗಲಿಲ್ಲ. ಆದರೆ ಅತ್ತೆ ಮನೆಯಲ್ಲಿ ನನ್ನ ನರ್ತನಕ್ಕೆ ತೀವ್ರ ವಿರೋಧವಿತ್ತು. ಒಮ್ಮೆ ಕಾರ್ಯಕ್ರಮವೊಂದರಲ್ಲಿ ನರ್ತಿಸಿದ ವಿಷಯ ಅತ್ತೆಗೆ ತಿಳಿದು ಮನೆಯಲ್ಲಿ ದೊಡ್ಡ ಹಗರಣವೇ ಆಗಿಬಿಟ್ಟಿತು. ನಾನು ನರ್ತಿಸಿದ್ದು ಅಂದೇ ಕೊನೆ.

- ಆಕಾಶವಾಣಿಯಲ್ಲಿ ತಮ್ಮ ಅನುಭವ?
ಲೆಕ್ಕವಿಲ್ಲದಷ್ಟು ಬಾನುಲಿ ನಾಟಕಗಳಲ್ಲಿ ನಟಿಸಿದ್ದೇನೆ, 800ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದೇನೆ, ಬಾನುಲಿ ನಾಟಕಗಳನ್ನೂ ಬರೆದಿದ್ದೇನೆ.

- ಆಗಿನ ಕಾಲದಲ್ಲಿ ಸಮಾಜದಲ್ಲಿ ತಮ್ಮ ಸ್ಥಾನ ಯಾವ ರೀತಿಯದಿತ್ತು? 
ಬಂಧುಬಳಗದಲ್ಲಿ ನಮ್ಮ ಬಗ್ಗೆ ಸ್ವಲ್ಪ ಅಸಮಾಧಾನ ಇತ್ತು. ಅವರಿಗೆಲ್ಲ ಸ್ವತಃ ಹಿಡಿಸುತ್ತಿರಲಿಲ್ಲವೋ ಅಥವಾ ಸಮಾಜದಲ್ಲಿ ತಮ್ಮ ಕುಟುಂಬದ ಹೆಸರಿಗೆ ಕಳಂಕ ಬರುವ ಭಯವಿತ್ತೋ ತಿಳಿಯದು. ಟೀಕೆಗಳನ್ನು ಎದುರಿಸಿದರೂ ತಂದೆ ತಾಯಿ ಧೃತಿಗೆಡದೆ ಉತ್ತೇಜನ ನೀಡಿದ್ದರಿಂದ ನಮ್ಮ ಕಲೆ ಬೆಳೆಯಲು ಸಾಧ್ಯವಾಯಿತು. ಕಾಲೇಜು ಗೆಳತಿಯರು ನಮ್ಮನ್ನು ಪ್ರಶಂಸಿಸುತ್ತಿದ್ದರು. ಆದರೆ ದೊಡ್ಡ ಸ್ಥಾನಮಾನದಲ್ಲಿದ್ದ ಕೆಲವರು, ಅಂದರೆ ಕೆಲವು ರಾಜಕೀಯ ವ್ಯಕ್ತಿಗಳು, ಸಾಹಿತಿಗಳು ಹಾಗೂ ಕೆಲ ಕಲಾವಿದರೂ ನಮ್ಮಡನೆ ಸಲುಗೆಯಿಂದ ವರ್ತಿಸಲು ಪ್ರಯತ್ನಿಸಿ ಮುಜುಗರ ಉಂಟು ಮಾಡುತ್ತಿದ್ದರು.  

-ನಿವೃತ್ತ ಜೀವನದಲ್ಲಿ ಕಿರುತೆರೆಯಲ್ಲಿ ನಟಿಸುತ್ತಿರುವ ಅನುಭವ ಹೇಗಿದೆ?
ವೈಯಕ್ತಿಕ ಹಾಗೂ ವೃತ್ತಿ ಜೀವನಕ್ಕಿಂತ ನಿವೃತ್ತಿ ನಂತರದ ಚಟುವಟಿಕೆಗಳು ನನಗೆ ಅಪಾರ ಸ್ವಾತಂತ್ರ್ಯ, ಸಂತೋಷ ನೀಡಿವೆ. ಉತ್ತಮ ನಿರ್ದೇಶಕರು, ಸಹ ನಟ- ನಟಿಯರು ಸಿಕ್ಕಿದ್ದಾರೆ. 

- ಒಬ್ಬ ಮಹಿಳೆಯಾಗಿ ತಮ್ಮ ಹಿಂದಿನ ಮತ್ತು ಇಂದಿನ ಅನುಭವ?
ಕಾಲ ಬದಲಾಗಿದೆ. ಕಲೆಗೆ, ಕಲಾವಿದರಿಗೆ ಗೌರವವಿದೆ. ಸಂಗೀತ, ನೃತ್ಯ ಕಲಿಯುವ, ನಾಟಕದಲ್ಲಿ ಪಾತ್ರ ಮಾಡುವ ಹೆಣ್ಣು ಮಕ್ಕಳು ಹೆಚ್ಚಾಗಿದ್ದಾರೆ. ಅತ್ತೆ ಮನೆಯವರು  ಸೊಸೆಯ ಸಾಧನೆ ಬಗ್ಗೆ ಹೆಮ್ಮೆ ಪಡುವುದೂ ಹೆಚ್ಚಾಗಿದೆ. ಇದು ಸಂತಸದ ವಿಷಯ.

- ಈಗಿನ ಪೀಳಿಗೆಗೆ ತಮ್ಮ ಬುದ್ಧಿಮಾತು?
ಎಲ್ಲರೂ ಯಾವುದಾದರೂ ಒಂದು ಕಲೆಯನ್ನು ಕಲಿತರೆ ಒಳ್ಳೆಯದು. ಇದರಿಂದ ಬದುಕು ಪೂರ್ಣ ಎನಿಸುತ್ತದೆ. ಅಲ್ಲದೆ ಹೆಣ್ಣು ಮಕ್ಕಳಿಗೆ ನಾನು ಒಂದು ಕಿವಿಮಾತು ಹೇಳಬಯಸುತ್ತೇನೆ- ಸೌಂದರ್ಯ ವರ್ಧನೆಗಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ  ಬಳಸುವ ರಾಸಾಯನಿಕಗಳು ಚರ್ಮಕ್ಕೆ ಹಾನಿಕರ. ಮನಸ್ಸನ್ನು ಶುದ್ಧವಾಗಿಟ್ಟುಕೊಂಡರೆ ಸೌಂದರ್ಯ ತಾನಾಗಿಯೇ ವರ್ಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT